ವಿಶ್ವನಾಥ್‌ರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದ ಶಾಸಕ ಶಿವಶಂಕರಪ್ಪ
ಅರೆಹುಚ್ಚಿನ ರೀತಿಯಲ್ಲಿ ವರ್ತನೆ ಎಂದ ವಿಶ್ವನಾಥ್
ದಾವಣಗೆರೆ, ಅ. 2 – ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳು ಸಿಗುತ್ತಿಲ್ಲ ಎಂಬ ವಿಷಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡುವುದಾಗಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯದ ಏಳು ಜನರಿಗೆ ಸಚಿವ ಸ್ಥಾನ ನೀಡಿದ್ದಾರೆ. ಅದರ ಬಗ್ಗೆ ನಮ್ಮ ತಕರಾರು ಇಲ್ಲ. ಸಮುದಾಯದ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಅನ್ಯಾಯ ಆಗಿರುವುದು ಸತ್ಯ. ಅವರಿಗೆ ಪ್ರಮುಖ ಹುದ್ದೆಗಳನ್ನು ನೀಡಿಲ್ಲ. ಅದಕ್ಕೆಂದೇ ಈ ವಿಷಯದ ಬಗ್ಗೆ ರಾಜ್ಯದಾದ್ಯಂತ ಚರ್ಚೆ ಆಗುತ್ತಿದೆ ಎಂದರು.
ಇದೇ ವೇಳೆ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವಿರುದ್ಧ ಕಿಡಿ ಕಾರಿರುವ ಶಿವಶಂಕರಪ್ಪ, ನಾನು ಬೆಣ್ಣೆ ಹೊಡೆದು, ಮಸ್ಕಾ ಹೊಡೆದು ಪರಿಷತ್ ಸದಸ್ಯನಾಗಿಲ್ಲ. ಏಳು ಬಾರಿ ಜನರಿಂದ ಆಯ್ಕೆಯಾಗಿ ಶಾಸಕನಾಗಿದ್ದೇನೆ ಎಂದು ಹೇಳಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳ ಬಗ್ಗೆ, ಸಚಿವ ಸ್ಥಾನದ ಬಗ್ಗೆ ಹೇಳಿಕೆ ನೀಡಿರುವ ವಿಶ್ವನಾಥ್ ಅವರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿ ಎಂದು ತರಾಟೆಗೆ ತೆಗೆದುಕೊಂಡರು.
ಯಾವ ಸಮುದಾಯದ ಅಧಿಕಾರಿಗಳನ್ನು ಎಲ್ಲೆಲ್ಲಿ ನಿಯೋಜಿಸಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ಶಿವಶಂಕರಪ್ಪ ಹೇಳಿದರು.
ಶಿವಶಂಕರಪ್ಪ ಹೇಳಿಕೆಗೆ ಮಾರುತ್ತರ ನೀಡಿರುವ ವಿಶ್ವನಾಥ್, ಅವರಿಗೆ ವಯಸ್ಸಾಗಿದೆ. ಅರೆಹುಚ್ಚಿನ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದಿದ್ದಾರೆ.
ದಾವಣಗೆರೆ ಉತ್ತರ ಹಾಗೂ ದಕ್ಷಿಣದಲ್ಲಿ ಅಪ್ಪ – ಮಕ್ಕಳು (ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್) ಯಾರ ಮತಗಳಿಂದ ಗೆದ್ದಿದ್ದೀರಿ? ಅವರು ಕುರುಬರು, ಮುಸ್ಲಿಮರು, ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳ ಮತಗಳಿಂದ ಗೆದ್ದಿದ್ದಾರೆ. ನಿಮ್ಮ ಸಮಾಜ ನಿಮಗೆ ಮತ ಹಾಕಿದೆಯಾ? ಎಂದು ಕೇಳಿದ್ದಾರೆ.
ನಿಮ್ಮ ಸಮಾಜದವರು ಎಷ್ಟು ಮತ ಹಾಕಿದ್ದಾರೆ ಎಂಬುದನ್ನು ತೆಗೆದು ನೋಡಿ. ಯಾವ ಸಮಾಜದವರು ನಿಮಗೆ ಮತ ಹಾಕಿದ್ದಾರೋ ಅವರ ಬಗ್ಗೆ ನಿಮಗೆ ಕಳಕಳಿ, ಕೃತಜ್ಞತೆ ಇಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೋಡೆತ್ತಿನ ಹಾಗೆ ಹೋರಾಟ ಮಾಡಿ ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ನೀವು ಹಾಗೂ ನಿಮ್ಮ ಮಗ ಗೆದ್ದಿರುವುದನ್ನು ಬಿಟ್ಟರೆ ಯಾರಾದರೂ ಲಿಂಗಾಯತರನ್ನು ಗೆಲ್ಲಿಸಿಕೊಂಡು ಬಂದಿದ್ದಾರಾ? ಆ ಶಕ್ತಿ ಇದೆಯಾ? ಸುಮ್ಮನೆ ಏಕೆ ಮಾತನಾಡುತ್ತೀರಿ? ಎಂದೂ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯಗಳಲ್ಲಿ ಏಳು ಸಚಿವರಿದ್ದಾರೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೂ ಆಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಅಧಿಕಾರಿಗಳ ಹುದ್ದೆಗಳು ರಾಜಕೀಯ ಪ್ರಾತಿನಿಧ್ಯದವುಗಳಲ್ಲ. ಆದರೂ, ರಾಜ್ಯದ ಹುದ್ದೆಗಳಲ್ಲಿ ಲಿಂಗಾಯತರ ಕಡೆಗಣನೆಯಾಗಿಲ್ಲ ಎಂದಿದ್ದಾರೆ.
ರಾಜ್ಯದ 31 ಜಿಲ್ಲೆಗಳಲ್ಲಿ 9 ಪೊಲೀಸ್ ವರಿಷ್ಠಾಧಿಕಾರಿಗಳು ಲಿಂಗಾಯತರಿದ್ದಾರೆ. 10 ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ನಾಲ್ವರು ಜಿಲ್ಲಾಧಿಕಾರಿಗಳಿದ್ದಾರೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
ಯಾವ ಅಧಿಕಾರಿಯೂ ಹುದ್ದೆ ಇಲ್ಲದೇ ಬಾಕಿ ಉಳಿದಿಲ್ಲ. ಶಾಮನೂರು ಶಿವಶಂಕರಪ್ಪನವರಿಗೆ ಯಾರೋ ದಾರಿ ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.