ವಿಶ್ವ ತಂಬಾಕು ರಹಿತ ದಿನದ ಜಾಥಾಕ್ಕೆ ಚಾಲನೆ ನೀಡಿದ ನ್ಯಾ.ರಾಜೇಶ್ವರಿ ಎನ್. ಹೆಗಡೆ
ದಾವಣಗೆರೆ, ಜೂ. 1- ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಬೇಕಿದೆ. ಜೊತೆಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯೂ ವಿವರಿಸಬೇಕಿದೆ ಎಂದು ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಶೇ.22ರಷ್ಟು ಯುವ ಜನತೆ ತಂಬಾಕು ವ್ಯಸನಿಗಳಾಗಿದ್ದು, ವಿವಿಧ ಚಟಗಳಿಗೆ ದಾಸರಾಗಿದ್ದಾರೆ. ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆಗಾರಿಕೆ ಆಗಿದೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಜಿ.ಡಿ.ರಾಘವನ್ ಮಾತನಾಡುತ್ತಾ, ರಾಜ್ಯದಲ್ಲಿ ಶೇಕಡ 51.7ರಷ್ಡು ತಂಬಾಕು ವ್ಯಸನಿಗಳಿದ್ದು ಮತ್ತು ಶೇಕಡ 63.9 ರಷ್ಟು ಹೊಗೆರಹಿತ ತಂಬಾಕು ಬಳಕೆದಾರರಿದ್ದಾರೆ. ಇವರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ತಂಬಾಕು ತ್ಯಜಿಸುವಂತೆ ಇಲಾಖೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರೆಣ್ಣವರ್, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಹೆಚ್. ಅರುಣ್ ಕುಮಾರ್, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಎಸ್.ಸುಭಾಷ್ ಚಂದ್ರ, ಶಿವನಕೆರೆ ಬಸವಲಿಂಗಪ್ಪ ಸೇರಿದಂತೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗು ಇತರರು ಇದ್ದರು.