ಎಸ್ಸೆಸ್ ಹೇಳಿಕೆಗೆ ಬಿಎಸ್‌ವೈ ಬೆಂಬಲ

ಎಸ್ಸೆಸ್ ಹೇಳಿಕೆಗೆ ಬಿಎಸ್‌ವೈ ಬೆಂಬಲ

ಲಿಂಗಾಯತ ಸಮುದಾಯದವರು ಒಂದಾಗಬೇಕು: ಯಡಿಯೂರಪ್ಪ

ಬೆಂಗಳೂರು, ಅ. 1 – ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷದ ಸಚಿವರು ಶಿವಶಂಕರಪ್ಪ ಅವರ ಹೇಳಿಕೆಗೆ ಆಕ್ಷೇಪಿಸುತ್ತಿದ್ದರೆ, ಬಿಜೆಪಿ ಮುಖಂಡರು ಸ್ವಾಗತಿಸುತ್ತಿದ್ದಾರೆ.

ಈ ನಡುವೆ ಹೇಳಿಕೆ ನೀಡಿರುವ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಶಿವಶಂಕರಪ್ಪ ನವರು ವೀರಶೈವ ಸಮಾಜದ ರಾಷ್ಟ್ರೀಯ ಅಧ್ಯಕ್ಷರು, ಅವರ ಭಾವನೆಗಳಿಗೆ ನನ್ನ ಬೆಂಬಲ ಇದೆ ಎಂದಿದ್ದಾರೆ. ಆಕ್ಷೇಪಗಳನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ಸರ್ಕಾರ ಜಾತ್ಯತೀತವಾಗಿದೆ. ಯಾರಿಗೂ ಅನ್ಯಾಯವಾಗಿಲ್ಲ ಎಂದಿದ್ದಾರೆ.

ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಜ್ಯೋತಿ,  ಗೃಹಲಕ್ಷ್ಮಿ ಯೋಜನೆಗಳು ಎಲ್ಲರಿಗೂ ಜಾರಿಗೆ ಬಂದಿವೆ. ನಾವು ಜಾತಿ ಭೇದ ಮಾಡುವುದಿಲ್ಲ. ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಶಿವಶಂಕರಪ್ಪ ಅವರ ಹೇಳಿಕೆಗಳು ಬಿಜೆಪಿ ಕೈಗೆ ಅಸ್ತ್ರ ನೀಡಿದಂತಾಗಿದೆ. ಯಡಿಯೂರಪ್ಪ ಅವರು ಶಿವಶಂಕರಪ್ಪನವರನ್ನು ಬೆಂಬಲಿಸಿದ್ದು, ವೀರಶೈವ ಸಮಾಜವನ್ನು ಕಡೆಗಣಿಸುತ್ತಿರುವ ಬಗ್ಗೆ ಶಿವಶಂಕರಪ್ಪ ಅವರಿಗೆ ಕಳಕಳಿ ಇದೆ. ವೀರಶೈವ ಸಮಾಜದ ಎಲ್ಲ ಮುಖಂಡದಲ್ಲಿ ಇದೇ ತಳಮಳ, ಗೊಂದಲ ಇದೆ. ವೀರಶೈವ – ಲಿಂಗಾಯತ ಸಮುದಾಯದವರು ಜಾಗೃತರಾಗಬೇಕು. ಒಂದಾಗಬೇಕು ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದು, ಸರ್ಕಾರ ಜಾತಿ ಆಧಾರದ ಮೇಲೆ ಹುದ್ದೆಗಳನ್ನು ಕೊಡುವುದಿಲ್ಲ ಎಂದಿದ್ದಾರೆ.

ಜಾತಿ ಆಧಾರದ ಮೇಲೆ ಅಧಿಕಾರಿಗಳಿಗೆ ಹುದ್ದೆ ಕೊಡುವುದು ಕಷ್ಟ. ಮುಖ್ಯಮಂತ್ರಿಗಳು ಸಮತೋಲನ ನಿಭಾಯಿಸುತ್ತಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಶಿವಶಂಕರಪ್ಪ ಬಳಿ ಮಾತನಾಡಲಿದ್ದಾರೆ ಎಂದೂ ಶಿವಕುಮಾರ್ ತಿಳಿಸಿದ್ದಾರೆ.

ಸರ್ಕಾರ ಜಾತಿ ಆಧಾರದ ಮೇಲೆ ಹುದ್ದೆ ನೀಡುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರೂ ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪನವರು ಹಿರಿಯರು. ಅವರು ಸರ್ಕಾರದಲ್ಲಿ ಬಂದು ರಕ್ಷಣೆ ಮಾಡುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಜಾರಕಿಹೊಳಿ ಹೇಳಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ಹಲವರು ಸರದಿಯಲ್ಲಿ ನಿಂತಿದ್ದಾರೆ. ಲಿಂಗಾಯತರ ಸರದಿ ಬಂದಾಗ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದ್ದಾರೆ.

error: Content is protected !!