ಬರ ಪರಿಹಾರ ಒದಗಿಸಲು ಕೇಂದ್ರ ಸರ್ಕಾರಕ್ಕೆ ಮನವಿ
– ಸಿದ್ದರಾಮಯ್ಯ
ದಾವಣಗೆರೆ, ಸೆ.14- ಬರ ಪೀಡಿತ ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಅದರಂತೆ ದಾವಣಗೆರೆ ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳು ತೀವ್ರ ಬರದ ಪಟ್ಟಿಗೆ ಬಂದಿವೆ.
ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ, ಜಗಳೂರು ಹಾಗೂ ನ್ಯಾಮತಿಗಳು ತೀವ್ರ ಬರ ಪೀಡಿತ ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಚಿತ್ರ ದುರ್ಗ, ಹಿರಿಯೂರು, ಹೊಳಲಕೆರೆ, ಹೊಸ ದುರ್ಗ, ಮೊಳಕಾಲ್ಮೂರು. ಹಾವೇರಿ ಜಿಲ್ಲೆಯ ಹಾವೇರಿ, ಹಿರೇಕೆರೂರು, ರಾಣೇಬೆ ನ್ನೂರು, ಸವಣೂರು, ರಟ್ಟಿಹಳ್ಳಿ. ವಿಜಯನಗರ ಜಿಲ್ಲೆಯ ಹೊಸಪೇಟೆ, ಹಡಗಲಿ, ಹಗರಿ ಬೊಮ್ಮನಹಳ್ಳಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತೀವ್ರ ಬರ ಪೀಡಿತ ಪಟ್ಟಿಯಲ್ಲಿವೆ.
ಪರಿಹಾರ ಒದಗಿಸಲು ಕೇಂದ್ರಕ್ಕೆ ಮನವಿ : ಮುಂಗಾರು ಮಳೆ ವೈಫಲ್ಯದ ಹಿನ್ನೆಲೆಯಲ್ಲಿ ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಮಾರ್ಗಸೂಚಿಯ ಪ್ರಕಾರ ರಾಜ್ಯದ 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದ್ದು, ಬರ ಪರಿಹಾರ ಒದಗಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಉಪ ಸಮಿತಿ ಸಭೆಯು ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಬರ ಹಾಗೂ 34 ತಾಲ್ಲೂಕುಗಳಲ್ಲಿ ಸಾಧಾರಣ ಬರಪೀಡಿತ ಪ್ರದೇಶವೆಂದು ತೀರ್ಮಾನಿಸಿದೆ ಎಂದರು.
ಸಮಿತಿಯ ತೀರ್ಮಾನದಂತೆ ಕಂದಾಯ ಇಲಾಖೆ ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಬರ ನಿರ್ವಹಣೆ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರದಿಂದ ಕಾಲಕಾಲಕ್ಕೆ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ನಿಯಮಗಳನ್ವಯ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.