ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು

ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು

ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿದ ಡಿಡಿಪಿಐ ಜಿ. ಕೊಟ್ರೇಶ್

ದಾವಣಗೆರೆ, ನ.17-  ಯುವ ಸಂಸತ್ ಸ್ಪರ್ಧೆಯು ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದರ ಜೊತೆಗೆ ಸರ್ಕಾರ ಮತ್ತು ಸಂಸದೀಯ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿಕೊಡಲು ಸಹಕಾರಿಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಕೊಟ್ರೇಶ್ ತಿಳಿಸಿದರು.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಅವರ ಆಲೋಚನೆಗಳನ್ನು ಮುಕ್ತವಾಗಿ ಚರ್ಚಿಸಲು ಯುವ ಸಂಸತ್ ಸ್ಪರ್ಧೆಯು ಉತ್ತಮ ವೇದಿಕೆಯಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು  ಪ್ರತಿಬಿಂಬಿಸುವ ನಿಟ್ಟಿನಲ್ಲಿ ಯುವ ಸಂಸತ್ ಸ್ಪರ್ಧೆ ಸಹಕಾರಿಯಾಗಿದೆ. ಈ ಮಾದರಿ ಕಲಾಪದಲ್ಲಿ ಸಮಾಜದಲ್ಲಿನ ಸಮಸ್ಯೆಗಳನ್ನು ವ್ಯಕ್ತಪಡಿಸಬಹುದು ಎಂದರು.

ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು - Janathavani

ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಈ ಮಾದರಿ ಅಧಿವೇಶನದಲ್ಲಿ ಚರ್ಚೆಗಳು ಆರೋಗ್ಯಪೂರ್ಣವಾಗಿ ಹಾಗೂ ವಾದ-ವಿವಾದಗಳು ಸಾಮಾಜಿಕ ಬೆಳವಣಿಗೆಯ ಪರವಾಗಿರಬೇಕು. ಮಕ್ಕಳ ಮುಂದಿನ ಭವಿಷ್ಯಕ್ಕೆ ಈ ಸ್ಪರ್ಧೆಗಳು ದಾರಿದೀಪವಾಗಬೇಕು. ಜನ ಪ್ರತಿನಿಧಿಗಳನ್ನು ಸಿದ್ಧಗೊಳಿಸಲು ಯುವ ಸಂಸತ್ ಕಾರ್ಯಕ್ರಮ ಪ್ರೇರಣೆಯಾಗಬೇಕು.

ಒಬ್ಬ ಯಜಮಾನ ತನ್ನ ಕುಟುಂಬವನ್ನು ಹೇಗೆ ನಿರ್ವಹಿಸುತ್ತಾನೋ ಹಾಗೆ ರಾಜ್ಯ ಹಾಗೂ ದೇಶವನ್ನು ಮುನ್ನಡೆಸಲು ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಇರುತ್ತಾರೆ. ಅವರ ಕಾರ್ಯವೈಖರಿ ಗಮನಿಸಿ, ಸಲಹೆಗಳನ್ನು ನೀಡಲು, ತಪ್ಪುಗಳನ್ನು ತಿದ್ದಲು ವಿರೋಧ ಪಕ್ಷಗಳಿರುತ್ತವೆ ಎಂದು ಅವರು ಹೇಳಿದರು.

ವಿಷಯ ಪರಿವೀಕ್ಷಕರಾದ ಶಶಿಕಲಾ, ವಸಂತ ಕುಮಾರಿ, ತೀರ್ಪುಗಾರರಾದ ಮಂಜುನಾಥ್, ಪ್ರಭು ಕೆ.ಸಿ, ಕರಿಯಪ್ಪ ಜಿ.ಆರ್ ಉಪಸ್ಥಿತರಿದ್ದರು.

error: Content is protected !!