ಸನಾತನ ಧರ್ಮದ ಅವಹೇಳನ ವಿಕೃತಿ

ಸನಾತನ ಧರ್ಮದ ಅವಹೇಳನ ವಿಕೃತಿ

ರಾಜಕೀಯದಲ್ಲಿ ಧರ್ಮದ ದುರ್ಬಳಕೆ ದೊಡ್ಡ ದುರಂತ: ಶ್ರೀ

ಸನಾತನ ಧರ್ಮದ ಬಗ್ಗೆ ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳದೆ ಮಾತನಾಡಿ, ವಿವಾದ ಸೃಷ್ಟಿ ಮಾಡುವುದು ಮತ್ತು ಜಾತಿಯ ಕಿಚ್ಚು ಹಚ್ಚಿ ಮನಸ್ಸನ್ನು ಕದಡುವಂತೆ ಮಾಡುವುದು ಸರಿಯಾದ ಬೆಳವಣಿಗೆಯಲ್ಲ. ಮನಸ್ಸಿನ ವಿವೇಚನಾ ಶಕ್ತಿಯನ್ನು ಸರಿಯಾಗಿ ಬಳಸದೇ ಇದ್ದರೆ ಇಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. 

– ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಹರಿಹರ, ಸೆ. 15 – ಸನಾತನ ಧರ್ಮದ ಬಗ್ಗೆ ಅವಹೇಳನ ಪದಗಳನ್ನು ಬಳಸಿ ಮಾತನಾಡುವವರು ವಿಕೃತ ಮನಸ್ಸಿನವರು. ಅವರ ಹೇಳಿಕೆ ಗಳಿಗೆ ಯಾರೂ ಮಾನ್ಯತೆ ಕೊಡ ಬಾರದು ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಬೆಳ್ಳೂಡಿ ಗ್ರಾಮದ ಪಾಟೀಲ್ ಗುರುಬಸಪ್ಪ ಪ್ರೌಢಶಾಲಾ ಆವರಣದಲ್ಲಿ ನಡೆದ ತರಳಬಾಳು ಜಗದ್ಗುರು ಶ್ರೀ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 31 ನೇ ಶ್ರದ್ಧಾಂಜಲಿ ಸಮಾರಂಭಕ್ಕೆ ಹರಿಹರ ತಾಲ್ಲೂಕಿನಿಂದ ಭಕ್ತಿ ಸಮರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸನಾತನ ಧರ್ಮಕ್ಕೆ ಹಲವಾರು ವರ್ಷಗಳ ಇತಿಹಾಸ ಮತ್ತು ತನ್ನದೇ ಆದ ಶಕ್ತಿಯಿದೆ. ಧರ್ಮ ಎಂಬುದು ಒಳ್ಳೆಯದರ ಬಗ್ಗೆ ಧ್ವನಿ ಎತ್ತುವುದು. ಅನುಕಂಪ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುವುದು. ವಿಕೃತ ಮನಸ್ಸನ್ನು ನಿವಾರಣೆ ಮಾಡುವುದೇ ಧರ್ಮವಾಗಿದೆ ಎಂದವರು ಹೇಳಿದರು.

ಇತ್ತೀಚೆಗೆ ಸನಾತನ ಧರ್ಮಕ್ಕೆ ಚ್ಯುತಿ ಆಗುವಂತೆ ಡೆಂಗ್ಯೂ, ಕೊರೊನ ಇಂತಹ ಪದಗಳನ್ನು ಬಳಸುತ್ತಿ ರುವವರು ಯೋಗ್ಯತೆ ಇಲ್ಲದವರು. ಧರ್ಮ ರಾಜಕೀಯ ದಲ್ಲಿ ದುರ್ಬಳಕೆ ಆಗುತ್ತಿರುವುದು ದೊಡ್ಡ ದುರಂತ. ಅವರಿಗೆ ಮಾತನಾಡಲಿಕ್ಕೆ ಬಹಳ ವಿಷಯಗಳು ಇರುತ್ತವೆ. ಬರಗಾಲ, ಪ್ರಕೃತಿ ನಾಶಗಳ ರೀತಿಯ ವಿಚಾರಗಳ ಬಗ್ಗೆ ಮಾತನಾಡಿದರೆ ಅರ್ಥ ಇರುತ್ತದೆ ಎಂದರು.

ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮಿಗಳು ಮಾತನಾಡಿ, ಸಿರಿವಂತರು ನೀಡುವ ದಾನಕ್ಕೂ ಬಡವರು ನೀಡುವ ದಾನಕ್ಕೂ ವ್ಯತ್ಯಾಸ ಇದೆ. ನಾಡಿಗೆ ಬರ ಇದ್ದರೂ ಭಕ್ತಿ – ದೇಣಿಗೆಗೆ ಬರ ಇಲ್ಲ ಎಂಬುದನ್ನು ಬೆಳ್ಳೂಡಿ ಗ್ರಾಮಸ್ಥರು ಭಕ್ತಿ ಸಮರ್ಪಣೆಯಿಂದ ತೋರಿಸಿದ್ದಾರೆ ಎಂದರು.

ಗೌರಿ ಗದ್ದೆ ಶ್ರೀ ವಿನಯ್ ಗೂರೂಜಿ ಮಾತನಾಡಿ, ಲಿಂಗಧಾರಣೆ ಮತ್ತು ಶಿವಲಿಂಗ ಪೂಜೆ ಮಾಡಿದಾಗ ಜೀವನದಲ್ಲಿ ಕೆಟ್ಟ ಘಟನೆಗಳು ದೂರವಾಗುತ್ತವೆ. ಬಸವಣ್ಣನವರ ವಚನಗಳು, ಕೇವಲ ವಚನಗಳಾಗಬಾರದು, ಅದು ಬದುಕಾಗಬೇಕು ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಲಿಂಗೈಕ್ಯ ಶಿವಕುಮಾರ ಶ್ರೀಗಳು ಶಾಲೆ ಹಾಗೂ ಹಾಸ್ಟೆಲ್‌ಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಆಸರೆಯಾದರು. ಎಲ್ಲ ಜಾತಿ, ವರ್ಗದ ವಿದ್ಯಾರ್ಥಿಗಳು ವಿದ್ಯಾವಂತರಾಗಲು ಕಾರಣರಾದರು ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದವರು ವಿದ್ಯಾವಂತರು ಆಗಬೇಕು ಎಂದು ಹಾಸ್ಟೆಲ್‌ಗಳನ್ನು ತೆರೆದರು. ಅವರು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದರು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಹಿರಿಯ ಶ್ರೀಗಳ ಕಾರ್ಯ ಸಮಾಜಕ್ಕೆ ಬಹಳ ದೊಡ್ಡ ಕೊಡುಗೆಯಾಗಿದೆ. ಹಾಗೆಯೇ ಈಗಿನ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಆಧುನಿಕ ಭಗೀರಥ ಎಂಬ ಬಿರುದನ್ನು ಪಡೆದುಕೊಂಡು ರೈತರ ಬಾಳಿಗೆ ಬೆಳಕನ್ನು ನೀಡಿದ್ದಾರೆ ಎಂದರು.

ತರಳಬಾಳು ಕೃಷಿ ಕೇಂದ್ರದ ಹೆಚ್.ಎಂ. ಸಣ್ಣಗೌಡ ಮಾತನಾಡಿದರು. ಈ ವೇಳೆ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ನೇತ್ರ, ಚರ್ಮ ರೋಗ ತಪಾಸಣೆ ಮಾಡಲಾಯಿತು.   

ಈ ಸಂದರ್ಭದಲ್ಲಿ ಸಾಧು ವೀರಶೈವ ಸಮಾಜದ ಅಧ್ಯಕ್ಷ ಮಹಾದೇವಪ್ಪ ಗೌಡ್ರು ಅಮರಾವತಿ, ಉಪಾಧ್ಯಕ್ಷ ಹಲಸಬಾಳು ಶಿವಾನಂದಪ್ಪ, ಕಾರ್ಯದರ್ಶಿ ಇಟಗಿ ಶಿವಣ್ಣ, ಶಾಲಾ ಸಲಹಾ ಸಮಿತಿಯ ಅಧ್ಯಕ್ಷ ಹನುಮಂತಗೌಡ್ರು, ಗ್ರಾಪಂ ಉಪಾಧ್ಯಕ್ಷ ಉಮೇಶ್, ಕೆ.ಬಿ. ರುದ್ರೇಶ್ ಬೆಳ್ಳೂಡಿ , ಮರುಳಸಿದ್ದಯ್ಯ, ಬಂಗಾರಿ ಸಿದ್ದೇಶ್, ನರೇಂದ್ರ ಕೆ.ಎಂ. ಬೆಳ್ಳೂಡಿ, ಕಲ್ಲೇಶ್, ಕೆ.ಜಿ. ಉಮೇಶ್, ಸಿದ್ದೇಶ್, ಕೆ.ಜಿ. ಬಸವನಗೌಡ, ಸಿದ್ದಾರ್ಥ, ಕುಮಾರ್ ವಿ.ಪಿ. ಶಾಂತರಾಜ್ ವಕೀಲರು, ಬಸವರಾಜ್ ಬಿ. ಭೀಮಪ್ಪ, ಮಲ್ಲಿಕಾರ್ಜುನ, ಅಮರಾವತಿ ಉಮೇಶ್, ಸಾಧು ವೀರಶೈವ ಸಮಾಜದ ಅಧ್ಯಕ್ಷ ಹನಗವಾಡಿ ವಿರುಪಾಕ್ಷಪ್ಪ, ಸಿರಿಗೆರಿ ರಾಜಣ್ಣ, ಮಂಜುನಾಥ್ ಪಾಟೀಲ್, ಬೆಣ್ಣೆಹಳ್ಳಿ ಹಾಲೇಶಪ್ಪ ಹಾಗೂ  ಇತರರು ಹಾಜರಿದ್ದರು. 

error: Content is protected !!