ತಂಜೀಂ ಕಮಿಟಿ ಆಶ್ರಯದಲ್ಲಿ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಚಾಲನೆ
ದಾವಣಗೆರೆ, ಜು.31- ದೇಶದಲ್ಲಿ ಬಡತನ ನಿರ್ಮೂಲನೆಗೆ ಪಣತೊಟ್ಟಿರುವ ಏಕೈಕ ಸರ್ಕಾರ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಮಹಾನಗರ ಪಾಲಿಕೆ ಮತ್ತು ತಂಜೀಮುಲ್ ಮುಸ್ಲಿಮಿನ್ ಫಂಡ್ ಅಸೋಸಿಯೇಷನ್ ವತಿಯಿಂದ ದಾವಣಗೆರೆ ನಗರದ ನೂರಾನಿ ಶಾದಿಮಹಲ್‍ನಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ನಂತರ ಬಂದ ಸರ್ಕಾರಗಳು ಅವುಗಳನ್ನು ಅನುಷ್ಠಾನಕ್ಕೆ ತರದ ಕಾರಣ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳನ್ನು ನೀಡುವ ಭರವಸೆ ನೀಡಿದ್ದೆವು. ಅದರಂತೆ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇನ್ನೊಂದು ಗ್ಯಾರಂಟಿಯನ್ನು ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದರು. ಈ ನಾಲ್ಕು ಗ್ಯಾರಂಟಿಗಳಿಂದ ಬಡವರಿಗೆ ಅನುಕೂಲವಾಗಲಿದ್ದು, ಅರ್ಹ ಬಡವರು ಇದರ ಅನುಕೂಲ ಪಡೆಯಬೇಕೆಂದು ಕರೆ ನೀಡಿದ ಅವರು ಇದರಲ್ಲಿ ತೊಂದರೆ ಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತನ್ನಿ. ಅವರು ಸ್ಪಂದಿಸದಿದ್ದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಮಾತನಾಡಿ, ಜನರ ಸಹಕಾರದಿಂದ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಂಜೀಮುಲ್ ಮುಸ್ಲಿಮಿನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ಶೇಖ್ ದಾದು ಸೇಠ್ ಮತ್ತು ಮಹಾನಗರ ಪಾಲಿಕೆ ಸದಸ್ಯ ಸೈಯದ್ ಚಾರ್ಲಿ ಮಾತನಾಡಿದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾ, ಸದಸ್ಯ ಕೆ.ಚಮನ್ ಸಾಬ್, ತಂಜೀಮುಲ್ ಮುಸ್ಲೀಮಿನ್ ಫಂಡ್ ಅಸೋಸಿಯೇಷನ್‍ನ ಅಮ್ಜದ್‌ವುಲ್ಲಾ, ಸಾಬೀರ್ ಅಲಿಖಾನ್, ದಾದಾಪೀರ್, ಇಮ್ರಾನ್ ರಜಾ, ಹೆಚ್.ಇಮ್ತಿಯಾಜ್ ಬೇಗ್, ಮುಸಲೀಮ್‍ವುಲ್ಲಾ, ಷಂಷುದ್ದೀನ್ ರಜ್ವಿ, ಮಹ್ಮದ್ ಜಬೀವುಲ್ಲಾ, ಶಫೀವುಲ್ಲಾ, ಶೌಕತ್ ಅಲಿ, ಖಾದರ್ ಬಾಷಾ ರಜ್ವಿ, ಮಹ್ಮದ್ ಅಲಿ, ಅತಾವುಲ್ಲಾ ಹಕಾನಿ, ನೂರ್ ಅಹ್ಮದ್, ಸನಾವುಲ್ಲಾ, ಅಕ್ಬರ್ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ತಂಜೀಮುಲ್ ಮುಸ್ಲಿಮಿನ್ ಫಂಡ್ ಅಸೋಸಿಯೇಷನ್ ವತಿಯಿಂದ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.