2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ

2024 ಗುರು ಗ್ರಹವು 12 ವರ್ಷಗಳ ಬಳಿಕ  ವೃಷಭ ರಾಶಿ ಪ್ರವೇಶ

ಶ್ರೀ ವಿಜಯಾಭ್ಯುದಯ ಶ್ರೀಮನೃಪ ಶಾಲಿವಾಹನ ಶಕೆ 1946 ನೇ ಶ್ರೀ ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರಮಾಸ ಕೃಷ್ಣಪಕ್ಷ ಆಷ್ಟಮೀ 2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavani
ದಿನಾಂಕ: 1.5.2024 ನೇ ಬುಧವಾರ ಮಧ್ಯಾಹ್ನ 2 ಗಂಟೆ 3 ನಿಮಿಷಕ್ಕೆ ಸಂದು, ಶುಭ ಸಿಂಹ ಲಗ್ನ ಶ್ರವಣಾ ನಕ್ಷತ್ರ, ಶುಭಯೋಗ, ಬಾಲಕರಣ  ಈ ಶುಭ ಮುಹೂರ್ತದಲ್ಲಿ ಗುರುಗ್ರಹವು ಕೃತ್ತಿಕಾ ನಕ್ಷತ್ರ ಮೊದಲನೇ ಚರಣ ಮೇಷ ರಾಶಿಯಿಂದ, ಕೃತ್ತಿಕಾ ನಕ್ಷತ್ರ ಎರಡನೇ ಚರಣದಲ್ಲಿ ಅಂದರೆ ವೃಷಭ ರಾಶಿಗೆ ಪ್ರವೇಶವಾಗಿದ್ದು, ಈ ಸಂದರ್ಭದಲ್ಲಿ ದ್ವಾದಶ ರಾಶಿಗಳ ಫಲಾಫಲವನ್ನುಈ ಕೆಳಕಂಡಂತೆ ವಿಮರ್ಶಿಸಲಾಗಿದೆ.

ಯಾವ ರಾಶಿಗಳ ಮೇಲೆ ಗುರುವಿನ ಕೃಪಾಕಟಾಕ್ಷ…

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniಮೇಷ ರಾಶಿ :

ಈ ರಾಶಿಯವರಿಗೆ ಗುರುವು ತನು ಸ್ಥಾನದಿಂದ ಧನಸ್ಥಾನಕ್ಕೆ ಪ್ರವೇಶಿಸಲಿದ್ದು, ಶತ್ರುಗಳನ್ನೂ ಕೂಡ ಮಿತ್ರರಂತೆ ಕಾಣುವರು, ಲೇಖನಗಳಲ್ಲಿ ಆಸಕ್ತರಾಗಿ ಸಾಹಿತ್ಯ ಪ್ರಿಯರಾಗುವರು, ಆದಾಯದ ಮೂಲವನ್ನು ಹತ್ತು ಹಲವು ಮಾರ್ಗಗಳಿಂದ ಹೆಚ್ಚಿಸಿಕೊಳ್ಳುವರು, ಸನ್ಮಾರ್ಗದಲ್ಲಿ ನಡೆದು, ಗುರು-ಹಿರಿಯರ ಪ್ರೀತಿಗೆ ಪಾತ್ರರಾಗುವರು, ಮತ್ತೊಬ್ಬರ ಕಷ್ಟಗಳಿಗೆ ಮರುಗುವರು, ವಿದ್ಯಾರ್ಥಿಗಳು ಯಶಸ್ಸಿನ ಹಾದಿಯಲ್ಲಿ ನಡೆಯುವರು, ಉತ್ತಮ ಕೀರ್ತಿವಂತರಾಗಿ ಮಾನ-ಸನ್ಮಾನಗಳಿಗೆ ಅರ್ಹ ರಾಗುವರು, ಆದರೆ ಹಲ್ಲು ನೋವು, ಮುಖ ರೋಗಗಳು ಬಾಧಿಸಲಿವೆ. ಹೇರಳ ಧನ ಸಂಗ್ರಹ ಮಾಡುವರು.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniವೃಷಭ ರಾಶಿ :

ಈ ರಾಶಿಯವರಿಗೆ ಗುರುವು ವ್ಯಯ ಸ್ಥಾನದಿಂದ ತನು ಸ್ಥಾನಕ್ಕೆ ಪ್ರವೇಶಿಸಲಿದ್ದು, ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಯಶಸ್ಸು ಗಳಿಸುವರು. ಅತ್ಯಂತ ಸುಖೀ ಜೀವನ ನಡೆಸುವರು. ಪಂಡಿತರಿಗೆ ರಾಜ ಸನ್ಮಾನವಾಗಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ, ತಮ್ಮ ವರ್ಚಸನ್ನು ಹೆಚ್ಚಿಸಿಕೊಳ್ಳುವರು. ಸಂಪಾದಿತ ಧನವು ಬಂದ ರೀತಿಯಲ್ಲೇ ಖರ್ಚಾಗುವುದು, ಎಲ್ಲರ ಮೇಲೆ ಅಧಿಕಾರ ಚಲಾಯಿಸುತ್ತಾ, ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವರು. ಹೆಚ್ಚು-ಹೆಚ್ಚು ಧಾರ್ಮಿಕ ವಿಧಿ-ವಿಧಾನಗಳಲ್ಲಿ ಆಸಕ್ತಿ ಮೂಡಲಿದೆ, ಆದರೆ ಇವರು ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯವಾಗಬೇಕು. ಸಂಪಾದನೆ ಸನ್ಮಾರ್ಗದಲ್ಲಿದ್ದರೆ ಉತ್ತಮ, ಗುರು-ಹಿರಿಯರಲ್ಲಿ ಗೌರವವಿರಲಿ.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniಮಿಥುನ ರಾಶಿ :

ಗುರುವು ಈ ರಾಶಿಯವರಿಗೆ ವ್ಯಯ ಸ್ಥಾನದಲ್ಲಿರುವುದರಿಂದ ಕಪಟ ಮಾರ್ಗದಲ್ಲಿ ಹಣ ಗಳಿಸುವ ಇವರು ಅದನ್ನು ದುರ್ವ್ಯ ಸನಗಳಿಗೆ ವಿನಿಯೋಗಿಸುವರು. ಕೈಗೊಂಡ ಕೆಲಸ ಕಾರ್ಯಗಳು ನಷ್ಟವನ್ನನುಂಟು ಮಾಡಬಹುದು ಅಥವಾ ಯೋಜನೆಗಳು ವ್ಯರ್ಥವಾಗುವವು. ಬಂಧುಗಳೊಂದಿಗೆ ವಿನಾಕಾರಣ ದ್ವೇಷ, ಅಪಕೀರ್ತಿಗೆ ಕಾರಣವಾಗಲಿದೆ. ಮತಿಹೀನರಾಗಿ ಬದುಕಿನಲ್ಲಿ ಬರಲಿರುವ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವರು, ಜೂಜಾಟ ಇವರಿಗೆ ಬಲು ಪ್ರಿಯವಾಗಲಿದೆ. ಅತಿಲೋಭದಿಂದಾಗಿ ಪರರಿಗೆ ವಂಚನೆ ಮಾಡುವರು, ಸಾಧ್ಯವಾದಷ್ಟು ಗೋ ಸೇವೆ ಮಾಡುವುದು, ವಿಷ್ಣು ಸಹಸ್ರನಾಮ ಪಠಣ ಹಾಗೂ ಗುರುಗಳ ಸೇವೆ ಮಾಡಿದಲ್ಲಿ ಕಷ್ಟಗಳು ಪರಿಹಾರವಾಗಲಿವೆ.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniಕರ್ಕಾಟಕ ರಾಶಿ :
ಈ ರಾಶಿಯವರಿಗೆ ಗುರುವು ಲಾಭ ಸ್ಥಾನಕ್ಕೆ ಬರಲಿದ್ದು, ಸ್ವಸಾಮರ್ಥ್ಯದಲ್ಲಿ ಹೆಚ್ಚು ಆತ್ಮವಿಶ್ವಾಸ ಹೊಂದುವರು, ಹತ್ತು-ಹಲವು ಮಾರ್ಗಗಳಿಂದ ಆದಾಯವು ಕಂಡುಬರುವುದರಿಂದ ಮನೆ, ವಾಹನ, ಒಡವೆ-ವಸ್ತ್ರಗಳ ಖರೀದಿ ಜೋರಾಗಿಯೇ ನಡೆಯಲಿದೆ, ಗಣ್ಯವ್ಯಕ್ತಿಗಳ ಸಹವಾಸದಿಂದ ತಮ್ಮ ಘನತೆ ಹೆಚ್ಚಿಸಿಕೊಳ್ಳುವರು, ತನ್ನ ತಂದೆ-ತಾಯಿಗಳಲ್ಲಿ ಹಾಗೂ ಗುರು-ಹಿರಿಯರಲ್ಲಿ ಹೆಚ್ಚಿನ ಗೌರವಾದರಗಳನ್ನು ತೋರುವರು ಮತ್ತು ಅವರ ಇಷ್ಟಾರ್ಥಗಳನ್ನು ನೆರವೇರಿಸುವರು. ಅವಿವಾಹಿತರಿಗೆ ಅನಿರೀಕ್ಷಿತ ಪ್ರಸಂಗವೊಂದರಿಂದ ಕಂಕಣಭಾಗ್ಯ ಕೂಡಿಬರಲಿದೆ, ಅಧ್ಯಯನದಲ್ಲಿ ಹಿಂದುಳಿದಿದ್ದ ಮಕ್ಕಳ ವಿದ್ಯಾಭ್ಯಾಸ ಅನಾಯಾಸ ವಾಗಿ ಮುಂದುವರೆಯಲಿದೆ, ಬೆಲೆಬಾಳುವ ಸ್ವರ್ಣಾಭರಣ ವ್ಯಾಪಾರಿಗಳಿಗೆ ಲಾಭಾಧಿಕ್ಯ ವಾಗಲಿದೆ. ದಾನ-ಧರ್ಮ ಮಾಡಿ

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniಸಿಂಹ ರಾಶಿ :
ದಶಮ ಭಾವದಲ್ಲಿ ಗುರುಗ್ರಹ ಸಂಚಾರವಿರುವ ನಿಮಗೆ ಉತ್ತಮ ಸ್ನೇಹಿತರ ಪರಿಚಯವಾಗಲಿದೆ, ರಾಜಕಾರಣಿಗಳಿಗೆ ಅಧಿಕಾರ ಹಿಡಿಯುವ ಯೋಗ ಪ್ರಾಪ್ತಿಯಾಗಲಿದೆ. ಹೊಸ ಮನೆ ಕಟ್ಟುವ ಅಥವಾ ಖರೀದಿಸುವ ಸದವಕಾಶ ಬರಲಿದೆ. ಸಿನಿಮಾ ನಟರಿಗೆ ಉತ್ತಮ ಅವಕಾಶಗಳು ತಾವಾಗಿಯೇ ಅರಸಿಕೊಂಡು ಬರಲಿವೆ, ಕುಟುಂಬದ ಗೌರವ ಇವರಿಂದಾಗಿ ಹೆಚ್ಚಲಿದೆ, ಅಲ್ಲದೇ ತಮ್ಮ ಪೂರ್ವಿಕರಿಗಿಂತಲೂ ಹೆಚ್ಚಿನ ಕೀರ್ತಿವಂತರಾಗುವರು. ಆದರೆ ಅಸಂತೃಪ್ತಿ ಇವರನ್ನು ಸದಾ ಕಾಡಲಿದೆ. ಪೂರ್ವ ನಿಗದಿತ ಶುಭ ಕಾರ್ಯಗಳಿಗೆ ಮರುಚಾಲನೆ ಬರಲಿದೆ, ಉತ್ತಮ ಸ್ನೇಹಿತರ ಸಹವಾಸದಿಂದ ಯಶಸ್ಸಿನ ದಾರಿ ಸುಗಮವಾಗಲಿದೆ, ಉತ್ತಮ ಕಾರ್ಯಗಳಿಂದ ಸಂಪಾದನೆ ಉತ್ತಮ ಗೊಳ್ಳಲಿದ್ದು, ಮಡದಿ-ಮಕ್ಕಳಿಗೋಸ್ಕರ ವೆಚ್ಚ ಹೆಚ್ಚಲಿದೆ.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniಕನ್ಯಾ ರಾಶಿ :
ನವಮಭಾವದಲ್ಲಿ ಗುರು ಗ್ರಹದ ಯೋಗವಿದ್ದು, ಸರ್ಕಾರಿ ನೌಕರರಿಗೆ ಕೆಲಸದಲ್ಲಿ ಪದೋನ್ನತಿಯಾಗಲಿದ್ದು, ವೇತನದಲ್ಲಿ ಹೆಚ್ಚಳವಾಗಲಿದೆ, ಜೊತೆಗೆ ಜವಾಬ್ದಾರಿಯೂ ಹೆಚ್ಚುವುದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಮೂಡಲಿದ್ದು,  ಸದಾಚಾರ ವಿಚಾರಗಳಲ್ಲಿ ಮನಸ್ಸು ತಿರುಗುವುದು, ರಾಜಕಾರಣಿಗಳಿಗೆ ಜನಪ್ರಿಯತೆ ಯೊಂದಿಗೆ ಕೆಲವು ಪ್ರಮಾದಗಳಿಂದ ಆಪಾದನೆಗಳನ್ನು ಎದುರಿಸಬೇಕಾಗಬಹುದು. ಸಾಧು – ಸಜ್ಜನರ ಸೇವಾಭಾಗ್ಯ ನಿಮ್ಮದಾಗಲಿದೆ. ನಮ್ರತೆ, ಪ್ರಾಮಾಣಿಕತೆ, ಸತ್ಯವಾದ ನುಡಿ ಇವುಗಳು ಅವರ ಕೀರ್ತಿ ಪತಾಕೆಯನ್ನು ಹಾರಿಸಲಿದೆ. ಹಿಡಿದ ಕೆಲಸಗಳನ್ನು ಮಾಡಿ ಮುಗಿಸುವ ಛಲ ಮೂಡುವುದು. ಇವರು ಮಾಡುವ ಎಲ್ಲಾ ಕೆಲಸ ಕಾರ್ಯಗಳಿಗೆ ಸ್ನೇಹಿತರೊಂದಿಗೆ ಬಂಧು ಜನರೂ ಕೈಜೋಡಿಸುವರು. ಪರರಲ್ಲಿ ದಯವುಳ್ಳವರಾಗುವರು.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniತುಲಾ ರಾಶಿ :
ಅಷ್ಟಮ ಭಾವದಲ್ಲಿ ಗುರುವು ಸಂಚರಿಸಲಿದ್ದು, ನೀವು ಎಷ್ಟೇ ಕೆಲಸ-ಕಾರ್ಯಗಳನ್ನು ಮಾಡಿದರೂ ಯಜಮಾನನಿಗೆ ತೃಪ್ತಿಯಿರುವುದಿಲ್ಲ, ಮಿತಿ ಮೀರಿದ ಅಹಂಕಾರ ಅವರ ಅವನತಿಗೆ ಕಾರಣವಾಗಲಿದೆ, ನಯ-ವಿನಯಗಳಿಂದ ದೂರವಾಗಿ ಎಲ್ಲರ ತಿರಸ್ಕಾರಕ್ಕೆ ಒಳಗಾಗುವರು. ಅನಿವಾರ್ಯ ಪ್ರಸಂಗದಿಂದಾಗಿ ಬಂಧು-ವರ್ಗದಿಂದ ದೂರದೂರಿನಲ್ಲಿ ವಾಸ ಮಾಡಬೇಕಾಗ ಬಹುದು. ಅನಾರೋಗ್ಯ ಸಮಸ್ಯೆ ಪದೇ-ಪದೇ ಕಾಡಲಿದೆ. ಜೊತೆಗೆ ವ್ಯರ್ಥ ತಿರುಗಾಟ, ವ್ಯರ್ಥ ಖರ್ಚು ಅನಿವಾರ್ಯವಾಗಲಿದೆ. ಆದಾಯವು ಕಡಿಮೆಯಾಗಲಿದ್ದು, ಹೊಸ ಯೋಜನೆಗಳಿಗೆ ಕೈಹಾಕದಿರುವುದು ಮೇಲು, ದುರ್ವ್ಯ ಸನಗಳಿಂದ ದೂರವಾಗಿರುವುದು ಮೇಲು. ನೀಚರ ಸಹವಾಸದಿಂದ ಚಾರಿತ್ರ್ಯಕ್ಕೆ ಧಕ್ಕೆಯುಂಟಾಗ ಬಹುದು, ನಿತ್ಯ ಗುರುಚರಿತ್ರೆ ಪಾರಾಯಣ ಮಾಡಿ.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniವೃಶ್ಚಿಕ ರಾಶಿ :
ಸಪ್ತಮ ಭಾವದಲ್ಲಿ ಸಂಚರಿಸುವ ಗುರುವು ಸಂತಾನಾಪೇಕ್ಷಿಗಳ ಕೋರಿಕೆಯನ್ನು ಪೂರೈಸು ವನು,  ನವದಂಪತಿಗಳಲ್ಲಿದ್ದ ಭಿನ್ನಾಭಿಪ್ರಾಯ ದೂರವಾಗಿ, ಸಂಸಾರದಲ್ಲಿ ಸುಂದರ ಸರಿಗಮ ಮೂಡಲಿದೆ, ಅವಿವಾಹಿತರಿಗೆ ಕಂಕಣ ಭಾಗ್ಯ ಬೇಗನೆ ಕೂಡಿ ಬರಲಿದೆ, ಸಮಾಜದಲ್ಲಿ ಗಣ್ಯ ವ್ಯಕ್ತಿಗಳಿಂದ ಮಾನ-ಸನ್ಮಾನವಾಗಲಿದೆ. ಬುದ್ಧಿ ಚುರುಕುಗೊಂಡು ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುವರು, ಹೆಚ್ಚಿದ ಸಂಪಾದನೆ ದುರ್ವ್ಯಸನಗಳಿಗೆ ಕಾರಣವಾಗದಂತೆ ಎಚ್ಚರ ವಹಿಸುವುದು ಮೇಲು,  ಅಪರಿಚಿತ ಸ್ತ್ರೀಯರ ಸಹವಾಸ ಕಳಂಕವನ್ನು ತರಬಹುದು. ಗುರು-ಹಿರಿಯರಲ್ಲಿ ಹೆಚ್ಚಿದ ಭಕ್ತಿ ಸನ್ಮತಿಯನ್ನು ಮೂಡಿಸಬಹುದು.  ಶಾಸ್ತ್ರಾಭ್ಯಾಸದಲ್ಲಿ ವಿಶೇಷ ಆಸಕ್ತಿ ಮೂಡಲಿದೆ, ಹೆಚ್ಚಿನ ಆದಾಯ ಧರ್ಮ ಕಾರ್ಯಗಳಿಗೆ ವಿನಿಯೋಗವಾಗಲಿದೆ.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniಧನು ರಾಶಿ :
ಈ ರಾಶಿಯರಿಗೆ ಗುರುವು ಷಷ್ಠ ಸ್ಥಾನದಲ್ಲಿದ್ದು, ಶತ್ರುಗಳನ್ನು ಜಯಿಸುವರು, ಜೊತೆಗೆ ಸಮರ್ಥ ಯುದ್ಧಾಳುಗಳಾಗುವರು, ಹಸು, ಕುದುರೆ, ಮೊದಲಾದ ಸಾಕು ಪ್ರಾಣಿಗಳ ಮೇಲೆ ಬಹಳ ಪ್ರೀತಿ ತೋರುವರು, ವ್ಯವಹಾರ ಅಥವಾ ವಿದ್ಯಾಭ್ಯಾಸ ನಿಮಿತ್ತ ವಿದೇಶ ಪ್ರವಾಸ ಮಾಡುವರು, ಈ ಮೊದಲು ಆರಂಭಿಸಿದ್ದ ಕಾರ್ಯಗಳಲ್ಲಿ ಉದಾಸೀನತೆ ಮೂಡಲಿದೆ, ಸಂಗೀತದಲ್ಲಿ ವಿಶೇಷ ಆಸಕ್ತಿ ತೋರುವರು, ಮನೆಯಲ್ಲಿ ಹಿರಿಯರಿಗೆ ಅನಾರೋಗ್ಯ ಸಮಸ್ಯೆ ಬಾಧಿಸಲಿದೆ. ತಾಯಿಯ ಕಡೆಯವರಿಂದ ಕಿರುಕಳ ನಿರಂತರವಾಗಲಿದೆ. ಹಣ ಸಂಪಾದನೆ ಉತ್ತಮವಾಗಿದ್ದರೂ, ಉಳಿತಾಯ ಕಂಡುಬರುವುದಿಲ್ಲ. ಹೆಸರು, ಕೀರ್ತಿ ಗಳಿಸುವ ಹಂಬಲ ಹೆಚ್ಚಲಿದೆ. ವೈಯಕ್ತಿಕ ಆರೋಗ್ಯದಲ್ಲೂ ಏರುಪೇರುಕಂಡುಬರಲಿದೆ.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniಮಕರ ರಾಶಿ :
ಪಂಚಮ ಭಾವದಲ್ಲಿರುವ ಗುರುವು ಈ ರಾಶಿಯವರಿಗೆ ಮಠ-ಮಾನ್ಯಗಳಿಂದ ವಿಶೇಷ ಸನ್ಮಾನವಾಗಲಿದ್ದು, ಉತ್ತಮ ಆಚಾರ-ವಿಚಾರಗಳಲ್ಲಿ ಶ್ರದ್ಧೆ ಹೆಚ್ಚಲಿದೆ. ನಾನಾ ಮೂಲಗಳಿಂದ ಆದಾಯವು ಹರಿದು ಬರಲಿದ್ದು, ಚರ-ಸ್ಥಿರ ಆಸ್ತಿ ಕೊಳ್ಳುವರು ತರ್ಕದಲ್ಲಿ ಪಾಂಡಿತ್ಯವುಳ್ಳ ಇವರು ಊಹಾಪೋಹಗಳಲ್ಲಿ ಚಾಣಾಕ್ಷರಾಗುವರು. ಯಾವುದೇ ಕೆಲಸ-ಕಾರ್ಯಗಳಿಗೆ ಏನೇ ಅಡ್ಡಿ-ಆತಂಕ ಬಂದರೂ ಹಿಂಜರಿಯದೇ ಮಾಡಿ ಮುಗಿಸುವರು. ಸಂತಾನಾಪೇಕ್ಷಿಗಳ ಬಹುದಿನದ ಬಯಕೆ ಈಡೇರಲಿದೆ, ಯುವಜನರು ಪಾರಂಪರಿಕ ವಾದ ವ್ಯವಹಾರವನ್ನೇ ಮುಂದುವರೆಸುವರು, ದುಶ್ಚಟಗಳು ದೂರವಾಗಲಿವೆ, ಧಾರ್ಮಿಕ ಉತ್ಸವಗಳಲ್ಲಿ ಭಾಗವಹಿಸುವರು. ಸಮಯಕ್ಕೆ ತಕ್ಕ ನಡೆ-ನುಡಿಯನ್ನು ರೂಢಿಸಿಕೊಳ್ಳುವರು.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniಕುಂಭ ರಾಶಿ :
ಈ ರಾಶಿಯವರಿಗೆ ಗುರುವು ಚತುರ್ಥ ಸ್ಥಾನಕ್ಕೆ ಬರಲಿದ್ದು, ಅತ್ಯಂತ ಸೌಖ್ಯವುಳ್ಳ ವರಾಗುವರು, ಮನೆಯಲ್ಲಿ ಮಂಗಳ ಕಾರ್ಯ ಗಳು ಮೇಲಿಂದ ಮೇಲೆ ನಡೆಯುತ್ತಲೇ ಇರುವವು. ಕುಲ ದೇವತಾನುಗ್ರಹ ಇರುವುದರಿಂದ ಹಿಡಿದ ಕಾರ್ಯಗಳಲ್ಲಿ ಯಶಸ್ಸು ಕಾಣುವರು. ಮನಸ್ಸಿನಲ್ಲಿ ಒಂದಲ್ಲಾವೊಂದು ಚಿಂತೆ
ನಿರಂತರ ಕಾಡಲಿದೆ. ಹಲವಾರು ಕಡೆಯಿಂದ ಬರಬೇಕಾಗಿರುವ ಹಣ ಸಕಾಲದಲ್ಲಿ ಕೈಸೇರಲಿದೆ. ಸರ್ಕಾರದಿಂದಾಗಬೇಕಾಗಿರುವ ಕೆಲಸಗಳು ಸುಲಲಿತವಾಗಿ ಕೈಗೂಡಲಿವೆ, ಸ್ಥಿರ ಅಥವಾ ಚರಾಸ್ತಿಗಳನ್ನು ಕೊಳ್ಳಲು ಇದು ಸಕಾಲವಾಗಿದೆ, ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಲಿದೆ. ಸಾಮಾಜಿಕ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ತೋರುವ, ನಿಮಗೆ ಅನೇಕ ರೀತಿಯಲ್ಲಿ ಸನ್ಮಾನವಾಗಲಿದೆ.

2024 ಗುರು ಗ್ರಹವು 12 ವರ್ಷಗಳ ಬಳಿಕ ವೃಷಭ ರಾಶಿ ಪ್ರವೇಶ - Janathavaniಮೀನಾ ರಾಶಿ :
ತೃತೀಯ ಭಾವದಲ್ಲಿ ಗುರು ಗ್ರಹವು ಸಂಚರಿಸಲಿರುವ ಈ ರಾಶಿಯವರಿಗೆ ಅತಿಯಾದ ಸಾಂಸಾರಿಕ ಮೋಹ ಕಾಡಲಿದೆ. ಎಷ್ಟೇ ಧಾರಾಳಿಗಳಾಗಿದ್ದರೂ ಕೆಲವು ವಿಚಾರಗಳಲ್ಲಿ ಕಡು ಜಿಪುಣತನ ತೋರುವರು, ಅರ್ಥವಿಲ್ಲದ ಚಿಂತೆಯಿಂದಾಗಿ ಆರೋಗ್ಯವನ್ನು ವ್ಯರ್ಥಮಾಡಿಕೊಳ್ಳುವರು, ಅಗ್ನಿಮಾಂದ್ಯ, ಅಜೀರ್ಣಾದಿಗಳು ತಪ್ಪಿದ್ದಲ್ಲ. ಆಚಾರ, ವಿಚಾರಗಳಲ್ಲಿ ಯಾಂತ್ರಿಕತೆ ಕಂಡುಬರಲಿದೆ, ಮಿತ್ರರೊಂದಿಗೆ ವಿನಾಕಾರಣ ಮನಸ್ತಾಪ, ಸೋದರರ ಬೆಂಬಲದಿಂದ ಸಮಾಜದಲ್ಲಿ ಸ್ಥಾನ-ಮಾನ ಗಳಿಸುವರು. ಗಳಿಕೆ ಚೆನ್ನಾಗಿಯೇ ಇದ್ದರೂ ಆಲಸ್ಯ ಸಂಪಾದನೆಗೆ ಮಾರಕವಾಗಲಿದೆ. ರಾಜಕೀಯ ವ್ಯಕ್ತಿಗಳ ಮಧ್ಯೆ ಗುರುತಿಸಿಕೊಳ್ಳಲು ಹವಣಿಸುವರು, ಬೇರೆಯವರು ಮಾಡಿದ ಉಪಕಾರದ ಸ್ಮರಣೆಯಿರುವುದಿಲ್ಲ.


ವಿಶೇಷ ಸೂಚನೆ : ಮೇಲ್ಕಂಡ ವಿಶ್ಲೇಷಣೆ ಕೇವಲ ಗುರುಗ್ರಹಕ್ಕೆ ಮಾತ್ರ ಸಂಬಂಧಿಸಿದ್ದು, ಅವರವರ ಜಾತಕ ಹಾಗೂ ದಶಾಭುಕ್ತಿಗೆ ಅನುಗುಣವಾಗಿ ಫಲಾಫಲಗಳಲ್ಲಿ ವ್ಯತ್ಯಾಸವಾಗುವ ಸಂಭವವಿರುತ್ತದೆ, ಆದ್ದರಿಂದ ಹೆಚ್ಚಿನ ವಿಚಾರಗಳಿಗೆ ನಿಮ್ಮ ಆತ್ಮೀಯ ಜ್ಯೋತಿಷ್ಕರಲ್ಲಿ ವಿಚಾರಿಸಿ ತಿಳಿಯಿರಿ.


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
ಫೋ. : 94486 66678

error: Content is protected !!