ಯುವ ಪೀಳಿಗೆಯಿಂದ ಸಾಧನೆಯಲ್ಲಿ ಸಹಭಾಗಿತ್ವ : ಶೊಲ್ಲಾಪುರ್
ದಾವಣಗೆರೆ, ನ. 3 – ಭಾರತದ ಆರ್ಥಿಕ ಬೆಳವಣಿಗೆ ವೇಗ ಈಗ ವಿಶ್ವದಲ್ಲೇ ಅತಿ ಹೆಚ್ಚಿನ ಶೇ.7.6 ಆಗಿದೆ. ಶೀಘ್ರದಲ್ಲೇ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಹಾಗೂ 2030ರ ವೇಳೆಗೆ ಜಪಾನ್ ಹಿಂದೆ ಹಾಕಿ ಮೂರನೇ ಅತಿ ದೊಡ್ಡ ಆರ್ಥಿಕತೆ ಆಗಲಿದೆ ಎಂದು ಹುಬ್ಬಳ್ಳಿ ಕೆ.ಎಲ್.ಇ. ಟೆಕ್ನಾಲಜಿಕಲ್ ಯೂನಿವರ್ಸಿಟಿಯ ಸ್ಕೂಲ್ಸ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಡೀನ್ ಎಂ.ಆರ್. ಶೊಲ್ಲಾಪುರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈ-ಟೆಕ್ ಎಜುಕೇಶನ್‌ನ ವಾಣಿಜ್ಯ ವಿಭಾಗದ ವತಿಯಿಂದ ಬಾಪೂಜಿ ಬಿ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 5ನೇ ವಾಣಿಜ್ಯೋತ್ಸವ-2023 ಉದ್ಘಾಟಿಸಿ, ಅವರು ಮಾತನಾಡಿದರು.
ಭಾರತವನ್ನು ಅತಿ ದೊಡ್ಡ ಆರ್ಥಿಕ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ರೂಪಿಸುವ ಪ್ರಕ್ರಿಯೆಯಲ್ಲಿ ಈಗಿನ ಯುವ ಪೀಳಿಗೆ ಭಾಗಿಯಾಗಲಿದೆ. ನೀವೆಲ್ಲರೂ ಈ ಸಾಧನೆಗೆ ಕಾರಣೀಭೂತರಾಗಲಿದ್ದೀರಿ ಎಂದವರು ಹೇಳಿದರು.
ದೇಶದ ಬೆಳವಣಿಗೆಯಲ್ಲಿ ವಾಣಿಜ್ಯಶಾಸ್ತ್ರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ವಲಯದಲ್ಲಿರುವ ವಿದ್ಯಾರ್ಥಿಗಳು ಭವಿಷ್ಯದ ಭಾರತ ನಿರ್ಮಿಸುವ ನಾಯಕರಾಗಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಈಸ್ಟ್ ಇಂಡಿಯಾ ಕಂಪನಿ ನಾಣ್ಯಗಳಲ್ಲಿ ಹಿಂದೂ ದೇವರು
1616ರ ಕಾಲದ ನಾಣ್ಯ ಧರ್ಮ ಆಧರಿತ ಆರ್ಥಿಕತೆಯ ಸಂಕೇತ
ವಾಣಿಜ್ಯೋತ್ಸವದ ಅಂಗವಾಗಿ ಆರ್ಥಿಕ ಚಟುವಟಿಕೆಗಳ ಬಿಂಬಿಸುವ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ನಗರದ ಅಥಣಿ ಪಿ.ಯು. ಕಾಲೇಜಿನ ವಿದ್ಯಾರ್ಥಿನಿಯರಾದ ಕೆ.ಎಂ. ಅಕ್ಷತ ಹಾಗೂ ಕೆ. ಕಾವ್ಯ ಅವರು ಪ್ರದರ್ಶಿಸಿದ ಈಸ್ಟ್ ಇಂಡಿಯಾ ಕಂಪನಿಯ ಕಾಲದ ನಾಣ್ಯಗಳು ಗಮನ ಸೆಳೆದವು.
ಒಂದು ಹಾಗೂ ಎರಡು ಆಣೆಗಳ ಆ ಕಾಲದ ನಾಣ್ಯಗಳು ಈಗಿನ ನಾಣ್ಯಗಳಿಗಿಂತ ಹಲವು ಪಟ್ಟು ದೊಡ್ಡವು ಹಾಗೂ ಹೆಚ್ಚು ತೂಕದವುಗಳಾಗಿದ್ದವು.
ಅಲ್ಲದೇ, ಅವುಗಳ ಮೇಲೆ ಸೀತಾ ಲಕ್ಷ್ಮಣ ಸಮೇತ ಶ್ರೀರಾಮ, ಆಂಜನೇಯ, ಅಷ್ಟ ಲಕ್ಷ್ಮಿ, ಗಣಪತಿ, ಆಂಜನೇಯ, ಶಿವ ಪಾರ್ವತಿ, ದುರ್ಗೆ ಮುಂತಾದ ದೇವರ ಚಿತ್ರಗಳನ್ನು ಮುದ್ರಿಸಲಾಗಿತ್ತು.
1616ನೇ ಇಸವಿಯಲ್ಲಿ ಈಸ್ಟ್ ಇಂಡಿಯಾ ಕಂಪನಿ ಮುದ್ರಿಸಿದ್ದ ಎರಡು ಆಣೆಯ ನಾಣ್ಯದ ಮೇಲೆ ಓಂ ಗುರುತೂ ಸಹ ಇತ್ತು. ಈ ಬಗ್ಗೆ ಪ್ರಸ್ತಾಪಿಸಿದ ಕೆ.ಎಲ್.ಇ. ಡೀನ್ ಎಂ.ಆರ್. ಶೊಲ್ಲಾಪುರ್, ಆ ಕಾಲದ ಆರ್ಥಿಕ ವ್ಯವಸ್ಥೆ ಹಾಗೂ ಧಾರ್ಮಿಕತೆ ಜೊತೆಯಾಗಿ ಸಾಗುತ್ತಿದ್ದವು ಎಂಬುದನ್ನು ಈ ನಾಣ್ಯಗಳು ಬಿಂಬಿಸುತ್ತವೆ. ಧರ್ಮ ಆಧರಿತ ಚೌಕಟ್ಟಿನಲ್ಲಿ ವ್ಯವಹಾರ ನಡೆಸಲಾಗುತ್ತಿದ್ದ ಬಗ್ಗೆ ಇದು ವಸ್ತುನಿಷ್ಠ ದಾಖಲೆ ಎಂದರು.
ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಅದು ವ್ಯವಹಾರ ಹಾಗೂ ವಾಣಿಜ್ಯದಲ್ಲಿ ಶ್ರೇಷ್ಠತೆ ಹಾಗೂ ಪರಿಪಕ್ವತೆ ಹೊಂದಿರಬೇಕು. ಇತಿಹಾಸ ಕಾಲದಿಂದಲೂ ಉನ್ನತ ನಾಗರಿಕತೆಗಳಲ್ಲಿ ವ್ಯಾಪಾರ ಹಾಗೂ ವಾಣಿಜ್ಯ ಶ್ರೇಷ್ಠವಾಗಿರುವುದು ಕಂಡು ಬರುತ್ತದೆ. ಚೋಳರಿಂದ ಹಿಡಿದು ವಿಜಯನಗರ ಸಾಮ್ರಾಜ್ಯದವರೆಗಿನ ಶ್ರೇಷ್ಠ ಆರ್ಥಿಕತೆಗಳಲ್ಲಿ ವಾಣಿಜ್ಯ, ವ್ಯಾಪಾರ ಹಾಗೂ ಅರ್ಥ ವ್ಯವಸ್ಥೆ ಉತ್ತಮವಾಗಿತ್ತು ಎಂದು ಶೊಲ್ಲಾಪುರ್ ಹೇಳಿದರು.
ವಾಣಿಜ್ಯ ವಲಯಕ್ಕೆ ಬರುವ ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದರಷ್ಟೇ ಸಾಲದು. ಕೌಶಲ್ಯಗಳನ್ನೂ ಬೆಳೆಸಿಕೊಳ್ಳಬೇಕು. ಆರ್ಥಿಕ ವಿದ್ಯಮಾನಗಳ ಬಗ್ಗೆ ಈಗಿನಿಂದಲೇ ತಿಳಿದುಕೊಳ್ಳಬೇಕು ಎಂದವರು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಾಪೂಜಿ ಎಂ.ಬಿ.ಎ. ಕಾಲೇಜಿನ ನಿರ್ದೇಶಕ ಹೆಚ್.ವಿ. ಸ್ವಾಮಿ ತ್ರಿಭುವಾನಂದ, ವಿವಿಧ ಪಿ.ಯು. ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ವಾಣಿಜ್ಯೋತ್ಸವ ರೂಪಿಸಲಾಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಅಗತ್ಯ ಪ್ರತಿಭೆ ಹಾಗೂ ಕೌಶಲ್ಯ ಬೆಳೆಸಿಕೊಳ್ಳಲು ಇದು ನೆರವಾಗಲಿದೆ ಎಂದರು.
ಪ್ರಾಂಶುಪಾಲ ಬಿ. ವೀರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಾಲ್ಗುಣಿ ಹಾಗೂ ಪ್ರಜ್ಞ ಪ್ರಾರ್ಥಿಸಿದರು. ವಿ.ಎನ್. ಸಂಜನ ಹಾಗೂ ಆದಿಲ್ ಅತ್ತಾರ್ ನಿರೂಪಿಸಿದರು. ಪ್ರೊ. ಬಿ.ಬಿ. ಮಂಜುನಾಥ್ ವಂದಿಸಿದರು.