ವಿಶ್ವ ಹಿಮೊಫಿಲಿಯಾ ದಿನಾಚರಣೆ ಪ್ರಯುಕ್ತ ಹಿಮೊಫಿಲಿಯಾ ಬಾಧಿತರ ‘ಪೋಷಕರಿಂದ ಸ್ವಯಂ ಪ್ರೇರಿತ ರಕ್ತದಾನ’ ಶಿಬಿರದಲ್ಲಿ ರವಿನಾರಾಯಣ್
ದಾವಣಗೆರೆ, ಮೇ 11- ಎಲ್ಲಾ ದಾನಗಳಲ್ಲೇ ರಕ್ತದಾನ ಶ್ರೇಷ್ಠದಾನ, ರಕ್ತವನ್ನು ದಾನ ಮಾಡುವುದು ಒಳ್ಳೆಯ ಕಾರ್ಯ. ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜೊತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು 56 ಬಾರಿ ರಕ್ತದಾನ ಮಾಡಿರುವ ನಿವೃತ್ತ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿ ನಾರಾಯಣ್ ತಿಳಿಸಿದರು.
ವಿಶ್ವ ಹಿಮೊಫಿಲಿಯಾ ದಿನಾಚರಣೆ ಪ್ರಯುಕ್ತ ಹಿಮೊಫಿಲಿಯಾ ಬಾಧಿತರ ಪೋಷಕ ರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ನನಗೆ ಪ್ರಸ್ತುತ 66 ವರ್ಷವಾಗಿದ್ದು, ಆರೋಗ್ಯವಾಗಿದ್ದೇನೆ ಹಾಗೂ ರಕ್ತದಾನ ಮಾಡಲು ಈಗಲೂ ಉತ್ಸುಕನಾಗಿದ್ದೇನೆ. ಆದರೆ ವೈಜ್ಞಾನಿಕವಾಗಿ ಮತ್ತು ಕಾನೂನು ಅಡ್ಡಿ ಬರುತ್ತದೆ ಎಂದು ಅಸಹಾಯಕತೆಯಿಂದ ಹೇಳಿದರು. ಡಾ|| ಸುರೇಶ್ ಹನಗವಾಡಿ ಯವರ ಪರಿಚಯದಿಂದ ರಕ್ತದಾನ ಮಾಡಲು ಪ್ರೇರಣೆ ನೀಡಿತು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ|| ಸುರೇಶ್ ಹನಗವಾಡಿ ಅವರು ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಮಾತನಾಡುತ್ತಾ, ರಕ್ತಕ್ಕೂ ಹಾಗೂ ಹಿಮೊಫಿಲಿಯಾ ರೋಗಕ್ಕೂ ಅವಿನಾಭಾವ ಸಂಬಂಧವಿದ್ದು, ರಕ್ತದ ಅಂಶಗಳಾದ ಫ್ಯಾಕ್ಟರ್ 8 ಮತ್ತು 9 ಔಷಧಿಗಳ ಚಿಕಿತ್ಸೆಗೆ ಅವಲಂಬಿತರಾಗಿದ್ದಾರೆ. ತಮ್ಮ ಹಿಮೊಫಿಲಿಯಾ ಮಕ್ಕಳನ್ನು ನಮ್ಮ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಗೆ ಕರೆ ತರುವುದು ಸಾಮಾನ್ಯ. ಆದರೆ, ಇಂದು ಅವರ ಪೋಷಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ತಮ್ಮ ಕೃತಜ್ಞತಾ ಭಾವ ಮೆರೆದಿದ್ದು ತುಂಬಾ ವಿಶೇಷ, ಐತಿಹಾಸಿಕ ಎಂದು ಬಣ್ಣಿಸಿದರು. ಈ ರೀತಿಯ ರಕ್ತದಾನವನ್ನು ನಿರಂತರವಾಗಿ ಮಾಡುವ ಮುಖಾಂತರ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು. ಹಿಮೊಫಿಲಿಯಾ ಚಿಕಿತ್ಸಾ ಕ್ರಮದಲ್ಲಿ 1950 ರಿಂದ ಆದ ಆಮೂಲಾಗ್ರ ಬೆಳವಣಿಗೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಸಂಸ್ಥೆಯ ಉಪಾಧ್ಯಕ್ಷರು (ಅಭಿವೃದ್ಧಿ) ಡಾ|| ಬಿ.ಟಿ. ಅಚ್ಯುತ್ ಮಾತನಾಡಿ, ಸಾವು ಬದುಕಿನ ಮಧ್ಯ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಅವಶ್ಯಕ ಹಾಗೂ ಸಮಾಜಮುಖಿ ಕಾರ್ಯ. ಇಂತಹ ಶಿಬಿರಗಳು ಯಥೇಚ್ಛವಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷ ರಾದ ಡಾ|| ಮೀರಾ ಹನಗವಾಡಿ ಮಾತನಾಡಿ, ಹೆಣ್ಣು ಮಕ್ಕಳು ರಕ್ತವನ್ನು ನೈಸರ್ಗಿಕವಾಗಿ ಬೇರೆ ಬೇರೆ ರೂಪದಲ್ಲಿ ಹೊರಹಾಕುತ್ತಾರೆ. ಆದರೆ ಪುರುಷರು ರಕ್ತದಾನ ಮಾಡುವುದರಿಂದ ಮಾತ್ರ ರಕ್ತವನ್ನು ಹೊರಹಾಕಬೇಕಾಗುತ್ತದೆ. ರಕ್ತದಾನ ಮಾಡುವುದ ರಿಂದ ಹೊಸ ರಕ್ತ ವೃದ್ಧಿಯಾಗಿ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಸದಾಶಿವಪ್ಪ, ಲೈಫ್ ಲೈನ್ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ|| ದೊಡ್ಡಿ ಕೊಪ್ಪದ್, ಸಂಸ್ಥೆಯ ಕಾರ್ಯನಿರ್ವಾ ಹಕ ಅಧಿಕಾರಿ ನವೀನ್ ಹವಳಿ, ಸಂಸ್ಥೆಯ ಉಪಾಧ್ಯಕ್ಷ (ಹಣಕಾಸು) ಸಂಜೀವ್ ಹೆಗಡೆ ಹಾಗೂ ಇತರರು ಉಪಸ್ಥಿತರಿದ್ದರು.