ಕನ್ನಡ ಚಿತ್ರರಂಗದ ದಂತ ಕಥೆ, ಹಾಸ್ಯ ರತ್ನ ನರಸಿಂಹರಾಜು

1976 ರ ಆರಂಭದ ದಿನಗಳು. ನಾನಾಗ ಚಿಕ್ಕಮಗಳೂರು ಜನಮಿತ್ರ ಪತ್ರಿಕೆಯ ಉಪ ಸಂಪಾದಕ.

ಅಂದಿನ ವಾರ್ತಾ ಸಚಿವರಾಗಿದ್ದ ಆರ್.ಗುಂಡೂರಾವ್ ಶೃಂಗೇರಿಯಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ. ಉತ್ಸಾಹಿ, ಯುವ ಸಚಿವರಾಗಿದ್ದ ಗುಂಡೂರಾವ್ ಎಂದರೆ ನಡೆ – ನುಡಿ ಎಲ್ಲವೂ ಪತ್ರಕರ್ತರಿಗೆ ಆಹಾರವೇ. ಅದಕ್ಕೆ ತಕ್ಕಂತೆ ನೇರ – ನಿಷ್ಟೂರ ವಾದಿಯಾಗಿದ್ದ ಗುಂಡೂರಾಯರು ದಿಟ್ಟ ನಿರ್ಧಾರಗಳಿಗೆ ಹೆಸರುವಾಸಿಯೂ ಆಗಿದ್ದರು. ಹಿಂದಿನ ರಾತ್ರಿಯೇ ಚಿಕ್ಕಮಗಳೂರಿಗೆ ಬಂದು ತಂಗಿದ್ದು, ನಮ್ಮಗಳೊಂದಿಗೆ ಮಾತನಾಡಿದ್ದ ರಾಯರು ಮರುದಿನದ ಕಾರ್ಯಕ್ರಮಕ್ಕೆ ಆಗ್ರಹಪೂರ್ವಕ ಆಹ್ವಾನವನ್ನೂ ಇತ್ತಿದ್ದರು.

ಮರು ದಿನ ಮಧ್ಯಾಹ್ನ ಜಿಲ್ಲಾ ವಾರ್ತಾ ಧಿಕಾರಿ ಕೈಲಾಸ್ ಕುಮಾರ್ ವ್ಯವಸ್ಥೆಯೊಂದಿಗೆ ಶೃಂಗೇರಿ ತಲುಪಿದ್ದಾಯ್ತು. ಸಂಜೆ ಆರು ಗಂಟೆಗೆ ಕಾರ್ಯಕ್ರಮ. ಆರಾಯಿತು, ಏಳಾಯಿತು. ಗುಂಡೂರಾ ಯರ ಸುಳಿವೇ ಇಲ್ಲ. ಸಹಜವಾಗಿ ಸಭಿಕರಲ್ಲಿ ಗುಜು ಗುಜು. ಕೆಲವರು ನಿಧಾನಕ್ಕೆ ಕಾಲಿಗೆ ಬುದ್ದಿ ಹೇಳಲೂ ಆರಂಭಿಸಿದರು. ಬಂದ ತಪ್ಪಿಗೆ ನಾವುಗಳು ಕೂರಲೇಬೇಕಾದ ಪರಿಸ್ಥಿತಿ.

ತೂಕಡಿಸುತ್ತಿದ್ದ ಸಭೆ ಯಲ್ಲಿ ಮಿಂಚು ಪ್ರವಹಿಸಿ ದಂತಹ ಅನುಭವ. ಸೇರಿದ್ದ ಸಮಾವೇಶ ಸಂತೋಷ – ಸಂಭ್ರ ಮದಿಂದ ಜಯಕಾರ ಆರಂಭಿಸಿತು. ಬಂದವರು ಸಚಿವ ಮತ್ತಿತರೆ ರಾಜಕೀಯ ಪ್ರಭೃತಿಗಳಲ್ಲ, ಹಾಸ್ಯ ಚಕ್ರವರ್ತಿ ನರಸಿಂಹ ರಾಜು.!.

ಹೌದು. ಸರ ಸರನೇ ವೇದಿಕೆ ಹತ್ತಿ ಕೈ ಬೀಸಿದರು. ಅಚ್ಚ ಬಿಳಿ ಪಂಚೆ, ಬಿಳಿ ಶರ್ಟ್ ಮೇಲೊಂದು ಕಪ್ಪು ಕೋಟ್. ಎಂದಿನ ಬಾಯ್ತುಂಬಾ ಮುಗುಳ್ನಗೆ. ಜೊತೆಯಲ್ಲಿ ಅಪ್ರತಿಮ ಗಾಯಕ ಪಿ.ಕಾಳಿಂಗರಾಯರು.

ಶೃಂಗೇರಿ ದೇವಾಲಯಕ್ಕೆ ಮಾರ್ಗ ಮಧ್ಯೆ ಭೇಟಿ ನೀಡಲು ಬಂದಿದ್ದ ನಗೆ ಸಾಮ್ರಾಟನನ್ನು, ಸಮೀಪವೇ ಇದ್ದ ಕಾರ್ಯಕರ್ತರು ಕಂಡು ಈ ಸಮಾವೇಶಕ್ಕೂ ಒತ್ತಾಯ ಪೂರ್ವಕವಾಗಿ ಕರೆತಂದಿದ್ದರು.

ಆನಂತರ ನಡೆದದ್ದೆಲ್ಲಾ ಅದ್ಭುತವಾದ ಕಲಾ ಸಮಾರಾಧನೆ. ಮುಂದಿನ ಒಂದು ತಾಸಿನಲ್ಲಿ ನರಸಿಂಹ ರಾಜು ತಮ್ಮ ರಂಗ ಭೂಮಿ ಪ್ರವೇಶದಿಂದ ಆರಂಭಿಸಿ, ಚಿತ್ರರಂಗದವರೆಗೆ ನಡೆದು ಬಂದ ದಾರಿಯ ರಸವತ್ತಾದ ವಿವರಣೆ. ಮಧ್ಯೆ ಹಾಸ್ಯೋಕ್ತಿಗಳ ಒಗ್ಗರಣೆ. ರಂಗಗೀತೆಗಳು. ಪಿ.ಕಾಳಿಂಗರಾಯರಿಂದ `ಮೂಡಲ್ ಕುಣಿಗಲ್ ಕೆರೆ…’ ಗಾಯನ. 

ತಾಸು ಉರುಳಿದ್ದು ಯಾರ ಗಮನಕ್ಕೊ ಬರಲೂ ಇಲ್ಲ – ಸಭಿಕರಿಗದು ಬೇಕೂ ಇರಲಿಲ್ಲ. ಆದರೆ, ಮರು ದಿನದ ಚಿತ್ರೀಕರಣ ಕ್ಕಾಗಿ ಹಾಸ್ಯ ಚಕ್ರವರ್ತಿ ಹೊರಡಲೇ ಬೇಕಿತ್ತು.

ಗಡಿಬಿಡಿಯಿಂದ ನರಸಿಂಹ ರಾಜು ವೇದಿಕೆ ಇಳಿದರು. ಪತ್ರಕರ್ತರ ಗ್ಯಾಲರಿಯಲ್ಲಿದ್ದ ಏಕೈಕ ಎಳೆಯ (ಅಂದು, ಉಳಿದ ಮೂವರು ಐವತ್ತರ ಗಡಿ ದಾಟಿಹೋಗಿದ್ದ ಹಿರಿಯರು !) ನನ್ನ ಕಂಡು ನರಸಿಂಹ ರಾಜು ತುಸು ನಿಂತರು.
ಕೈ ಕುಲುಕಿದರು. ಆತ್ಮೀಯತೆಯಿಂದ ವಿಚಾರಿಸಿದರು. `ಸರ್, ನಿಮ್ಮದೊಂದು ಸಂದರ್ಶನ ಬೇಕು’ ಎಂಬ ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜು’ ಬನ್ನಿ, ಹ್ಯಾಗೂ ಇವತ್ತು ರಾತ್ರಿ ಕೆಮ್ಮಣ್ಣುಗುಂಡಿ ಕ್ಯಾಂಪ್. ಕಾರಲ್ಲಿ ಮಾತಾಡ್ತಾ ಹೋಗೋಣ. ನಾಳೆ ನಮ್ಮ ಜೊತೆ ಶೂಟಿಂಗ್ ನೋಡಿ, ನಾಡಿದ್ದು ನಿಮ್ಮನ್ನು ಚಿಕ್ಕಮಗಳೂರಿನಲ್ಲಿ ಇಳಿಸಿ ಮುಂದೆ ಹೋಗ್ತೇವೆ ಎಂದು ಆಹ್ವಾನಿಸಿದರು. ಹೋಗಲು ನಾನೇನೋ ಸಿದ್ದನಾದರೂ, ಕರ್ತವ್ಯದ ಕರೆ ಸಿದ್ದವಿರಲಿಲ್ಲ. 

ಪ್ರಸಂಗವನ್ನು ವಿವರಿಸಿ, ನನ್ನ ಅಸಹಾಯಕತೆಯನ್ನು ವರ್ಣಿಸಿ, ಕ್ಷಮೆ ಕೇಳಿದೆ. `ಪರ್ವಾಗಿಲ್ಲ, ಇನ್ನೊಮ್ಮೆ ಬೆಂಗಳೂರಿನಲ್ಲಿ ಆರಾಮವಾಗಿ ಭೇಟಿ ಮಾಡೋಣ, ಮಾತಾ ಡೋಣ. ಖಂಡಿತಾ ಬನ್ನಿ’ ಎಂದು ಮನೆಯ ವಿಳಾಸ ನೀಡಿ, ವಿಶ್ವಾಸದಿಂದ ಅಪ್ಪಿ, ಕೈಕುಲುಕಿ ನಗು ನಗುತ್ತಾ ಕಾರನೇರಿದರು. ಆದರೆ ,  ಆ `ಇನ್ನೊಮ್ಮೆ’ ನನ್ನ ಬದುಕಿನಲ್ಲಿ ಬರಲೇ ಇಲ್ಲ.!


ಹಳೇಬೀಡು ರಾಮಪ್ರಸಾದ್
ದಾವಣಗೆರೆ.

error: Content is protected !!