ಮೊನ್ನೆ ಸಹೋದರನ ಹೊಲದಲ್ಲಿ ರಾಗಿ ಬಿತ್ತುತ್ತಿರುವ ಚಿತ್ರವನ್ನು ವಾಟ್ಸಾಪ್‌ನಲ್ಲಿ ನೋಡಿದೆ. ಬಿತ್ತುವ ಮೊದಲು ಅಣಿಯಾಗಿದ್ದ ಹೊಲದ ಚಿತ್ರವೊಂದಿತ್ತು. ಕಪ್ಪುಮಣ್ಣಿನ ಮೇಲೆ ಬೆಳಗಿನ ಸೂರ್ಯ ರಶ್ಮಿಗಳ ಸಿಂಚನ. ನಾಲ್ಕದದ ಮಳೆಗೆ ಸಮತಟ್ಟಾದ ಕಪ್ಪು ಹೊಲದ ಸುತ್ತಲೂ ಎದ್ದು ಕುಣಿಯುತಿದ್ದ ಹಸಿರು ಎಲೆಗಳ ಮೇಲೆ ಮಿಂಚುತ್ತಿದ್ದ ಇಬ್ಬನಿಯ ಆನಂದ ಬಾಷ್ಪ..! ಮೂಕವಿಸ್ಮಿತಳಾದೆ. ಮನಸೇಕೋ ಮಣ್ಣಿಗೆ ಅಂಟಿಕೊಂಡಿರುವಂತೆ ಭಾಸ… ಈಗ್ಗೆ ಐದಾರು ತಿಂಗಳ ಹಿಂದೆ ಅದೇ ಮಣ್ಣು ಮಳೆಯ ಒಡನಾಟ ಇಲ್ಲದೆ ಜೀವ ಹೀನವಾಗಿ ಚೈತನ್ಯ ಹೀನವಾಗಿ ಮಲಗಿತ್ತು. ನಾಲ್ಕು ಹದದ ಮಳೆಗೆ ಅದರ ಬಣ್ಣವೇನು? ಅದರ ನಗೆಯೇನು? ಒಲುಮೆಯೇನು? ಬಿನ್ನಾಣವೇನು? ಕಾತರವೇನು? ಇದು ಯಾರ ಯಾರ ನಡುವಿನ ಪ್ರೇಮವೆಂದು ತಿಳಿಯುವ ಕುತೂಹಲವಾಯಿತು. ನೀರನ್ನು ಗಂಗೆ ಎಂದರೂ ಮಳೆಯನ್ನು ಆ ಕಾಲದಿಂದಲೂ ಮಳೆರಾಯ ಎನ್ನುತ್ತಾ ಪುರುಷನನ್ನಾಗಿ ಮಾಡಿಕೊಂಡು ಬಂದಿದ್ದೇವೆ. ಮಣ್ಣೆಂದರೆ ಧರಿತ್ರಿಯೇ ತಾನೇ? ಹಾಗಾದರೆ ಮಳೆ ಮತ್ತು ಮಣ್ಣಿನ ಸಂಗಮದ ಸೌಂದರ್ಯವೇ ಇದಾಗಿರಬೇಕು.
ಮಣ್ಣಿಂದಲೇ ಸಕಲವನ್ನೂ ಪಡೆದು ಸಿರಿವಂತರಾಗಿರುವ ನಾವು ಮಣ್ಣನ್ನು ಅಸಡ್ಡೆಯಾಗಿ ಕಾಣುವುದಕ್ಕೆ ಒಂದೆರಡುಮಾತುಗಳು ನೆನಪಾಗುತ್ತಿವೆ … ಸಕಾಲಕ್ಕೆ ಉಪಾಯ ಯೋಚಿಸದವನನ್ನು ಕುರಿತು’ ನಿನ್ನ ಬುದ್ಧಿ ಏನು ಮಣ್ ತಿಂತಿತ್ತ ‘, ನಿನ್ ತಲೆಯಲ್ಲಿ ಏನು ಮಣ್ಣು ತುಂಬಿಕೊಂಡಿದ್ಯಾ? ಅಲ್ಲೇನ್ ಸಿಗುತ್ತೆ ನಿಮಗೆ ಬರೀ ಮಣ್ಣು, ಎಲ್ಲಾ ಮುಗ್ದೋಯ್ತು ಮಣ್ಣು ತಿನ್ನು… ಹೀಗೆ ಆಡುಭಾಷೆಯಲ್ಲಿ ವಾಕ್ಯಗಳ ಒಳಾರ್ಥಗಳಲ್ಲಿ ಗೌಪ್ಯವಾಗಿ ಮಣ್ಣಿನ ಮಹತ್ವ ಇರುವುದು ನನ್ನ ಜ್ಞಾನಕ್ಕೆ ತೋರುತ್ತಿಲ್ಲ. ಆದರೆ ತೋರಿಕೆಗೆ ಮಣ್ಣಿನ ಬಗೆಗಿನ ಉಡಾಫೆ ಮಾತ್ರ ಈ ವಾಕ್ಯಗಳಲ್ಲಿ ಕಾಣುತ್ತಿದೆ ನನಗೆ.
ಅಪರೂಪಕ್ಕೆ ಸ್ನೇಹಿತರೊಬ್ಬರು ನಮಗೆ ಸಿಕ್ಕಿ ಮತ್ತೆ ಏನು ವಿಶೇಷ ಆಸ್ತಿಪಾಸ್ತಿ ಕಥೆ ಏನು ಎಂದು ಕೇಳಿದಾಗ, ಮೊನ್ನೆ 40 ಲಕ್ಷ ಕೊಟ್ಟು ಹಾಸನದಲ್ಲಿ 30×40 ಅಳತೆಯ ಮಣ್ಣು ತಗೊಂಡೆ ಅಂತ ನಾವೇನಾದರೂ ಅವರಿಗೆ ಹೇಳಿಬಿಟ್ಟರೆ ಅವರು ನಮ್ಮನ್ನು ಹುಚ್ಚರೆಂದು ಭಾವಿಸಿದರೆ ಅತಿಶಯೋಕ್ತಿ ಇಲ್ಲ! ಎರಡು ಕೋಟಿ ಕೊಟ್ಟು ಹತ್ತು ಎಕರೆ ಮಣ್ಣು ತಗೊಂಡೆ ಅಂತ ಹೇಳಿದ್ರೆ! ಮುಗಿದೇ ಹೋಯಿತು.. ಹೊಟ್ಟೆ ಹಿಡ್ಕೊಂಡು ನಕ್ಕುಬಿಟ್ಟಾರು..ಹಾಗಾದರೆ ಸೈಟು ಮತ್ತು ತೋಟದಲ್ಲಿ ಇರುವುದೇನು? ಮಣ್ಣಲ್ಲವೇ…?
ನಮ್ಮ ಪರಿಭಾಷೆಯಲ್ಲಿ ಮಣ್ಣು ಎಂದರೆ ಬೆಲೆ ಇಲ್ಲ. ಆದರೆ ತೋಟ, ಸೈಟು ಅಂದರೆ ಗೌರವ. ಹಾಸನದಲ್ಲಿ ಸೈಟು ತಗೊಂಡೆಯಾ !!ಕೋಟಿ ಕೊಟ್ಟು ತೋಟ ಕೊಂಡೆಯಾ!! ಎಂದು ರಾಜಮರ್ಯಾದೆ ನೀಡಿಬಿಟ್ಟಾರು. ಆದರೆ ಮಣ್ಣೆಂದರೆ ಮಾತ್ರ ಈ ನಿರ್ಭಾವ… ಗೌರವದ ಅಭಾವ..
ಗುಡ್ಡ ಅಗೆದರೂ ಮಣ್ಣು, ಬೆಟ್ಟ ಬಗೆದರೂ ಮಣ್ಣೇ… ಸಮುದ್ರ, ನದಿ, ಹೊಳೆ, ತೊರೆ ಮಣ್ಣಿನ ಬಟ್ಟಲೊಳಗಾದರೆ, ಕಾಡುಗಳು ಮಣ್ಣಿನ ತೊಟ್ಟಿಲೊಳಗೆ… ಪರ್ವತಗಳು ಮಣ್ಣಿನ ಮೆಟ್ಟಿಲ ಮೇಲಾದರೆ ಗಣಿಗಳು ಮಣ್ಣಿನ ಮೊಟ್ಟೆಯೊಳಗೆ.. ಬಗೆದರೂ, ಅಗೆದರೂ, ಕೊರೆದರೂ ಏನು ಮಾಡಿಯಾದರೂ ಮಣ್ಣಿನಿಂದಲೇ ಪಡೆಯಬೇಕು.
ನಮಗೊಬ್ಬರು ಮೇಷ್ಟ್ರಿದ್ದರು ಆಗೆಲ್ಲ ತರಗತಿಗೆ ಹದಿನೈದು-ಇಪ್ಪತ್ತು ಮಕ್ಕಳಲ್ಲ. ಸರ್ಕಾರಿ ಶಾಲೆ ಎಂದರೆ ಕೋಣೆಗೆ ಅರವತ್ತು ಎಪ್ಪತ್ತು ಸಂಖ್ಯೆಯಲ್ಲಿ ಇರುತ್ತಿದ್ದೆವು. ಬೋರ್ಡಿಗೂ ನಮಗೂ ಎರಡು ಅಡಿ ಅಂತರ ಇದ್ದರೆ ಹೆಚ್ಚು. ನಮ್ಮ ಮೇಷ್ಟ್ರು ಕನ್ನಡ ಪುಸ್ತಕ ಹಿಡಿದು ನಮ್ಮ ಮುಂದೆ ನಿಂತು ಪಾಠ ವಿವರಣೆ ನೀಡುತ್ತಿದ್ದರೆ ನಮ್ಮ ಪುಸ್ತಕಗಳ ಮೇಲೆ ಎಂಜಲಿನ ತುಂತುರು ಮಳೆಯಾಗುತಿತ್ತು ಅವರ ಬಾಯಿಂದ. ಪುಸ್ತಕ ಕಾಪಾಡಲು ತಲೆಯನ್ನೋ ಕೈಯನ್ನೋ ಅಡ್ಡ ಇಟ್ಟುಕೊಂಡರೆ ತಲೆಸ್ನಾನ!” ಯಾವುದೋ ಪುಸ್ತಕದ ಹಳೆಯ ಚೂರು ತೆಗೆದು ಎಂಜಲು ಒರೆಸುವುದೇ ಆಟ.. ಕೆಲವೊಮ್ಮೆ ಹನಿಗಳ ಎಣಿಕೆ! ಪಾಠದ ಹಂಗಿಲ್ಲ.. ಆದರೆ ಅಸಾಧ್ಯ ಕೋಪದ ಜೊತೆಗೆ ಅಸಹನೀಯ ಭಾವ… ಯಾರಾದರೂ ಕೆಮ್ಮುವಾಗ ಆಗಲಿ ಸೀನುವಾಗ, ಮಾತಾಡು ವಾಗಾಗಲಿ ಎದುರಿಗಿದ್ದವರ ಮೇಲೆ ಒಂದು ಹನಿ ಎಂಜಲು ತಾಗಿದರೆ ಅದೆಷ್ಟು ಇರುಸು-ಮುರುಸು… ಸ್ನಾನ ಮಾಡಿಕೊಂಡು ಬಿಡಬೇಕು ಎನಿಸುವುದು… ಹೀಗೆ ಅಸಹ್ಯ ಪಡುವ ಸಕಲ ಜೀವ ಸಂಕುಲದ ಛೀ.. ಥೂ ಎಲ್ಲಾ ಯಾರ ಮಡಿಲಿಗೆ? ಪ್ರತಿಕ್ಷಣ ತಣ್ಣಗೆ ಮಣ್ಣಿನ ಮಡಿಲು ಸೇರುವ ಅಸಹ್ಯದ ವಿಸರ್ಜನೆ (ಹೊಲಸು )- ಮಣ್ಣಿನ ಮೌನ ನಮ್ಮನ್ನು ಎಂದಾದರೂ ಕಾಡಿದ್ದು ಇದೆಯೇ?
ಮಣ್ಣಿನ ಸದ್ಗುಣ ನಿರ್ಗುಣಗಳೆಲ್ಲವೂ ವೈವಿಧ್ಯಮಯ ಪ್ರಪಂಚಕ್ಕೆ ಕಾರಣವೇ. ಊರಿಗೆ ಒಂದೊಂದು ಬಗೆಯ ಮಣ್ಣು-ಮಣ್ಣಿಗೆ ಒಂದೊಂದು ಬಗೆಯ ಬಣ್ಣ.. ಆ ಬಣ್ಣದಿಂದ ಊರಿಗೆ ಬೆರಗು. ಕಪ್ಪಗಿದ್ದರೆ ಕಬ್ಬು, ತಂಬಾಕು, ಗೋದಿ, ಅಡಿಕೆ, ತೆಂಗು, ಸಿರಿಧಾನ್ಯ, ಎಣ್ಣೆ ಬೀಜಗಳನ್ನು ಬೆಳೆದರೆ ಭಾರತದ ಕೇವಲ 1.6 ರಷ್ಟು ಇರುವ ಕೆಂಪು ಮಣ್ಣು ಶುಂಠಿ, ಆಲೂಗೆಡ್ಡೆ ಇನ್ನಿತರ ಬೆಳೆಗಳನ್ನು ಪೋಷಿಸುತ್ತದೆ. ಮಣ್ಣಿನ ಬಣ್ಣದ ಬಗ್ಗೆ ಹೇಳುವಷ್ಟು ಸಂಪತ್ತು ಜ್ಞಾನ ನನಗೆಲ್ಲಿ? ಏನು ಗುಣವಿಲ್ಲದ ಅಥವಾ ಕ್ಷಾರಗುಣ ಹೆಚ್ಚಿರುವ ಮಣ್ಣನ್ನು ಅಜ್ಜಿ ಚೌಳು ಅನ್ನುತ್ತಿದ್ದ ನೆನಪು. ತಲೆ ತೊಳೆಯಲು ಚೌಳು ಬಳಸುತ್ತಿದ್ದರು ಎಂದು ಹೇಳಿದ ನೆನಪು. ಪಟಕ (ಸ್ಪಟಿಕ?? ) ಎಂಬ ಹಳದಿ ಬಣ್ಣದ ಮಣ್ಣನ್ನು ತೆಂಗಿನ ನಾರಿನಿಂದ ಜುಂಗು ಮಾಡಿಕೊಂಡು ಪಾತ್ರೆ ಬೆಳಗಿ ಪಾತ್ರೆಗಳನ್ನು ಫಳಫಳ ಮಾಡುತ್ತಿದ್ದ ಬಾಲ್ಯದ ನೆನಪು ಹಸಿರಾಗಿದೆ… ಇದು ರಾಸಾಯನಿಕ ರಹಿತ ನಿರುಪದ್ರವಿ ಮಣ್ಣು ಎಂಬುದನ್ನು ನೆನಪಿಡಬೇಕು.
ಮಕ್ಕಳನ್ನು ಮಣ್ಣಿನಲ್ಲಿ ಆಡಲು ಬಿಟ್ಟರೆ ಯಾವ ಸಾವಿರಾರು ರೂಪಾಯಿಯ ರಿಮೋಟ್ ಕಾರು ಪ್ಲಾಸ್ಟಿಕ್ ಸಾಮಾನುಗಳ ಹಂಗಿಲ್ಲದ ಸ್ವರ್ಗ ಅವಕ್ಕೆ! ಯಾವ ಕೃತಕ ಆಟದ ಸಾಮಾನುಗಳೂ ನೀಡದ, ನೀಡಲು ಸಾಧ್ಯವೇ ಇಲ್ಲದ ಅದಮ್ಯ ಸಂತೋಷ ಬಾಲ್ಯದ ಅಕೌಂಟಿಗೆ ಜಮೆ ಆದಂತೆ… ಅಲ್ಲದೇ ನಿರುಪದ್ರವಿ ಆಟಿಕೆ! ಮದುವೆ ಮನೆಗಳಲ್ಲಿ ಶಾಸ್ತ್ರಕ್ಕೆಂದು ತಂದು ಉಳಿದ ಮಡಿಕೆಗಳು ನಮ್ಮ ಅಂದಿನ ಅಡುಗೆಯ ಆಟದ ಸಾಮಾನುಗಳು. ಇದೇ ಮಣ್ಣಿನ ಮಡಿಕೆಗಳು ಅಡುಗೆ ಮನೆಯ ಒಡತಿಯರು ಅವರಿಲ್ಲದೆ ಅಡುಗೆಯೇ ಇಲ್ಲ… ಬದುಕೂ ಇಲ್ಲ.
ಗುಡ್ಡ ಅಗೆದರೂ ಮಣ್ಣು, ಬೆಟ್ಟ ಬಗೆದರೂ ಮಣ್ಣೇ… ಸಮುದ್ರ, ನದಿ, ಹೊಳೆ, ತೊರೆ ಮಣ್ಣಿನ ಬಟ್ಟಲೊಳಗಾದರೆ, ಕಾಡುಗಳು ಮಣ್ಣಿನ ತೊಟ್ಟಿಲೊಳಗೆ… ಪರ್ವತಗಳು ಮಣ್ಣಿನ ಮೆಟ್ಟಿಲ ಮೇಲಾದರೆ ಗಣಿಗಳು ಮಣ್ಣಿನ ಮೊಟ್ಟೆಯೊಳಗೆ.. ಬಗೆದರೂ, ಅಗೆದರೂ, ಕೊರೆದರೂ ಏನು ಮಾಡಿಯಾದರೂ ಮಣ್ಣಿನಿಂದಲೇ ಪಡೆಯಬೇಕು.
ಮಳೆ ಬಂದು ಹೊಸ್ತಿಲಲ್ಲಿ ಒಂದಿಷ್ಟು ಕೆಸರಾಗಿದ್ದರೆ ಸಿಡಿಸಿಡಿ, ಚಪ್ಪಲಿಗೋ ಅಥವಾ ದೊಡ್ಡಬೆಲೆಯ ಶೂ ಗೋ ಒಂದಿಷ್ಟು ಮಣ್ಣು ಅಂಟಿದ್ದರೆ ಕಿಡಿ ಕಿಡಿ, ಮಗುವಿನ ಕೈ ಮಣ್ಣಾಗಿದ್ದರೆ ಚಡಪಡಿಕೆ (ಇದು ಹೈಜೀನ್ ಪ್ರಪಂಚ ) ತುಂತುರು ಮಳೆಯಲ್ಲಿ ನಡೆದು ಬರಲು ಉಟ್ಟ ರೇಷ್ಮೆ ಸೀರೆಗೆ ಮಣ್ಣು ಸಿಡಿದಿದ್ದರೆ ಮಣ್ಣಿಗೆ “ಥೂ” ಕೊಡುಗೆ. ಹಸಿರು, ಉಸಿರು ಹೊರುವ ಮಣ್ಣನ್ನು ಮುಚ್ಚಿ ಸಿಮೆಂಟಿನ ಗಾರೆ ಎಳೆದರೆ ಪರಮಾನಂದ..ಅದೇನೋ ಸಮಾಧಾನದ ನಿಟ್ಟುಸಿರು… !!
ಮಣ್ಣನ್ನು ಮಣ್ಣಾಗಿಯೇ ಪ್ರೀತಿಸುವ ಆರ್ಧ್ರತೆ ನಮ್ಮ ಹೃದಯಗಳಿಗೆ ಇಲ್ಲವಾಗಿದೆ. ಮಣ್ಣನ್ನು ಕೆಸರಾಗಿ, ಧೂಳಾಗಿ, ಕಸವಾಗಿ ಕಂಡು ತುಚ್ಛ ಭಾವ ಭಾವಿಸುವ ನಾವು ಮಣ್ಣಿಂದ ಮರ, ಮರದಿಂದ ಉಸಿರು, ಮಣ್ಣಿಂದ ಅನ್ನ, ಮಣ್ಣಿಂದ ಚಿನ್ನ, ಮಣ್ಣಿಂದ ಹಣ್ಣು, ಮಣ್ಣಿಂದಲೇ ಬಣ್ಣ-ಬದುಕು ಎಲ್ಲವನ್ನೂ ಪಡೆಯುತ್ತೇವೆ.. ಆದರೆ ಅದನ್ನು ಅದರ ಸರ್ವ ರೂಪದಲ್ಲಿಯೂ ಪ್ರೀತಿಸುವುದನ್ನು ಮಾತ್ರ ಕಲಿಯಲಿಲ್ಲ. ಮಣ್ಣನ್ನು ಕೇವಲ ಹೊಲ, ಗದ್ದೆ, ತೋಟ, ಹೋಂಸ್ಟೇ, ರೆಸ್ಟೋರೆಂಟ್, ಎಸ್ಟೇಟ್ ಗಳ ರೂಪದಲ್ಲಿ ಪ್ರೀತಿಸುವ, ಆರಾಧಿಸುವ, ಬೀಗುವ, ಮೆರೆಯುವ, ಆಳುವ ನಾವು ಪ್ರತಿಕ್ಷಣ ಅದನ್ನು ತುಳಿಯುವಾಗ, ಉಗಿಯುವಾಗ, ಅಗೆಯುವಾಗ, ಹೊಲಸು ಎಸೆಯುವಾಗ ಕ್ಷಮೆ ಕೇಳುತ್ತಾ, ಅದರ ಧಾರಣಶಕ್ತಿಯನ್ನು ಹೊಗಳುತ್ತಾ, ಸಹನಾಶಕ್ತಿಗೆ ನಮಿಸುವುದೇ ಕರ್ತವ್ಯ ಅನಿಸುತ್ತದೆ.
ಅಷ್ಟಿಲ್ಲದೇ ನಮ್ಮ ಹಿರಿಯರು “ಬೆಳಗಾನ ಎದ್ದು ಯಾರ್ಯಾರ ನೆನೆಯಾಲಿ..ಎಳ್ಳು ಜೀರಿಗೆ ಬೆಳೆಯೋಳ.. “ಹಾಡು ಕಟ್ಟಿದ್ದಾರೆಯೇ. ಹೀಗೆಲ್ಲ ಮಣ್ಣನ್ನು ಪ್ರೀತಿಸುವಾಗ ಮಳೆ ಮತ್ತು ಮಣ್ಣಿನ ಸಂಗಮಕ್ಕೆ ತಡೆಯಾಗಿ ಇರುವವರು, ಈ ಸೃಷ್ಟಿ ಪ್ರೇಮದ ಅನುಬಂಧಕ್ಕೆ ದೊಡ್ಡ ವಿಲನ್ ಯಾರೆಂದು ತಿಳಿಯದೆ ಇರುತ್ತದೆಯೇ..? ಅದುವೇ “ಪ್ಲಾಸ್ಟಿಕ್ “!!! ಮಣ್ಣನ್ನು ಪ್ರೀತಿಸುವ ಯಾವುದೇ ಜೀವ ಮನೆಗೆ one time use ಪ್ಲಾಸ್ಟಿಕ್ ತರುವಾಗ ವಿಲವಿಲನೆ ಒದ್ದಾಡಿ ಹೋಗುತ್ತದೆ. ಅಂಗಡಿಯಲ್ಲಿ ಪ್ಲಾಸ್ಟಿಕ್ ಒಳಗೆ ಅವಿತಿರುವ ಯಾವುದೇ ತಿನಿಸು ಅರುಚಿ ಎನಿಸಲಾರಂಭಿಸುತ್ತದೆ. ಮನೆಯಿಂದ ಹೋಗುವಾಗಲೆಲ್ಲ ನೆನಪಾಗಿ ಚೀಲ ಹಿಡಿದು ಹೋಗಬೇಕೆನಿಸುತ್ತದೆ. ಮನೆಯಿಂದಲೇ ನೀರಿನ ಬಾಟಲಿ ಒಯ್ಯುವ ಎಚ್ಚರಿಕೆ ಗಂಟೆ ಬಾರಿಸುತ್ತದೆ. ಹುಟ್ಟಿನಿಂದ ಚಟ್ಟ ಏರುವವರೆಗೂ ನಾವು ಪ್ರತಿ ಕ್ಷಣಕ್ಕೂ ಮಣ್ಣಿಗೆ ಋಣಿಗಳೇ..
ಮಣ್ಣು-ಮಳೆಯ ಋಣದಲ್ಲಿಯೇ ಬದುಕುತ್ತಿರುವ ನಾವು ಅವುಗಳ ಸಂಗಮದ ಸೌಂದರ್ಯವನ್ನು, ಸೌಂದರ್ಯದ ಅನಿವಾರ್ಯ ಅಸ್ಥಿತ್ವವನ್ನು ಗೌರವಿಸಿ ಬದುಕಬೇಕಿದೆ.. ನಮ್ಮನಲ್ಲದೆ ಮತ್ತಾವ ಜೀವಿಗಳೂ ಅವುಗಳ ಪ್ರಣಯಭಂಗ ಮಾಡುವುದಿಲ್ಲ ಎಂಬುದು ನಮ್ಮ ಪ್ರಜ್ಞೆಯಲ್ಲಿರಬೇಕು.
ಈ ಕ್ಷಣಕ್ಕೆ ಮನೆಯೊಳಗಿರುವ ಧೂಳು, ಶೂ ಅಡಿ ಅಂಟಿರುವ ಮಣ್ಣು, ರೇಷ್ಮೆ ಸೀರೆಗೆ ಸಿಡಿದಿರುವ ಕೆಸರು ಇದೆಲ್ಲಾ ಹಣೆಗೆ ಹಚ್ಚುವ ವಿಭೂತಿಗಿಂತಲೂ ಹೆಚ್ಚು ಪೂಜನೀಯವಾಗಿ ಕಾಣುತ್ತಿದೆ.. ಆಚೆಯೆಲ್ಲೋ ಮೆಲ್ಲಗೆ ಹನಿಯಾಡುತಿರಲು ಮಣ್ಣು ಮಳೆಯ ಸಂಗಮದ ಹಾಡು ಕೇಳುತಿದೆ.
ಮಳೆಗೂ ಮಣ್ಣಿಗೂ ನಂಟಿದೆ…
ಮನಸೇಕೋ ಮಣ್ಣಿಗೆ ಅಂಟಿದೆ…
ಮಮತಾ ಪ್ರಭು, ಹಾಸನ.
[email protected]