ಹೊನ್ನಾಳಿ, ಏ.16- ವಿಧಾನಸಭೆ ಚುನಾವಣೆಗೆ ಹೊನ್ನಾಳಿ ಮತ ಕ್ಷೇತ್ರದಿಂದ ಕಾಂಗ್ರೆಸ್ ಹೈಕಮಾಂಡ್ ತನ್ನನ್ನು ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಟಿಕೆಟ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಇದೇ ದಿನಾಂಕ 18ರ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಬಳಿಕ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ ಹೇಳಿದರು.
ಅವರು ಭಾನುವಾರ ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಎಚ್.ಬಿ.ಶಿವಯೋಗಿ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇದೇ ದಿನಾಂಕ 18 ರಂದು 11 ಗಂಟೆಗೆ ಗೊಲ್ಲರಹಳ್ಳಿಯ ತಮ್ಮ ಶಂಕರ ರೈಸ್ಮಿಲ್ನಿಂದ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಹೊರಟು ಹೊನ್ನಾಳಿಯ ಹಳೇ ಸಂತೆ ಮೈದಾನ (ಅಗಳ ಮೈದಾನ)ಕ್ಕೆ ಆಗಮಿಸಿ, ಅಲ್ಲಿ 12 ಗಂಟೆಗೆ ಆಯೋಜಿಸಲಾಗಿರುವ ಮುಖಂಡರು, ಕಾರ್ಯಕರ್ತರು, ಪಕ್ಷದ ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಲಾಗುವುದು. ನಂತರ ನಾಮಪತ್ರ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.
ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ : ಒಂದು ರಾಷ್ಟ್ರೀಯ ಪಕ್ಷ ಎಂದ ಮೇಲೆ ಚುನಾವಣಾ ಸಂದರ್ಭದಲ್ಲಿ ಹಲವಾರು ಜನ ಟಿಕೆಟ್ ಆಕಾಂಕ್ಷಿಗಳಿರುವುದು ಸಹಜ. ಆದರೆ, ಹೈಕಮಾಂಡ್ ಅಂತಿಮವಾಗಿ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಗೆಲುವಿಗಾಗಿ ಎಲ್ಲರೂ ಕೈಜೋಡಿಸಲಿದ್ದಾರೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪಾಯ, ಗೊಂದಲಗಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹೊನ್ನಾಳಿ ಬ್ಲಾಕ್ನ ಅಧ್ಯಕ್ಷ ಎಚ್.ಬಿ. ಶಿವಯೋಗಿ, ಸಾಸ್ವೆಹಳ್ಳಿ ಬ್ಲಾಕ್ ಅಧ್ಯಕ್ಷ ಆರ್.ನಾಗಪ್ಪ, ಮಾಜಿ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಕೆ.ಪಿ.ಸಿ.ಸಿ. ಸದಸ್ಯ ಡಾ. ಈಶ್ವರ ನಾಯ್ಕ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಜಿ.ಪಂ. ಮಾಜಿ ಸದಸ್ಯ ಎಂ. ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ, ಸ್ವರೂಪ್, ಎಲ್.ಕೆ.ಚಂದ್ರಪ್ಪ, ಮಾರುತಿ ರಾವ್ ಸೇರಿದಂತೆ ಅನೇಕರು ಇದ್ದರು.