ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಹೇಳಿಕೆ
ಮಲೇಬೆನ್ನೂರು, ಫೆ.5- ಪಟ್ಟಣಕ್ಕೆ ಮಾನವ ತ್ಯಾಜ್ಯ ನಿರ್ವಹಣಾ ಘಟಕ ಮಂಜೂರಾಗಿದ್ದು, ಅದಕ್ಕಾಗಿ 4 ಕೋಟಿ ರೂ. ಅನುದಾನ ಮೀಸಲಿದೆ. ಆದರೆ, ಘಟಕ ನಿರ್ಮಾಣಕ್ಕೆ 2 ಎಕರೆ ಜಾಗ ಸಿಗುತ್ತಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ಹೇಳಿದರು.
ಅವರು, ಸೋಮವಾರ ಇಲ್ಲಿನ ಪುರ ಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಪುರ ಸಭೆಯ 2024-25ನೇ ಸಾಲಿನ ಆಯ-ವ್ಯಯವನ್ನು ತಯಾರಿಸುವ ಕುರಿತು ಹಮ್ಮಿ ಕೊಂಡಿದ್ದ 1ನೇ ಹಂತದ ಪೂರ್ವಭಾವಿಯಾಗಿ ಸಾರ್ವಜನಿಕ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಘಟಕದ ಜೊತೆಗೆ ವಾಹನ ಖರೀದಿಗೂ 40 ಲಕ್ಷ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ. 2 ಎಕರೆ ಜಾಗವನ್ನು ನಾವು – ನೀವು ಸೇರಿ ನಿಗದಿ ಮಾಡಿದರೆ, ಆ ಜಾಗಕ್ಕೆ ಸರ್ಕಾರ ಹಣವನ್ನೂ ನೀಡುತ್ತದೆ.
ಒಳಚರಂಡಿ ವ್ಯವಸ್ಥೆಗೆ 12 ಎಕರೆ ಜಾಗ ಬೇಕಾಗುತ್ತದೆ ಎಂದು ಪುರಸಭೆ ಸದಸ್ಯ ನಯಾಜ್ ಅವರ ಪ್ರಶ್ನೆಗೆ ಸುರೇಶ್ ಉತ್ತರಿಸಿದರು. ಇದಕ್ಕೂ ಮುನ್ನ ಮಾತನಾಡಿದ ನಯಾಜ್ ಅವರು, ಪಟ್ಟಣದ ಚರಂಡಿ ನೀರು ನಿಟ್ಟೂರು ರಸ್ತೆ ಪಕ್ಕದ ಕಾಲುವೆಯಲ್ಲಿ ಹರಿಯುತ್ತಿದೆ. ಇದರಿಂದ ಮಾಲಿನ್ಯ ಉಂಟಾಗಿ ರೋಗ-ರುಜಿನಗಳು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಅಥವಾ ಚರಂಡಿ ನೀರನ್ನು ಶುದ್ಧೀಕರಿಸಿ, ಬೀಡುವ ವ್ಯವಸ್ಥೆಯನ್ನು ಬಜೆಟ್‌ನಲ್ಲಿ ಪ್ರಾಸ್ತಾಪಿಸಿ ಎಂದು ಹೇಳಿದ್ದರು.
ಸಭೆಯ ಆರಂಭದಲ್ಲಿ ಬಳೆಗಾರ್ ರಾಜಣ್ಣ ಅವರು, 2ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಮೊದಲು ನೀರು ಪೂರೈಸುವ ಬಗ್ಗೆ ಗಮನ ಹರಿಸಿ ಮತ್ತು ಹೊಸ ಚರಂಡಿಗಳನ್ನು ನಿರ್ಮಿಸಿ ಎಂದರು.
ಬಿ.ಚಂದ್ರಪ್ಪ ಮಾತನಾಡಿ, ಬಜೆಟ್ ಪೂರ್ವಭಾವಿ ಸಭೆಯ ಬಗ್ಗೆ ಪಟ್ಟಣದ ಜನತೆಗೆ ತಿಳಿದಿಲ್ಲ. ಈ ಬಗ್ಗೆ ಹೆಚ್ಚು ಪ್ರಚಾರ ಆಗಿಲ್ಲ. ಹಾಗಾಗಿ ಸಭೆಗೆ ಜನ ಬಂದಿಲ್ಲ ಎಂದು ಹೇಳಿ, 2ನೇ ವಾರ್ಡ್‌ನಲ್ಲಿ ತಕ್ಷಣ ಬೋರ್ ಕೊರೆಸಿ ನೀರು ಕೊಡಿ ಎಂದು ಆಗ್ರಹಿಸಿದರು.
ಪುರಸಭೆ ಸದಸ್ಯ ಗೌಡ್ರ ಮಂಜಣ್ಣ ಮಾತನಾಡಿ, ಎ.ಕೆ.ಕಾಲೋನಿಯಿಂದ ಜ್ಯೋತಿ ಟಾಕೀಸ್ ಮುಂಭಾಗದ ಮೂಲಕ ಭದ್ರಾ ಚಾನಲ್‌ವರೆಗಿನ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಮಾಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಿ ಎಂದರು.
ಸದಸ್ಯ ದಾದಾಪೀರ್ ಅವರು, ಪೌರ ಕಾರ್ಮಿಕರ ಕೊರತೆಯಿಂದಾಗಿ ಪಟ್ಟಣದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸ್ವಚ್ಛತೆ ಆಗುತ್ತಿಲ್ಲ. ಪೌರ ಕಾರ್ಮಿಕರ ನೇಮಕಕ್ಕೆ ಗಮನ ಹರಿಸಿ ಎಂದರು.
ಸದಸ್ಯ ಖಲೀಲ್ ಅವರು, ಪಟ್ಟಣದ ಮುಖ್ಯ ರಸ್ತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಿ ಎಂದರೆ, ಚಮನ್ ಷಾ ಅವರು, ಪಟ್ಟಣದ ಎಲ್ಲಾ ಚರಂಡಿಗಳನ್ನು ಸಿಸಿ ಚರಂಡಿಗಳನ್ನಾಗಿ ಮಾಡಲು ಬಜೆಟ್‌ನಲ್ಲಿ ಆದ್ಯತೆ ಕೊಡಿ ಎಂದರು.
ಕಣ್ಣಾಳ್ ಹನುಮಂತಪ್ಪ ಮಾತನಾಡಿ, ಪಶು ಆಸ್ಪತ್ರೆಯ ಜಾಗವನ್ನು ಸ್ವಚ್ಛಗೊಳಿಸಿ, ಹೊಸ ಕಾಂಪೌಂಡ್ ನಿರ್ಮಿಸುವಂತೆ ಮನವಿ ಮಾಡಿದರು.
ಆಶ್ರಯ ಸಮಿತಿ ಸದಸ್ಯ ಫಕೃದ್ದೀನ್ ಅವರು, ಪಟ್ಟಣದಲ್ಲಿ ತುರ್ತು ಸೇವೆಗಾಗಿ ಅಗ್ನಿ ಶಾಮಕ ಕಚೇರಿ ಆರಂಭಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಿರಿ ಮತ್ತು ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿದರು.
ಕೆ.ಪಿ.ಗಂಗಾಧರ್, ಭೋವಿ ಕುಮಾರ್, ಯುಸೂಫ್, ಬಿ.ಸುರೇಶ್, ಸಾಬೀರ್ ಅಲಿ ಮತ್ತಿತರರು ಪಟ್ಟಣದ ವಿವಿಧ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.
ಈ ಎಲ್ಲಾ ಅಭಿಪ್ರಾಯ ಹಾಗೂ ಬೇಡಿಕೆಗಳಿಗೆ ಉತ್ತರಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರು, ಸಭೆಯಲ್ಲಿ ಕೇಳಿ ಬಂದ ಮನವಿಗಳನ್ನು ಆದ್ಯತೆ ಮೇರೆಗೆ ಮತ್ತು ಅನುದಾನದ ಆಧಾರದ ಮೇಲೆ ಕಾಮಗಾರಿಗಳನ್ನು ಬಜೆಟ್‌ನಲ್ಲಿ ಸೇರಿಸಲಾಗುವುದೆಂದರು.
ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ 40 ಪೌರ ಕಾರ್ಮಿಕರ ಅಗತ್ಯವಿದ್ದು, ಈಗ 17 ಪೌರ ಕಾರ್ಮಿಕರು ಮಾತ್ರ ಇದ್ದಾರೆ. ಪೌರ ಕಾರ್ಮಿಕರ ನೇಮಕಕ್ಕೆ ಸರ್ಕಾರದ ಒಪ್ಪಿಗೆಬೇಕು. ಚರಂಡಿಗಳ ಸ್ವಚ್ಛತೆಗೆ ಜೆಸಿಬಿ ಬಳಸಿದರೆ, ಚರಂಡಿಗಳು ಹಾಳಾಗುತ್ತವೆ. ಆದ್ದರಿಂದ ಕೂಲಿ ಕಾರ್ಮಿಕರಿಂದಲೇ ಸ್ವಚ್ಛಗೊಳಿಸುತ್ತೇವೆ ಎಂದರು.
ಪಟ್ಟಣದ ಹೊರ ವಲಯಗಳಲ್ಲಿ ಸ್ವಾಗತ ಹಾಗೂ ವಂದನೆ ಫಲಕಗಳನ್ನು ಶೀಘ್ರವೇ ಹಾಕುವುದಾಗಿ ಸುರೇಶ್ ತಿಳಿಸಿದರು.
ಬಾಪೂಜಿ ಹಾಲ್ ಅಭಿವೃದ್ಧಿಗೆ ತಾಂತ್ರಿಕ ತೊಂದರೆ ಇದ್ದು, ಈ ಬಗ್ಗೆ ಸರ್ಕಾರದಿಂದಲೇ ನಮಗೆ ಒಪ್ಪಿಗೆ ಸಿಗಬೇಕೆಂದು ಸ್ಪಷ್ಟಪಡಿಸಿದ ಮುಖ್ಯಾಧಿಕಾರಿ ಸುರೇಶ್ ಅವರು, ಪಶು ಆಸ್ಪತ್ರೆ ಆವರಣದಲ್ಲಿರುವ ಸ್ವಲ್ಪ ಜಾಗವನ್ನು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕೇಳಿದ್ದೇವೆ.
ನಂದಿಗುಡಿ ರಸ್ತೆ ಇದೀಗ ಜಿಲ್ಲಾ ಮುಖ್ಯರಸ್ತೆಯಿಂದ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿದ್ದು, ರಸ್ತೆ ಅಕ್ಕ-ಪಕ್ಕದಲ್ಲಿ ಶೆಡ್‌ಗಳನ್ನು ಇಡುವ ಬಗ್ಗೆ ಶಾಸಕರ ಸಮ್ಮುಖದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ ಎಂದು ಸುರೇಶ್ ಹೇಳಿದರು.
ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಬಿ.ಮಂಜುನಾಥ್, ಷಾ ಅಬ್ರಾರ್, ಶಬ್ಬೀರ್ ಖಾನ್, ಓ.ಜಿ.ಕುಮಾರ್, ಆಶ್ರಯ ಸಮಿತಿಯ ಕಣ್ಣಾಳ್ ನಾಗರಾಜ್, ಪಿ.ನಾರಾಯಣಪ್ಪ, ದೊಡ್ಮನಿ ಬಸವರಾಜ್, ಬ್ರುಹಾನ್, ಪಿ.ಹೆಚ್.ಶಿವಕುಮಾರ್, ಪುರಸಭೆ ಅಧಿಕಾರಿಗಳಾದ ಪ್ರಭು, ಮಂಜುನಾಥ್, ನವೀನ್, ಶಿವರಾಜ್, ಇಮ್ರಾನ್ ಮತ್ತಿತರರು ಸಭೆಯಲ್ಲಿದ್ದರು.