ನೂರಕ್ಕೆ ನೂರು ನಮಗೇ ಟಿಕೆಟ್: ಸಿದ್ದೇಶ್ವರ

ನೂರಕ್ಕೆ ನೂರು ನಮಗೇ ಟಿಕೆಟ್: ಸಿದ್ದೇಶ್ವರ

ದಾವಣಗೆರೆ, ಮಾ. 11- ನೂರಕ್ಕೆ ನೂರು ನನಗೆ ಅಥವಾ ನಮ್ಮ ಕುಟುಂಬದವರಿಗೆ ಟಿಕೆಟ್ ಸಿಗಲಿದೆ. ನಾಳೆ, ನಾಡಿದ್ದು ಗೊತ್ತಾಗುತ್ತೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ನಗರದ ಜಯದೇವ ವೃತ್ತದಲ್ಲಿ ಸೋಮವಾರ ಏರ್ಪಡಿಸಿದ್ದ ಭಾರತ್ ರೈಸ್ ವಿತರಣೆಗೆ ಚಾಲನೆ ನೀಡಿ, ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ನೂರಕ್ಕೆ ನೂರು ನನಗಾದ್ರೂ ಆತು, ನಮ್ಮ ಕುಟುಂಬದವ್ರಿಗಾತು ಟಿಕೆಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವ್ರಿಗೆ (ನನಗೆ) ಟಿಕೆಟ್ ಕೊಡಬ್ಯಾಡ್ರಿ ಅಂತಾ ಕೆಲವರು ಚರ್ಚೆ ನಡೆಸುತ್ತಿದ್ದು, ವರಿಷ್ಠರು ಅಭ್ಯರ್ಥಿ ಅಂತಿಮಗೊಳಿಸುತ್ತಾರೆ. ಕೆಲವರು ನಮಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ  ಸರ್ವೆಯಲ್ಲೂ ನನ್ನ ಹೆಸರು ಮುಂದಿದೆ. ಜನರು ಸಿದ್ದೇಶಪ್ಪ ಬೇಕು ಅಂತಿದ್ದಾರೆ. ಹಾಗಾಗಿ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.

500 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮ ಮಂದಿರವನ್ನು ಪ್ರಧಾನಿ ಮೋದಿ ಅವರು ಎರಡೇ ವರ್ಷಗಳಲ್ಲಿ ಕಟ್ಟಿಸಿ, ಲೋಕಾರ್ಪಣೆ ಮಾಡಿದ್ದಾರೆ. ಜಿಲ್ಲೆಯ 350 ಜನರು ರಾಮ ಮಂದಿರ ವೀಕ್ಷಿಸಿ ಬಂದಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ವೀಕ್ಷಣೆಗೆ ತೆರಳುವ ಜಿಲ್ಲೆಯ ಜನತೆಗೆ ಮಂದಿರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

 ದೇಶದ ಎಲ್ಲಾ ವರ್ಗದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ತಿಂಗಳಿಗೆ ಮಾಸಿಕ 290 ರೂ.ಗೆ 10 ಕೆಜಿ ಗುಣಮಟ್ಟದ ಅಕ್ಕಿ ಕೊಡುತ್ತಿದ್ದಾರೆ. ಇನ್ನೂ 8-10 ದಿನಗಳಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಮತ್ತು ಗ್ರಾಮೀಣ ಪ್ರದೇಶಗಳಿಗೂ ಭಾರತ್ ರೈಸ್ ತಲುಪಿಸಲಾಗುವುದು ಎಂದರು. 

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಆರ್.ಜಿ. ಶ್ರೀನಿವಾಸಮೂರ್ತಿ, ಟಿಂಕರ್ ಮಂಜಣ್ಣ ಇತರರಿದ್ದರು.

error: Content is protected !!