ನಿಗದಿಯಂತೆ ಭದ್ರಾ ನಾಲೆಗೆ ನೂರು ದಿನ ನೀರು ಹರಿಸಲು ಮನವಿ
ದಾವಣಗೆರೆ, ಸೆ.17- ನಾನು ರೈತ ಪರವಾಗಿ, ರೈತರ ಧ್ವನಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ್ ಅವರನ್ನು ಭೇಟಿ ಮಾಡಿದ್ದೇನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ ಹೊರತುಪಡಿಸಿ, ರೈತ ಪರವಾದ ಭೇಟಿ ಎಂದು ಸ್ಪಷ್ಟಪಡಿಸಿದರು.
ಭದ್ರಾ ನಾಲೆಗೆ ಕೊಟ್ಟ ಮಾತಿನಂತೆ ನೂರು ದಿನ ನೀರು ಹರಿಸುವಂತೆ ಸಚಿವರ ಬಳಿ ಮನವಿ ಮಾಡಿದ್ದೇನೆ.ಈಗಾಗಲೇ ರೈತರು ಭತ್ತ ನಾಟಿ ಮಾಡಿದ್ದು, ಈಗ ನೀರು ನಿಲ್ಲಿಸಿದರೆ ರೈತರು ಸಂಕಷ್ಟಕ್ಕೆ ಸಿಲುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇನೆ. ಅದೇ ರೀತಿ ಶನಿವಾರ ರಾತ್ರಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಬಳಿ ಭದ್ರಾ ನಾಲೆಗೆ ನೂರು ದಿನ ನೀರು ಹರಿಸುವಂತೆ ಮನವಿ ಮಾಡಿದ್ದು, ಮಧು ಬಂಗಾರಪ್ಪನವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಇನ್ನು ಅಡಿಕೆ ಇಳುವರಿ ಕುಂಠಿತವಾಗಿದ್ದು, ಅಡಿಕೆಗೆ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಧಾವಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದು, ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದ ರೇಣುಕಾಚಾರ್ಯ, ಅವರಿಂದ ಪಕ್ಷಕ್ಕೆ ಕೊಡುಗೆ ಏನು? ಎಂದು ಪ್ರಶ್ನಿಸಿದರು.