ಸಿರಿಗೆರೆ ಭಜನಾ ಮೇಳದ ಸಮಾರೋಪ ಸಮಾರಂಭದಲ್ಲಿ ತರಳಬಾಳು ಜಗದ್ಗುರು
ಸಿರಿಗೆರೆ, ಏ. 13- ದೇವರು ಭಕ್ತಿ ಪ್ರಿಯ, ಹಾಗಾಗಿ ಎಲ್ಲರೂ ತಮ್ಮ ಹೃದಯಗಳಲ್ಲಿ ಭಕ್ತಿಯ ಮತ್ತು ಭಜನೆಗಳ ಮೂಲಕ ದೇವರನ್ನು ಆರಾಧಿಸಬೇಕು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಅಣ್ಣನ ಬಳಗದ ವತಿಯಿಂದ ಶ್ರೀ ಕಾಶಿ ಮಹಾಲಿಂಗ ಸ್ವಾಮೀಜಿಯರ 52 ನೇ ಶ್ರದ್ಧಾಂಜಲಿ ಪ್ರಯುಕ್ತ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 34 ನೇ ಭಜನಾ ಮೇಳದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಶಿವಶರಣರ ವಚನಗಳನ್ನು ಅಳವಡಿಸಲಾಗಿದ್ದು, ಇವುಗಳ ಜೊತೆಗೆ ಭಜನಾ ಪದಗಳನ್ನು ಸಹ ಅಳವಡಿಸುವ ಚಿಂತನೆ ನಡೆಸಲಾಗಿದೆ. ಜಾತ್ರೆ, ಗ್ರಾಮದ ವಿವಿಧ ಕಾರ್ಯಕ್ರಮಗಳಲ್ಲಿ, ಚರಿತ್ರೆ, ಪುರಾಣಗಳಲ್ಲಿ ಭಜನೆಗಳ ಪಾತ್ರ ಮುಖ್ಯವಾಗಿದೆ ಎಂದರು.
ಹಿರಿಯ ಸಾಹಿತಿ ಪ್ರೊ. ಹೆಚ್. ಲಿಂಗಪ್ಪ ಮಾತನಾಡಿ, ಶಿವಶರಣರು ಸಾಹಿತ್ಯ, ಸಂಸ್ಕೃತಿ, ಕಲೆಗಳ ಮೂಲಕ ಸಾಮಾಜಿಕ ಬದ್ಧತೆ, ವೈಜ್ಞಾನಿಕ ಮನೋಭಾವದ ಅರಿವನ್ನು ಮೂಡಿಸಿದರು. ಭಜನೆ ಅಪರೂಪದ ಕಲೆ. ಇದು ಸಾಧಕರ ಸ್ವತ್ತು. ಭಜನೆಗಳ ಮೂಲಕ ಹೇಳುವ ವಿಚಾರಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಸ್ಕೃತಿ ಮತ್ತು ಪರಂಪರೆಗಳನ್ನು ಜೀವಂತಗೊಳಿಸುವ ಶಕ್ತಿ ಭಜನೆಗೆ ಇದೆ ಎಂದು ಹೇಳಿದರು.
ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಭೀಮಾಶಂಕರ ಜೋಶಿ ಮಾತನಾಡಿ, ಮಾನವ ಜನ್ಮ ದೊಡ್ಡದು. ಮಾನವರು ಜ್ಞಾನ, ಕರ್ಮ, ಯೋಗ, ಭಕ್ತಿಯ ಮಾರ್ಗಗಳನ್ನು ಅನುಸರಿಸಬೇಕು. ದಾವಣಗೆರೆ ವಿವಿ ಸ್ಥಾಪನೆಗೆ ಡಾ. ಶಿವಮೂರ್ತಿ ಶ್ರೀಗಳು ಕಾರಣ ಎಂದರು.
ರಾಜ್ಯದ 78 ತಂಡಗಳು ಭಾಗವಹಿಸಿದ್ದು, ಕಿರಿಯರ ವಿಭಾಗದಲ್ಲಿ ಕಗತೂರು ವೀರಭದ್ರೇಶ್ವರ ಭಜನಾ ಮಂಡಳಿಯರು ಪ್ರಥಮ, ಉಚ್ಚಂಗಿ ದುರ್ಗದ ಕೆಳಗೋಟೆ ಆಂಜನೇಯ ಸ್ವಾಮಿ ತಂಡ ದ್ವಿತೀಯ, ಕಲಾವತಿ ಗುರುಶಾಂತೇಶ್ವರ ಭಜನಾ ಮಂಡಳಿಯವರು ತೃತೀಯ ಸ್ಥಾನ ಪಡೆದರು.
ಹಿರಿಯರ ವಿಭಾಗದಲ್ಲಿ ಕುರುಬಗೊಂಡದ ಮಲ್ಲಿಕಾರ್ಜುನ ಭಜನಾ ತಂಡ ಪ್ರಥಮ, ಮೈಸೂರು ಈಶ್ವರ ಭಜನಾ ತಂಡ ದ್ವಿತೀಯ, ಹೊಳಲು ಮೌನ ಬಸವೇಶ್ವರ ಭಜನಾ ತಂಡ ತೃತೀಯ ಬಹುಮಾನ ಪಡೆದುಕೊಂಡವು. ಸಿರಿಗೆರೆ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ. ರಂಗನಾಥ್, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ಧಯ್ಯ, ತೀರ್ಪುಗಾರರು, ಭಜನಾ ಕಲಾವಿದರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.