ರಾಘವೇಂದ್ರ ಪಿಯು ಕಾಲೇಜ್ನ ಸಂವಾದ ಕಾರ್ಯಕ್ರಮದಲ್ಲಿ ಸಂಶೋಧಕ ಡಾ. ಅರುಣ್ ಗಂಗಪ್ಳರ್
ದಾವಣಗೆರೆ, ಏ.10- ನಗರದ ಶ್ರೀ ರಾಘವೇಂದ್ರ ಹೈಟೆಕ್ ಪದವಿಪೂರ್ವ ಕಾಲೇಜ್ನಲ್ಲಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಹಾಗೂ ಸಂವಾದಕರಾಗಿ ಆಗಮಿಸಿದ್ದ ಅಮೆರಿಕದ ಕ್ಯಾನ್ಸರ್ ಸಂಶೋಧಕ ಡಾ. ಅರುಣ್ ಕುಮಾರ್ ಗಂಗಪ್ಳರ್ ಮಾತನಾಡಿ, ಹೊಸ ಹೊಸ ಸಂಶೋಧನೆಗಳಿಂದ ಮಾತ್ರ ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಹೇಳಿದರು. ಅಲ್ಲದೇ ಕ್ಯಾನ್ಸರ್ ರೋಗದ ಗುಣಲಕ್ಷಣಗಳು, ಪರಿಹಾರಗಳು ಹಾಗೂ ಈ ರೋಗಕ್ಕೆ ಸಂಬಂಧಿಸಿದಂತೆ ಔಷಧೀಯ ಉಪಚಾರಗಳು ಹೇಗಿರುತ್ತವೆ ಎಂಬುದನ್ನು ಈ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತರಳುಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ಎಂ.ಜಿ. ಬಸವನಗೌಡ ಮಾತನಾಡಿ ಕೃಷಿ ವಿಜ್ಞಾನ, ತೋಟಗಾರಿಕಾ ವಿಜ್ಞಾನ ಮತ್ತು ಪಶು
ವೈದ್ಯಕೀಯ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ರಥಮ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾಲೇಜಿನ ವಿದ್ಯಾರ್ಥಿಗಳಾದ ಶೈಜೋ ಜಾನ್ಸನ್ (97.83%), ಪಿ. ಶರಣ್ ಕುಮಾರ್ (97-50%), ಸಿಂಚನಾ ಕೆ. ಎಂ. (97.33%), ಕೆ. ಶಿವಕುಮಾರ್ (95.00%), ಪೂಜಾ ಎಂ. ಎಂ. (95.00%), ಕೀರ್ತನಾ ನಾಗನಗೌಡ (94.16%), ಚೈತ್ರಾ ಎನ್ (92.50%), ಬಿ ಗಣೇಶ್ (92.33%) ಸಾಗರ್ (92.16%) ಮಾನಸ ಜಿ. ಎಚ್. (92.00%) ಮತ್ತು ಸುಮಾ. ಕೆ. (91.66%) ಅವರಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪೆನ್ನು ಪುಸ್ತಕಗಳನ್ನು ನೀಡುವುದರ ಮೂಲಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಅನಿಲ್ ಕುಮಾರ್ ಶ್ಯಾಗಲೆ ಮಾತನಾಡಿ, ಸೋಲು ಗೆಲುವಿನ ಮೆಟ್ಟಿಲು. ಕಷ್ಟಪಟ್ಟರೆ ಮುಂದೆ ಸುಖ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡ ಉಪನ್ಯಾಸಕ ಎಂ.ಆರ್.ಹರೀಶ್ ನಿರೂಪಿ ಸಿದರು. ಬಸವರಾಜ್ ಹನುಮಲಿ ಸ್ವಾಗತಿಸಿದರು.