`ಶ್ರೀ ಕ್ರೋಧಿನಾಮ ಸಂವತ್ಸರ’ ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ

`ಶ್ರೀ ಕ್ರೋಧಿನಾಮ ಸಂವತ್ಸರ’ ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ

ಸೂರ್ಯ ಸಿದ್ಧಾಂತ ರೀತ್ಯಾ ಭಗವಂತನಾದ ಚತುರ್ಮುಖ ಬ್ರಹ್ಮನ ಪರಮಾಯುಷ್ಯ 100 ವರ್ಷ. ಇದರಲ್ಲಿ ಬ್ರಹ್ಮಮಾನದಿಂದ ಈಗಿರುವ ಚತುರ್ಮುಖ ಬ್ರಹ್ಮನ ಪರಮಾಯುಷ್ಯ ಐವತ್ತು ವರ್ಷ ಕಳೆದಿದ್ದು (ಇದನ್ನು ಪ್ರಥಮ ಪರಾರ್ಧ ಎನ್ನುತ್ತಾರೆ). ಈಗ 51ನೇ ವರ್ಷ ಪ್ರಾರಂಭವಾಗಿದೆ. (ಇದನ್ನು ದ್ವಿತೀಯ ಪರಾರ್ಧ ಎನ್ನುತ್ತಾರೆ). 1ನೇ ತಿಂಗಳು, ಒಂದನೇ ದಿನ, ಸೂರ್ಯೋದಯ ನಂತರ 13 ಘಳಿಗೆ, 44 ವಿಘಳಿಗೆ ಕಳೆದು 45ನೇ ವಿಘಳಿಗೆ ನಡೆಯುತ್ತಿದೆ. ಈಗ ನಡೆಯುತ್ತಿರುವ ಏಳನೇ ವೈವಸ್ವತ ಮನ್ವಂತರದಲ್ಲಿ 28ನೇ ಕಲಿಯುಗವು ನಡೆಯುತ್ತಿದ್ದು, ಕಲಿಯುಗ ಪ್ರಮಾಣ 4,32,000 ವರ್ಷ. ಕಲಿಯುಗ ಆರಂಭವಾಗಿ 5,124, ವರ್ಷ ಕಳೆದು, 5125ನೇ ವರ್ಷದ ಶ್ರೀ ಶೋಭನ ಕೃತು ನಾಮ ಸಂವತ್ಸರ ವನ್ನು ಹೀಗೆ ವಿಶ್ಲೇಷಿಸಬಹುದು. ಶ್ರೀ ಕ್ರೋಧಿ ನಾಮ ಸಂವತ್ಸರವು, ಶ್ರೀಮನೃಪ ಶಾಲಿವಾಹನ ಶಕೆ, 1946 ನೇ ಮಂಗಳವಾರದಂದು, ರೇವತಿ ನಕ್ಷತ್ರ,  ಶುಕ್ಲನಾಮ ಯೋಗ, ಕಿಂಸ್ತುಘ್ನ ಕರಣ ಧನುರ್‌ ಲಗ್ನದಲ್ಲಿ ಪ್ರವೇಶವಾಗಲಿದೆ. ಇದಕ್ಕೆ ಅನುಗುಣವಾಗಿ ಈ ಸಂವತ್ಸರವನ್ನು ಹೀಗೆ ವಿಶ್ಲೇಷಿಸಬಹುದು.

ಧನುರ್ ಲಗ್ನ, ಕುಂಭದಲ್ಲಿ ಕುಜ, ಶನಿ, ಮೀನದಲ್ಲಿ ರವಿ, ಚಂದ್ರ, ಶುಕ್ರ, ರಾಹು, ಮೇಷದಲ್ಲಿ ಬುಧ, ಗುರು, ಕನ್ಯಾದಲ್ಲಿ ಕೇತು. ಈ ಕ್ರೋಧಿನಾಮ ಸಂವತ್ಸರದ ಫಲವನ್ನು ಹೀಗೆ ಪರಾಮರ್ಶಿಸಬಹುದು :`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavani
ಧನುರ್ಲಗ್ನದಲ್ಲಿ ಈ ಸಂವತ್ಸರದ ಪ್ರವೇಶವಾಗುವುದರಿಂದ ಹೆಸರೇ ಹೇಳುವಂತೆ ಪ್ರಜೆಗಳು ಹೆಚ್ಚು ಕಡಿಮೆ ಸದಾ ಸಿಟ್ಟಿನ ಸ್ವಭಾವದವರಾಗಿರುತ್ತಾರೆ.ಆದರೂ ಕೂಡ ಪರೋಪಕಾರಿಗಳಾಗಿರಲು ಪ್ರಯತ್ನಿಸುವರು. ರಾಜರುಗಳ ಪರಸ್ಪರ ಕಲಹ ಹಾಗೂ ಆಂತರಿಕ ತಂತ್ರ ಪ್ರತಿತಂತ್ರಗಳಿಂದಾಗಿ ಜನರು ಕಷ್ಟಪಡುವರು. ದೇಶದ ಮಧ್ಯ ಭಾಗದಲ್ಲಿರುವ ಪ್ರದೇಶಗಳಲ್ಲಿ ಅತಿವೃಷ್ಟಿಯು, ಪೂರ್ವಭಾಗದಲ್ಲಿ ಸಮೃದ್ಧಿಯಾಗಿ ಮಳೆಯಾಗಲಿದೆ. ಉಳಿದ ಕಡೆ ಸಮಾನ ಮಳೆಯಾಗಲಿದೆ. ರೈತಾಪಿ ಜನರು ಸಂತೃಪ್ತರಾಗುವರು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಇರುವ ಅಡ್ಡಿ ಆತಂಕಗಳು ದೂರವಾಗುವವು. ಅಗತ್ಯ ವಸ್ತುಗಳಾದ ಗೋಧಿ, ಸಕ್ಕರೆ, ಅಕ್ಕಿ ಹಾಗೂ ಹೆಸರು ಮೊದಲಾದ ದ್ವಿದಳ ಧಾನ್ಯಗಳ ಬೆಲೆ ಮತ್ತು ಗೃಹ ನಿರ್ಮಾಣ ಸಾಮಗ್ರಿಗಳ ವೆಚ್ಚ ಹೆಚ್ಚಾಗಲಿದೆ. ತೊಗರಿ, ಕಡಲೆ, ಎಣ್ಣೆ ಕಾಳುಗಳು ಸಮೃದ್ಧವಾಗಿ ಬೆಳೆಯುವವು. ವಂಚನೆ ಪ್ರಕರಣಗಳು ಮರುಕಳಿಸ ಲಿವೆ. ಹಸು, ಎಮ್ಮೆ ಮೊದಲಾದ ಪ್ರಾಣಿಗಳಿಗೆ ರೋಗ ಬಾಧೆ ಉಂಟಾಗಲಿದೆ.  ಭಯೋತ್ಪಾದಕರಿಂದ ತೊಂದರೆಯುಂಟಾದರೂ ರಕ್ಷಣಾಪಡೆ ಅವರನ್ನು ಹಿಮ್ಮೆಟ್ಟಿಸುವರು, ವಿದೇಶ ವಹಿವಾಟು ಉತ್ತಮವಾಗಿದ್ದು, ದೇಶದಮುಂದಾಳು ಗಳು ತೆಗೆದುಕೊಳ್ಳುವ ದಿಟ್ಟಹೆಜ್ಜೆ ಜಗತ್ತಿಗೇ ಮಾದರಿಯಾಗಲಿದೆ. ದೇಶಕ್ಕೆ ನೆರೆ ದೇಶಗಳಿಂದ ಕಿರಿಕಿರಿ ತಪ್ಪಿದ್ದಲ್ಲ, ಧಾರ್ಮಿಕ ಕಾರ್ಯಗಳು ಹೆಚ್ಚಲಿವೆ. 

ಶ್ರೀ ಕ್ರೋಧಿನಾಮ ಸಂವತ್ಸರದ ನವ ನಾಯಕರು ಮತ್ತು ಅವರ ಫಲಾಫಲ :
ರಾಜ-ಕುಜ, ಮಂತ್ರಿ-ಶನಿ, ಸೇನಾಧಿಪತಿ-ಶನಿ, ಸಸ್ಯಾಧಿಪತಿ-ಕುಜ, ಧಾನ್ಯಾಧಿಪತಿ-ಚಂದ್ರ, ಅರ್ಘಾಧಿಪತಿ-ಶನಿ, ಮೇಘಾಧಿಪತಿ-ಶನಿ, ರಸಾಧಿಪತಿ-ಗುರು,  ನೀರಸಾಧಿಪತಿ-ಕುಜ, ಪಶುನಾಯಕ-ಯಮ.

n ರಾಜ ಕುಜನ ಫಲ :
ಕ್ರೋಧಿನಾಮ ಸಂವತ್ಸರದಲ್ಲಿ ಕುಜನು ರಾಜನಾಗಿದ್ದು,  ಬೆಂಕಿಯ ಅವಘಡವು ಹೆಚ್ಚಾಗಲಿದೆ. ಗಾಳಿಯು ಹೆಚ್ಚಾಗಿ ಬೀಸಿ, ಗ್ರಾಮ, ಪಟ್ಟಣ ಹಾಗೂ ವನಗಳು ದಹಿಸ ಲಿವೆ. ರಾಜರು ಭಯದ ವಾತಾವರಣದಲ್ಲೇ ಇರುವರು. ಮೋಡಗಳು ಮಳೆಗರೆಯದೆ ಬರಡಾಗಿರುವುದು. ದವಸ ಧಾನ್ಯಗಳ ಬೆಲೆ ಹೆಚ್ಚಾಗಲಿದೆ. ಯುದ್ಧದ ಭೀತಿ ಕಂಡುಬರಲಿದೆ.

n ಮಂತ್ರಿಯಾದ ಕುಜನ ಫಲ :
ಈ ಸಂವತ್ಸರಕ್ಕೆ ಶನಿಯು ಮಂತ್ರಿಯಾಗಿದ್ದು, ಕೃಷಿ ಭೂಮಿಯಲ್ಲಿ ಬೆಳೆಗಿಂತ ಕಳೆಯೇ ಹೆಚ್ಚಾಗಲಿದೆ. ಮಳೆಯೂ ಕಡಿಮೆಯಾಗಲಿದ್ದು, ಮೋಡ ಕವಿದ ವಾತಾವರಣವಿರಲಿದೆ. ಜೊತೆಗೆ ಕಾಂತಿಹೀನವಾಗಿರುತ್ತವೆ. ಜಲಕ್ಷಾಮವುಂಟಾಗಲಿದೆ.

n ಸೇನಾಧಿಪತಿಯಾದ ಶನಿಯ ಫಲ :
ಶನಿಯು ಸೇನಾಧಿಪತಿಯಾಗಿರುವುದರಿಂದ ಮದಮಾತ್ಸರ್ಯದಿಂದ ಕೂಡಿದ ರಾಜರುಗಳು ಯುದ್ಧ ಸನ್ನದ್ಧರಾಗಿ ಸಮರಾಸಕ್ತರಾಗುವರು. ಪ್ರಜೆಗಳು ಧರ್ಮಮಾರ್ಗ ದಿಂದ ಚ್ಯುತರಾಗಿ ದುವ್ರ್ಯಸನಾಸಕ್ತರಾಗುವರು. ಅಧರ್ಮದಲ್ಲಿ ಆಸಕ್ತರಾಗುವರು.

n ಸಸ್ಯಾಧಿಪತಿಯಾದ ಕುಜನ ಫಲ :
ಕುಜನು ಸಸ್ಯಾಧಿಪತಿಯಾಗಿರುವುದರಿಂದ ತೊಗರಿ, ಕೆಂಪು ಭತ್ತ, ಕಡಲೆ ಮುಂತಾ ದವುಗಳ ಬೆಳೆ ಸಮೃದ್ಧಿಯಾಗಲಿದೆ. ಜೊತೆಗೆ ಕೆಂಪು ಮಣ್ಣಿನಲ್ಲಿ ಬೆಳೆಯಬಹುದಾದ ದವಸ-ಧಾನ್ಯಗಳು ವಿಶೇಷವಾಗಿ ಫಲಿಸಲಿವೆ. ಕೃಷಿಕರಲ್ಲಿ ಅಸಂತೃಪ್ತಿ ಕಂಡುಬರಲಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳಲಿವೆ.

n ಧಾನ್ಯಾಧಿಪತಿಯಾದ ಚಂದ್ರನ ಫಲ :
ಚಂದ್ರನು ಧಾನ್ಯಾಧಿಪತಿಯಾಗಿರುವುದರಿಂದ ಸಾಂಕ್ರಾಮಿಕ ರೋಗಗಳ ಪ್ರಭಾವ ಕಡಿಮೆ ಯಾಗಲಿದೆ. ಪ್ರಜಾ ಸಂಖ್ಯೆ ವೃದ್ಧಿಸಲಿದೆ. ಬಿಳಿ ಬಣ್ಣದ ದವಸ, ಧಾನ್ಯಗಳು ಹೇರಳವಾಗಿ ಬೆಳೆಯಲಿವೆ,  ಜೊತೆಗೆ ಹಸುಗಳು ಸಮೃದ್ಧಿಯಾಗಿ ಹಾಲು ಕೊಡಲಿವೆ. ಜನರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

n ಅರ್ಘ್ಯಾಧಿಪತಿ ಶನಿಯ ಫಲ :
ಶನಿ ಅರ್ಘಾಧಿಪತಿಯಾಗಿದ್ದು,  ಮಳೆಯು ಚೆನ್ನಾಗಿಯೇ ಸುರಿಯಲಿದೆ. ಇದರೊಂದಿಗೆ ಹಲವು ರೋಗ ರುಜಿನಗಳು ಕಂಡುಬರುವುದು. ಕಳ್ಳರ ಬಾಧೆ, ಅಗ್ನಿಭಯದ ಜೊತೆ ಕ್ಷಾಮವು ಬಾಧಿಸಲಿದೆ. ಎಳ್ಳು ಮೊದಲಾದ ಕಪ್ಪು ಧಾನ್ಯಗಳು ಹೆಚ್ಚಾಗಿ ಬೆಳೆಯಲಿದೆ.

n ಮೇಘಾಧಿಪತಿ ಶನಿಯ ಫಲ :
ಮೇಘಾಧಿಪತಿಯು ಶನಿಯಾಗಿರುವುದರಿಂದ ವಾಯುಭಾರ ಕುಸಿಯಲಿದ್ದು , ಬಿರುಗಾಳಿ ಮೊದಲಾದವುಗಳಿಂದ ಜನರಿಗೆ ಹೆಚ್ಚು ಹಾನಿ ಸಂಭವಿಸಲಿದೆ.ಪದಾರ್ಥಗಳ ಬೆಲೆ ಹೆಚ್ಚಲಿದೆ, ಬಿಟ್ಟು ಬಿಟ್ಟು ಮಳೆ ಬರುವುದರಿಂದ ರೈತಾಪಿ ಜನರಿಗೆ ತೊಂದರೆಯಾಗಲಿದೆ. ಭೌಗೋಳಿಕ ತಾಪಮಾನ ಹೆಚ್ಚಲಿದೆ.

n ರಸಾಧಿಪತಿಯಾದ ಗುರುವಿನ ಫಲ :
ಖಾದ್ಯ-ತೈಲ ಅಥವಾ ಎಣ್ಣೆ ಕಾಳುಗಳ ಉತ್ತಮ ಫಸಲು ಕಂಡುಬರಲಿದೆ. ತರಕಾರಿ, ಹಣ್ಣುಗಳ ಬೆಲೆ ಕಡಿಮೆಯಾಗಲಿದೆ. ಜನರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಜನ ನಾಯಕರು ಪ್ರಜೆಗಳ ಕಷ್ಟ-ಸುಖಗಳಿಗೆ ಸ್ಪಂದಿಸುವರು, ಧಾರ್ಮಿಕ ಕಾರ್ಯಗಳು ಹೆಚ್ಚಾಗಿ ನಡೆಯಲಿವೆ.

n ನೀರಸಾಧಿಪತಿ ಕುಜನ ಫಲ :
ಕುಜನ ನೀರಸಾಧಿಪತಿಯಾಗಿದ್ದು, ಚಂದನ, ಅಗರು, ಕಸ್ತೂರಿ, ಹವಳ, ಕೆಂಪು ಹರಳು, ಮೊದಲಾದವುಗಳು ಸರಬರಾಜು ಹೆಚ್ಚಾಗಿ ಅವುಗಳ ಬೆಲೆ ಕಡಿಮೆಯಾಗಲಿದೆ. ಆದರೆ ಬೆಲ್ಲ ಸಕ್ಕರೆ, ಜೇನುತುಪ್ಪ, ಮೊದಲಾದ ಸಿಹಿ ಪದಾರ್ಥಗಳ ಬೆಲೆಯಲ್ಲಿ ಆಧಿಕ್ಯ ಕಂಡುಬರಲಿದೆ.

n ಪಶುಪಾಲಕ ಯಮ ಫಲ :
ಯಮನು ಪಶುಪಾಲಕನಾಗಿದ್ದು, ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳವಾಗಲಿದ್ದು, ಮಳೆ ಕಡಿಮೆಯಾಗಲಿದೆ. ಪಶುಗಳಿಗೆ ಮೇವು ಕಡಿಮೆಯಾಗಿ ಹೈನುಗಾರಿಕೆ ಮಂದಗತಿಯಲ್ಲಿ ಸಾಗಲಿದೆ. ಪಶು ಪ್ರಾಣಿಗಳ ಸಂಕುಲಕ್ಕೆ ರೋಗಬಾಧೆ ಕಾಡಲಿದೆ.

2024 ಶ್ರೀ ಕ್ರೋಧಿನಾಮ ಸಂವತ್ಸರ ವರ್ಷದ ದ್ವಾದಶ ರಾಶಿಗಳ ಫಲ

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniಮೇಷ ರಾಶಿ :
ಈ ರಾಶಿಯವರಿಗೆ ಆರಂಭದಲ್ಲಿ ಗುರುವು ವ್ಯಯ ಸ್ಥಾನದಲ್ಲಿದ್ದು, ನಂತರ ದ್ವಿತೀಯ ಭಾವಕ್ಕೆ  ಬರಲಿದ್ದು, ಶುಭದಾಯಕನಾಗಿದ್ದಾನೆ. ಆದ್ದರಿಂದ ಕಳೆದ ವರ್ಷ ಇದ್ದ
ಎಲ್ಲಾ ಸಂಕಟಗಳು ದೂರವಾಗಿ, ಮೊದಮೊದಲು ಮನಸ್ಸಿಗೆ ಚಿಂತೆ, ಹಳೇ ಕಾಯಿಲೆಗಳ ಮರುಕಳಿಕೆ, ಸಂಸಾರದಲ್ಲಿ ನೆಮ್ಮದಿ ಇಲ್ಲದಿರುವಿಕೆ  ಆಗಬೇಕಾಗಿರುವ ಮಂಗಳ ಕಾರ್ಯಗಳಿಗೆ ಅಡಚಣೆ,
ಹಣಕಾಸಿನ ಸಮಸ್ಯೆ ಮೊದಲಾದ ತೊಂದರೆಗಳು ಕಂಡುಬಂದರೂ, ನಂತರ ದಿನಗಳಲ್ಲಿ ಬಿಸಿಗೆ ಮಂಜು ಕರಗುವಂತೆ ಎಲ್ಲಾ ಕಷ್ಟಗಳು ದೂರವಾಗಲಿವೆ. ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವರು. ಬಂಧು-ಮಿತ್ರ ವರ್ಗದಿಂದ ನಿರೀಕ್ಷೆಗೆ ಮೀರಿದ ಸಹಾಯ ದೊರೆಯಲಿದೆ. ನಿವೇಶನ ವಾಹನ ಮೊದಲಾದವುಗಳನ್ನು ಹೊಂದಬೇಕೆಂಬ ನಿಮ್ಮ ಕೋರಿಕೆ ಈಡೇರಲಿದೆ. ಲಾಭಾಧಿಪತಿ ಶನಿಯು ಕೃಷಿಗೆ ಸಂಬಂಧಪಟ್ಟ ಬೆಳೆಯಿಂದ ಹಿಡಿದು ಎಲ್ಲಾ ವ್ಯವಹಾರಗಳು ಲಾಭದಾಯಕವಾಗಲಿದೆ. ನ್ಯಾಯಾಲಯದ ವ್ಯಾಜ್ಯಗಳು ನಿಮ್ಮ ಪರವಾಗಿ ಮುನ್ನಡೆಯಲಿದೆ. ಸಾಮಾಜಿಕ ಗೌರವ ಸಲ್ಲಲಿದೆ. ಆದಾಯದಲ್ಲಿ ನಿರೀಕ್ಷೆಗೂ ಮೀರಿದ ಏರಿಕೆಯಾಗಲಿದೆ. ನಿಂತು ಹೋಗಿದ್ದ ಮಂಗಳ ಕಾರ್ಯಗಳು ನಿರಂತಕವಾಗಿ ನಡೆಯಲಿವೆ..

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniವೃಷಭ ರಾಶಿ :
ನಿಮ್ಮ ರಾಶಿಗೆ ಗುರುವು ಜನ್ಮಸ್ಥನಾಗಿದ್ದರೂ ಕರ್ಮಾಧಿಪತಿ ಯಾದ ಶನಿಯು ದಶಮ ಸ್ಥಾನದಲ್ಲಿರುವುದರಿಂದ ಹೆಚ್ಚಿನ ಶುಭಫಲವನ್ನು ನಿರಿಕ್ಷಿಸುವುಸುವುದು ತಪ್ಪಾದೀತು  ಅನಾ ರೋಗ್ಯ ಸಮಸ್ಯೆ, ಧನ ನಷ್ಟ, ಬಂಧುಗಳೊಂದಿಗೆ ವಿರಸ. ಮಾನಸಿಕ ಚಿಂತೆ. ಎಷ್ಟೇ ಪ್ರಯತ್ನ ಪಟ್ಟರೂ ಕಾರ್ಯಗಳಲ್ಲಿ ವಿಘ್ನ. ವಿನಾಕಾರಣ ವ್ಯಾಜ್ಯ ಅಥವಾ ಕಲಹಗಳಿಂದ ವಿವೇಕ ಶೂನ್ಯರಾಗುವಿರಿ. ಪಾಪ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯಾಪಾರ ಕಡಿಮೆಯಾಗಲಿದೆ. ಎಷ್ಟೇ ಸಂಪಾದಿಸಿದರೂ ಸಮಯದಲ್ಲಿ ಹಣವಿಲ್ಲದೇ ಸಾಲಗಾರರಾಗುವಿರಿ, ಹಾಕಿದ ಬಂಡವಾಳ ಮರಳಿ ಬರದೇ ಹೋಗಬಹುದು, ಸಾಧು ಸಜ್ಜನರೊಂದಿಗೆ ಕಲಹ, ಸೇವಕ ವರ್ಗದಿಂದ ತೊಂದರೆ ಅನುಭವಿಸುವಿರಿ, ಪರಸ್ಥಳ ವಾಸ, ಪದೇಪದೇ ಪ್ರಯಾಣ ಮತ್ತು ವಿಶೇಷವಾಗಿ ಸಹೋದ್ಯೋಗಿಗಳೇ ನಿಮ್ಮ ವಿರುದ್ಧ ಸಂಚು ನಿರೂಪಿಸುವರು, ಅನಪೇಕ್ಷಿತ ಸ್ಥಳಗಳಿಗೆ ವರ್ಗಾವಣೆ, ಗುರುವು ಶುಭ ಸ್ಥಾನದಲ್ಲಿ ಸಂಚರಿಸುವಾಗ ರಾಜಕಾರಣಿಗಳಿಗೆ ಉನ್ನತ ಸ್ಥಾನ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಿದ್ದ ಅಡಚಣೆಗಳು ದೂರವಾಗಲಿವೆ. ಅಂದುಕೊಂಡ ಕಾರ್ಯಗಳು ನೆರವೇರಲಿವೆ.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniಮಿಥುನ ರಾಶಿ :
ಈ ವರ್ಷಪೂರ್ತಿ ಈ ರಾಶಿಯವರಿಗೆ ಆರಂಭದಲ್ಲಿ ಶುಭ ಫಲದಾಯಕನಾಗಿದ್ದರೂ, ನಂತರ  ಗುರುವು ವ್ಯಯ ಸ್ಥಾನದಲ್ಲೂ, ಶನಿಯು ನವಮ ಭಾವದಲ್ಲಿ ಸಂಚರಿಸುವುದರಿಂದ ಕಷ್ಟಪಟ್ಟು ದುಡಿದ ಹಾಗೂ ಕೂಡಿಟ್ಟ ಹಣವು ನೀರಿನಂತೆ ಖರ್ಚಾಗಲಿದೆ, ನ್ಯಾಯ ಮಾರ್ಗದಲ್ಲಿ ಎಷ್ಟೇ ದುಡಿದರೂ ಅದಕ್ಕೆ ತಕ್ಕ ಫಲ ದೊರೆಯದೇ ಹೋಗಬಹುದು, ಇಷ್ಟುದಿನ ಇದ್ದ ಆತ್ಮವಿಶ್ವಾಸ ಕಡಿಮೆಯಾಗಲಿದೆ, ಅನಾರೋಗ್ಯ ಸಮಸ್ಯೆ ಮತ್ತೆ ಮತ್ತೆ ಮರುಕಳಿಸಲಿದ್ದು, ಜೀವನೋತ್ಸಾಹ ಬತ್ತಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹೂಡಿದ ಬಂಡವಾಳಕ್ಕೆ ಲಾಭ ಸಿಗುವುದು ಅನುಮಾನ, ಕುಲದೇವತಾ ದರ್ಶನ ಭಾಗ್ಯ ದೊರೆಯಲಿದೆ, ನಡೆಯಬೇಕಾಗಿರುವ ಮಂಗಳ ಕಾರ್ಯಗಳು ಹರಸಾಹಸದೊಂದಿಗೆ ನೆರವೇರಲಿವೆ, ಕುಟುಂಬದಲ್ಲಿ ಅನಾವಶ್ಯಕ ವಿರಸ ಉಂಟಾಗಲಿದೆ, ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಸಾಲಕ್ಕೆ ನೂಕಿದರೂ ಆಶ್ಚರ್ಯವಿಲ್ಲ, ಪ್ರಯಾಣ ಕಾಲದಲ್ಲಿ ಅನೇಕ ತೊಂದರೆಗಳಾಗಲಿದೆ, ಸ್ನೇಹಿತರು ಹಾಗೂ ಬಂಧು-ವರ್ಗದವರು ನಿಮ್ಮನ್ನು ಅನುಮಾನದಿಂದ ನೋಡುವರು, ಉದ್ಯಮಿಗಳು ಕಾರ್ಮಿಕರ ಪ್ರತಿರೋಧಕ್ಕೆ ಗುರಿಯಾಗುವರು. ನಂತರದಲ್ಲಿ ಹೊಸ ಯೋಜನೆಗೆ ಆರ್ಥಿಕ ನೆರವು ದೊರೆಯಲಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniಕರ್ಕಾಟಕ ರಾಶಿ :
ವರ್ಷಾರಂಭದಲ್ಲಿ ಶನಿ ಹಾಗೂ ಗುರು ಗ್ರಹಗಳು ಅಶುಭದಾಯವಾಗಿದ್ದರೂ, ನಂತರದ ದಿನಗಳಲ್ಲಿ ಗುರು ಗ್ರಹವು ಶುಭದಾಯಕವಾಗಿರುವುದರಿಂದ ತಕ್ಕಮಟ್ಟಿಗೆ ಶುಭ ಫಲವನ್ನು ನಿರೀಕ್ಷಿಸಬಹುದು, ಆದಾಯದಲ್ಲಿ ಹೆಚ್ಚಳ, ಚರಸ್ಥಿರ ಆಸ್ತಿ ಖರೀದಿ ಅಥವಾ ಹೊಸ ಮನೆ, ಹೊಸ ವಾಹನಗಳ ಯೋಗ ಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತಾಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಜೊತೆಗೆ ಹದಗೆಟ್ಟಿದ್ದ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ, ಅನಿರೀಕ್ಷಿತವಾಗಿ ಪುಣ್ಯಕ್ಷೇತ್ರಗಳ ಸಂದರ್ಶನ ಭಾಗ್ಯ ಒದಗಿಬರಲಿದೆ, ಸರ್ಕಾರಿ ನೌಕರರಿಗೆ ಅವರು ಅಪೇಕ್ಷಿಸಿದ ಸ್ಥಳಕ್ಕೆ ವರ್ಗಾವರ್ಗಿಯಾಗಲಿದೆ, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆದರೆ ಅಷ್ಟಮ ಭಾವದಲ್ಲಿ ಶನಿಯ ಸಂಚಾರ ವಿರುವುದರಿಂದ, ಕುಟುಂಬಕ್ಕೆ ಸಂಬಂಧಿಸಿದ ಕೆಲವು ವಿಚಾರ ಗಳಿಂದಾಗಿ ಮಾನಸಿಕವಾಗಿ ಕುಗ್ಗಿವಿರಿ, ಇಷ್ಟವಿಲ್ಲದಿದ್ದರೂ ಮಡದಿ ಮಕ್ಕಳಿಂದ ದೂರ ವಾಗಿ ಏಕಾಂಗಿಯಾಗಬಹುದು, ವಾಹನ ಚಾಲನೆ ಮಾಡುವಾಗ ಎಚ್ಚರ ದಿಂದಿರಿ, ಕ್ರಿಡಾಪಟುಗಳಿಗೆ ಜಯ ಸಿಗಲಿದೆ. ಆಪ್ತ ಬಂಧುಗಳೊಬ್ಬರ ಅಗಲಿಕೆ ಅನಿವಾರ್ಯವಾಗಲಿದೆ, ಸೋದರನೊಂದಿಗೆ ಭಿನ್ನಾಭಿಪ್ರಾಯ ಮೂಡಲಿದೆ. ವ್ಯವಹಾರದಲ್ಲಿ ಸಾಧಾರಣ ಪ್ರಗತಿ, ಆರೋಗ್ಯದ ವಿಷಯದಲ್ಲಿ ಅಲಕ್ಷೆ ಸಲ್ಲದು.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniಸಿಂಹ ರಾಶಿ :
ಆರಂಭದಲ್ಲಿ ಗುರುಗ್ರಹವು ಶುಭ ದಾಯನಾಗಿರುವುದರಿಂದ ಬಂಧು-ಮಿತ್ರರ ಸಹಾಯ ದೊರೆ ಯಲಿದೆ, ಮಡದಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ, ನೆಮ್ಮದಿ ಕಾಣುವಿರಿ, ಬರಬೇಕಾಗಿರುವ ಬಾಕಿ ಹಣ ಸಂದಾಯವಾಗಲಿದೆ, ವ್ಯವಹಾರದಲ್ಲಿ ಅಲ್ಪ ಪ್ರಗತಿ ಕಾಣುವುದು. ನಂತರ ಗುರುವು ಅಶುಭ ಸ್ಥಾನದಲ್ಲಿ ಕಂಡುಬರುವುದರಿಂದ, ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ, ಬಂಧುಗಳೊಂದಿಗೆ ವಿನಾಕಾರಣ ವಿರಸ, ಕೆಲಸ ಕಾರ್ಯಗಳಿಗೆ ವಿಘ್ನ, ವ್ಯರ್ಥತಿರುಗಾಟ, ಖರ್ಚು ಜೊತೆಗೆ ಶತ್ರುಗಳ ಕಾಟ ತಪ್ಪಿದ್ದಲ್ಲ, ಸರ್ಕಾರಿ ಉನ್ನತಾಧಿಕಾರಿಗಳಿಗೆ ತನಿಖಾ ತಂಡದವರಿಂದ ವಿಚಾರಣೆ ನಡೆಯಲಿದೆ, ಮತ್ತೊಬ್ಬರಿಗೆ ಕೊಟ್ಟ ಹಣ ನಿಮ್ಮ ಸಮಯಕ್ಕೆ ಬರದೇ ಹೋಗಬಹುದು. ಮಹಿಳೆಯರಾಡುವ ವ್ಯತಿರಿಕ್ತ ಮಾತುಗಳಿಂದಾಗಿ ಮನೆಯಲ್ಲಿ ಅಶಾಂತಿ ಮೂಡಲಿದೆ, ದೊಡ್ಡ-ದೊಡ್ಡ ಉದ್ಯಮಿಗಳಿಗೆ ಕಾರ್ಮಿಕ ವರ್ಗದಿಂದ ಅಸಹಕಾರ ಕಂಡುಬರುವುದು, ಹಳೆಯ ಕಾಯಿಲೆಗಳು ಮರುಕಳಿಸಿ ತೊಂದರೆಯಾಗಲಿದೆ. ಮನೆಯಲ್ಲಿ ನಿಶ್ಚಯಿಸಿದ್ದ ಮಂಗಳ ಕಾರ್ಯವು ಅನಿರೀಕ್ಷಿತ ಪ್ರಸಂಗದಿಂದಾಗಿ ಮುಂದೋಗಲಿದೆ.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniಕನ್ಯಾ ರಾಶಿ :
ಜನ್ಮಾಷ್ಠಮ ಗುರು ಆರಂಭದಲ್ಲಿ ಕೆಲವು ಅಶುಭ ಫಲ ಗಳನ್ನು ಕೊಟ್ಟರೂ, ಮುಂದೆ ಅದೇ ಗುರುವು ಭಾಗ್ಯ ಸ್ಥಾನಕ್ಕೆ ಬರುವುದರಿಂದ ಹಾಗೂ ಶನಿಯು ವರ್ಷಪೂರ್ತಿ ಶುಭದಾಯಕನಾಗಿದ್ದು, ಮಿಶ್ರ ಫಲವನ್ನು ನಿರೀಕ್ಷಿಸಬಹುದು, ನಿಮ್ಮ ಜಾಣ್ಮೆ ಹಾಗೂ ಮಾತಿನ ನೈಪುಣ್ಯದಿಂದ ಎಲ್ಲಾ ಕಾರ್ಯಗಳಲ್ಲೂ ಜಯ ಸಾಧಿಸುವಿರಿ, ವಿದ್ಯಾಭ್ಯಾಸದಲ್ಲಿ ಮಕ್ಕಳು ಯಶಸ್ಸು ಸಾಧಿಸಲಿದ್ದು,  ನಿಮ್ಮ ಸಾಮಾಜಿಕ ಗೌರವ ಹೆಚ್ಚಲಿದೆ. ವಾಹನ ವಸ್ತ್ರಾ ಭರಣಗಳ ಖರೀದಿ ಜೋರಾಗಿಯೇ ನಡೆಯಲಿದೆ. ಅವಿವಾಹಿತರಿಗೆ ಸೂಕ್ತ ಬಾಳ ಸಂಗಾತಿಯ ಯೋಗವಿದೆ. ಮನೆಯಲ್ಲಿ ಅನೇಕ ಸಂತಸದ ಸಂಗತಿಗಳು ಘಟಿಸಲಿವೆ. ನ್ಯಾಯಾಲಯದ ವ್ಯಾಜ್ಯಗಳು ಅಂತಿಮವಾಗಿ ನಿಮ್ಮ ಪರವಾಗಲಿವೆ. ರಾಜಕಾರಣಿಗಳಿಗೆ ಹೆಚ್ಚಿನ ಶ್ರಮವಾದರೂ ಅಂತಿಮ ಜಯ ಅವರದಾಗಲಿದೆ. ಸಂತಾನಾಪೇಕ್ಷಿಗಳ ಬಹುದಿನದ ಕೋರಿಕೆ ಈ ವರ್ಷ ಈಡೇರಲಿದೆ, ಹಣಕಾಸಿನ ಪರಿಸ್ಥಿತಿ ಸಾಕಷ್ಟು ಸುಧಾರಿಸಲಿದೆ. ನವದಂಪತಿಗಳು ಕೌಟುಂಬಿಕ ಭಿನ್ನಾಭಿಪ್ರಾಯವನ್ನು ತಮ್ಮ ತಮ್ಮಲ್ಲೇ ಬಗೆಹರಿಸಿಕೊಳ್ಳುವುದು ಮೇಲು. ಮತ್ತೊಬ್ಬರ ವಿಚಾರದಲ್ಲಿ ಅನಾವಶ್ಯಕ ಪ್ರವೇಶ ಮಾಡುವುದರಿಂದ ಆಪಾದನೆ ಬರಬಲಿದೆ. ಅನಾವಶ್ಯಕ ಉದ್ವೇಗ, ನರಸಂಬಂಧಿ ದೌರ್ಬಲ್ಯಗಳಿಗೆ ಕಾರಣವಾದೀತು, ಗುರುಗಳನ್ನು ಆರಾಧಿಸಿರಿ, ಗೋ ಸೇವೆ ಮಾಡಿ.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniತುಲಾ ರಾಶಿ :
ನಿಮ್ಮ ರಾಶಿಯಿಂದ ಸಪ್ತಮ ಭಾವದಲ್ಲಿ ಗುರುವು ಕೆಲ ಕಾಲ ಸಂಚರಿಸಲಿದ್ದು, ತಾತ್ಕಾಲಿಕವಾಗಿ ಕೆಲವು ಶುಭ ಫಲಗಳನ್ನು ನೀಡಲಿದ್ದಾನೆ, ಬಂಧು-ಮಿತ್ರರ ನೆರವು, ಸೇವಕ ವರ್ಗದವರಿಂದ ಸಹಕಾರ, ಸರ್ಕಾರದಿಂದಾಗಬೇಕಾಗಿರುವ ಕೆಲಸಗಳಲ್ಲಿ ಪ್ರಗತಿ, ವಸ್ತ್ರಾಭರಣಗಳ ಲಾಭ, ಕೃಷಿ ಕಾರ್ಯದಲ್ಲಿ ಸುಧಾರಣೆ, ಸಾಧು-ಸಂತರ ದರ್ಶನ ಮೊದಲಾದ ಶುಭ ಸಂಗತಿಗಳು ಘಟಿಸಿದರೂ ಮುಂದೆ ಅದೇ ಗುರುಗ್ರಹ ಅಷ್ಟಮ ಸ್ಥಾನಕ್ಕೆ ಬಂದಾಗ ಜೊತೆಗೆ ಶನೈಶ್ಚರನೂ ಕೂಡ ಐದನೇ ಮನೆಯಲ್ಲಿ ಸಂಚರಿಸುವುದರಿಂದ ಅರ್ಥವಿಲ್ಲದ ವ್ಯರ್ಥ ತಿರುಗಾಟ, ಧಾರ್ಮಿಕ ಕಾರ್ಯಗಳಲ್ಲಿ ನಿರಾಸಕ್ತಿ ಮೂಡಿ ಒಂದು ರೀತಿಯಲ್ಲಿ ನಾಸ್ತಿಕ್ಯ ಭಾವ ಮೂಡಲಿದೆ. ಕಡಿಮೆ ಆದಾಯ ಹೆಚ್ಚು ಖರ್ಚು.ನಂಬಿದಮಿತ್ರರಿಂದಲೇ ವಂಚನೆ, ಅಮೂಲ್ಯ ವಸ್ತುಗಳ ಕಣ್ಮರೆಯಾಗುವಿಕೆ. ಆಸ್ತಿ ವಿಚಾರದಲ್ಲಿ ಸೋದರ-ಸೋದರಿಯರೊಂದಿಗೆ ಮಾತಿನ ಘರ್ಷಣೆ, ಕೋರ್ಟ್, ಕಛೇರಿಗಳಿಗೆ ಅಲೆದಾಟವಾಗಲಿದೆ, ವೈಯಕ್ತಿಕವಾಗಿ ಆರಂಭಿಸಿರುವ ಯೋಜನೆಗಳಲ್ಲಿ ಸಾಕಷ್ಟು ಪ್ರಗತಿ ಕಂಡುಬರುವುದು, ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಹಣಕಾಸಿನ ಅಭಿವೃದ್ಧಿ ಕ್ರಮೇಣ ಹೆಚ್ಚಲಿದೆ, ಕ್ರೀಡಾಪಟುಗಳು ಜಯ ಸಾಧಿಸುವರು.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniವೃಶ್ಚಿಕ ರಾಶಿ :
ಈ ರಾಶಿಯವರಿಗೆ ವರ್ಷಾರಂಭದಲ್ಲಿ ಶುಭ ಫಲವೇನೂ ಕಾಣದಿದ್ದರೂ, ವರ್ಷದ ಮಧ್ಯದಲ್ಲಿ ಶುಭ ಸ್ಥಾನದಲ್ಲಿ ಸಂಚರಿ ಸಲಿರುವ ಗುರುವು ಹಲವು ರೀತಿಯಲ್ಲಿ ಧನಾಗಮನವಾಗಲಿದೆ, ಮಾತ್ರವಲ್ಲದೆ ಪಿತ್ರಾರ್ಜಿತ ಚಿನ್ನದಲ್ಲಿ ಪಾಲು ದೊರೆಯಲಿದೆ. ಹೊಸ ಯೋಜನೆಗಳಿಗೆ ಉತ್ತಮ ಚಾಲನೆ ದೊರೆಯಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಕುಟುಂಬ ಸೌಖ್ಯ ನಿಮ್ಮದಾಗಲಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಆದರೆ ಶನಿಗ್ರಹವು ಚತುರ್ಥ ಸ್ಥಾನದಲ್ಲಿ ಸಂಚರಿಸುತ್ತಿದ್ದು, ಕೆಲವು ಅನಿಷ್ಟ ಫಲಗಳನ್ನು ಕೊಡಲಿದ್ದಾನೆ, ಸರ್ಕಾರದಿಂದಾಗಬೇಕಾಗಿರುವ ಕೆಲಸಗಳು ವಿಳಂಬಗತಿಯಲ್ಲಿ ಸಾಗಲಿದೆ, ಕೊಟ್ಟ ಸಾಲ ಸಕಾಲಕ್ಕೆ ಬರದೇ ನೀವೇ ಸಾಲ ಮಾಡಬೇಕಾದ ಪ್ರಸಂಗ ಬರಬಹುದು, ಹಿರಿಯರ ವೈದ್ಯಕೀಯ ವೆಚ್ಚ ಹೆಚ್ಚಾಗಲಿದೆ. ಬಂಧುಗಳೊಂದಿಗೆ ವೃಥಾ ಮನಸ್ತಾಪವಾಗಿ ವಿಕೋಪಕ್ಕೆ ಹೋಗಲಿದೆ. ನವ ವಿವಾಹಿತರಿಗೆ ಸಂತಾನದಲ್ಲಿ ವಿಳಂಬವಾಗಲಿದೆ, ಹಣಕಾಸಿನ ಆಯವ್ಯಯಗಳಲ್ಲಿ ಅಸಮತೋಲನೆ ಕಂಡುಬರಲಿದೆ. ಉದ್ಯಮಿಗಳು ತಮ್ಮ ಕಾರ್ಮಿಕ ವರ್ಗದಿಂದಲೇ ಮೋಸ ಹೋಗುವರು, ತೀರ್ಥಯಾತ್ರೆ ಮಾಡುವ ಸದಾವಕಾಶ ಒದಗಿಬರಲಿದೆ, ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು ಬರಲಿವೆ.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniಧನು ರಾಶಿ :
ಈ ರಾಶಿಯವರಿಗೆ ಗುರು ಗ್ರಹವು ಶುಭಾ ಅಶುಭ ಸ್ಥಾನದಲ್ಲೂ, ಶನಿಗ್ರಹವು ವರ್ಷಪೂರ್ತಿ ಶುಭ ಸ್ಥಾನದಲ್ಲೂ ಸಂಚರಿಸುವುದ ರಿಂದ ಸಮ್ಮಿಶ್ರ ಫಲವೆಂದೇ ಹೇಳಬಹುದು. ಮಧ್ಯದಲ್ಲಿ ನಿಂತು ಹೋಗಿದ್ದ ಮಂಗಳ ಕಾರ್ಯಕ್ಕೆ ಮತ್ತೆ ಚಾಲನೆದೊರೆಯಲಿದೆ. ರಾಜಕಾರಣಿಗಳಿಗೆ ಪಕ್ಷದ ವರಿಷ್ಠರಿಂದ ಗೌರವ ಸಲ್ಲಲಿದೆ, ನೂತನ ವಾಹನಗಳ ಹಾಗೂ ಸ್ವರ್ಣಾಭರಣಗಳ ಖರೀದಿ ಜೋರಾಗಿಯೇ ನಡೆಯಲಿದೆ, ಮಧ್ಯದಲ್ಲಿ ಗುರುವಿನ ಅಶುಭ ಸಂಚಾರದಿಂದಾಗಿ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿದ್ದರೂ, ಮನಸ್ಸಿನ ನೆಮ್ಮದಿ ದೂರವಾಗಲಿದೆ, ಹಳೇ ಕಾಯಿಲೆಗಳು ಮರುಕಳಿಸಲಿದ್ದು, ಮತ್ತೆ ಮತ್ತೆ ವೈದ್ಯರ ಬಳಿ ಹೋಗಬೇಕಾಗಬಹುದು, ಮಕ್ಕಳೊಡನೆ ವಿನಾಕಾರಣ ವಾಗ್ವಾದವಾಗಲಿದೆ, ಆಸ್ತಿಗೆ ಸಂಬಂಧಿಸಿದ ಹಳೇ ವ್ಯಾಜ್ಯವೊಂದು ಮರುಜೀವ ಪಡೆಯಲಿದೆ. ಅನುಭವವಿಲ್ಲದ ವ್ಯವಹಾರದಲ್ಲಿ ತರುಣರು ನಷ್ಟಕ್ಕೆ ಒಳಗಾಗುವರು ದುರ್ಜನರಸಹವಾಸ ದಿಂದಾಗಿ ದುರ್ವ್ಯಸನಗಳ ದಾಸರಾಗು ವಿರಿ, ಅವಿಮರ್ಶಿತ ಕಾರ್ಯಗಳಿಂದಾಗಿ ಪಶ್ಚಾತ್ತಪ ಪಡಬೇಕಾದಿತು ಈ ಮಧ್ಯೆ ತೀರ್ಥಯಾತ್ರೆ ಮಾಡುವಿರಿ.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniಮಕರ ರಾಶಿ :
ಈ ವರ್ಷ ಮಧ್ಯದಿಂದ ಮುಂದೆ ವರ್ಷ ಪೂರ್ತಿ ಪಂಚಮ ಸ್ಥಾನದಲ್ಲಿ ಸಂಚರಿಸಲಿದ್ದು, ಸಾರ್ವಜನಿಕ ಸ್ಥಾನಮಾನ ಹೆಚ್ಚಲಿದೆ, ರಾಜಕಾರಣಿಗಳಿಗೆ ರಾಜಕೀಯ ಭವಿಷ್ಯ ಭದ್ರವಾಗಲಿದೆ, ಧರ್ಮಾಚರಣೆಯಲ್ಲಿ ವಿಶೇಷ ಆಸಕ್ತಿ ಮೂಡಲಿದೆ, ಹಿಡಿದ ಕಾರ್ಯಗಳಲ್ಲಿ ಜಯ ಸಾಧಿಸುವಿರಿ, ಮಡದಿ ಮಕ್ಕಳ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬರಲಿದೆ, ಹೊಸ ಆಸ್ತಿ ಖರೀದಿ ಮಾಡುವ ಅವಕಾಶ ದೊರೆಯಲಿದೆ, ಸಾಧು-ಸಂತರ ದರ್ಶನಾವಕಾಶವಿದ್ದರೂ, ಶನಿಗ್ರಹವು ದ್ವಿತೀಯ ಸ್ಥಾನದಲ್ಲಿ ಸಂಚರಿಸುತ್ತಿರುವಾಗ ಅಳಲನ್ನು ಅನುಭವಿಸಲೇ ಬೇಕಾಗಬಹುದು, ಹಲವು ಸನ್ನಿವೇಶಗಳಲ್ಲಿ ಅಗ್ನಿ ಪರೀಕ್ಷೆಗೆ ಒಳಗಾಗಬೇಕಾಗ ಬಹುದು, ಅಕಾರಣವಾಗಿ ಎಲ್ಲರ ವಿರೋಧ ಕಟ್ಟಿಕೊಳ್ಳಬೇಕಾಗಬಹುದು, ಸಂಪಾದನೆ ಎಷ್ಟೇ ಹೆಚ್ಚಾಗಿದ್ದರೂ ಅದನ್ನು ಅನುಭವಿಸುವ ಯೋಗ ಕಡಿಮೆ ಎಂದೇ ಹೇಳಬಹುದು. ಹಿಡಿದ ಕೆಲಸವನ್ನು ಸಾಧಿಸುವ ಛಲ ನಿಮ್ಮಲ್ಲಿ ಮೂಡಲಿದೆ, ಆದರೆ ಮತ್ತೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವೇ ತೊಂದರೆಗೆ ಸಿಲುಕಬಹುದು, ಅಮೂಲ್ಯವಾದ ವಸ್ತುವೊಂದು ಕಳೆದು ಹೋಗುವ ಸಂಭವವಿದೆ, ಪರೋಪಕಾರಕ್ಕೆ ಮನಸ್ಸು ಮಾಡುವಿರಿ, ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniಕುಂಭ ರಾಶಿ :
ಈ ರಾಶಿಯವರಿಗೆ ಗುರುವು ಚತುರ್ಥ ಸ್ಥಾನಕ್ಕೆ ಬರಲಿದ್ದು, ಜನ್ಮಸ್ಥ ಶನಿಗ್ರಹವು ಇರುವುದರಿಂದ ಒಂದು ರೀತಿಯಲ್ಲಿ ಮಿಶ್ರ ಫಲವೆಂದೇ ಹೇಳಬಹುದು, ಶತ್ರುಗಳಿಂದ ಭಯೋತ್ಪಾದನೆಯುಂಟಾಗಲಿದೆ, ಮನೆಯಲ್ಲಿದ್ದರೂ, ಬೇರೆ ಎಲ್ಲೇ ಇದ್ದರೂ ಮಾನಸಿಕ ನೆಮ್ಮದಿ ಸಿಗದು, ಚಿತ್ತ ವಿಕಾರದಿಂದಾಗಿ ಮನೋ ಭ್ರಮಣೆಗೆ ಒಳಗಾಗುವಿರಿ, ಬಂಧು ಜನರಿಂದ ವಿರೋಧ ಕಂಡುಬರಲಿದೆ, ಅಂಕೆಮೀರಿದ ಖರ್ಚು-ವೆಚ್ಚಗಳು ನಿಮ್ಮನ್ನು ಕಂಗೆಡಿಸಲಿದೆ, ಆರೋಗ್ಯ ಸಮಸ್ಯೆಯಾಗಲಿದ್ದು,  ವೈದ್ಯರ ಸಂಪರ್ಕದಲ್ಲಿರ ಬೇಕಾಗಬಹುದು, ರಾಸಾಯ ನಿಕ ವಸ್ತುಗಳಿಂದ ಅನಾಹುತವಾಗಲಿದೆ, ಈ ವಿಚಾರದಲ್ಲಿ ಉದಾಸೀನತೆ ಸಲ್ಲದು. ಆತುರದ ವಾಹನ ಚಾಲನೆ ಅಪಘಾತಕ್ಕೆ ಕಾರಣವಾಗಬಹುದು, ಆಸ್ತಿ ಸಂಬಂಧ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳು ನಿಮ್ಮ ವಿರುದ್ಧವಾಗಲಿವೆ. ಸರ್ಕಾರಿ ಉನ್ನತಾಧಿಕಾರಿಗಳಿಗೆ ಸ್ಥಾನ ಭ್ರಷ್ಟತೆ ಕಾಡಲಿದೆ, ಸಾಧ್ಯವಾದಷ್ಟು ತಾಳ್ಮೆಯಿಂದಿರುವುದು ಮೇಲು. ಆತ್ಮೀಯರ ಅಗಲಿಕೆ ಅನಿವಾರ್ಯವಾಗಲಿದೆ, ನಿತ್ಯ ವಿಷ್ಣು ಸಹಸ್ರನಾಮ ಪಠಿಸುವುದು ಉತ್ತಮ.

`ಶ್ರೀ ಕ್ರೋಧಿನಾಮ ಸಂವತ್ಸರ' ಯುಗಾದಿ ವರ್ಷ ಭವಿಷ್ಯ ದಿನಾಂಕ : 09.04.2024 ರಿಂದ 29.03.2025 ರವರೆಗೆ - Janathavaniಮೀನಾ ರಾಶಿ :
ಈ ರಾಶಿಯವರಿಗೆ ವರ್ಷಾರಂಭದಲ್ಲಿ ಉತ್ತಮ ದಿನಗಳು ಕಂಡು ಬರಲಿದ್ದು, ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಯಾಗಲಿದೆ, ವ್ಯಾಪಾರ, ವ್ಯವಹಾರಗಳಲ್ಲಿ ಮುನ್ನಡೆಯಾಗಲಿದ್ದು, ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು, ಹರಸಾಹಸ ಪಟ್ಟಾದರೂ ನಡೆಯಬೇಕಾಗಿ ರುವ ಶುಭ ಕಾರ್ಯಗಳನ್ನು ನೆರವೇರಿಸುವಿರಿ, ವ್ಯಯ ಸ್ಥಾನದಲ್ಲಿರುವ ಶನಿ ಗ್ರಹದ ಪ್ರಭಾವದಿಂದಾಗಿ ತುರ್ತಾಗಿ ಆಗಬೇಕಾಗಿರುವ ಕೆಲಸ ಕಾರ್ಯಗಳಿಗೆ ಬಂಧು ಜನರಿಂದಲೇ ವಿರೋಧ ಕಂಡುಬರಲಿದೆ, ಪದವೀಧರರಿಗೆ ನೌಕರಿ ದೊರೆಯಲು, ಇನ್ನೂ ಕೆಲ ಕಾಲ ಬೇಕಾಗಬಹುದು, ಮತ್ತೊಬ್ಬರ ಜೀವನದಲ್ಲಿ ನಿಮ್ಮ ಪ್ರವೇಶವಾಗುವುದರಿಂದ ಹತ್ತಾರು ಸಂಶಯಗಳು ಸುತ್ತಿಕೊಳ್ಳಲಿವೆ, ಮಿತಿ-ಮೀರಿದ ಅಥವಾ ಮೀರುತ್ತಿರುವ ಖರ್ಚು ವೆಚ್ಚಗಳಿಂದಾಗಿ ಉಳಿತಾಯದ ಗಂಟು ಕರಗಲಿದೆ. ರಾಜಕಾರಣಿಗಳ ಪ್ರತಿಷ್ಠಿಗೆ  ಹಾನಿಯಾಗಲಿದ್ದು, ಖಿನ್ನತೆಗೆ ಒಳಗಾಗುವರು. ಕಾಪಾಡಿಕೊಂಡು ಬಂದಿದ್ದ ಮನೆ ತನದ ಗೌರವವು ಯುವಕರ ನಡಾವಳಿಯಿಂದಾಗಿ ಮಣ್ಣು ಪಾಲಾಗದಂತೆ ನೋಡಿಕೊಳ್ಳಿ. ದಾಂಪತ್ಯದಲ್ಲಿ ಕಂಡುಬರಲಿರುವ ವಿರಸ ದೂರ ಪ್ರವಾಸಕ್ಕೆ ಕಾರಣವಾದೀತು. ಸರ್ಕಾರಿ ನೌಕರರು ಸಾಧ್ಯವಾದಷ್ಟು ಮೇಲಾಧಿಕಾರಿಗಳಿಂದ ತೊಂದರೆಯಾಗದಂತೆ ಜಾಗ್ರತರಾಗಿರುವುದು ಮೇಲು.


ವಿಶೇಷ ಸೂಚನೆ : ಮೇಲೆ ವಿಮರ್ಶಿಸಲಾದ ಎಲ್ಲಾ ದ್ವಾದಶ ರಾಶಿಗಳ ಫಲಾಫಲಗಳನ್ನು ಸರ್ವೇ ಸಾಮಾನ್ಯವಾಗಿ ವಿಮರ್ಶಿಸಲಾಗಿದ್ದು, ಅವರವರ ಜಾತಕಗಳ ಗ್ರಹಗತಿ ಹಾಗೂ
ದಶಾಭುಕ್ತಿಗಳಿಗೆ ಅನುಗುಣವಾಗಿ, ವ್ಯತ್ಯಾಸವಾಗುವ ಸಂಭವವಿರುತ್ತದೆ.


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
ಫೋ. : 94486 66678

error: Content is protected !!