ಮದುವೆಯಾಗಿ ಮಕ್ಕಳಿದ್ದಾರೆ ಎಂಬ ಆರೋಪ ಅಲ್ಲಗೆಳೆದ ಸ್ವಾಮೀಜಿ
ಮಲೇಬೆನ್ನೂರು, ಅ.1- ನನ್ನ ಹಾಗೂ ಮಠದ ಧರ್ಮದರ್ಶಿಗಳ ಬಗ್ಗೆ ಕಥೆ ಕಟ್ಟಿ ಆರೋಪ ಮಾಡುವವರ ಹಿಂದಿನ ಚಿತಾವಣಿಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕೆಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮಹತ್ವದ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಶ್ರೀಮಠ, ಗುರುಗಳು, ಧರ್ಮದರ್ಶಿಗಳು ಹಾಗೂ ಸಮಾಜದ ಜನಪ್ರತಿನಿಧಿಗಳ ವಿರುದ್ಧ ಸಮಾಜದ ಕೆಲವರು ಗೊಂದಲದ ಹೇಳಿಕೆ ನೀಡುತ್ತಿದ್ದು, ಈ ಎಲ್ಲಾ ಗೊಂದಲದ ಹೇಳಿಕೆಗಳಿಗೆ ಸ್ಪಷ್ಟೀಕರಣ ನೀಡುವ ಉದ್ದೇಶದಿಂದಲೇ ರಾಜ್ಯ ಮಟ್ಟದ ಈ ಸಭೆಯನ್ನು ಕರೆದಿದ್ದೇವೆ.
ಶ್ರೀ ಪುಣ್ಯಾನಂದಪುರಿ ಶ್ರೀಗಳು ಲಿಂಗೈಕ್ಯರಾದ ನಂತರ ನಮ್ಮನ್ನು ಈ ಮಠದ ಶ್ರೀಗಳನ್ನಾಗಿ ಆಯ್ಕೆ ಮಾಡಿ ಕರೆತಂದ ಸತೀಶ್ ಜಾರಕಿಹೊಳಿ ಸೇರಿದಂತೆ, ಸಮಾಜದ ಇನ್ನೂ ಅನೇಕ ಮುಖಂಡರು ಈ ಸಭೆಯಲ್ಲಿದ್ದಾರೆ. ಸಮಾಜದ ಮುಖಂಡರು ನಮ್ಮ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡೇ ನಮ್ಮನ್ನು ಗುರುಗಳನ್ನಾಗಿ ಒಪ್ಪಿಕೊಂಡಿದ್ದಾರೆ. ನಾವು ಮಠಕ್ಕೆ ಬಂದು 13 ವರ್ಷಗಳ ನಂತರ ಈಗ ಕೆಲವರು ನಮ್ಮ ಜಾತಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸಿಆರ್ ಸೆಲ್ ಮೂಲಕ ತನಿಖೆಗೆ ದೂರು ನೀಡಿದ್ದ ಅವರಿಗೆ ನಾವು `ಹಿಂದೂ ನಾಯಕ’ ಎಂಬ ಉತ್ತರ ಸಿಕ್ಕಿದೆ.
ಸ್ವಾಮೀಜಿ ಮದುವೆಯಾಗಿ, ಮಕ್ಕಳಿದ್ದಾ ರೆಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಡಿಎನ್‌ಎ ಪರೀಕ್ಷೆಗೆ ನಾವು ಸಿದ್ಧರಿದ್ದೇವೆ. ಯಾರು ಬೇಕಾದರೂ ಬಂದು ಪರೀಕ್ಷೆ ಮಾಡಿ ಸಬಹುದೆಂದು ಸ್ವಾಮೀಜಿ ಆರೋಪ ಮಾಡು ವವರಿಗೆ ಬಹಿರಂಗ ಆಹ್ವಾನ ನೀಡಿದರು.
ಮಠ ಹಾಗೂ ಸಮಾಜಕ್ಕೆ ಸಂಬಂಧಿಸಿದ ಒಟ್ಟು 18 ಆಸ್ತಿಗಳು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠ, ರಾಜನಹಳ್ಳಿ ಎಂಬ ಹೆಸರಿಗೆ ನೋಂದಣಿ ಆಗಿವೆಯೇ ಹೊರತು, ನಮ್ಮ ಮೂಲ ಹೆಸರಾದ ರಮೇಶ್ ಬಸಪ್ಪಗುಡಿ ಎಂಬ ಹೆಸರಿನಲ್ಲಿ ಅಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ನಾವು ಮದುವೆ ಆಗಿದ್ದೇ ವೆಂಬ ಬಗ್ಗೆ ನಿಮ್ಮ ಬಳಿ ದಾಖಲೆ ಇದ್ದರೆ ನೀಡಿ, ಅದು ಸತ್ಯವಾಗಿದ್ದರೆ ಸಮಾಜ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದ ಸ್ವಾಮೀಜಿ, ನಾವು ಮಾಡುತ್ತಿರುವ ಸಮಾಜ ಮುಖಿ ಹೋರಾಟ ಮತ್ತು ಸಂಘಟನೆಯನ್ನು ಸಹಿಸದ ಚಿಕ್ಕಬಳ್ಳಾಪುರ ಜಿಲ್ಲೆಯ ಸಂಸಾರಿ ಸ್ವಾಮೀಜಿ ಸೇರಿದಂತೆ, ಸಮಾಜದ ಸ್ವಯಂ ಘೋಷಿತ ಕೆಲ ಮುಖಂಡರು ತಮಗೆ ಇಚ್ಛೆ ಬಂದಂತೆ ನಮ್ಮ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಕುಮಾರ ಸ್ವಾಮಿ ಅವರುಗಳು ಸಿಎಂ ಆಗಿದ್ದಾಗ ನೀಡಿದ ಸುಮಾರು 25 ಕೋಟಿ ರೂ. ಅನುದಾನದಲ್ಲಿ ಮಠದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸರ್ಕಾರದಿಂದ ಬಂದ ಅನುದಾನ ಮತ್ತು ಭಕ್ತರು ನೀಡಿದ ಕಾಣಿಕೆ, ಆಸ್ತಿ ಸೇರಿ ದಂತೆ ಇತರೆ ಕೊಡುಗೆಗಳ ಲೆಕ್ಕ-ಪತ್ರಗಳು ಮಠದಲ್ಲಿದ್ದು, ಯಾರೂ ಬೇಕಾದರೂ ಬಂದು ನೋಡಿ ಎಂದು ಸ್ವಾಮೀಜಿ ಹೇಳಿದರು.
ಎಸ್ಟಿ ಮೀಸಲಾತಿ ಹೆಚ್ಚಳವನ್ನು 9 ಷೆಡ್ಯೂಲ್‌ಗೆ ಸೇರಿಸುವಂತೆ ಶೀಘ್ರವೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲು ನಿಯೋಗ ದೆಹಲಿಗೆ ತೆರಳಲಿ ಎಂದು ಸ್ವಾಮೀಜಿ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಠದ ಧರ್ಮದರ್ಶಿಗಳೂ ಆದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಆರೋಪ-ಪ್ರತ್ಯಾರೋಪ ಹೊಸದಲ್ಲ. ಸತ್ಯ ಹರಿಶ್ಚಂದ್ರರ ಕಾಲದಿಂದಲೂ ಇವೆ. ಒಳ್ಳೆಯ ಕೆಲಸ ಮಾಡುವವರು ಟೀಕೆ, ಆರೋಪಗಳನ್ನು ಸಹಿಸಿಕೊಳ್ಳಬೇಕು. ಸಮಾಜವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಬಗ್ಗೆ ಚಿಂತನೆ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಎಲ್ಲರೂ ಹೆಚ್ಚು ಒತ್ತು ನೀಡಬೇಕಿದೆ. ಸಮಾಜಕ್ಕೆ ಸಿಗಬೇಕಾದ ಸಂವಿಧಾನ ಬದ್ಧ ಹಕ್ಕುಗಳಾಗಿ ಹೋರಾಟ ಮಾಡುವ ಬಗ್ಗೆ ನಾವು ನಮ್ಮ ಸಮಯವನ್ನು ಮೀಸಲಿಡಬೇಕೇ ಹೊರತು-ವಾಟ್ಸಾಪ್ ಗಿರಾಕಿಗಳಿಗಲ್ಲ ಎಂದು ಖಡಕ್ ಸಂದೇಶ ನೀಡಿದರು.
ಈಗಾಗಲೇ ಸ್ವಾಮೀಜಿ ತಮ್ಮ ಹಾಗೂ ಮಠದ ಮೇಲೆ ಮಾಡಿರುವ ಎಲ್ಲಾ ಆರೋಪಗಳಿಗೆ ಸ್ಪಷ್ಟ ಉತ್ತರ ನೀಡಿ, ಯಾವ ತನಿಖೆಗೆ ಬೇಕಾದರೂ ಸಿದ್ದ ಎಂದು ಹೇಳಿದ್ದಾರೆ.
ಶ್ರೀಗಳು ಮದುವೆ ಆಗಿ ಮಕ್ಕಳಿದ್ದಾರೆಂಬ ಆರೋಪ ಕೇಳಿ ಬಂದಾಗ ಡಿಎನ್‌ಎ ಪರೀಕ್ಷೆ ಮಾಡಿಸುವಂತೆ ಆರೋಪ ಮಾಡುವವರಿಗೆ ಹೇಳಿ ಎಂದು ನಾನೇ ಹೇಳಿದ್ದೆ. ಈ ಬಗ್ಗೆ ನಾವು ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ.
ಕಾರು ಚಾಲಕನ ಆಯ್ಕೆ ಸ್ವಾಮೀಜಿಗೆ ಬಿಟ್ಟಿದ್ದು, ಅವನು ತಪ್ಪು ಮಾಡಿದ್ದರೆ ಮತ್ತು ಅದನ್ನು ಸಾಬೀತು ಪಡಿಸಿದರೆ ಅವನ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ.
ಮಠದ ಟ್ರಸ್ಟಿಗಳನ್ನು ಪ್ರತಿ 3 ವರ್ಷಗಳಿಗೊಮ್ಮೆ ಬದಲಾಯಿಸಿ, ಹೊಸಬರಿಗೆ ಆದ್ಯತೆ ನೀಡುವ ಬಗ್ಗೆ ಮತ್ತು ತಿಂಥಿಣಿ ಬ್ರಿಡ್ಜ್ ಬಳಿ ಸೇರಿದಂತೆ ರಾಜ್ಯದ 5 ಕಡೆಗಳಲ್ಲಿ ಶಾಖಾ ಮಠ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆದಿದೆ.
ಮಠದ ವತಿಯಿಂದ ಮೆಡಿಕಲ್ ಕಾಲೇಜ್ ಆರಂಭಿಸುವ ಬಗ್ಗೆ ಶೀಘ್ರವೇ ಚರ್ಚಿಸುತ್ತೇವೆ. ನಕಲಿ ಜಾತಿ ಪ್ರಮಾಣ ಪತ್ರಗಳ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಗ್ಯಾರಂಟಿ ಎಂದರು.
ಬಿ.ಎಲ್. ಸಂತೋಷ್ ಅವರು ವಾಲ್ಮೀಕಿ ದಕ್ಷಿಣ ಆಫ್ರಿಕಾದಿಂದ ಬಂದವರು ಎಂದಾಗ ಆ ಬಗ್ಗೆ ಯಾರೂ ಮಾತನಾಡಲಿಲ್ಲ. ದಿಕ್ಕು ತಪ್ಪಿಸುವ ಕೆಲಸ ಮಾಡುವುದನ್ನು ಬಿಟ್ಟು, ದಿಕ್ಕು ತಪ್ಪಿಸುವವರ ವಿರುದ್ಧ ಜಾಗೃತರಾಗಿ ಎಂದು ಸತೀಶ್ ಜಾರಕಿಹೊಳಿ ಅವರು ಸಮಾಜದವರಿಗೆ ಕಿವಿಮಾತು ಹೇಳಿದರು.
ಈ ವೇಳೆ ಬೇರೆಯವರ ಪ್ರಚೋದನೆಯಿಂದ ನಾನು ಸ್ವಾಮೀಜಿ ಅವರ ಬಗ್ಗೆ ಮಾತನಾಡಿದ್ದು ನಿಜ ಎಂದು ಮುಳಬಾಗಿಲಿನ ಶಿವು ಎಂಬಾತ ಸಮಾಜದ ಎದುರು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದನು.
ಚಳ್ಳಕೆರೆ ಶಾಸಕ ರಘುಮೂರ್ತಿ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಡಾ. ಜಿ. ರಂಗಯ್ಯ, ಶ್ರೀಮತಿ ಶಾಂತಲಾ ರಾಜಣ್ಣ, ನಿವೃತ್ತ ಡಿಸಿ ಬಿ. ಶಿವಪ್ಪ, ಕೆ.ಎಸ್. ಮೃತ್ಯುಂಜಯಪ್ಪ, ಹಿರಿಯ ವಕೀಲರಾದ ರಾಜಾ ವೆಂಕಟಪ್ಪ ನಾಯಕ, ಹರ್ತಿಕೋಟೆ ವೀರೇಂದ್ರಸಿಂಹ, ಟಿ. ಈಶ್ವರ್, ಕೆ.ಪಿ. ಪಾಲಯ್ಯ, ಹೊದಿಗೆರೆ ರಮೇಶ್, ಬಿ. ವೀರಣ್ಣ, ಹದಡಿ ಹಾಲಪ್ಪ, ಕುಕ್ಕುವಾಡ ಮಂಜುನಾಥ್, ಹುಲ್ಲುಮನಿ ಗಣೇಶ್, ತ್ಯಾವಣಿಗಿ ಗೋವಿಂದಸ್ವಾಮಿ, ಜಿಗಳಿ ಆನಂದಪ್ಪ, ಹೆಚ್.ಕೆ. ಹಾಲೇಶ್, ಹುಚ್ಚೆಂಗ್ಯೆಪ್ಪ, ನಲುವಾಗಲು ನಾಗರಾಜಪ್ಪ, ಧಾರವಾಡದ ಕೆ.ಆರ್. ಪಾಟೀಲ್, ಹೊಸಪೇಟೆ ಜಂಭಣ್ಣ ನಾಯಕ, ಹಂಚಿನ ನಾಗಣ್ಣ, ಕೆ.ಬಿ. ಮಂಜುನಾಥ್, ಜಿಗಳಿ ರಂಗಪ್ಪ, ದಿನೇಶ್‌ಬಾಬು, ಮಾರುತಿ ಬೇಡರ್, ರಾಜನಹಳ್ಲಿ ಭೀಮಣ್ನ, ದೇವರಬೆಳಕೆರೆ ಮಹೇಶ್ವರಪ್ಪ, ಕೊಕ್ಕನೂರು ಸೋಮಣ್ಣ, ಸಿರಿಗೆರೆ ಪರಶುರಾಮ್, ಸಣ್ಣತಮ್ಮಪ್ಪ ಬಾರ್ಕಿ, ತಿಮ್ಮೇನಹಳ್ಳಿ ಚಂದ್ರಪ್ಪ, ಶ್ಯಾಗಲೆ ಮಂಜುನಾಥ್, ಎನ್.ಎಂ. ಆಂಜನೇಯ ಗುರೂಜಿ, ಪಾರ್ವತಿ, ಗಂಗಮ್ಮ, ವಿಜಯಶ್ರೀ, ಗೌರಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.