ಮಲೇಬೆನ್ನೂರು : ಸುಜ್ಞಾನ ನಿಧಿ ಶಿಷ್ಯವೇತನ ವಿತರಣಾ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ವಸಂತ್ ದೇವಾಡಿಗ
ವಿದ್ಯಾರ್ಥಿಗಳು ಓದಿ ಉನ್ನತ ಸ್ಥಾನಕ್ಕೆ ಹೋದ ನಂತರ ತಂದೆ-ತಾಯಿಗಳನ್ನು ವೃದ್ಧಾಶ್ರಮ ಗಳಿಗೆ ಕಳುಹಿಸುವಂತಾಗಬಾರದು.
ಜಿಗಳಿ ಪ್ರಕಾಶ್, ‘ಜನತಾವಾಣಿ’ ಹಿರಿಯ ವರದಿಗಾರ
ಮಲೇಬೆನ್ನೂರು, ಏ. 14- ಇಲ್ಲಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳ ಕಛೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ 46 ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ಸುಜ್ಞಾನ ನಿಧಿ ಶಿಷ್ಯ ವೇತನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಅವರು, ಡಾ. ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳ ಉನ್ನತ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಸುಜ್ಞಾನ ನಿಧಿ ಕಾರ್ಯಕ್ರಮದಡಿ ಇದುವರೆಗೂ ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಮಾರು 70 ಕೋಟಿಯಷ್ಟು ಶಿಷ್ಯವೇತನ ನೀಡಲಾಗಿದೆ.
ಮಲೇಬೆನ್ನೂರು ಯೋಜನಾಧಿಕಾರಿಗಳ ಕಛೇರಿ ವ್ಯಾಪ್ತಿಯಲ್ಲಿ ಕಳೆದ ವರ್ಷ 124 ವಿದ್ಯಾರ್ಥಿಗಳಿಗೆ 5.58 ಲಕ್ಷ ರೂ., ಈ ವರ್ಷ ದಲ್ಲಿ ಈಗ 46 ವಿದ್ಯಾರ್ಥಿಗಳಿಗೆ ಸುಮಾರು 10 ಲಕ್ಷ ರೂ. ಶಿಷ್ಯವೇತನ ಬಂದಿದ್ದು, ಇನ್ನೂ 25-30 ವಿದ್ಯಾರ್ಥಿಗಳಿಗೆ ಮಂಜೂರಾಗಿ ಬರಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿದ ಮಕ್ಕಳ ತಜ್ಞ ಡಾ. ಶ್ರೀನಿವಾಸ್ ಮಾತನಾಡಿ, ನಾವು ಓದುವಾಗ ಈ ರೀತಿಯ ಸಹಕಾರ ಸಿಗಲಿಲ್ಲ. ಈಗ ಸರ್ಕಾರದ ಜೊತೆಗೆ ಧರ್ಮಸ್ಥಳ ಯೋಜನೆಯು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು ನೀಡುತ್ತಿರುವುದು ಈಗಿನ ವಿದ್ಯಾರ್ಥಿಗಳ ಪುಣ್ಯ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹಾಗೂ ಸರ್ಕಾರಿ ಉರ್ದು ಪ್ರೌಢ ಶಾಲೆ ಶಿಕ್ಷಕ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ವಿದ್ಯಾರ್ಥಿಗಳು ಪೋಷಕರ ಹಾಗೂ ಗುರುಗಳ ಒತ್ತಾಯಕ್ಕೆ ಓದದೇ ಇಷ್ಟ ಪಟ್ಟು ಓದಬೇಕೆಂದು ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯ ಎಎಸ್ಐ ಪಾಲಾಕ್ಷಪ್ಪ ಮಾತನಾಡಿ, ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಕಳಕಳಿ ಮಾದರಿ ಎಂದರು.
ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಮೇಲ್ವಿಚಾರಕರಾದ ಶ್ರೀಮತಿ ಸಂಪತ್ ಲಕ್ಷ್ಮಿ, ಜಿಗಳಿ ವಲಯದ ಮೇಲ್ವಿಚಾರಕಿ ಶ್ರೀಮತಿ ಪದ್ಮಾವತಿ, ಕಛೇರಿಯ ವ್ಯವಸ್ಥಾಪಕಿ ಆಶಾ, ಅನುಷಾ, ರಾಖೇಶ್, ರೇಷ್ಮಾ, ಶಿಲ್ಪಾ, ಮಂಜು ಈ ವೇಳೆ ಹಾಜರಿದ್ದರು.