ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದನೆ
ಸಾಣೇಹಳ್ಳಿ, ಅ. 1- ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೂಜೆ ಬೇರೆಯವರಿಂದ ಮಾಡಿಸುವುದಲ್ಲ; ತನಗೆ ತಾನೇ ಮಾಡಿಕೊಳ್ಳುವುದು. ಗುಡಿಗಳಿಗೆ ಹೋದರೆ ನಿಮ್ಮ ದೇವರನ್ನು ನೀವು ಮುಟ್ಟಿ ಪೂಜಿಸಲಿಕ್ಕೆ ಅವಕಾಶವಿರದೆ, ಮಧ್ಯದಲ್ಲಿ ಪೂಜಾರಿ, ಪುರೋಹಿತರೆಂಬ ದಲ್ಲಾಳಿಯ ಮೂಲಕ ಪೂಜೆ ಮಾಡಿಸುತ್ತೀರಿ. ಇದನ್ನು ಶರಣರು ಒಪ್ಪಲಿಲ್ಲ. ದೇವರು ಕೇವಲ ನಾಲ್ಕು ಗೋಡೆಗಳ ಮಧ್ಯೆದಲ್ಲಿರುವ ಶಕ್ತಿ ಅಲ್ಲ. ದೇವರು ಸರ್ವಾಂತರ್ಯಾಮಿ ಸರ್ವಶಕ್ತ. ಆಗ ಶರಣರು ಆಲೋಚನೆ ಮಾಡಿದ್ದು ಮಾನವನಿಗೆ ಸಂಸ್ಕಾರ ಬಂದರೆ ದೇವನಾಗುತ್ತಾನೆ ಎಂದು. ತನ್ನರಿವೇ ಗುರು. ಅಂತಹ ಅರಿವನ್ನು ಪಡೆದುಕೊಳ್ಳಲಿಕ್ಕೆ ಬಾಹ್ಯವಾಗಿ ಗುರುಬೇಕು.
12ನೇ ಶತಮಾನದಲ್ಲಿ ಬಸವಣ್ಣನವರನ್ನು ಗುರು ಎಂದು ಸ್ವೀಕಾರ ಮಾಡಿದರು. ಗುರು ತೋರಿದ ಮಾರ್ಗದ ಮೂಲಕ ಅರಿವನ್ನು ಪಡೆದುಕೊಳ್ಳುತ್ತಿದ್ದರು. ಪ್ರತಿಯೊಬ್ಬರೊಳಗೂ ಅರಿವಿದೆ. ಅರಿವಿನ ಕುರುಹಾಗಿ ಅಂಗೈಯಲ್ಲಿ ಲಿಂಗವನ್ನು ಕರುಣಿಸಿದರು. ಇಷ್ಟಲಿಂಗ ನನ್ನೊಳಗಿನ ಅರಿವನ್ನು ಜಾಗೃತಗೊಳಿಸುವ ಸಾಧನ. ಇದರ ಮೂಲಕ ಸಂತೋಷ, ಆನಂದ, ತೃಪ್ತಿಯನ್ನು ಕಾಣಬಹುದು. ಯಾವುದೇ ಕೆಲಸ ಮಾಡಿದರೆ ಮನಮುಟ್ಟಿ, ತನುಮುಟ್ಟಿ ಮಾಡಿದಾಗ ಜೀವನದಲ್ಲಿ ಸಂತೃಪ್ತಿ ಕಾಣಲಿಕ್ಕೆ ಸಾಧ್ಯ. ಇಷ್ಟಲಿಂಗ ಬೆಳಕಿನ ಕುರುಹು, ಜ್ಞಾನದ ಕುರುಹು. ಅದರ ಮೂಲಕ ಮನುಷ್ಯ ಗುಡಿಯಿಂದ ಹೊರಬಂದು ತನ್ನ ದೇಹವನ್ನೇ ದೇವಾಲಯ ಮಾಡಿಕೊಳ್ಳಬೇಕು. ಬಿದ್ದು ಹೋಗುವ ಗುಡಿಯಿಂದ, ಪೂಜಾರಿ, ಪುರೋಹಿತರಿಂದ ಮುಕ್ತಿಗೊಳಿಸುವ ಕಾರಣದಿಂದ ದೇಹವೆಂಬ ಚೈತನ್ಯದ ಮೂಲಕ ದೇಹವನ್ನೇ ದೇವಾಲಯವನ್ನಾಗಿ ಶರಣರು ಕಂಡುಕೊಂಡರು.
ದೀಕ್ಷೆ ಎಂದರೆ ದೇವರ ಬಗ್ಗೆ ಇದ್ದ ಅಜ್ಞಾನವನ್ನು ತೊಲಗಿಸಿ, ಜ್ಞಾನದ ಅರಿವನ್ನು ಕೊಡುವುದು. ಇದರಲ್ಲಿ ವೇದಾದೀಕ್ಷೆ, ಕ್ರಿಯಾದೀಕ್ಷೆ, ಮಂತ್ರದೀಕ್ಷೆಯ ಮೂಲಕ ಅರಿವನ್ನು ಮೂಡಿಸುವುದು. ಮನುಷ್ಯ ನರ ಜನ್ಮವನ್ನು ತೊರೆದು ಹರ ಜನ್ಮವನ್ನು ಪಡೆದುಕೊಳ್ಳಬೇಕು. ಆಗ ಮಾನವ ವಿಶ್ವಮಾನವನಾಗುತ್ತಾನೆ.
ಪ್ರತಿಯೊಬ್ಬರ ಹಸ್ತ, ಮಸ್ತಕ ಸರಿಯಾದರೆ ಇಡೀ ಜಗತ್ತು ಸರಿಯಾಗುತ್ತೆ. ಹಸ್ತ (ಕೈ) ಮಸ್ತಕ (ತಲೆ) ಕೆಟ್ಟಾಗ ರಾಕ್ಷಸರಾಗುತ್ತಾರೆ. ಹಸ್ತ, ಮಸ್ತಕವನ್ನು ಯಾರು ಶುದ್ಧವಾಗಿಟ್ಟುಕೊಳ್ಳುತ್ತಾರೋ ಅಂಥವರು ನೆಮ್ಮದಿಯಿಂದ ಇರಲಿಕ್ಕೆ ಸಾಧ್ಯ.
ಪ್ರತಿವರ್ಷ ಅಕ್ಟೋಬರ್ 2 ರಂದು ಮಾತ್ರ ಸ್ವಚ್ಛತೆ ಮಾಡೋದಲ್ಲ. ಸ್ವಚ್ಛತೆ ಪ್ರತಿಕ್ಷಣವೂ ಆಗಬೇಕು. ಸಾಣೇಹಳ್ಳಿಯಲ್ಲಿ ಓದುವ ಮಕ್ಕಳು ಪ್ರತಿದಿನ ನಮ್ಮ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಾರೆ. ಬಹಿರಂಗದಲ್ಲಿ ಮಾತ್ರವಾಗದೇ, ಅಂತರಂಗದಲ್ಲೂ ಸ್ವಚ್ಛತೆ ಅಳವಡಬೇಕು. ಆಗ ಗಾಂಧೀ ಜಯಂತಿಗೆ ಅರ್ಥ ಇರುತ್ತದೆ. ನಮ್ಮಲ್ಲಿ ಬಹಳಷ್ಟು ಜನ ಬಹಳಷ್ಟು ವಿಚಾರಗಳನ್ನು ಅರಿತಿದ್ದೇವೆ. ಆಚಾರದಲ್ಲಿ ಸೋತಿದ್ದೇವೆ. ಅರಿವು-ಆಚಾರ ಒಂದಾದಾಗ ಮಾತ್ರ ಅಂತರಂಗ ಮತ್ತು ಬಹಿರಂಗ ಶುದ್ಧತೆಯಿಂದ ಬದುಕು ಪರಿಶುದ್ಧ. ಪ್ರತಿದಿನವೂ ಒಂದೊಂದು ದೇವಸ್ಥಾನಕ್ಕೆ ಹೋಗದೇ ನಿನ್ನಲ್ಲಿರುವ ಇಷ್ಟಲಿಂಗವನ್ನು ಪೂಜಿಸಬೇಕು. ಧಾರ್ಮಿಕ ವಿಚಾರಗಳು ನಿಮ್ಮನ್ನು ದಿಕ್ಕು ತಪ್ಪಿಸದೇ ಎಚ್ಚರಿಸುವುದೇ ದೀಕ್ಷಾ ಸಂಸ್ಕಾರ. ಮನುಷ್ಯ ಯಾವುದೇ ಕೆಲಸವಾಗಲೀ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಒಳ್ಳೆಯ ಕೆಲಸ ಮಾಡುವಾಗ ಸಮೂಹ ಸೇರಿಕೊಳ್ಳಬೇಕು. ಕೆಟ್ಟ ಕೆಲಸ ಮಾಡಿದರೆ ಸಮೂಹದಿಂದ ಪ್ರತಿಭಟಿಸಬೇಕು. ಆಗ ಸಮಾಜದಲ್ಲಿ ಪರಿವರ್ತನೆ ಕಾಣಲು ಸಾಧ್ಯ. ಮನುಷ್ಯ ಬೀಗುವ ಗುಣ ಅಳಿದು ಬಾಗುವ ಗುಣವನ್ನು ರೂಢಿಸಿಕೊಳ್ಳಬೇಕು.
ನಿವೃತ್ತ ಪ್ರಾಚಾರ್ಯ ಐ.ಜಿ. ಚಂದ್ರಶೇಖರಯ್ಯ ಅವರು ಇಷ್ಟಲಿಂಗ ದೀಕ್ಷೆಯನ್ನು ನಡೆಸಿಕೊಟ್ಟರು. ಹೆಚ್.ಎಸ್. ನಾಗರಾಜ, ವರ್ಷ, ಕೀರ್ತನಾ ವಚನ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿ ಸುಮಂತ್ ಪೂಜೆಯ ವ್ಯವಸ್ಥೆ ಮಾಡಿದರು. 12 ಜನ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಪಡೆದುಕೊಂಡರು.