ಪೊಲೀಸ್ ಸರ್ಪಗಾವಲಿನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ
ದಾವಣಗೆರೆ, ಮೇ 11- ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಶನಿವಾರ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿದೆ.
ಮತ ಎಣಿಕೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿಗಿ ಭದ್ರತೆಯೊಂದಿಗೆ ಸಕಲ ಸಿದ್ಧತೆ ನಡೆಸಿದೆ.
ಬುಧವಾರ ಸಂಜೆ ಮತ ಎಣಿಕೆ ಮುಗಿದಿದ್ದು, ತಡ ರಾತ್ರಿ ವರೆಗೂ ಡಿಮಸ್ಟರಿಂಗ್ ಕಾರ್ಯ ನಡೆದಿತ್ತು. ಅಧಿಕಾರಿಗಳು ಇವಿಎಂ ಮತ ಯಂತ್ರಗಳನ್ನು ಬಿಗಿ ಬಂದೋಬಸ್ತ್‌ನಲ್ಲಿ ಭದ್ರತಾ ಕೊಠಡಿಗಳಿಗೆ ಸಾಗಿಸಿದ್ದು, ಲೀಸ್ ಹಾಗೂ ಚುನಾವಣಾ ಅಧಿಕಾರಿಗಳು ಮತ ಯಂತ್ರಗಳಿರುವ ಭದ್ರತಾ ಕೊಠಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಸಂಚಾರ ಮಾರ್ಗ ಬದಲಾವಣೆ
ಮತ ಎಣಿಕೆ ಕಾರ್ಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯಲಿ ರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ದಾವಣಗೆರೆಯಿಂದ ಸಂತೇಬೆನ್ನೂರು, ಚನ್ನಗಿರಿಗೆ ಹೋಗುವ ವಾಹನ ಸವಾರರು ಶಿರಮಗೊಂಡನಹಳ್ಳಿ, ಹದಡಿ ಮೂಲಕ ಚನ್ನಗಿರಿ ಕಡೆಗೆ ಹೋಗಬೇಕಿದೆ.
ಚನ್ನಗಿರಿ ಕಡೆಯಿಂದ ಸಂತೇಬೆ ನ್ನೂರು ಮಾರ್ಗವಾಗಿ ದಾವಣಗೆರೆ ಕಡೆಗೆ ಬರುವವರು ಕುರ್ಕಿಯ ಹತ್ತಿರ ಎಡ ತಿರುವು ತೆಗೆದುಕೊಂಡು ಹದಡಿಯಿಂದ ದಾವಣಗೆರೆ ಕಡೆಗೆ ಬರುವುದು ಹಾಗೂ ಚಿತ್ರದುರ್ಗ ಕಡೆಗೆ ಹೋಗುವವರು ಕುರ್ಕಿಯ ಹತ್ತಿರ ಬಲ ತಿರುವು ತೆಗೆದುಕೊಂಡು ಆನಗೋಡು ಮುಖಾಂತರ ಚಿತ್ರದುರ್ಗ, ಬೆಂಗಳೂರು ಕಡೆಗೆ ಹೋಗಬೇಕಿದೆ.
ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಎಲ್ಲಾ ಭದ್ರತಾ ಕೊಠಡಿಗಳು ಸಿಸಿ ಟಿವಿ ಸರ್ವೇಕ್ಷಣೆಗೆ ಒಳಪಟ್ಟಿವೆ. ಪ್ರತಿ ಕ್ಷೇತ್ರಕ್ಕೆ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದ್ದು, 15 ರಿಂದ 18 ಸುತ್ತುಗಳ ವರೆಗೆ ಎಣಿಕೆ ನಡೆಯಲಿದೆ. ಚುನಾವಣಾ ಏಜೆಂಟರುಗಳು ಹಾಗೂ ಮತ ಕೇಂದ್ರದಲ್ಲಿ ಬರುವವರು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಮೊಬೈಲ್‌ಗಳನ್ನು ತರುವಂತಿಲ್ಲ. ಈ ಉಪಕರಣಗಳನ್ನು ಎಣಿಕಾ ಕೇಂದ್ರದಲ್ಲಿ ನಿಷೇಧಿಸಲಾಗಿದೆ.
ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದ್ದರೆ, ಮತದಾರರಲ್ಲಿ ಗೆಲುವಿನ ಬಗ್ಗೆ ಕುತೂಹಲ ಹೆಚ್ಚಾಗಿದೆ. ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು? ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಹಲವೆಡೆ ಬೆಟ್ಟಿಂಗ್ ಸಹ ನಡೆಯುತ್ತಿದೆ.
ಹಲವು ದಿನಗಳಿಂದ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಗುರುವಾರ ವಿಶ್ರಾಂತಿ ಪಡೆದಿದ್ದಾರೆ. ಯಾವ ಭಾಗದಲ್ಲಿ ಎಷ್ಟು ಮತಗಳು ಬಂದಿವೆ ಎಂಬ ಲೆಕ್ಕಾಚಾರದಲ್ಲೂ ತೊಡಗಿದ್ದಾರೆ. ಒಟ್ಟಿನಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ.