ಜಾಗೃತ ಸಮಾಜ ನಿರ್ಮಾಣಕ್ಕೆ ಅಧ್ಯಾತ್ಮಿಕ ಮೌಲ್ಯ ಅಗತ್ಯ

ಜಾಗೃತ ಸಮಾಜ ನಿರ್ಮಾಣಕ್ಕೆ ಅಧ್ಯಾತ್ಮಿಕ ಮೌಲ್ಯ ಅಗತ್ಯ

ಈಶ್ವರೀಯ ವಿಶ್ವ ವಿದ್ಯಾಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ 

ದಾವಣಗೆರೆ, ಡಿ.4- ವಿಜ್ಞಾನದ ವೇಗ ದಿಂದಾಗಿ ಅಜ್ಞಾನಿಯಾಗುತ್ತಿರುವ ಮನುಷ್ಯನಿಗೆ ಅಧ್ಯಾತ್ಮಿಕ ಮೌಲ್ಯ ಶಿಕ್ಷಣ ಅಗತ್ಯವಾಗಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಪ್ರತಿಪಾದಿಸಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ಇಂದು ಆರಂಭಗೊಂಡ ಸುದೀರ್ಘ ಒಂದು ತಿಂಗಳ ಕಾಲ ನಡೆಯಲಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

ಜಾಗೃತ ಸಮಾಜ ನಿರ್ಮಾಣಕ್ಕಾಗಿ ಅಧ್ಯಾತ್ಮಿಕ ಮೌಲ್ಯಗಳು ಅತ್ಯಗತ್ಯ. ಒಂದು ತಿಂಗಳು ನಡೆಯುವ ಈ ಪ್ರವಚನ ಮಾಲೆಯಲ್ಲಿ  ಅಧ್ಯಾತ್ಮಿಕ ಮೌಲ್ಯ ಶಿಕ್ಷಣ ಪಡೆಯೋಣ. ಆ ಮೂಲಕ ಶರಣರ ಅನುಭಾವಿಕ ಸತ್ಯಗಳನ್ನು ಅರಿಯೋಣ ಎಂದು ಕರೆ ನೀಡಿದರು.

ಅರಿತರೆ ಶರಣ, ಮರೆತರೆ ಮಾನವ ಎಂಬ ಮಾತಿದೆ. ಹಾಗೆಯೇ ನಾವು ಅಧ್ಯಾತ್ಮಿಕ ಮೌಲ್ಯ ಗಳನ್ನು ಅರ್ಥೈಸಿಕೊಂಡು ಅನುಷ್ಠಾನಕ್ಕೆ ತಂದರೆ ಶರಣರಾಗುತ್ತೇವೆ. ಇಲ್ಲವಾದರೆ ಮಾನವರಾಗು ತ್ತೇವೆ. ಎಲ್ಲರೂ ಶ್ರೇಷ್ಠ ಶರಣರಾಗ ಬೇಕೆಂಬುದು ಶರಣರ ಉದ್ದೇಶವಾಗಿತ್ತು ಎಂದರು.

ಕಳಬೇಡ ಕೊಲಬೇಡ ವಚನಗಳ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಬೇಕಾದ ಜ್ಞಾನವನ್ನೂ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ಸರಳವಾಗಿ ಹೇಳಿಕೊಟ್ಟಿದ್ದರು. ಆ ಶರಣ ಸಾಹಿತ್ಯವನ್ನು ನಾವು ಅರಗಿಸಿಕೊಳ್ಳಬೇಕಿದೆ ಎಂದು ಹೇಳಿದರು.

`ವ್ಯಾದನೊಂದು ಮೊಲವ ತಂದೊಡೆ’ ವಚನ ಉದಾಹರಿಸಿದ ಬಸವರಾಜ ರಾಜಋಷಿ ಅವರು, ಬೇಟೆಯಾಡಿ ತಂದ ಮೊಲಕ್ಕೆ ಇರುವ ಬೆಲೆ ಮನುಷ್ಯನ ಶವಕ್ಕಿರುವುದಿಲ್ಲ. ಬೆಲೆ ಇಲ್ಲದ ಈ ಶರೀರವನ್ನು ನಂಬಿ ಕೆಡುತ್ತಿರುವ ಮಾನವನಿಗೆ ಆತ್ಮ ಜಾಗೃತಿ ಅಗತ್ಯವಾಗಿದೆ ಎಂದು ಹೇಳಿದರು.

ಬಾಂಬ್‌ಗಳನ್ನು ಹಾಕಲು ರಾಷ್ಟ್ರಮಟ್ಟದಲ್ಲಿ ಪೈಪೋಟಿ ನಡೆಯುತ್ತಿದೆ. ಮುಂದೊಂದು ದಿನ ನಮ್ಮ ಮೇಲೆಯೇ ನಾವು ಬಾಂಬ್ ಹಾಕಿಕೊಳ್ಳು ವಂತಹ ವ್ಯವಸ್ಥೆ ನಿರ್ಮಾಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ, ಜೀವನದ ಜಂಜಾಟದಲ್ಲಿ ದುಃಖದ ದಿನಗಳೇ ಹೆಚ್ಚಾದ ಪರಿಸ್ಥಿತಿಯಲ್ಲಿ ಅಧ್ಯಾತ್ಮಿಕತೆ ಮೂಲಕ ಜೀವನದ ಶ್ರೇಷ್ಠತೆ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರವಚನ ವೇದಿಕೆ ಉತ್ತಮ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.

ತನ್ನನ್ನು ತಾನು ಅರಿಯುವುದೇ ಶ್ರೇಷ್ಠತೆ ಎಂದು ಶರಣರು ಹೇಳಿದ್ದರು. ಯಾರಿಗೆ ಜೀವನದ ಅರಿವು ಬರುತ್ತದೆಯೋ ಅವರೇ ಶರಣರಾಗುತ್ತಾರೆ. ಹುಟ್ಟು- ಸಾವಿನ ನಡುವೆ ಮನುಷ್ಯ ತನ್ನ ಜೀವನವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉಪ ವಿಭಾಗಾಧಿಕಾರಿ ಶ್ರೀಮತಿ ಎನ್. ದುರ್ಗಾಶ್ರೀ, ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ್ರು, ಈಶ್ವರೀಯ ವಿಶ್ವವಿದ್ಯಾಲಯ ವಿದ್ಯಾನಗರ ಶಾಖೆ ಕಟ್ಟಡದ ಭೂ ದಾನಿ ಶ್ರೀಮತಿ ಸಣ್ಣಗೌಡ್ರು ಲಕ್ಕಮ್ಮ ದ್ಯಾಮಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈಶ್ವರೀಯ ವಿಶ್ವವಿದ್ಯಾಲಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ `ಶರಣರು ಕಂಡ ಶಿವ’ ಪ್ರವಚನದ ಸದುದ್ದೇಶವನ್ನು ವಿವರಿಸಿದರು.

ಓಂಕಾರಪ್ಪ ಸ್ವಾಗತಿಸಿದರು. ಸೀತಮ್ಮ ಕಾಲೇಜಿನ ಶ್ರೀಮತಿ ಅನ್ನಪೂರ್ಣ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!