ದಾವಣಗೆರೆ ಅಂಚೆ ವಿಭಾಗಕ್ಕೆ ಒಂದು ವರ್ಷ

ದಾವಣಗೆರೆ ಅಂಚೆ ವಿಭಾಗಕ್ಕೆ ಒಂದು ವರ್ಷ

15 ಕೋಟಿ ರೂ. ಆದಾಯ, ಪ್ರಾಯೋಗಿಕ ಹಂತ ಪೂರ್ಣ

ದಾವಣಗೆರೆ, ಮೇ 19 – ಕಳೆದ ವರ್ಷ ಮೇ 1ರಂದು ಉದ್ಘಾಟನೆಯಾದ ದಾವಣಗೆರೆ ಅಂಚೆ ವಿಭಾಗಕ್ಕೆ ಈಗ ಒಂದು ವರ್ಷ ತುಂಬಿದೆ. ವರ್ಷದಲ್ಲಿ ವಿಭಾಗ 15.06 ಕೋಟಿ ರೂ.ಗಳ ಆದಾಯ ಗಳಿಸಿದೆ.

ಈ ಬಗ್ಗೆ ಮಾತನಾಡಿರುವ ಅಂಚೆ ಇಲಾಖೆ ದಾವಣಗೆರೆ ವಿಭಾಗದ ಸಹಾಯಕ ಅಧೀಕ್ಷಕ ಜೆ.ಎಸ್. ಗುರುಪ್ರಸಾದ್‌, ದಾವಣಗೆರೆಗೆ ಪ್ರತ್ಯೇಕ ಅಂಚೆ ವಿಭಾಗ ಆರಂಭಿಸಿರುವುದು ತ್ವರಿತ ಸೇವೆಗೆ ನೆರವಾಗಿದೆ. ದೂರುಗಳನ್ನು ಶೀಘ್ರವಾಗಿ ಹಾಗೂ ಸ್ಥಳೀಯವಾಗಿ ಇತ್ಯರ್ಥ ಪಡಿಸಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.

ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳು ಚಿತ್ರದುರ್ಗ ಹಾಗೂ ಶಿವಮೊಗ್ಗ ವಿಭಾಗಗಳಿಗೆ ಹರಿದು ಹಂಚಿ ಹೋಗಿದ್ದವು. ಕಳೆದ ವರ್ಷ ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳನ್ನು ಪ್ರತ್ಯೇಕ ವಿಭಾಗ ಮಾಡಲಾಗಿದೆ.

ಯಾವುದೇ ಹೊಸ ವಿಭಾಗ ಸ್ಥಾಪನೆಯಾದಾಗ ಮೊದಲ ವರ್ಷವನ್ನು ಪ್ರಾಯೋಗಿಕ ಎಂದು ಪರಿಗಣಿಸಲಾಗುತ್ತದೆ. ಆ ಸಾಧನೆಯನ್ನು ಪರಿಗಣಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ ದಾವಣಗೆರೆ ವಿಭಾಗ ಉತ್ತಮ ಸಾಧನೆ ಮಾಡಿದೆ ಎಂದು ಗುರುಪ್ರಸಾದ್ ತಿಳಿಸಿದ್ದಾರೆ.

ದಾವಣಗೆರೆ ಅಂಚೆ ವಿಭಾಗದಲ್ಲಿ 47 ಉಪ ಅಂಚೆ ಕಚೇರಿಗಳು ಹಾಗೂ 213 ಗ್ರಾಮೀಣ ಅಂಚೆ ಕಚೇರಿಗಳಿವೆ. ಇವುಗಳಲ್ಲಿ ಒಟ್ಟು 530 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತ್ಯೇಕ ವಿಭಾಗವಾದರೂ ಸಹ, ಯಾವುದೇ ಹೆಚ್ಚುವರಿ ವೆಚ್ಚಕ್ಕೆ ಅವಕಾಶ ಕೊಡದೇ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದವರು ಹೇಳಿದ್ದಾರೆ.

ಅಂಚೆ ಇಲಾಖೆ ಎಂದರೆ, ಪತ್ರಗಳ ಬಟವಾಡೆ ಸಂಸ್ಥೆ ಎಂಬ ಕಾಲ ಹೋಗಿ ಬಹಳಷ್ಟು ದಿನಗಳಾಗಿವೆ. ಈಗ ಅಂಚೆ ಇಲಾಖೆಯ ಬಹುತೇಕ ಆದಾಯ ಅಂಚೆಯೇತರ ಮೂಲಗಳಿಂದಲೇ ಬರುತ್ತಿದೆ.

ಅಂಚೆ ಉಳಿತಾಯ ಖಾತೆ, ಆಧಾರ್ ನೋಂದಣಿ – ತಿದ್ದುಪಡಿ, ಇಂಡಿಯಾ ಪೋಸ್ಟ್‌ ಪೇಮೆಂಟ್ಸ್ ಬ್ಯಾಂಕ್, ವಿಮೆ, ಗೋಲ್ಡ್‌ ಬಾಂಡ್‌ಗಳ ವಿತರಣೆ, ಡಿಜಿಟಲ್ ಜೀವನ್ ಪ್ರಮಾಣ ಪತ್ರ, ಸಾಮಾನ್ಯ ಸೇವಾ ಕೇಂದ್ರ ಮತ್ತಿತರೆ ಸೇವೆಗಳೇ ಈಗ ಅಂಚೆ ಇಲಾಖೆಯ ಪ್ರಧಾನ ಕಾರ್ಯಗಳಾಗಿವೆ.

ದಾವಣಗೆರೆ ಪ್ರಧಾನ ಅಂಚೆ ಕಚೇರಿಯಲ್ಲಿ 2022-23ರ ಸಾಲಿನಲ್ಲಿ 9911 ಅರ್ಜಿದಾರರಿಗೆ ಪಾಸ್‌ಪೋರ್ಟ್‌ ನೀಡಲಾಗಿದೆ. ಕೇಂದ್ರ ಆರಂಭವಾದ ನಂತರ ಇದುವರೆಗೂ 26,468 ಅರ್ಜಿದಾರರು ಪಾಸ್‌ಪೋರ್ಟ್‌ ಪಡೆದಿದ್ದಾರೆ.

ಕಳೆದ ಒಂದು ವರ್ಷದಲ್ಲಿ ದಾವಣಗೆರೆ ವಿಭಾಗದಲ್ಲಿ 49,558 ಅಂಚೆ ಉಳಿತಾಯ ಖಾತೆಗಳನ್ನು  ತೆರೆಯಲಾಗಿದೆ. ಹೆಚ್ಚು ಬಡ್ಡಿ, ಕೇಂದ್ರ ಸರ್ಕಾರದ ಭರವಸೆಯಿಂದ ಉಳಿತಾಯ ಖಾತೆಗಳು ಜನಸಾಮಾನ್ಯರನ್ನು ಸೆಳೆಯುತ್ತಿವೆ ಎಂದು ಗುರುಪ್ರಸಾದ್ ತಿಳಿಸಿದ್ದಾರೆ.

ಆಧಾರ್‌ ಕೇಂದ್ರಗಳ ಮೂಲಕ ವರ್ಷದಲ್ಲಿ 24 ಸಾವಿರಕ್ಕೂ ಹೆಚ್ಚು ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಳನ್ನು ಮಾಡಲಾಗಿದೆ. ಅಂಚೆ ನೌಕರರು ಹಾಗೂ ಅಂಚೆ ಪೇದೆಗಳು ಮನೆ ಬಾಗಿಲಲ್ಲೇ 4,648 ಗ್ರಾಹಕರ ಮೊಬೈಲ್ ನಂಬರ್ ತಿದ್ದುಪಡಿ ಮಾಡಿದ್ದಾರೆ.

ಇಂಡಿಯಾ ಪೋಸ್ಟ್‌ ಪೇಮೆಂಟ್ಸ್ ಬ್ಯಾಂಕ್‌ ಮೂಲಕ ಕಳೆದ ಸಾಲಿನಲ್ಲಿ 13,622 ಉಳಿತಾಯ ಖಾತೆಗಳನ್ನು ಮನೆ ಬಾಗಿಲಲ್ಲೇ ತೆರೆಯಲಾಗಿದೆ. ಆಧಾರ್ ಹಾಗೂ ಮೊಬೈಲ್ ನಂಬರ್ ಮೂಲಕ ನಿಮಿಷಗಳಲ್ಲೇ ಉಳಿತಾಯ ಖಾತೆ ತೆರೆಯಲಾಗುತ್ತಿದೆ. ಇದು ಸಂಪೂರ್ಣ ಕಾಗದ ರಹಿತವಾಗಿದೆ. ಅಲ್ಲದೇ, ಆಧಾರ್ ಸಂಖ್ಯೆ ಹಾಗೂ ಬೆರಳಚ್ಚಿನ ಮೂಲಕ ಮನೆಯಲ್ಲೇ ಕುಳಿತು ಹಣ ಪಡೆಯಲು ಅವಕಾಶವಿದೆ ಎಂದವರು ತಿಳಿಸಿದ್ದಾರೆ.

ಅಂಚೆ ಇಲಾಖೆಯು ಮೊದಲು ತನ್ನ ನೌಕರರಿಗೆ ಮಾತ್ರ ವಿಮೆ ನೀಡುತ್ತಿತ್ತು. ಈಗ ಸರ್ಕಾರಿ ನೌಕರರು, ಯಾವುದೇ ಪದವೀಧರರು, ಐಟಿಐ – ಡಿಪ್ಲೋಮಾ ಓದಿದವರಿಗೆ ಸೇವೆ ವಿಸ್ತರಿಸಲಾಗಿದೆ. ಕಳೆದ ವರ್ಷ 1,500ಕ್ಕೂ ಹೆಚ್ಚು ಪಿಎಲ್‌ಐ, ಆರ್‌ಪಿಎಲ್‌ಐ ಪಾಲಿಸಿಗಳನ್ನು ವಿತರಿಸಲಾಗಿದೆ ಎಂದವರು ಹೇಳಿದ್ದಾರೆ.

ಮನೆ ಬಾಗಿಲಿಗೆ ಹಲವಾರು ಸೇವೆಗಳನ್ನು ತಲುಪಿಸಲು ಅಂಚೆ ಇಲಾಖೆ ಶ್ರಮಿಸುತ್ತಿದೆ. ಈ ಸೇವೆಗಳನ್ನು ಪಡೆಯಲು ಬಯಸುವವರು 1800-2666-868 ಸಂಖ್ಯೆಯನ್ನು ಸಂಪರ್ಕಿಸಬಹುದು. ಅಂಚೆ ಇಲಾಖೆಯ ವೆಬ್ ತಾಣವಾದ https://www.indiapost.gov.in/ ಮೂಲಕವೂ ಸೇವೆಗೆ ಮನವಿ ಸಲ್ಲಿಸಬಹುದು ಎಂದು ಗುರುಪ್ರಸಾದ್‌ ತಿಳಿಸಿದ್ದಾರೆ.

error: Content is protected !!