ಮಂಗಳವಾರ ವಿಶ್ವ ಮಹಿಳಾ ದಿನ. ಮನೆಯಲ್ಲಿ ನೆನಪಿಸಿಕೊಂಡು ಶುಭಾಶಯ ಹೇಳುವ ಜನರಿದ್ದಾರೆ. ಆಫೀಸಿನಲ್ಲಿ ಒಂದು ಹೂ ಗುಚ್ಚ ಕೊಟ್ಟು ಊಟಕ್ಕೆ ಕರೆದೊಯ್ಯುವ ಜನರೂ ಇದ್ದಾರೆ. ಮನೆಯಲ್ಲಿ, ಆಫೀಸಿನಲ್ಲಿ ನಡೆಯುವ ಈ ಆಚರಣೆಗಳ ನಡುವೆ ನಾವು ಎಷ್ಟೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದು ಅನಿಸುವುದು ಅದೊಂದು ದಿನ ಮಾತ್ರ.
ಮಹಿಳೆ ಎಂಬ ಪದದ ಅನ್ವರ್ಥ :
ಮ – ಮನಸ್ಸೆಂಬ ಕನ್ನಡಿಯ
ಹಿ – ಹಿಂದಿರುವ
ಳೆ – ಒಂದು ಸೂಕ್ಷ್ಮ ಎಳೆ
ಅಮ್ಮ, ತಾಯಿ, ಅಕ್ಕ-ತಂಗಿ, ಹೆಂಡತಿ, ಮಗಳಾಗಿ ಮಹಿಳೆಯ ಸಾಧನೆ ದೊಡ್ಡದು. ಪೂರ್ವಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಾಳಿ ಬದುಕುತ್ತಿದ್ದ ಸ್ತ್ರೀ ಇವತ್ತು ಎಲ್ಲಾ ರಂಗಗಳಲ್ಲೂ ಕೂಡ ಅಪ್ರತಿಮ ಸಾಧನೆ ಗೈದಿದ್ದಾರೆ. ಸಾಧನೆ ಶಿಖರ ಏರುವುದರಲ್ಲಿ ಯಾವ ಮಹಿಳೆಯೂ ಹಿಂದೆ ಬಿದ್ದಿಲ್ಲ. “ತೊಟ್ಟಿಲನ್ನು ತೂಗುವ ಕೈ ದೇಶವನ್ನು ಆಳುತ್ತಿದೆ” ರಾಜಕಾರಣ, ಕ್ರೀಡೆ, ಶಿಕ್ಷಣ, ಆರ್ಥಿಕ ವ್ಯವಹಾರದಲ್ಲೂ ಪುರುಷರಷ್ಟೇ ಸರಿಸಮಾನಳಾಗಿ ತಮ್ಮದೇ ಆದ ರೀತಿಯಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಿದ್ದಾಳೆ.
ಬ್ರಿಗಾಮ್ ಯಂಗ್ ಹೇಳಿದಂತೆ….
“ಪುರುಷನೊಬ್ಬ ಕಲಿತರೆ ಆತನೊಬ್ಬ ಕಲಿತಂತೆ, ಮಹಿಳೆಯೊಬ್ಬಳು ಕಲಿತರೆ ಇಡೀ ಪೀಳಿಗೆಯೇ ಕಲಿತಂತೆ” ಒಂದು ಹೆಣ್ಣು ಹುಟ್ಟಿದಾರಭ್ಯ ತಾಯಿಯ ಬಾಹುಗಳ ಬಂಧನದಲ್ಲಿಯೇ ತನ್ನ ಜೀವನ ಕಳೆಯುತ್ತಾಳೆ. ಬೆಳೆಯುತ್ತಾ ತಾಯಿಯ ಶ್ರೀರಕ್ಷೆಯಲ್ಲಿ ಬೆಳೆಯುತ್ತಾಳೆ. ಆಕೆ ತಂದೆ-ತಾಯಿಯರ ಪಾಲನೆ-ಪೋಷಣೆಯಲ್ಲಿ ಓದನ್ನು ಮುಂದುವರೆಸುತ್ತಾಳೆ. ಆ ತಾಯಿಗೆ ಒಂಭತ್ತು ಮಕ್ಕಳಿರಲಿ, ಹನ್ನೆರಡು ಮಕ್ಕಳಿರಲಿ ಎಲ್ಲರನ್ನೂ ಪ್ರೀತಿಯಿಂದ ತೋಳ್ತೆಕ್ಕೆ ಯಲ್ಲಿ ಬದಿಗಿಟ್ಟುಕೊಳ್ಳುತ್ತಾಳೆ. ಈ ಜಗತ್ತಿನಲ್ಲಿ ತಾಯಿ ಪ್ರೀತಿಗೆ ಸರಿಸಾಟಿಯಾದದ್ದು ಯಾವುದೂ ಇಲ್ಲ. ಅದಕ್ಕೆ ಅವಳನ್ನು ತಾಯಿಯೆಂಬ ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತೇವೆ.
ನದಿ ಹರಿದು ಸಮುದ್ರ ಸೇರುವಂತೆ ಹುಟ್ಟಿದ ಮನೆಯಿಂದ ಮೆಟ್ಟಿದ ಮನೆಗೆ ಸೇರಿ ಅಲ್ಲಿನ ಕುಟುಂಬದ ವಾತಾವರಣಕ್ಕೆ ಹೊಂದಿಕೊಂಡು ಅತ್ತೆ, ಮಾವ, ಅತ್ತಿಗೆ, ನಾದಿನಿಯರ ಹಾಗೂ ಮುಖ್ಯವಾಗಿ ಪತಿಯ ಸ್ವಭಾವಕ್ಕೆ ಹೊಂದಿಕೊಂಡು ಸಂತೋಷವಾಗಿ ಬಾಳುವುದು ಕನಸಾಗಲಿ, ನನಸಾಗಲಿ ಒಟ್ಟಿನಲ್ಲಿ ಬಾಳುತ್ತಾಳೆ. “ಹೆಣ್ಣು ಬಾಳಿನ ಕಣ್ಣು”.
ಭಾರತೀಯ ಸ್ತ್ರೀಯರೆಂದರೆ ತ್ಯಾಗದ ಮೂರ್ತಿಗಳು ಮೂರ್ತಿಯಂತೆ ತಪಸ್ಯೆ. ಅವಳಿಗೆ ತನ್ನದೆಂಬ ಬೇಡಿಕೆಗಳು, ಸೇರಿಕೆಗಳೇ ಇಲ್ಲ. ಗಂಡನ, ಮಕ್ಕಳ ಸೇರಿಕೆ, ಬೇಡಿಕೆಗಳೇ ಇವಳ ಇಚ್ಚೆಗಳು. ಇವಳಿಗೆ ಅವರನ್ನು ಬಿಟ್ಟು ಬೇರೆ ಆಕಾಂಕ್ಷೆಗಳೇ ಇಲ್ಲ. ಏನು ಮಾಡಿದರೂ ಪತಿಗಾಗಿಯೇ ಮಾಡುತ್ತಾಳೆ ಅದಕ್ಕಾಗಿಯೇ ಹೆಣ್ಣು ಈಶ್ವರಿ ಸ್ವರೂಪಳೇ ಸರಿ. ಮಕ್ಕಳನ್ನು, ಪತಿಯನ್ನು, ಅವರ ಧ್ಯೇಯಗಳನ್ನು ಜೋಪಾನ ಮಾಡುತ್ತಾಳೆ, ಪೂಜಿಸುತ್ತಾಳೆ, ಸೇವೆ ಸಲ್ಲಿಸು ತ್ತಾಳೆ. ದೇವರ ಪ್ರೇಮದ ತಿರುಳನ್ನು ಯಾರಾದರೂ ಜಗತ್ತಿ ನಲ್ಲಿ ತೋರುತ್ತಿದ್ದರೆ ಆ ವ್ಯಕ್ತಿ “ತಾಯಿಯೇ” ಮತ್ತಾರಲ್ಲ…
ಹೆಣ್ಣು ಸಮಾಜದ ಕಣ್ಣು, ಹೆಣ್ಣಿಲ್ಲದೇ ಸಮಾಜವಿಲ್ಲ. ಹೆಣ್ಣಿನ ಕೊನೆಯಾದರೆ ಸಮಾಜದ ಕೊನೆಯಾದಂತೆ ಭೂಮಿಯಿಂದ ಮನುಕುಲವೇ ಅಳಿಸಿಹೋದಂತೆಯೇ ಸರಿ. ಆದರೆ ಸಮಾಜದಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತಿರುವುದಾದರೂ ಏನು? ಹೆಣ್ಣಿನ ಶೋಷಣೆ, ಹೆಣ್ಣಿನ ಮೇಲೆ ದೌರ್ಜನ್ಯ, ಇದಕ್ಕೆ ಕಾರಣವಾದರೂ ಏನು? ಪುರುಷ ಪ್ರಧಾನ ಸಮಾಜವೇ? ಹೆಣ್ಣಿನ ಶೋಷಣೆಗೆ ಹೆಣ್ಣೆ ಕಾರಣವೇ? ಪರಿಸ್ಥಿತಿಯ ಒತ್ತಡವೇ? ಹೆಣ್ಣಿನ ದೌರ್ಬಲ್ಯ ಒಂದೂ ಅರ್ಥವಾಗುವುದಿಲ್ಲ.
ಹೆಣ್ಣು ಹುಟ್ಟಿದಾಗಿನಿಂದಲೂ ಪರರ ಸ್ವತ್ತು ಎಂದು ಭಾವಿಸಿ, ಅದೇ ರೀತಿಯಲ್ಲಿ ಹೆಣ್ಣನ್ನು ಬೆಳೆಸಲಾಗುತ್ತದೆ. ಅಂದರೆ ಹುಟ್ಟಿದಾಗ ತಂದೆ-ತಾಯಿಯ ಆಶ್ರಯದಲ್ಲಿ, ಮದುವೆಯಾದ ಮೇಲೆ ಗಂಡನ ಆಶ್ರಯದಲ್ಲಿ ಮತ್ತು ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಹೀಗೆಯೇ ಹುಟ್ಟಿದಾಗಿ ನಿಂದ ಸಾಯುವವರೆಗೆ ಪರರ ಅಧೀನದಲ್ಲಿರ ಬೇಕು.
ಗ್ರಾಮೀಣ ದೇಶವಾದ ಭಾರತದಲ್ಲಿ ನೂರಕ್ಕೆ ಎಪ್ಪತ್ತೈದರಷ್ಟು ಜನ ಬೇಸಾಯದ ರೈತರ ಮನೆಯ ಹೆಂಗಸರು ಬೇಸಾಯದಲ್ಲಿ ಗಂಡಸರಿಗಿಂತ ಹೆಚ್ಚು ಭಾಗ ಕೆಲಸ ಮಾಡುತ್ತಾರೆ. ಹೆಣ್ಣು ರಕ್ಕಸಿ ಎಂದು ಕೆಲವರು ಹೇಳಿದರೆ, ಹೆಣ್ಣು ಮಮತೆಯ ಸಹೃದಯದ ಕರುಣಾ ಮಯಿ ಎನ್ನುವವರು ಇದ್ದಾರೆ. ಹೆಣ್ಣೆಂದರೆ ಭೂಮಿಯಲ್ಲಿ ಸ್ವರ್ಗ ಎನ್ನುವುದೂ ಇದೆ. ನಮ್ಮ ಕವಿಗಳಾದ ಜಿ. ಎಸ್. ಶಿವರುದ್ರಪ್ಪನವರು ಸ್ತ್ರೀಯನ್ನು ಹೀಗೆ ವರ್ಣಿಸಿದ್ದಾರೆ.
ಆಕಾಶದ ನೀಲಿಯಲ್ಲಿ
ಚಂದ್ರತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ,
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೇ ಅಷ್ಟೇ ಸಾಕೆ….?
– ರೇಣುಕಾ ಬಿ.ಆರ್., ಮನೋಶಾಸ್ತ್ರಜ್ಞೆ, ನಾಗೇನಹಳ್ಳಿ, ಹರಿಹರ (ತಾ), [email protected]