ಹರಿಹರ ನಗರಸಭೆ 4.79 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ ಡಿಸಿ

ಹರಿಹರ ನಗರಸಭೆ 4.79 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ ಡಿಸಿ

64.06 ಕೋಟಿ ಆದಾಯ ನಿರೀಕ್ಷೆ

ಹರಿಹರ, ಫೆ.29-  ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಸ್ವಂತ ಆದಾಯದಿಂದ 2024-25ನೇ ಸಾಲಿನ ಹಣಕಾಸಿನ ವರ್ಷಕ್ಕೆ 64.06 ಕೋಟಿ ಆದಾಯವನ್ನು  ನಿರೀಕ್ಷೆ ಮಾಡಿದ್ದು, ಅದರಲ್ಲಿ  ನಗರದ ವಿವಿಧ  ಅಭಿವೃದ್ಧಿ ಕಾರ್ಯಕ್ರಮಗಳ  ಜೊತೆಗೆ 4.79 ಲಕ್ಷ ರೂಪಾಯಿ ಉಳಿತಾಯ ಬಜೆಟ್  ಅನ್ನು  ನಗರಸಭೆ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ ಎಂ.ವಿ. ವೆಂಕಟೇಶ್ ಮಂಡಿಸಿದರು.

ನಿರೀಕ್ಷಿತ  ವೇತನ ಅನುದಾನ 850 ಲಕ್ಷ, ನಗರದ ಬೀದಿ ದ್ವೀಪಗಳ ಬಿಲ್ಲಿನ ಪಾವತಿಗಾಗಿ ಬರುವ ಅನುದಾನ 775 ಲಕ್ಷ,   ಆಸ್ತಿ ತೆರಿಗೆ ಆದಾಯ 570 ಲಕ್ಷ, ನೀರಿನ ತೆರಿಗೆ ಆದಾಯ 462 ಲಕ್ಷ, 15 ನೇ ಹಣಕಾಸು ಆಯೋಗದ ಅನುದಾನ 500 ಲಕ್ಷ, ಎಸ್.ಎಫ್.ಸಿ. ವಿಶೇಷ ಅನುದಾನ 400 ಲಕ್ಷ , ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಅನುದಾನ 250 ಲಕ್ಷ , ಘನತ್ಯಾಜ್ಯ ವಸ್ತು ನಿರ್ವಹಣೆ ಅನುದಾನ 200 ಲಕ್ಷ, ಆಸ್ತಿ ತೆರಿಗೆ ಮೇಲೆ ಉಪಕರಗಳ ಸಂಗ್ರಹ 175 ಲಕ್ಷ ಸೇರಿದಂತೆ ಎಲ್ಲಾ ವಸೂಲಾತಿ ಅನುದಾನ ಒಟ್ಟು 695.76 ಲಕ್ಷ ರೂಪಾಯಿ ಆಗಿರುತ್ತದೆ ಎಂದು ವಿವರಿಸಿದರು.

ಲಕ್ಷ ವೃಕ್ಷೋತ್ಸವಕ್ಕೆ 20 ಲಕ್ಷ, ಅಮೃತ ಸರೋವರ ನಿರ್ಮಾಣಕ್ಕೆ 30 ಲಕ್ಷ , ಪರಿಸರ ಸ್ನೇಹಿ ಅಂಗನವಾಡಿ ನಿರ್ಮಾಣಕ್ಕೆ 25 ಲಕ್ಷ, ಫುಡ್ ಸ್ಟ್ರೀಟ್ ನಿರ್ಮಾಣ 20 ಲಕ್ಷ, ಉದ್ಯಾನವನ ಅಭಿವೃದ್ಧಿ 120 ಲಕ್ಷ, ಸ್ಮಶಾನ ಅಭಿವೃದ್ಧಿಗೆ 30 ಲಕ್ಷ,  ಕುಡಿಯುವ ನೀರಿನ ಸಂಗ್ರಹಣೆಗಾಗಿ ಜಮೀನು ಖರೀದಿಸಿ ಮತ್ತು ನದಿ ನೀರಿಗೆ ತಡೆ ಗೋಡೆ ನಿರ್ಮಾಣಕ್ಕೆ 200 ಲಕ್ಷ, ತುಂಗಭದ್ರಾ ನದಿಯ ದಡದಲ್ಲಿ ಯಾತ್ರೆಗಳಿಗೆ ಅನುಕೂಲ ಆಗುವಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 20 ಲಕ್ಷ, ಹರಿಹರೇಶ್ವರ ದೇವಸ್ಥಾನ ದ್ವಾರಬಾಗಿಲು ನಿರ್ಮಾಣ 25‌ ಲಕ್ಷ  ಸೇರಿದಂತೆ ಒಟ್ಟು 715. 47 ಲಕ್ಷ ಖರ್ಚು ಮಾಡಲಾಗುತ್ತದೆ ಎಂದು ಹೇಳಿದರು.   

ಜಿಲ್ಲೆಯ ಅವಳಿ ನಗರವಾದ ಹರಿಹರ ಐತಿಹಾಸಿಕ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿದೆ. ಜೊತೆಗೆ ಮಧ್ಯ ಭಾಗದಲ್ಲಿ ಇರುವುದರಿಂದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕ ಸೇತುವೆಯಾಗಿ, ಶೈಕ್ಷಣಿಕ ಸಂಸ್ಥೆಗಳ ಕೇಂದ್ರಬಿಂದುವಾಗಿದೆ ಎಂದು ಬಣ್ಣಿಸುತ್ತಾ, ಜಲಸಿರಿ ಯೋಜನೆ ಮೂಲಕ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ನೀರು ಪೂರೈಕೆ ಆಗುತ್ತಿರುವುದು ಸಂತೋಷಕರ ಸಂಗತಿ, ಅದೇ ರೀತಿಯಾಗಿ ನಗರೋತ್ಥಾನ ಯೋಜನೆಗಳ ಅಡಿಯಲ್ಲಿ ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು ರಸ್ತೆ, ಚರಂಡಿ, ವಿದ್ಯುತ್ ದ್ವೀಪಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಹಲವಾರು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. 

ನಗರಸಭೆಗೆ ಸೇರಿದ 18 ಎಕರೆ ಭೂಮಿಯನ್ನು ಅಳತೆ ಮತ್ತು ಹದ್ದು ಬಸ್ತು ಮಾಡಿಸಿದ್ದು, ಮುಂದಿನ ದಿನಗಳಲ್ಲಿ ದಾವಣಗೆರೆ- ಹರಿಹರ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಮಾಡಿಸಿ, ಆ ನಂತರ ಆಶ್ರಯ ಸಮಿತಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ನಗರಸಭೆ ಪೌರ ಕಾರ್ಮಿಕರಿಗೆ 4.35 ಎಕರೆ ಉಳಿದ 13.5 ಎಕರೆ ನಗರದ ಬಡ ಜನತೆಗೆ   ಹಂಚಿಕೆ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ನಗರಸಭೆ ಆಯ-ವ್ಯಯದ ಬಜೆಟ್ ಉತ್ತಮ ರೀತಿಯಲ್ಲಿ ಇದ್ದು,    ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಹಳ ಮುತುವರ್ಜಿ ವಹಿಸಿ  ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದರು.

ನಗರದ ಸರ್ವಾಂಗೀಣ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷ ಭೇದ ಮರೆತು, ಒಗ್ಗಟ್ಟಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಹೋಗಿ  ಮನವಿ  ಸಲ್ಲಿಸುವುದರ ಜೊತೆಗೆ ಅನುದಾನ ತರುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡೋಣ,   ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು ಮುಂದಾಗಬೇಕು,  ಹಿಂದೂ ರುದ್ರಭೂಮಿಗೆ ಜಮೀನು ಮಾಲೀಕರು ಯಾರಾದರೂ ಭೂಮಿ ಕೊಡಲು ಮುಂದೆ ಬಂದರೆ ಜಮೀನನ್ನು ತಕ್ಷಣವೇ ಖರೀದಿ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದರು.

ನಗರಸಭೆ ಪೌರ ಕಾರ್ಮಿಕರ ನೇಮಕ ಮಾಡಬೇಕು, ಗುತ್ತಿಗೆದಾರರ ಬಿಲ್ ಪಾವತಿ ಮಾಡದೇ ಇರುವುದರಿಂದ ಹೊಸದಾಗಿ ಕಾಮಗಾರಿ ಮಾಡಲಿಕ್ಕೆ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಹಾಗಾಗಿ ಆದಷ್ಟು ಬೇಗ ಗುತ್ತಿಗೆದಾರರ ಬಿಲ್ ಪಾವತಿ ಮಾಡುವುದಕ್ಕೆ ಜಿಲ್ಲಾಧಿಕಾರಿಗಳು ಮುಂದಾಗಬೇಕಿದೆ ಎಂದು ಶಾಸಕರು ಹೇಳಿದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ,  ಜಿಲ್ಲಾಧಿಕಾರಿಗಳು ಬಹಳಷ್ಟು ಉತ್ತಮ ಬಜೆಟ್ ಮಂಡನೆ ಮಾಡಿದ್ದು ಅವುಗಳು ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗಬೇಕು.   ಜೊತೆಗೆ ಪೌರಾಯುಕ್ತ ಐಗೂರು ಬಸವರಾಜ್ ಸಹ ಯಾವುದೇ ರೀತಿಯ ಸಮಸ್ಯೆಗಳು ಬರದಂತೆ ಮುತುವರ್ಜಿಯಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿರುವುದು ಶ್ಲ್ಯಾಘನೀಯ ಕಾರ್ಯವಾಗಿದೆ. ‌ ದಾವಣಗೆರೆ- ಹರಿಹರ ಪ್ರಾಧಿಕಾರದ ಸಿಬ್ಬಂದಿಗಳು ನಗರದಲ್ಲಿ ಏಳೂ ದಿನಗಳ ಕಾಲ ಕರ್ತವ್ಯ ನಿರ್ವಹಣೆ ಮಾಡುವುದಕ್ಕೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು, ಸಾಂಸ್ಕೃತಿಕ ಭವನ ನಿರ್ಮಾಣ, ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿದರು.

ಸದಸ್ಯ ಎ. ವಾಮನಮೂರ್ತಿ  ಮಾತನಾಡಿ, ಕವಲೆತ್ತು ಗ್ರಾಮದ ಬಳಿ ಚೆಕ್ ಡ್ಯಾಮ್ ನಿರ್ಮಾಣ ಮಾಡುವುದರ ಬದಲಿಗೆ ರಾಜನಹಳ್ಳಿ ಗ್ರಾಮದ ಹತ್ತಿರದಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಮಾಡಬೇಕು, ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಿಸಬೇಕು ಎಂದು ಹೇಳಿದರು.

ಮಳೆಗಾಲದಲ್ಲಿ ಶವ ಸಂಸ್ಕಾರ ಮಾಡುವುದು ಬಹಳ ಕಷ್ಟವಾಗುತ್ತಿದೆ. ಹಾಗಾಗಿ ಹಿಂದೂ ರುದ್ರಭೂಮಿಗೆ ಜಮೀನು ಖರೀದಿ ಮಾಡಬೇಕು ಎಂದು ಸದಸ್ಯ ಎಸ್.ಎಂ. ವಸಂತ್ ಒತ್ತಾಯಿಸಿದರು.

ಆಶ್ರಯ ಬಡಾವಣೆಯ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ವಸತಿ ಸೌಕರ್ಯ ಕಲ್ಪಿಸುವ ಸಮಯದಲ್ಲಿ ಗುತ್ತೂರು ಹೆಲಿಪ್ಯಾಡ್ ಬಳಿ ಇರುವ ಜಾಗವನ್ನು ಸಹ ವಸತಿ ವ್ಯವಸ್ಥೆಗೆ ಬಳಕೆ ಮಾಡಿಕೊಳ್ಳಬೇಕು ಎಂದು  ಸದಸ್ಯ ಹನುಮಂತಪ್ಪ  ಹೇಳಿದರು.

ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ದಿನೇಶ್ ಬಾಬು, ಪಿ.ಎನ್. ವಿರೂಪಾಕ್ಷಪ್ಪ ಗುತ್ತೂರು ಜಂಬಣ್ಣ, ಜಾವೇದ್, ರಜನಿಕಾಂತ್, ರತ್ನ ಡಿ. ಉಜ್ಜೇಶ್,  ಶಾಯಿನಾಭಾನು ದಾದಾಪೀರ್, ಆಶ್ವಿನಿ ಕೃಷ್ಣ, ಪಕ್ಕೀರಮ್ಮ, ಉಷಾ ಮಂಜುನಾಥ್, ಶಹಜಾದ್ ಸನಾವುಲ್ಲಾ, ಬಾಬುಲಾಲ್, ಕವಿತಾ ಮಾರುತಿ, ಐರಣಿ ಪಾರ್ವತಮ್ಮ, ಸುಮಿತ್ರಮ್ಮ, ಲಕ್ಷ್ಮಿ ಮೋಹನ್, ಅಬ್ದುಲ್ ಅಲಿಂ, ದಾದಾ ಖಲಂದರ್,  ಅಲ್ತಾಫ್,  ನಾಮ ನಿರ್ದೇಶಿತ ಸದಸ್ಯರಾದ ರಿಜ್ವಾನ್ ಮಹಮ್ಮದ್ ಬಾಷಾ, ಇಸ್ಮಾಯಿಲ್ ಸಾಬ್, ಕೆ.ಬಿ. ರಾಜಶೇಖರ, ಜೋಸೆಫ್ ದಿವಾಕರ, ಸಂತೋಷ ಪಿ. ದೊಡ್ಡಮನಿ,    ಜಿಲ್ಲಾ ಯೋಜನಾ ಅಧಿಕಾರಿ ಮಹಂತೇಶ್, ಪೌರಾಯುಕ್ತ ಐಗೂರು ಬಸವರಾಜ್, ಎಇಇ ತಿಪ್ಪೇಸ್ವಾಮಿ, ಆರ್.ಓ. ರಮೇಶ್, ಕೇಸ್ ವರ್ಕರ್ ರಮೇಶ್  ಇತರರು ಹಾಜರಿದ್ದರು.    

error: Content is protected !!