ಗಾಂಧಿ ಭವನದ ಎದುರು ಮಹಿಳೆಯರಿಂದ ಅಹೋರಾತ್ರಿ ಪ್ರತಿಭಟನೆ
ದಾವಣಗೆರೆ, ಅ. 2 – ಹೊಸದಾಗಿ 1000 ಮದ್ಯದಂಗಡಿಗಳಿಗೆ ಅನುಮತಿ ನೀಡುವ ಪ್ರಸ್ತಾಪ ಕೈ ಬಿಡಬೇಕು ಹಾಗೂ ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದು ಮದ್ಯ ನಿಷೇಧ ಆಂದೋಲನ – ಕರ್ನಾಟಕದ ನೇತೃತ್ವದಲ್ಲಿ ಮಹಿಳೆಯರು ಗಾಂಧಿ ಭವನದ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರ ಮಹಿಳೆಯರು ಕೇಳದೇ ಇದ್ದರೂ ಹಲವಾರು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಆದರೆ, ಮಹಿಳೆಯರು ಉತ್ತಮ ಜೀವನ ನಡೆಸಲು ಮದ್ಯ ನಿಷೇಧಿಸುವಂತೆ ಆಗ್ರಹಿಸುತ್ತಿದ್ದರೂ ಕಿವಿಗೊಡುತ್ತಿಲ್ಲ ಎಂದು ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.
ಗ್ರಾಮ ಪಂಚಾಯ್ತಿಗಳಲ್ಲಿ ಮದ್ಯದಂಗಡಿಗಳನ್ನು ಸ್ಥಾಪಿಸುವುದರಿಂದ ಮಹಿಳೆಯರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕುಟುಂಬಗಳು ಬೀದಿಗೆ ಬರುತ್ತಿವೆ ಎಂದವರು ಹೇಳಿದ್ದಾರೆ.
ಭವನದಿಂದ ಹೊರಹಾಕಿದ್ದಾರೆಂದು ಆಕ್ಷೇಪ
ಸಮಾಜದ ನೆಮ್ಮದಿ, ಆರೋಗ್ಯ ಹಾಳು ಮಾಡುವ ಮದ್ಯದಂಗಡಿ ಸ್ಥಾಪನೆ ವಿಚಾರ ಕೈ ಬಿಟ್ಟು ಮಹಾತ್ಮ ಗಾಂಧಿ ಆಶಯಗಳನ್ನು ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ, ಗಾಂಧಿ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದೆವು. ಇಲ್ಲಿ ಶೀತ ಇದೆ ಎಂಬ ಕಾರಣಕ್ಕಾಗಿ ಭವನದ ಒಳಗೆ ತೆರಳಿದ್ದೆವು. ಆದರೆ, ಮಹಿಳೆಯರೆಂಬುದನ್ನೂ ನೋಡದೇ ನಮ್ಮ ಗಾಂಧಿ ಭವನದಿಂದ ಹೊರ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ನಾವು ಪ್ರತಿಭಟನೆಯನ್ನು ತಡೆದಿಲ್ಲ. ಆದರೆ, ಸರ್ಕಾರಿ ಕಟ್ಟಡದ ಒಳಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗದು. ಹೀಗಾಗಿಯೇ ಪ್ರತಿಭಟನಾ ನಿರತರನ್ನು ಗಾಂಧಿ ಭವನದಿಂದ ಹೊರಗೆ ಕಳಿಸಲಾಗಿದೆ ಎಂದಿದ್ದಾರೆ.
ಒಂದೆಡೆ ಗ್ಯಾರಂಟಿ ಜಾರಿಗೆ ತರುತ್ತಿರುವ ಸರ್ಕಾರ, ಮತ್ತೊಂದೆಡೆ ಮಹಿಳೆಯರು ಬೀದಿಗೆ ಬರುವಂತೆ ಮಾಡುತ್ತಿದೆ. ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. 14 ವರ್ಷದ ಮಕ್ಕಳೂ ಮದ್ಯ ವ್ಯಸನಕ್ಕೆ ಸಿಲುಕುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ ತಡೆಗಾಗಿ ಮದ್ಯದಂಗಡಿ ಸ್ಥಾಪಿಸಲಾಗುತ್ತಿದೆ ಎಂಬ ವಾದವನ್ನು ತಳ್ಳಿ ಹಾಕಿರುವ ಅವರು, ಸರ್ಕಾರದ ಕ್ರಮದಿಂದ ಅಕ್ರಮ ಮದ್ಯದ ಹಾವಳಿ ನಿಲ್ಲುವ ಬದಲು ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.
ಸರ್ಕಾರ ಹೊಸದಾಗಿ 1,000 ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಪ್ರಸ್ತಾವನೆ ವಾಪಸ್ ಪಡೆಯಬೇಕು. ಮಾಲ್, ಸೂಪರ್, ಮಾರ್ಕೆಟ್‌ಗಳಲ್ಲಿ ಮತ್ತು ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡುವ ಪ್ರಸ್ತಾವನೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ನಿನ್ನೆಯಿಂದ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ ತನ್ನ ನಿರ್ಧಾರ ಬದಲಿಸದೇ ಹೋದರೆ ಹೋರಾಟ ತೀವ್ರಗೊಳಿಸುತ್ತೇವೆ, ಪಾದಯಾತ್ರೆಯನ್ನೂ ಮಾಡುತ್ತೇವೆ ಎಂದವರು ಹೇಳಿದ್ದಾರೆ.
ಪ್ರತಿಭಟನಾ ನಿರತ ಮಹಿಳೆಯರು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರಿಗೆ ಮದ್ಯ ನಿಷೇಧ ಕುರಿತ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಂದೋಲನದ ಅಧ್ಯಕ್ಷೆ ನಾಗರತ್ನ, ತಾಲ್ಲೂಕು ಕಾರ್ಯಕರ್ತೆಯರಾದ ಶೃತಿ, ಸುಧಾ ಮತ್ತಿತರರು ಉಪಸ್ಥಿತರಿದ್ದರು.