ಸಂತೆಬೆನ್ನೂರು ಸುತ್ತಮುತ್ತ ಈ ವರ್ಷ ಎರಡನೇ ಬೆಳೆ ಅಲಸಂದಿ ಬಂಪರ್ ಬೆಳೆ ನಿರೀಕ್ಷೆ

ಆಗಿನ್ನೂ ಅಡಿಕೆ ಬೆಳೆಯ ಸೆಳೆತ ನಮ್ಮ ರೈತರಿಗೆ ಇರಲಿಲ್ಲ. ಬೋರ್ ಹೊಂದಿದ್ದರೂ ಸಹ ಮೊದಮೊದಲು ಸಂತೆಬೆನ್ನೂರು, ಚಿಕ್ಕಜಾಜೂರು, ಹೊಳಲ್ಕೆರೆ, ಮಾಯಕೊಂಡ, ಆನಗೋಡು, ಭರಮಸಾಗರದ ಸುತ್ತ-ಮುತ್ತಲಲ್ಲಿ ಯಥೇಚ್ಛವಾಗಿ ಕಲ್ಲಂಗಡಿ ಬೆಳೆ (ನಾಮ್ದಾರಿ ಸೀಡ್ಸ್) ಬೆಳೆಯುತ್ತಿದ್ದರು. ಕೇವಲ 50-60 ದಿನಕ್ಕೆ ನಾಮ್ದಾರಿ ಕಲ್ಲಂಗಡಿ ಬರುವ ಕಾರಣ ಮಳೆಗಾಲ ಪ್ರಾರಂಭವಾಗುವ ಮೊದಲೇ ಒಳ್ಳೆಯ ಧಾರಣೆಗೆ ಬೇರೆ ಬೇರೆ ರಾಜ್ಯಗಳಿಗೆ ರವಾನಿಸಿ, ಮಾರಾಟ ಮಾಡಿ ಮುಂದಿನ ಮಳೆಗಾಲದ ಬೆಳೆಗೆ ಬಂಡವಾಳ ಕ್ರೋಡೀಕರಿಸಿಟ್ಟುಕೊಳ್ಳುತ್ತಿದ್ದರು. ಇತ್ತೀಚಿಗೆ ಬೋರ್ ನೀರು ಬಿದ್ದ ಮಾರನೇ ದಿನವೇ ಅಡಿಕೆ ಕಟ್ಟುವ ಕಾರ್ಯಕ್ಕೆ ಮುಹೂರ್ತ ನಿಗದಿ ಮಾಡಿ ಅಡಿಕೆ ಕಟ್ಟಿ ನೀರು ಬಿಡುವ ಹೊಸ ಸಂಪ್ರದಾಯ ಶಾಶ್ವತವಾಗಿ ಪ್ರಾರಂಭಗೊಂಡ ಕಾರಣ ರೈತರ  ಹಣದ ಸೊಂಟದ ಚೀಲಕ್ಕೆ ಬರೆ ಎಳೆದಂತಾಗಿದ್ದು ಸತ್ಯ. ಕಲ್ಲಂಗಡಿ, ಎಳ್ಳು, ಹೆಸರು, ಉದ್ದು ಇನ್ನಿತರೆ ಮುಂಗಾರು ಬೆಳೆಗಳಿಂದ ವಿಮುಖನಾದ ರೈತ ಅದರಂತೆ ಮುಂಗಾರೂ ಸಹ ಬಹಳ ವರ್ಷಗಳಿಂದ ಬಾರದೇ ಮರೆತು ಹೋದಂದಂತಾಗಿದ್ದೂ ಸತ್ಯ. ಮಧ್ಯಮ ಬೆಳೆಗಳಾದ ಹತ್ತಿ, ಜೋಳ, ಮೆಕ್ಕೇ ಜೋಳ ಬೆಳೆ ತೆಗೆದು ಪುನಃ ಹಿಂಗಾರು ಬಂತೆಂದರೆ ಬಿಳಿ ಜೋಳ, ಸೂರ್ಯಕಾಂತಿ, ಅಲಸಂದಿ ಪುನಃ ಕಲ್ಲಂಗಡಿ ಬಿತ್ತಿ ಬೆಳೆ ಬೆಳೆಯುತ್ತಿದ್ದರು.ಆದರೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಮಳೆ ಆಗುತ್ತಿರುವ ಕಾರಣ ಕಲ್ಲಂಗಡಿ, ತರಕಾರಿ, ಹೆಸರು, ಉದ್ದು, ಅಲಸಂದಿ ಇನ್ನಿತರೆ ಅಲ್ಪಾವಧಿ ಬೆಳೆಗಳಿಂದ ರೈತ ವಿಮುಖರಾಗುತ್ತಿರುವುದು ಸಹಜವಾಗಿದೆ. ವಾರ್ಷಿಕ ಮಳೆಯು ಕಮ್ಮಿ ಆಗುತ್ತಿರುವ ಕಾರಣ ಒಂದು ಬೆಳೆ ಬೆಳೆಯಲು ಸಹ ರೈತ ಕಷ್ಟಪಡುವ ಸ್ಥಿತಿ ಒದಗಿ ಬಂದಿದೆ.

ಈ ವರ್ಷ ಬೇಗನೆ ಮುಂಗಾರು ಬಾರದಿದ್ದರೂ ಸ್ವಲ್ಪ ತಡವಾಗಿ ಬಂದರೂ ಸಹ ಒಳ್ಳೆಯ ಮಳೆಯಾಗಿ ಪೂರಕ ಬೆಳೆಗೆ ಸಹಕಾರಿಯಾಗಿದೆ. ಮೆಕ್ಕೆಜೋಳ ಬೆಳೆಯಲ್ಲಿ “ಪಾಪ್ ಕಾರ್ನ್ “ಮೆಕ್ಕೆಜೋಳ   ಬೇಗನೆ ಬರುವ ಕಾರಣ ಒಂದು ತಿಂಗಳ ಹಿಂದೆಯೇ ಪಾಪ್‌ಕಾರ್ನ್ ತೆನೆಗಳನ್ನು ಮುರಿದು ಈಗಾಗಲೇ ಒಕ್ಕಣಿಕೆ ಮಾಡಿ ಕೆಲವರು ಮಾರಾಟ ಮಾಡಿದ್ದಾರೆ. ಇನ್ನು ಹಲವಾರು ರೈತರು ಒಳ್ಳೆಯ ಧಾರಣೆ ಬರಲಿ ಎಂಬ ಕಾರಣಕ್ಕೆ ಚೀಲಗಳನ್ನು ತುಂಬಿ ಸುರಕ್ಷಿತವಾಗಿ ಶೇಖರಣೆ ಮಾಡಿದ್ದಾರೆ. ಪಾಪ್ ಕಾರ್ನ್  ಬೆಳೆದು ತೆನೆ ಮುರಿದ ರೈತರು ತಮ್ಮ ಹೊಲಗಳಿಗೆ ಈಗಾಗಲೇ ಹಲಸಂದಿ ಬಿತ್ತಿದ್ದಾರೆ. 80-90 ದಿನಕ್ಕೆ ಬರುವ ಬೆಳೆಯಾಗಿದ್ದು  ಒಂದು ಎಕರೆಗೆ 10 ಕೆ.ಜಿ.ಬೀಜದೊಂದಿಗೆ 30-40 ಕೆ.ಜಿ. ರಾಸಾಯನಿಕ ಗೊಬ್ಬರ ಬೆರೆಸಿ ಹೊಲದ ತುಂಬೆಲ್ಲಾ ಉಗ್ಗಿ ಹೊಲ ಹಸನುಗೊಳಿಸುತ್ತಾರೆ. ಹವಾಗುಣದ ವೈಪರೀತ್ಯದಿಂದ ಕೀಟ ಅಥವಾ ರೋಗ ಬಾಧಿಸಿದರೆ  ಕೀಟನಾಶಕ ಮತ್ತು ರೋಗನಾಶಕ ಒಂದೊಮ್ಮೆ ಸಿಂಪಡಿಸಿದರೆ ಸಾಕು ಅಲಸಂದಿ ಕಾಯಿ ಮುರಿಯುವ ಹಂತಕ್ಕೆ ಬರುತ್ತವೆ. ಕೆಲ ರೈತರು ಹಸೀ ಕಾಯಿ ಕಿತ್ತು ಮಾರುಕಟ್ಟೆಗಳಲ್ಲಿ, ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ. ಆದರೆ ಅತಿ ಹೆಚ್ಚು ರೈತರು ಒಣಗಿಸಿ ಒಕ್ಕಣಿಕೆ ಮಾಡಿ ಮಾರುವುದು ಸಾಮಾನ್ಯ. ಎಕರೆಗೆ 5-6 ಕ್ವಿಂಟಾಲ್ ಬರುವ ಬೆಳೆ ಇದಾಗಿದ್ದು, ಕಡಿಮೆ ಖರ್ಚಿನಲ್ಲಿ ಮಳೆ ಇಲ್ಲದಿದ್ದರೂ ಬಿತ್ತುವಾಗ ಭೂಮಿ ಹಸಿ ಇದ್ದು ನಂತರ ಜಿಬುರು ಮಳೆಗೆ ಬರುವ ಬೆಳೆ ಇದಾಗಿದ್ದು ಮಾರುಕಟ್ಟೆಯಲ್ಲಿ 4000-4600/ರೂ. ವರೆಗೆ ಕ್ವಿಂಟಾಲ್‌ಗೆ  ಧಾರಣೆ ಸಿಗುತ್ತದೆ ಎಂದು ಗ್ರಾಮದ ಓಬಳಪ್ಪ, ಬಸವರಾಜಪ್ಪ, ಕಲ್ಲೇಶಪ್ಪ ಬಹಳ ವರ್ಷಗಳ ನಂತರ ನಮಗೆ ಒಂದು ವರ್ಷದಲ್ಲಿ ಎರಡು ಬೆಳೆ ತೆಗೆಯುವ ಅವಕಾಶ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇನ್ನೂ ಮೆಕ್ಕೆಜೋಳ ಮುರಿಯುವ ರೈತರು ಬಹಳವಿದ್ದು ಅದರ ಒಕ್ಕಣಿಕೆಯ ನಂತರ ಅಲ್ಪ-ಸ್ವಲ್ಪ ಮಳೆ ಬಂದರೂ ಹಿಂಗಾರು ಬೆಳೆ ಬೆಳೆಯಲು ರೈತರು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.ಹಿಂಗಾರು ಮಳೆಗಳು ಚೆನ್ನಾಗಿ ಬರುತ್ತಿರುವುದರಿಂದ ಈ ವರ್ಷ ಹಿಂಗಾರು ಬೆಳೆಯೂ ಸಹ ಭರ್ಪೂರ ಬರುವಂತಿದ್ದು, ಉತ್ತರ ಭಾರತದಲ್ಲಿರುವಂತೆ ಇ-ಮಾರುಕಟ್ಟೆ ವ್ಯವಸ್ಥೆಯೊಂದಿಗೆ ಮಾರಾಟ ಮಾಡುವ ವ್ಯವಸ್ಥೆಯ ಶಿಕ್ಷಣ, ಅನುಕೂಲತೆಗಳು ಇಲ್ಲದ ಕಾರಣದಿಂದ ರೈತರಿಗೆ ತಮ್ಮ ಶ್ರಮದ ಪ್ರತಿಫಲ ಪಡೆಯುವುದರಲ್ಲಿ ಸ್ವಯಂ ಬೆಳೆ ಬೆಳೆದು ಟವಲ್ ಹಾಸಿ ಬೆಂಬಲ ಬೆಲೆ ಕೇಳುವ ಪರಿಸ್ಥಿತಿ ಬರಬಹುದು ಎನ್ನುತ್ತಾರೆ ಚನ್ನಾಪುರ ಗ್ರಾಮದ ಪ್ರಗತಿಪರ ರೈತ ಶಿವರುದ್ರಪ್ಪ. ಸಂತೆಬೆನ್ನೂರು ಸುತ್ತ-ಮುತ್ತಲ ಪ್ರದೇಶದಲ್ಲಿ ಕೖಷಿ ಇಲಾಖೆ, ಖಾಸಗಿ ಬೀಜ ಮಾರಾಟ ಅಂಗಡಿಗಳಿಂದ 160-170 ಕ್ವಿಂಟಾಲ್ ಅಲಸಂದಿ ಬೀಜ ಮಾರಾಟವಾಗಿದ್ದು, ಕೆಲ ರೈತರು ಮನೆಯ ಬಿತ್ತನೆ ಬೀಜ ಸಹ ಬಳಸಿದ್ದಾರೆ.


ಕೆ.ಸಿರಾಜ್ ಅಹಮ್ಮದ್
ಸಂತೇಬೆನ್ನೂರು.
[email protected]

error: Content is protected !!