ಸಭೆ ಮುಂದೂಡಿದ ಮೇಯರ್, ಇಂದು ಮಹಾನಗರ ಪಾಲಿಕೆ ಬಜೆಟ್ ಮಂಡನೆ
ದಾವಣಗೆರೆ, ಫೆ. 26- ಸೋಮವಾರ ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಲಾಗಿದ್ದ ಮಹಾನಗರ ಪಾಲಿಕೆಯ ಬಜೆಟ್ ಸಭೆಯನ್ನು ಫೆ.27ರ ಮಂಗಳವಾರ ಬೆಳಿಗ್ಗೆ ಮುಂದೂಡಲಾಯಿತು.
ಬಜೆಟ್ ಮಂಡನಾ ಸಭೆಯ ದಿನಾಂಕ ನಿರ್ಧರಿಸುವಲ್ಲಿ ನಿಯಮ ಪಾಲಿಸಿಲ್ಲ ಹಾಗೂ ಮಧ್ಯಾಹ್ನ ಸಭೆ ನಿಗದಿಪಡಿಸುವುದಕ್ಕೆ ಆಕ್ಷೇಪಿಸಿ, ಬಜೆಟ್ ಸಭೆ ಮುಂದೂಡುವಂತೆ ಪ್ರತಿ ಪಕ್ಷದ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್ ಬಿ.ಹೆಚ್. ವಿನಾಯಕ ಅವರು ಮುಂದೂಡಿಕೆ ನಿರ್ಧಾರ ಪ್ರಕಟಿಸಿದರು.
ಸಭೆಯನ್ನು ಮಧ್ಯಾಹ್ನ ನಿಗದಿಪಡಿಸಿರುವುದರಿಂದ ವಿಷಯಗಳ ಬಗ್ಗೆ ಚರ್ಚೆ ಮಾಡಲು ಸಮಯವೇ ಇಲ್ಲದಂತಾಗುತ್ತದೆ. ಪಾಲಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಸಭೆಯನ್ನು ಮಧ್ಯಾಹ್ನ ನಿಗದಿಪಡಿಸಲಾಗಿದೆ ಎಂದು ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ಬಜೆಟ್ ಮಂಡಿಸುವಾಗ ಸುದೀರ್ಘ ಚರ್ಚೆ ನಡೆಯಬೇಕಿದೆ. ಆದರೆ 3 ಗಂಟೆಗೆ ಆರಂಭವಾಗುವ ಸಭೆಯಲ್ಲಿ ಏನೂ ಚರ್ಚಿಸಲಾಗದು. ನೀವು ಓದಿದ್ದು ಕೇಳಿಸಿಕೊಂಡು ಹೋಗಲಾಗದು. ಇದು ಮೇಯರ್ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ತೋರಿಸುತ್ತದೆ ಎಂದರು.
ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಸಮಯ ನಿಗದಿಪಡಿಸಲಾಗಿದೆ ಎಂದು ಆರೋಪಿಸಿದ ಸದಸ್ಯೆ ಉಮಾ ಪ್ರಕಾಶ್, ಎಲ್ಲಿಯಾದರೂ ಮುಹೂರ್ತ ಕೇಳಿ ಸಮಯ ನಿಗದಿಪಡಿಸಲಾಗಿದೆಯೇ? ಎಂದರು. ಕೆ.ಎಂ. ವೀರೇಶ್, ಎಸ್.ಟಿ. ವೀರೇಶ್, ಶಿವಾನಂದ ಇತರರು ಸಮಯ ನಿಗದಿಗೆ ಆಕ್ಷೇಪಿಸಿದರು.
ನನಗೆ ಸಭೆಯ ನೋಟಿಸ್ ತಲುಪಿದ್ದು 21ನೇ ತಾರೀಖು. ಸಭೆ ನಿರ್ಧಾರವಾಗಿ 7 ದಿನಗಳ ನಂತರ ಸಭೆ ನಡೆಸಬೇಕು. ಆದರೆ ಅದಕ್ಕೂ ಮೊದಲೇ ಸಭೆ ನಡೆಸಲಾಗಿದೆ. ಸದಸ್ಯರಿಗೆ ಮರ್ಯಾದೆಯೇ ಇಲ್ಲದಂತಾಗಿದೆ. ಸದಸ್ಯರು ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಸನ್ನಕುಮಾರ್ ಕಿಡಿಕಾರಿದರು.
ಅನುದಾನ ಹಂಚಿಕೆ ತಾರತಮ್ಯ: ವೇದಿಕೆ ಮೇಲೇರಲು ನಿರಾಕರಿಸಿದ ಉಪ ಮೇಯರ್
ಸಭೆಯಲ್ಲಿ ಉಪ ಮೇಯರ್ ಯಶೋಧ ಹೆಗ್ಗಪ್ಪ ಅವರನ್ನು ವೇದಿಕೆಗೆ ಆಹ್ವಾನಿಸ ಲಾಯಿತು. ಆದರೆ ನಮ್ಮ ವಾರ್ಡ್ಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆಕ್ಷೇಪಿಸಿ ಅವರು ವೇದಿಕೆ ಏರಲು ನಿರಾಕರಿಸಿದರು. ಕಾಂಗ್ರೆಸ್ ಸದಸ್ಯರ ವಾರ್ಡುಗಳಿಗೆ ಕೋಟಿ ಗಟ್ಟಲೆ ಅನುದಾನ ಹಂಚಿಕೆಯಾಗಿದೆ. ಬಿಜೆಪಿ ಸದಸ್ಯರ ವಾರ್ಡುಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಪ್ರಸನ್ನ ಕುಮಾರ್ ಆರೋಪಿಸಿದರು.
`20ನೇ ತಾರೀಖು ತಮ್ಮ ಮನೆಗೆ ನೋಟೀಸು ತಲುಪಿಸುವಾಗ ತಾವು ಮನೆಯಲ್ಲಿರಲಿಲ್ಲ’ ಎಂದು ಪರಿಷತ್ ಕಾರ್ಯದರ್ಶಿ ಉತ್ತರಿಸಿದಾಗ, ಅಸಮಾಧಾನಕೊಂಡ ಪ್ರಸನ್ನ ಕುಮಾರ್, ನನ್ನ ಮನೆಯ ಸಿಸಿಟಿವಿ ಫೂಟೇಜ್ ತೋರಿಸಿ, ಅಂದು ನಾನು ಮನೆಯಲ್ಲಿರುವುದು ಸಾಬೀತು ಪಡಿಸುತ್ತೇನೆ. ಪರಿಷತ್ ಕಾರ್ಯದರ್ಶಿ ಸುಳ್ಳು ಹೇಳುತ್ತಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದರು.
ನಾನು ಸುಳ್ಳು ಹೇಳಿದ್ದು ಸಾಬೀತಾದರೆ ನಾನು ರಾಜೀನಾಮೆ ಕೊಡುತ್ತೇನೆ. ನಿಮ್ಮ ಮಾತು ಸುಳ್ಳಾದರೆ ನೀವು ರಾಜೀನಾಮೆ ಕೊಡುತ್ತೀರಾ? ಎಂದು ಪರಿಷತ್ ಕಾರ್ಯದರ್ಶಿಗೆ ಖಾರವಾಗಿ ಪ್ರಶ್ನಿಸಿದರು.
ಸದಸ್ಯರಿಗೆ ಅವಮಾನವಾದರೆ ನಾವೂ ಸುಮ್ಮನಿರುವುದಿಲ್ಲ. ಪರಿಷತ್ ಕಾರ್ಯದರ್ಶಿಗೆ ಕಾರಣ ಕೇಳಿ ನೋಟೀಸ್ ನೀಡಿ, ಸಭೆಯನ್ನು ಮುಂದುವರೆಸಿ ಎಂದು ಸದಸ್ಯ ಎ.ನಾಗರಾಜ್ ಹೇಳಿದರಾದರೂ, ಮೂರನೇ ಬಾರಿ ಇಂತಹ ಘಟನೆ ನಡೆಯುತ್ತಿದ್ದು ಪರಿಷತ್ ಕಾರ್ಯದರ್ಶಿ ಬೇಜವಾಬ್ದಾರಿ ವರ್ತನೆ ತೋರಿದ್ದು, ಅವರನ್ನು ಅಮಾನತ್ತಿನಲ್ಲಿಡಬೇಕು ಎಂದು ಪ್ರಸನ್ನ ಕುಮಾರ್ ಒತ್ತಾಯಿಸಿದರು.
ಈ ವೇಳೆ ಸಭೆಯ ದಿನಾಂಕ ಹಾಗೂ ಸಮಯ ಇರುವ ಕಡತದಲ್ಲಿ ಮೇಯರ್ ಅವರು 22ರಂದು ಸಹಿ ಮಾಡಿರುವ ವಿಷಯ ತಿಳಿದು ಐದು ದಿನ ಮೊದಲೇ ಸಭೆ ನಿಗದಿ ಮಾಡಲಾಗಿದೆ. ಆದ್ದರಿಂದ ಸಭೆಯನ್ನು ಮುಂದೂಡಲೇ ಬೇಕು ಎಂದು ಪ್ರಸನ್ನಕುಮಾರ್ ನೇತೃತ್ವದಲ್ಲಿ ವಿಪಕ್ಷ ಸದಸ್ಯರು ಮೇಯರ್ ಆಸನದ ಮುಂಭಾಗವೇ ಪ್ರತಿಭಟನೆಗೆ ಕುಳಿತರು.
ಈ ಸಂದರ್ಭದಲ್ಲಿ ಸಭೆಯನ್ನು ಅರ್ಧ ಗಂಟೆ ಮುಂದೂಡಲಾಯಿತು. ನಂತರ ಮತ್ತೆ ಸಭೆಗೆ ಆಗಮಿಸಿದ ಮೇಯರ್ ವಿನಾಯಕ ಅವರು, ಅಂತಿಮವಾಗಿ ಸಭೆಯನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಸಲಾಗುವುದು ಎಂದು ಘೋಷಿಸಿದರು.
ಪಾಲಿಕೆ ಆಯುಕ್ತರಾದ ರೇಣುಕಾ, ಸ್ಥಾಯಿ ಸಮಿತಿ ಸದಸ್ಯರು ಈ ಸಂದರ್ಭದಲ್ಲಿದ್ದರು.