ಕನ್ನಡ ಉಳಿಸಿ, ಅನ್ಯ ಭಾಷೆಗಳನ್ನೂ ಗೌರವಿಸಬೇಕು

ಕನ್ನಡ ಉಳಿಸಿ, ಅನ್ಯ ಭಾಷೆಗಳನ್ನೂ ಗೌರವಿಸಬೇಕು

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ

ದಾವಣಗೆರೆ, ನ.30- ಕನ್ನಡವನ್ನೇ ಮಾತನಾಡುವ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸೋಣ. ಜೊತೆಗೆ ಅನ್ಯ ಭಾಷೆಗಳನ್ನೂ ಗೌರವಿಸೋಣ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ವೇದಿಕೆ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾರಾದರೂ ನಮ್ಮನ್ನು ಮಾತನಾಡಿಸಿದರೆ ಇಂಗ್ಲೀಷ್‌ನಲ್ಲಿ ಉತ್ತರಿಸುವುದನ್ನು ಕಡಿಮೆ ಮಾಡಿ, ಆದಷ್ಟೂ ಕನ್ನಡವನ್ನೇ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬಹುದು. ಉದ್ಯೋಗ, ಆದಾಯ ಗಳಿಕೆ ಮತ್ತಿತರೆ ಕಾರಣಕ್ಕಾಗಿ ಅನ್ಯ ಭಾಷೆಗಳ ಜ್ಞಾನವೂ ಬೇಕಾಗುತ್ತದೆ. ಅವುಗಳನ್ನೂ ಗೌರವಿಸೋಣ. ಆದರೆ ಕನ್ನಡಕ್ಕೆ ಆದ್ಯತೆ ನೀಡೋಣ ಎಂದರು.

ಆಲೂರು ವೆಂಕಟರಾಯರು ಸೇರಿದಂತೆ ಹಲವರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದರು. ಅದರ ಫಲವಾಗಿ 1973ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಇಂದು ಆ ಎಲ್ಲಾ ಹೋರಾಟಗಳನ್ನು ನೆನಪಿಸಿಕೊಳ್ಳಬೇಕಿದೆ ಎಂದು ಹೇಳಿದರು.

ನ್ಯಾಯಾಲಯದ ತೀರ್ಪುಗಳನ್ನು ಆಯಾ ಪ್ರಾಂತೀಯ ಭಾಷೆಗಳಲ್ಲಿಯೇ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ತೀರ್ಪುಗಳನ್ನು ಕನ್ನಡದಲ್ಲಿಯೇ ಅನುವಾದ ಮಾಡಲಾಗುತ್ತಿದೆ. ಇದರಿಂದಾಗಿ ಜನ ಸಾಮಾನ್ಯರಿಗೆ ತೀರ್ಪಿನ ಬಗ್ಗೆ ತಿಳಿಯಲು, ಮನದಟ್ಟು  ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಕನ್ನಡ ಧ್ವಜಕ್ಕೆ ಮಾನ್ಯತೆ ಸಿಗಲಿ: ಹಳದಿ ಹಾಗೂ ಕೆಂಪು ಬಣ್ಣ ಮಂಗಳಕರವಾದದ್ದು. ನಾವು ಮನೆಯಲ್ಲಿ ಅರಿಷಿಣ ಹಾಗೂ ಕುಂಕುಮ ವನ್ನು ಇದೇ ಕಾರಣಕ್ಕಾಗಿಯೇ ಬಳಸುತ್ತಿವೆ. ನಮ್ಮ ನಾಡಿನ ಧ್ವಜ ಈ ಬಣ್ಣಗಳನ್ನೊಳಗೊಂಡಿದೆ. ಕನ್ನಡ ಧ್ವಜಕ್ಕೆ ಮಾನ್ಯತೆ ನೀಡುವಂತೆ ಹೋರಾಟ ನಡೆಯುತ್ತಿದ್ದು, ಶೀಘ್ರ ಮಾನ್ಯತೆ ಸಿಗಲಿ ಎಂದು ಆಶಿಸಿದರು.

ಕಾನೂನು ಪಾಲಿಸಿ: ತಪ್ಪು ಎಂದು ತಿಳಿದಿದ್ದರೂ ಸಂಚಾರಿ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿದೆ. ಹೆಲ್ಮೆಟ್ ಇಲ್ಲದೇ ವಾಹನ ಓಡಿಸುವುದು, ಒಂದೇ ಬೈಕ್‌ನಲ್ಲಿ ನಾಲ್ಕೈದು ಜನರು ಸವಾರಿ ಮಾಡುವುದನ್ನು ಕಾಣುತ್ತಿದ್ದೇವೆ. ಇದರಿಂದ ಅಪಘಾತಗಳಾಗುತ್ತವೆ. ಬಾಲ್ಯ ವಿವಾಹ ನಿಷೇಧವಿದ್ದರೂ ವಿವಾಹಗಳು ನಡೆಯುತ್ತಿವೆ. ಎಲ್ಲರ ಒಳಿತಿಗಾಗಿಯೇ ಕಾನೂನು ರೂಪಿಸಲಾಗಿರುತ್ತದೆ. ಪ್ರತಿಯೊಬ್ಬರೂ ಕಾನೂನು  ಪಾಲನೆ ಮಾಡುವ ಮೂಲಕ ಗೌರವಿಸಬೇಕು ಎಂದು ಹೇಳಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿವಪ್ಪ ಜಿ.ಸಲಗೆರೆ ಮಾತನಾಡಿ,  ಕಾನೂನಿನ ಅರಿವು ಎಲ್ಲರಿಗೂ ಅಗತ್ಯ. ನಮ್ಮ ವರ್ತನೆಯಿಂದ ಇತರರ ಹಕ್ಕುಗಳು ಉಲ್ಲಂಘನೆ ಆಗಬಾರದು.  ಗ್ರಾಮೀಣ ಪ್ರದೇಶದ ಜನರಿಗೆ ಕಾನೂನಿನ ಅರಿವು ಕಡಿಮೆ ಇದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ ರಾಷ್ಟ್ರ, ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ಮಾಡಲಾಗಿದೆ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ.ಕರೆಣ್ಣವರ ಮಾತನಾಡಿ, ಭಾವೈಕ್ಯತೆ, ಅಭಿಮಾನ, ಪ್ರೀತಿ ನಮ್ಮಲ್ಲಿ ಇರಬೇಕು. ಅಲ್ಲದೇ ನಾಡು ನುಡಿಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣಕುಮಾರ್, ವೇದಿಕೆಯ ರಾಜ್ಯಾ ಧ್ಯಕ್ಷ ನಿಂಗರಾಜ ಗೌಡ್ರು, ಹೆಚ್.ಬಸವರಾಜ ಗೌಡ್ರು, ಆರ್.ಭಾಗ್ಯಲಕ್ಷ್ಮಿ, ಡಾ.ಮುರುಳೀಧರ್, ಸಂತೋಷ್ ಗೌಡ, ಸುರೇಶ್ ಗೌಡ, ಎ.ಎಸ್. ಸುವರ್ಣಮ್ಮ, ಸಂತೋಷ್ ಕುಮಾರ್, ಪರಶುರಾಮ್ ಬೇತೂರು, ಬಿ.ಜಯಪ್ರಕಾಶ್, ಅನುರಾಧ ಇತರರು ವೇದಿಕೆ ಮೇಲಿದ್ದರು.

error: Content is protected !!