ಬ್ಯಾಂಕಿನ 62ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಸಂತಸ
ದಾವಣಗೆರೆ, ಸೆ. 1- ಒಂದು ಬ್ಯಾಂಕಿನ ಸದೃಢತೆಯನ್ನು ಪ್ರತಿಬಿಂಬಿಸುವಂತಹ ಅನುತ್ಪಾದಕ ಆಸ್ತಿ (ಎನ್ ಪಿಎ) ಸತತ ವಾಗಿ ನಿವ್ವಳ ಶೂನ್ಯ ಹೊಂದಿರುವುದು ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಹೆಗ್ಗಳಿಕೆ ಎಂದು ಬ್ಯಾಂಕಿನ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಸಂತಸ ವ್ಯಕ್ತಪಡಿಸಿದರು.
ನಗರದ ಶ್ರೀ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಾಡಾಗಿದ್ದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 62ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2023, ಮಾರ್ಚ್ ಅಂತ್ಯಕ್ಕೆ ಬ್ಯಾಂಕಿನ ಲಾಭವು 12.01 ಕೋಟಿ ರೂ. ಗಳಿಗೂ ಮೀರಿದ್ದು, ಇದು ಕಳೆದ ವರ್ಷಕ್ಕಿಂತ 1.91 ಕೋಟಿ ರೂ. ಹೆಚ್ಚಾಗಿರುತ್ತದೆ. 493 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, ಇಲ್ಲಿ ಕಳೆದ ವರ್ಷಕ್ಕಿಂತ 21 ಕೋಟಿ ರೂ. ಹೆಚ್ಚಾಗಿರುತ್ತದೆ. ಷೇರುದಾರರ ವಿವಿಧ ಉದ್ದೇಶಗಳಿಗನು ಗುಣವಾಗಿ 364 ಕೋಟಿ ರೂ. ಸಾಲ – ಸೌಲಭ್ಯ ಒದಗಿಸ ಲಾಗಿದ್ದು, ಹಿಂದಿನ ವರ್ಷಕ್ಕಿಂತ 68 ಕೋಟಿ ರೂ. ಹೆಚ್ಚಾಗಿ ರುತ್ತದೆ. 582 ಕೋಟಿ ರೂ. ದುಡಿಯುವ ಬಂಡವಾಳವಾಗಿದ್ದು, ಇಲ್ಲೂ ಸಹ 29 ಕೋಟಿ ರೂ.ಗೆ ವೃದ್ಧಿಯಾಗಿದೆ. ಹೀಗೆ ಎಲ್ಲಾ ವಿಚಾರದಲ್ಲೂ ತಮ್ಮ ಬ್ಯಾಂಕ್ ಪ್ರಗತಿ ಸಾಗಿಸುತ್ತಾ ಮುನ್ನಡೆದಿದೆ ಎಂದು ಅವರು ಅಂಕಿ-ಅಂಶಗಳೊಂದಿಗೆ ವಿವರಿಸಿದರು.
ಲಾಭಾಂಶ ಘೋಷಣೆ : ಬ್ಯಾಂಕ್ ಪ್ರಗತಿಯಲ್ಲಿದ್ದು ಷೇರುದಾರರಿಗೆ ಶೇ. 20ರಷ್ಚು ಲಾಭಾಂಶ ನೀಡುವಂತೆ ಸದಸ್ಯರು ಮಾಡಿದ ಮನವಿಯನ್ನು ಪ್ರಸ್ತಾಪಿಸಿದ ಬಕ್ಕೇಶಪ್ಪ, ಅಭಿವೃದ್ಧಿಯಾಗಿದೆ ಎಂದಾಕ್ಷಣ ಲಾಭಾಂಶವನ್ನು ಹೆಚ್ಚು ನೀಡಲು ಸಾಧ್ಯವಿಲ್ಲ. ಅದರದ್ದೇ ಆದ ಮಿತಿಗಳಿವೆ. ಈ ಹಿನ್ನೆಲೆಯಲ್ಲಿ ಶೇ. 15ರಂತೆ ಲಾಭಾಂಶ ನೀಡಲು ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ ಎಂದು ಷೇರುದಾರರ ಹರ್ಷೋದ್ಘಾರದ ನಡುವೆ ಘೋಷಿಸಿದರು.
ನೂತನ ಶಾಖೆ : ಬೆಳೆಯುತ್ತಿರುವ ದಾವಣಗೆರೆ ನಗರಕ್ಕನುಗುಣವಾಗಿ ಮತ್ತು ಪ್ರಗತಿಯ ಪಥದಲ್ಲಿ ಮುನ್ನಡೆದಿರುವ ತಮ್ಮ ಬ್ಯಾಂಕಿನ ಸೇವೆಯನ್ನು ಷೇರುದಾರರು ಹಾಗೂ ಗ್ರಾಹಕರ ಹತ್ತಿರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸುಮಾರು 8-10 ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ಶಾಖೆಗಳನ್ನು ತೆರೆಯುವ ಕಾಲ ಇದೀಗ ಕೂಡಿ ಬಂದಿದೆ ಎಂದು ಬಕ್ಕೇಶಪ್ಪ ಹರ್ಷಿಸಿದರು.
ಎರಡು ಶಾಖೆಗಳನ್ನು ಪ್ರಾರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಅನುಮತಿ ನೀಡಿದೆ. ಇದಕ್ಕಾಗಿ ನಿಟುವಳ್ಳಿ-ಸರಸ್ವತಿ ಬಡಾವಣೆ ಭಾಗದಲ್ಲಿ ನಿವೇಶನ ಖರೀದಿಸಲಾಗಿದ್ದು, ಈ ಮಾಸಾಂತ್ಯದ ವೇಳೆಗೆ ಭೂಮಿ ಪೂಜೆ ನೆರವೇರಿಸಿ, ಅತಿ ಶೀಘ್ರದಲ್ಲಿ ಸ್ವಂತ ಕಟ್ಟಡದಲ್ಲೇ ನೂತನ ಶಾಖೆಯನ್ನು ಆರಂಭಿಲಾಗುವುದು ಎಂದು ಅವರು ತಿಳಿಸಿದರು.
ಮತ್ತೊಂದು ಶಾಖೆಯನ್ನು ಶಾಮನೂರು ರಸ್ತೆ ಅಥವಾ ಎಸ್. ನಿಜಲಿಂಗಪ್ಪ ಬಡಾವಣೆ ಭಾಗದಲ್ಲಿ ತೆರೆಯಲು ಉದ್ದೇಶಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಬಕ್ಕೇಶಪ್ಪ ವಿವರಿಸಿದರು.
ಬ್ಯಾಂಕಿಂಗ್ ಸೇವೆ : ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ತಮ್ಮ ಬ್ಯಾಂಕಿನ ಗ್ರಾಹಕರಿಗೆ ಶೀಘ್ರ ಒದಗಿಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿದ್ದು, ಈಗಾಗಲೇ ಮೊಬೈಲ್ ಆಪ್ ನೀಡಲಾಗಿದೆ. ಈಗ ಅಂತರ್ಜಾಲದ ಮೂಲಕ ತಮ್ಮ ವ್ಯವಹಾರವನ್ನು ನೋಡಿಕೊಳ್ಳಲು ಅಥವಾ ಕಾರ್ಯ ನಿರ್ವಹಿಸಲು ಮತ್ತು ಯುಪಿಐ ಮೂಲಕ ಹಣ ವರ್ಗಾವಣೆಗಾಗಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡಲೇ ಪ್ರಾರಂಭಿಸುವ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಗುರಿ – ಬ್ಯಾಂಕಿನ ಆರ್ಥಿಕ ವರ್ಷ 2023-24ನೇ ಸಾಲಿನಲ್ಲಿ ಠೇವಣಿ ಸಂಗ್ರಹಣೆಯಲ್ಲಿ 600 ಕೋಟಿ ರೂ. ಮೀರಿ, ಸಾಲ ನೀಡುವಿಕೆಯಲ್ಲಿ 425 ಕೋಟಿ ರೂ. ಗಳಿಗೂ ಹೆಚ್ಚು ಹಾಗೂ 15 ಕೋಟಿ ರೂ.ಗಳಿಗೂ ಅಧಿಕ ಲಾಭ ಗಳಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಸದಸ್ಯರು, ಗ್ರಾಹಕರು ತಮ್ಮ ಎಲ್ಲಾ ವ್ಯವಹಾರಗಳನ್ನು ತಮ್ಮ ಬ್ಯಾಂಕಿನಲ್ಲಿಯೇ ನಡೆಸುವ ಮೂಲಕ ಬ್ಯಾಂಕಿನ ಪ್ರಗತಿ ಹಾಗೂ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಹಕಾರ ನೀಡುವಂತೆ ಅವರು ಕೇಳಿಕೊಂಡರು.
ಬ್ಯಾಂಕಿನ ಷೇರುದಾರರು ಮತ್ತು ಗ್ರಾಹಕರಾದ ಜೆ. ಸೋಮನಾಥ್, ಜಯಪ್ರಕಾಶ್ ಮಾಗಿ, ಎಸ್.ಎನ್. ಪ್ರಕಾಶ್, ಲಿಂಗರಾಜ್, ರವಿಕುಮಾರ್, ಬಕ್ಕೇಶ್ ನಾಗನೂರು, ಇನಾಯತ್ ಉಲ್ಲಾ ಖಾನ್, ಪಿ.ಕೆ. ವೀರಣ್ಣ, ಟಿ. ಎಂ. ಪರಮೇಶ್ವರಯ್ಯ, ಕೆ. ಬಸವರಾಜ್, ಗೋಪಾಲಪ್ಪ, ಎಸ್. ರಾಮಪ್ಪ, ಕೆ.ಆರ್. ಪರಮೇಶ್ವರಪ್ಪ ಮತ್ತು ಇತರರು ಕೇಳಿದ ಹಲವಾರು ಪ್ರಶ್ನೆಗಳನ್ನು ಆಲಿಸಿದ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ಎಲ್ಲಾ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರ ನೀಡಿದರು.
ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆಗಿರುವ ಹಾಲಿ ಹಿರಿಯ ನಿರ್ದೇಶಕ ಬಿ.ಸಿ. ಉಮಾಪತಿ ಮಾತನಾಡಿ, ತಮ್ಮ ಬ್ಯಾಂಕ್ ಕೇವಲ ಲಾಭವನ್ನೇ ನೋಡದೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಕೂಡಾ ಮಾಡುತ್ತಿದೆ ಎಂದು ಉದಾಹರಣೆಗಳೊಂದಿಗೆ ತಿಳಿಸಿದರು.
ತಮ್ಮ ಬ್ಯಾಂಕ್ ಸುದೀರ್ಘ 62 ವರ್ಷಗಳಲ್ಲಿ ಮುನ್ನಡೆದಿದ್ದು, ಇಲ್ಲಿವರೆಗೂ ಬ್ಯಾಂಕಿನ ಪ್ರಗತಿಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ ಪ್ರತಿಯೊಬ್ಬರನ್ನೂ ಸ್ಮರಿಸಿದ ಉಮಾಪತಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯನಿರ್ವಾಹಕ ಮಂಡಳಿ ತಯಾರಿಸಿರುವ 62ನೇ ವಾರ್ಷಿಕ ವರದಿಯನ್ನು ಬ್ಯಾಂಕಿನ ನಿರ್ದೇಶಕರೂ ಆದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಟಿ.ಎಸ್. ಜಯರುದ್ರೇಶ್ ಮಂಡಿಸಿದರು. ನಿರ್ದೇಶಕರೂ ಆದ ವ್ಯವಸ್ಥಾಪನಾ ಮಂಡಳಿ ಸದಸ್ಯ ಕಂಚಿಕೇರಿ ಮಹೇಶ್ ಅವರು ಕಳೆದ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸಭೆಯ ಗಮನಕ್ಕೆ ತಂದರು. ನೂತನ ಸಾಲಿಗೆ ಬಾಹ್ಯ ಮೂಲಗಳಿಂದ ಪಡೆಯಬಹುದಾದ ಸಾಲದ ಗರಿಷ್ಠ ಮಿತಿ ಮತ್ತು ಲೆಕ್ಕ ಪರಿಶೋಧಕ ವಿಚಾರಗಳ ಕುರಿತಂತೆ ವೃತ್ತಿಪರ ನಿರ್ದೇಶಕ ಮಲ್ಲಿಕಾರ್ಜುನ್ ಕಣವಿ ಅವರು ಸಭೆಯ ಗಮನಕ್ಕೆ ತಂದರು.
ಬ್ಯಾಂಕಿನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ, ನಿರ್ದೇಶಕರುಗಳಾದ ಪಲ್ಲಾಗಟ್ಟಿ ಶಿವಾನಂದಪ್ಪ, ಎಂ.ಚಂದ್ರಶೇಖರ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ವಿ. ವಿಕ್ರಮ್, ಶ್ರೀಮತಿ ಎ.ಆರ್. ಅರ್ಚನ ಡಾ. ರುದ್ರಮುನಿ, ವೃತ್ತಿಪರ ನಿರ್ದೇಶಕ ಮುಂಡಾಸ್ ವೀರೇಂದ್ರ, ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಾದ ಬಸವರಾಜಪ್ಪ ಬೆಳಗಾವಿ, ಜಂಬಿಗಿ ರಾಧೇಶ್, ಕೆ. ಕೊಟ್ರೇಶ್ ಅವರುಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಡಿ.ಇ. ಸಿಂಧು ಅವರ ಪ್ರಾರ್ಥನೆ ನಂತರ ಜಾನಪದ ಅಕಾಡೆಮಿ ಸದಸ್ಯರಾದ ಶ್ರೀಮತಿ ರುದ್ರಾಕ್ಷಿಬಾಯಿ ನಾಡಗೀತೆಯನ್ನು ಹಾಡಿದರು. ನಿರ್ದೇಶಕರೂ ಆಗಿರುವ ವ್ಯವಸ್ಥಾಪನಾ ಮಂಡಳಿ ಸದಸ್ಯ ದೇವರಮನಿ ಶಿವಕುಮಾರ್ ಸ್ವಾಗತಿಸಿದರು. ನಿರ್ದೇಶಕ ನಲ್ಲೂರು ಎಸ್. ರಾಘವೇಂದ್ರ ಅವರಿಂದ ವಂದನಾರ್ಪಣೆ, ನಿರ್ದೇಶಕ ಇ.ಎಂ. ಮಂಜುನಾಥ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್, ಉಪ ಪ್ರಧಾನ ವ್ಯವಸ್ಥಾಪಕ ಆರ್.ಎ. ಪ್ರಸನ್ನ ಅವರುಗಳು ಕಾರ್ಯಕ್ರಮ ಉಸ್ತುವಾರಿ ವಹಿಸಿದ್ದರು.
ವ್ಯವಸ್ಥಾಪಕರುಗಳಾದ ಪ್ರಧಾನ ಕಛೇರಿಯ ಕೆ.ಎಸ್. ಮಹೇಶ್, ಚೌಕಿಪೇಟೆಯ ಜಿ.ಕೆ. ವಿಜಯಕುಮಾರ್, ನರಸರಾಜ ರಸ್ತೆ ಹೆಚ್.ವಿ. ರುದ್ರೇಶ್, ಪಿ.ಜೆ. ಬಡಾವಣೆಯ ಶ್ರೀಮತಿ ಎಲ್.ಎಸ್. ಗೀತಾ, ಡಿ. ದೇವರಾಜ ಅರಸು ಬಡಾವಣೆಯ ಸಾನಂದ ಗಣೇಶ್, ಹೊನ್ನಾಳಿಯ ಹೆಚ್. ಕುಮಾರ್, ಆಡಳಿತ ಕಛೇರಿಯ ಡಿ.ಬಿ.ಎ. ಬಿ.ಎಸ್. ಪ್ರಶಾಂತ್ ಅವರುಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.
ಜಾನಪದ ಗಾಯಕ ಉಮೇಶ್ ನಾಯಕ್ ಚಿನ್ನಸಮುದ್ರ ಮತ್ತು ಜಿಲ್ಲಾ ವಾರ್ತಾ ಇಲಾಖೆಯ ನಿವೃತ್ತ ಸಹಾಯಕ ಬಿ.ಎಸ್. ಬಸವರಾಜ್ ಅವರುಗಳಿಂದ ಅವರುಗಳು ಜಾನಪದ ಗೀತೆಗಳನ್ನು ಹಾಡಿ ಗಮನ ಸೆಳೆದರು.