‘ಚಿಂತನ-ಮಂಥನ’ ಸಭೆಯಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ
ದಾವಣಗೆರೆ, ನ. 19- ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಜಾತಿ ಗಣತಿ ಸಮೀಕ್ಷೆ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಡಿ. 15 ರಿಂದ 20 ರೊಳಗಾಗಿ ರಾಜ್ಯಮಟ್ಟದ ಜನಜಾಗೃತಿ ಸಮಾವೇಶ ನಡೆಸಲಾಗುವುದು ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಮಾಹಿತಿ ನೀಡಿದರು.
ನಗರದ ರೋಟರಿ ಬಾಲಭವನದಲ್ಲಿ ಇಂದು ಏರ್ಪಾಡಾಗಿದ್ದ ಜಾತಿ ಗಣತಿ ವರದಿ ಬಿಡುಗಡೆ ಕುರಿತ `ಚಿಂತನ-ಮಂಥನ’ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸರಾಸರಿ ಶೇ. 80 ರಷ್ಟಿರುವ ಅಲ್ಪ ಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳು ಸ್ವತಂತ್ರ ಭಾರತದಲ್ಲಿ 75 ವರ್ಷಗಳ ನಂತರವೂ ಸಹ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ನ್ಯಾಯ ಸಿಗದೇ ಅವಕಾಶ ಗಳಿಂದ ವಂಚಿತವಾಗಿವೆ ಎಂದರು.
ರಾಜ್ಯದಲ್ಲಿನ ಸರ್ವ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು 2013-18 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಸಿದ್ಧರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಮೂಲಕ 162 ಕೋಟಿ ರೂ. ವ್ಯಯಿಸಿ ಮನೆ, ಮನೆ ಸಮೀಕ್ಷೆಯನ್ನು ನಡೆಸಿದ್ದರು. ಆದರೆ ಇದುವರೆಗೂ ಆ ಸಮೀಕ್ಷಾ ವರದಿಯನ್ನು ಅಂಗೀಕರಿಸಿ, ಸಾರ್ವಜನಿಕ ವಾಗಿ ಬಿಡುಗಡೆ ಮಾಡಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ರಾಜ್ಯಮಟ್ಟದ ಜನಜಾಗೃತಿ ಸಮಾವೇಶ ಆಯೋಜಿಸಲಾಗುವುದು. ಈ ಸಂಬಂಧ ಇನ್ನೂ 3-4 ಪೂರ್ವ ಸಿದ್ಧತಾ ಸಭೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಮಾತನಾಡಿ, ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮಾಜದವರೆಲ್ಲರೂ ಒಗ್ಗಟ್ಟಾಗಬೇಕಾದ ಅಗತ್ಯವಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಹಿಂದದ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ಒಂದಾಗಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ನಿವೃತ್ತ ಎಸ್ಪಿ ಎನ್. ರುದ್ರಮುನಿ ಮಾತನಾಡಿ, ಅಹಿಂದ ಸಮುದಾಯಗಳು ಒಗ್ಗಟ್ಟಾಗಲು ಪ್ರಯತ್ನಿಸುತ್ತಿರುವುದು ಸಂತಸದ ಸಂಗತಿ. ಒಗ್ಗಟ್ಟು ಕೇವಲ ಚುನಾವಣೆಗೆ ಮಾತ್ರ ಸೀಮಿತಗೊಳ್ಳ ಬಾರದು. ಹೋರಾಟ ನಿರಂತರವಾಗಿ ನಡೆಯಬೇಕೆಂದು ಆಶಿಸಿದರು.
ವಕೀಲ ಅನಿಸ್ ಪಾಷ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅಹಿಂದ ವರ್ಗಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡುವಂತಾಗಬೇಕೆಂದು ತಿಳಿಸಿದರು.
ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯಿಸಲು ಎಲ್ಲಾ ಸಮುದಾಯಗಳು ಒಂದಾಗಬೇಕು. ಇಲ್ಲದಿದ್ದಲ್ಲಿ ವರದಿ ಜಾರಿ ವಿಳಂಬವಾಗುತ್ತದೆ. ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕೆಂದು ಸಲಹೆ ನೀಡಿದರು.
ಎಸ್.ಎಂ. ಸಿದ್ಧಲಿಂಗಪ್ಪ ಮಾತನಾಡಿ, ಸಮೀಕ್ಷಾ ವರದಿಯನ್ನು ಪ್ರಬಲ ಸಮು ದಾಯಗಳು ಬಿಡುಗಡೆ ಮಾಡಬಾರದೆಂದು ವಿರೋಧಿಸಿ ನಿರ್ಣಯಗಳನ್ನು ಕೈಗೊಂಡಿದ್ದು, ಅಹಿಂದ ವರ್ಗಗಳೊಂದಿಗೆ ನಿರ್ಣಯಗಳನ್ನು ಚರ್ಚಿಸಿ, ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಸಲ್ಲಿಸಲಾಗುವುದು ಎಂದರು.
ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಮಾತನಾಡಿದರು.
ಹಾಲೇಕಲ್ ಸಿ. ವೀರಣ್ಣ, ಆವರಗೆರೆ ಹೆಚ್.ಜಿ. ಉಮೇಶ್, ದೀಟೂರು ಚಂದ್ರು, ಶಫಿ, ದಾಸರ ತಿಪ್ಪಣ್ಣ, ರಾಜು ಮೌರ್ಯ, ಮಂಜಾನಾಯ್ಕ, ಡೈಮಂಡ್ ಮಂಜುನಾಥ್, ಜಿ. ಷಣ್ಮುಖಪ್ಪ, ಹೆಚ್.ಸಿ. ಗುಡ್ಡಪ್ಪ, ಆರ್.ಬಿ. ಪರಮೇಶ್, ರಾಜು ಪಾಟೀಲ್, ಚಂದ್ರು ಐರಣಿ, ಮತ್ತಿತರರಿದ್ದರು.