ಶಾಸಕ ಬಸವಂತಪ್ಪ
ದಾವಣಗೆರೆ, ನ.19- ಜೀವನದ ಜಂಜಾಟದಲ್ಲಿ ಬೇಸತ್ತಿರುವ ಮನಗಳಿಗೆ ದೇವಾಲಯಗಳು ನೆಮ್ಮದಿಯ ಕೇಂದ್ರಗಳಾಗಿವೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕುರ್ಕಿ ಗ್ರಾಮದಲ್ಲಿ ಭಾನುವಾರ ಸದ್ಗುರು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರಸಾದ ನಿಲಯದ ಶಂಕುಸ್ಥಾಪನೆ, ಕಾರ್ತಿಕೋತ್ಸವ ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯ ದುಡಿಮೆ ಮಾಡಿಕೊಂಡು ಬಸವಳಿದು ಬರುವ ರೈತರಿಗೆ ಈ ಶಿರಡಿ ಸಾಯಿಬಾಬಾ ಮಂದಿರ ನೆಮ್ಮದಿ ನೀಡುವ ಕೇಂದ್ರವಾಗಿದೆ. ಈ ಮಂದಿರದಲ್ಲಿ ಒಂದು ಗಂಟೆ ಧ್ಯಾನ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು.
ಪ್ರತಿವರ್ಷ ಶಿರಡಿ ಸಾಯಿಬಾಬಾ ಅವರ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಸುತ್ತಮುತ್ತಲ ಭಕ್ತರು ಶಿರಡಿ ಸಾಯಿಬಾಬಾ ಮಂದಿರಕ್ಕೆ ಬಂದು ಸಾಯಿಬಾಬಾನ ದರ್ಶನ ಪಡೆದು ಅವರ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಹೋಗುತ್ತಿದ್ದಾರೆ. ಇದೊಂದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಸಂಖ್ಯೆ ಹೆಚ್ಚಾಗುತ್ತಿವೆ. ಇದಕ್ಕೆ ರೈತರು, ಬಡವರಲ್ಲ. ಶಿಕ್ಷಣ ಪಡೆದ ಸುಶಿಕ್ಷಿ ತರು, ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು, ಸಂಪತ್ತು ಹೊಂದಿರುವ ಶ್ರೀಮಂತರು ಹೆತ್ತ ತಂದೆ-ತಾಯಿಗಳನ್ನು ಬೀದಿಗಟ್ಟುವುದನ್ನು ನಾವು ಇಂದು ನೋಡುತ್ತಿದ್ದೇವೆ. ಹೀಗಾಗಿ ಭಕ್ತರು ದೇವಸ್ಥಾನಗಳಿಗೆ ಬಂದು ಎಷ್ಟು ಶ್ರದ್ಧಾಭಕ್ತಿಯಿಂದ ದೇವರನ್ನು ನೆನೆಯುತ್ತೀರೋ ಅದೇ ರೀತಿ ಮನೆಯಲ್ಲಿರುವ ತಂದೆ-ತಾಯಿಗಳನ್ನು ದೇವರಂತೆ ನೆನೆದು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಹಾವೇರಿ ಜಿಲ್ಲೆ ಗುತ್ತಲ ಕಲ್ಮಠದ ಶ್ರೀಗುರುಸಿದ್ದ ಮಹಾಸ್ವಾಮಿಗಳು, ಕೋಣಂದೂರು ಶ್ರೀಶೈಲ ಶಾಖಾ ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ವೇಳೆ ಶ್ರೀ ಕೇಸರಿ ವಿದ್ಯಾಸಂಸ್ಥೆ ಕಾರ್ಯ ದರ್ಶಿ ಎ.ಜಿ.ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪ್ರೊ.ಲಿಂಗಣ್ಣ, ಕೇಸರಿ ವಿದ್ಯಾಸಂಸ್ಥೆ ಅಧ್ಯಕ್ಷ ಅತ್ತಿಗೆರೆ ಎ.ಒ.ರವಿ, ಕುರ್ಕಿ ಗ್ರಾಪಂ ಉಪಾಧ್ಯಕ್ಷ ಕೆ.ಎಂ.ನಿಂಗಪ್ಪ, ನಿವೃತ್ತ ಉಪಾಧ್ಯಾಯ ಸಿದ್ದಬಸಪ್ಪ, ಹದಡಿ ಪಿಎಸ್‍ಐ ಸಂಜೀವ್‍ಕುಮಾರ್, ಕುರ್ಕಿ ಗ್ರಾಮದ ಓದೋಗೌಡ್ರ ರೇವಣಸಿದ್ದಪ್ಪ, ಕೊಟ್ರಪ್ಪ, ನಿಂಗಪ್ಪ ಸೇರಿದಂತೆ ಇನ್ನಿತರರಿದ್ದರು.