ಕೊರೊನಾ ಮತ್ತು ವೈದ್ಯರ ಪೋಷಾಕು

ವಿಶ್ವಾದ್ಯಾಂತ ಕೊರೊನಾ ಹಾವಳಿ ನಡೆಯುತ್ತಿದ್ದಂತೆ ಜನರ ಆರೋಗ್ಯದ ಬಗ್ಗೆ ನಿಗಾ, ಆಸ್ಪತ್ರೆಯಲ್ಲಿನ ವ್ಯವಸ್ಥೆ, ಮುಖಗವಸು, ನಂಜುನಿವಾರಕ ಮುಂತಾದವುಗಳಿಗೆ ಭಾರೀ ಬೇಡಿಕೆ ಉಂಟಾಗಿದೆ.  ಈ ಮೊದಲು ಹಲವಾರು ಮಾರಣಾಂತಿಕ ರೋಗಗಳು ಮನುಷ್ಯರನ್ನು ಕಾಡಿದ್ದರೂ, ಕೊರೊನಾ ತಂದಂತಹ ತಲ್ಲಣ, ತವಕ ಮತ್ತು ಜನಜೀವನದಲ್ಲಿನ ಏರುಪೇರು ಹಾಲಿವುಡ್‍ನ ಯಾವುದೇ ರೋಚಕ ಸಿನಿಮಾಗಿಂತ ಕಡಿಮೆಯಿಲ್ಲ.  ರಾಜಕೀಯ ಮತ್ತು ಸಿನಿಮಾ ಸುದ್ದಿಗಳ ಸದ್ದಡಗಿಸಿದ ಕೊರೊನಾ ವಿಶ್ವ ಮಾಧ್ಯಮಗಳನ್ನು ಏಕಮೇವಾದ್ವಿತೀಯ ವನ್ನಾಗಿಸಿದೆ.  ಅಂದರೆ ಕೊರೊನಾ ಬಿಟ್ಟು ಬೇರಾವ ಸುದ್ದಿಯೂ ಕಾಣು/ಕೇಳುವುದಿಲ್ಲ ಮತ್ತು ಸುದ್ದಿ ಮಾಧ್ಯಮದಲ್ಲಿ ಬೇರಾವುದೇ ಸುದ್ದಿ ತೋರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  

ಕೋವಿಡ್-19 ರೀತಿಯ ರೋಗಗಳು ಇದೇ ಮೊದಲೇನಲ್ಲ ಮತ್ತು ಇದೇ ಕೊನೆಯಲ್ಲ. ಶತಮಾನಗಳ ಹಿಂದೆಯೇ ಇಂತಹ ಸಾಂಕ್ರಾಮಿಕ ರೋಗಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.  ಹದಿಮೂರನೇ ಶತಮಾನದಲ್ಲಿಯೇ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಕ್ವಾರಂಟೈನ್ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯಿತ್ತು.  ಇಟಲಿ ದೇಶದ ಕವಿ ಮತ್ತು ಪ್ರಕೃತಿ ತಜ್ಞ ಗಿರೋಲಾಮೋ ಫ್ರಾಕೋಸ್ಟ್ರ ಎಂಬುವರು 1546 ರಲ್ಲಿಯೇ ಮನುಷ್ಯರಲ್ಲಿ ಒಬ್ಬರಿಂದ ಮತ್ತೊಬ್ಬರ ಸಂಪರ್ಕವಲ್ಲದೆ ನಿರ್ಜೀವ ವಸ್ತುಗಳಾದ ಬಟ್ಟೆ, ಪಾತ್ರೆಗಳು ಮತ್ತು ಗಾಳಿಯಿಂದಲೂ ರೋಗಗಳು ಹರಡುವುದೆಂದು ಪ್ರತಿಪಾದಿಸಿದ್ದರು. ನಂತರ 1750ರ ಹೊತ್ತಿಗೆ ಪ್ರಕೃತಿ ಶಾಸ್ತ್ರಜ್ಞರು ಮತ್ತು ಸಾಮಾನ್ಯ ಜನರು ಪರಿಸರದಲ್ಲಿ ಆಗುವ ರಾಸಾಯನಿಕ ಬದಲಾವಣೆಗಳಿಂದ ರೋಗ ಉಂಟಾಗುತ್ತದೆವೆ ಎಂದು ಮತ್ತು ಗಾಳಿಯಲ್ಲಿ ಬರುವ ಅತೀ ಸೂಕ್ಷ್ಮ ಕಣಗಳಿಂದ ರೋಗಗಳು ಹರಡುತ್ತವೆಯೆಂದು ನಂಬಿದ್ದರು.  ಇಂತಹ ರೋಗ ತರುವ ಗಾಳಿಯನ್ನು ಮಿಯಾಸ್ಮ (Miasma)  ಅಂದರೆ ಕಲುಷಿತ ಗಾಳಿ ಎಂದು ಕರೆದರು.  ಇಂತಹ ಸಂದರ್ಭದಲ್ಲಿ ಯೂರೋಪಿನ ದೇಶಗಳಲ್ಲಿ ಪ್ಲೇಗ್ ಮಹಾಮಾರಿಯು ವ್ಯಾಪಕವಾಗಿ ಹಬ್ಬಿತ್ತು.  ಇದು ಎರ್ಸಿನಿಯಾ ಪೆಸ್ಟಿಸ್ (Yersinia pestis) ಎಂಬ ಒಂದು ದುಂಡಾಣು (ಬ್ಯಾಕ್ಟಿರೀಯಾ) ವಿನಿಂದ ಬರುವ ರೋಗವಾಗಿತ್ತು. ಇದನ್ನು ತಡೆಗಟ್ಟಲು ವೈದ್ಯರುಗಳು ರೋಗಿಗಳ ಪರೀಕ್ಷೆ ಮತ್ತು ಲಭ್ಯವಿರುವ ಚಿಕಿತ್ಸೆ ನೀಡಲು ಸೋಂಕಿತ ವ್ಯಕ್ತಿಗಳೊಂದಿಗಿನ ಒಡನಾಟ ಅನಿವಾರ್ಯವಾಗಿತ್ತು.  ರೋಗಿಗಳಿಂದ ವೈದ್ಯರಿಗೆ ರೋಗ ಹರಡುವ ಸಾಧ್ಯತೆಗಳು ಇದ್ದವು.  ಹಾಗಾಗಿ ಅಂದಿನ ವೈದ್ಯರು ರೋಗಿಯಿಂದ ತಮಗೆ ರೋಗ ಹರಡಬಾರದೆಂಬ ಉದ್ದೇಶದಿಂದ ವಿಶೇಷ ಪೋಷಾಕನ್ನು ಆವಿಷ್ಕರಿಸಿದ್ದರು.       ಆ ಉಡುಗೆ ತೊಡುಗೆಗಳ ಅಂದಿನ ಉದ್ದೇಶ ಪ್ಲೇಗ್ ರೋಗ ತರುವ ಕಲುಷಿತ ಗಾಳಿ ಮಿಯಾಸ್ಮವನ್ನು ತಡೆಯುವುದಾಗಿತ್ತು. 

ಅಂದಿನ ವೈದ್ಯರ ಪೋಷಾಕು ಹೇಗಿತ್ತು ಎಂದರೆ ಮೊದಲಿಗೆ ವೈದ್ಯರೆಂದು ಗೌರವ ಸೂಚಕವಾಗಿ ಒಂದು ಚರ್ಮದ ಟೋಪಿ, ಮುಖಗವಸುವಿನಲ್ಲಿ ಹುದುಗಿರುವ ಗಾಜಿನ ಕನ್ನಡಕ ಮತ್ತು ಹದ್ದಿನ ಕೊಕ್ಕಿನಂತಹ ಮೂಗಿನ ಕವಚ. ಈ ಮೂಗು ಕವಚದೊಳಗೆ ಪರಿಮಳ ದ್ರವದಲ್ಲಿ ಅದ್ದಿರುವ ಹತ್ತಿ ಅಥವಾ ಸ್ಪಂಜಿನ ಮುದ್ದೆ (ಕಲುಷಿತ ಗಾಳಿ ಮಿಯಾಸ್ಮ ಮೂಗಿನ ಒಳಗೆ ಹೋಗಬಾರದಲ್ಲ) ಇಡಲಾಗುತ್ತಿತ್ತು. ರೋಗಿಯನ್ನು ಮುಟ್ಟದೇ ಅವನ ಮೈಮೇಲಿನ ಬಟ್ಟೆಗಳನ್ನು ತೆಗೆಯಲು ಅನುಕೂಲವಾಗಲೆಂದು ಕೈಯಲ್ಲೊಂದು ಕೋಲು.  ಯಾರನ್ನೇ/ಯಾವುದನ್ನೇ ಮುಟ್ಟಿದರೂ ತಮ್ಮ ಕೈಗಳಿಗೆ ತಾಕದಂತೆ ಕೈಗವಸು.  ರೋಗಿಯ ಸಿಂಬಳ, ಎಂಜಲು, ರಕ್ತ, ವಾಂತಿ, ಕೀವು ಮುಂತಾದವು ವೈದ್ಯರ ದೇಹದ ಅಥವಾ ಬಟ್ಟೆಯ ಮೇಲೆ ಬೀಳಬಾರದೆಂದು ಮೇಣದ ಲೇಪನವಿರುವ ದೊಡ್ಡದಾದ ನಿಲುವಂಗಿ. ಕಾಲುಗಳಿಗೆ ಒಳ್ಳೆಯ ಬೂಟು. ಇದೆಲ್ಲವನ್ನು ಹಾಕಿಕೊಂಡು ರೋಗಿಯ ಪರೀಕ್ಷೆ  ಮಾಡಬೇಕಿತ್ತು. ಈ ರೀತಿಯ ಪೋಷಾಕಿನಿಂದ ಮುತುವರ್ಜಿ ವಹಿಸಿದ್ದರೂ ಸೂಕ್ಷ್ಮಜೀವಿಗಳ ಆಕಾರ, ಗಾತ್ರ, ಹರಡುವ ಪದ್ಧತಿ ಬಗ್ಗೆ ಮಾಹಿತಿಯಿಲ್ಲದೇ ಇದ್ದುದರಿಂದ ಹಲವಾರು ವೈದ್ಯರು ಮತ್ತು ದಾದಿಯರು ಕೆಲವು ರೋಗಗಳಿಗೆ ಬಲಿಯಾಗಿದ್ದಿದ್ದು ಇದೆ.  ಇದನ್ನು ವೃತ್ತಿಪರ ತೊಂದರೆಗಳು ಎಂದು ಪರಿಗಣಿಸಬೇಕಾಗುತ್ತದೆ.  ಈಗಿನ ವೈದ್ಯರಿಗೆ ಈ ತರಹದ ವಿಶೇಷ ಪೋಷಾಕುಗಳೆಲ್ಲಾ ಅಗತ್ಯವಿಲ್ಲ ಬಿಡಿ. ರೋಗನಿಧಾನ ವಿಧಾನದಿಂದ ತಯಾರಾದ ವರದಿ ಆಧಾರದ ಮೇಲೆ ರೋಗಿಯನ್ನು ಮುಟ್ಟದೆ ಅವರಿಂದಲೇ ಅವರ ಸಮಸ್ಯೆಗಳನ್ನು ಕೇಳಿ ಪರಿಹಾರ ಸೂಚಿಸುವ ವೈದ್ಯರುಗಳೇ ಹೆಚ್ಚು. ಅದಕ್ಕೋಸ್ಕರ ಅಂಥವರ ವೈದ್ಯಕೀಯ ವೆಚ್ಚದ ರಶೀದಿ ಸಹ ಹೆಚ್ಚಿರುತ್ತದೆ. ಈಗಿನ ಪೋಷಾಕುಗಳಲ್ಲಿ ಹೆಚ್ಚೆಂದರೆ ಒಂದು ಬಿಳಿಯ ನಿಲುವಂಗಿ ಇರುತ್ತದೆ.

ಪ್ರಸ್ತುತ ಹೆಚ್‍ಐವಿ, ಎಬೋಲಾ ಮತ್ತು ಕೊರೊನಾದಂತಹ ರೋಗಗಳು ಬಂದನಂತರ ವೈದ್ಯರ ಪೋಷಾಕಿಗೆ ಹೊಸ ಬೇಡಿಕೆ ಬಂದಿದೆ.  ಕೊರೊನಾ ಬಂದ ನಂತರ ಜನಸಾಮಾನ್ಯರ ಬಾಯಲ್ಲೂ ಪಿಪಿಇ ಎಂಬ ಪದ ಹರಿದಾಡುತ್ತಿದೆ.  ಕೊರೊನಾ ಸಂಬಂಧ ವೈದ್ಯರಲ್ಲದೇ ಎಲ್ಲ ಆರೋಗ್ಯ ಕಾರ್ಯಕರ್ತರು ಪಿಪಿಇ ತೊಡಬೇಕಾಗಿದೆ. ಇಂತಹ ಪಿಪಿಇ ಪೋಷಾಕಿನ ಗುಣಲಕ್ಷಣಗಳನ್ನು ಅಮೇರಿಕಾದ ಸಿಡಿಸಿ ಎಂಬ ಸಂಸ್ಥೆ ಮತ್ತು  ವಿಶ್ವ ಆರೋಗ್ಯ ಸಂಸ್ಥೆಗಳು ನಿರ್ಧರಿಸಿವೆ.  ಆರೋಗ್ಯ ಕಾರ್ಯಕರ್ತರು ಕೋವಿಡ್ ರೋಗಿಯನ್ನು ಪರೀಕ್ಷೆಗೆ ಒಳಪಡಿಸುವಾಗ ಈ ಪಿಪಿಇ ಯು ಹೇಗಿರಬೇಕು, ಯಾವ ರೀತಿ ಧರಿಸಬೇಕು ಮತ್ತು ಕೆಲಸ ಮುಗಿದ ನಂತರ ಯಾವ ರೀತಿ ವಿಲೇವಾರಿ ಮಾಡಬೇಕೆಂಬ ವಿವರವಾದ ಮಾರ್ಗಸೂಚಿಗಳನ್ನು ಈ ಉನ್ನತ ಸಂಸ್ಥೆಗಳು ನೀಡಿವೆ. ಕೊರೊನಾಗೆ ಸಂಬಂಧಿಸಿದ ಪಿಪಿಇಯಲ್ಲಿ ಕೆಳಕಂಡ ವಸ್ತುಗಳಿರುತ್ತವೆ.

1. ಕಣ್ಣನ್ನು ಪೂರ್ತಿ ಆವರಿಸುವ ಕನ್ನಡಕ (ಇದು ಪಾರದರ್ಶಕವಾಗಿರಬೇಕು ಮತ್ತು ಉಪಯೋಗಿಸಿ-ಬಿಸಾಡುವಂತಿರಬೇಕು). ಎಲೆಸ್ಟಿಕ್ ಬ್ಯಾಂಡ್ ಇರಬೇಕು.
2.  ತಲೆಯನ್ನು ಸಂಪೂರ್ಣ ಮುಚ್ಚುವಂತಹ ಟೋಪಿ.
3. ಮುಖವನ್ನು ಮುಚ್ಚುವಂತಹ ಮುಖಗವಸು. ಇದು ಮೂರು ಪದರಗಳಿಂದಾಗಿದ್ದು ಮತ್ತು ಮೂಗಿನ ಜಾಗಕ್ಕೆ ಪ್ರತ್ಯೇಕ ಕವಚವಿರುತ್ತದೆ. ಎಲ್ಲಾ ವೈರಸ್‍ಗಳನ್ನು ತಡೆಗಟ್ಟಲುN95 ಮುಖಗವಸು ಇರಬೇಕು.
4. ಶಸ್ತ್ರಚಿಕಿತ್ಸಕರು ತೊಡುವಂತಹ ರೋಗಾಣು ರಹಿತ ಕೈಗವಸು. ಇದರಲ್ಲಿ ನಿಲುವಂಗಿಯ ಕೈಗಳನ್ನು ತೂರಿಸಿ ಸಿಗಿಸಲು ಅನುಕೂಲವಾಗಿರಬೇಕು.
5. ರೋಗಾಣು ರಹಿತ ಮತ್ತು ನೇಯ್ಗ ರಹಿತ ವಿಶೇಷ SMS-ಫಾಲಿಪ್ರೋಪಿಲೀನ್  ವಸ್ತುವಿನಿಂದ ಮಾಡಿದ ನಿಲುವಂಗಿ (SMS – Spunbound Meltblown Spunbound fabric). ಯಾವುದೇ ದ್ರವ ಇದರ ಮೂಲಕ ಹಾದು ಹೋಗುವ ಹಾಗಿಲ್ಲ. ಇದನ್ನು ಧರಿಸಲು ಹಿಂದಿನಿಂದ ಕಟ್ಟಲು ಅನುಕೂಲವಾಗುವಂತೆ ಇರುತ್ತದೆ. ಇದೇ ವಸ್ತುವನ್ನು ಸುಧಾರಿತ ಡೈಪರ್‍ಗಳಲ್ಲಿ ಬಳಸುವರು.
6. ಮೊಣಕಾಲವರೆಗೆ ಬರುವಂತಹ ಬೂಟುಗಳು. 

ಈ ಪೋಷಾಕು ಮಾಡಲು ಬಳಸಿರುವ ವಸ್ತುಗಳು ಕಾಲಕ್ಕೆ ತಕ್ಕಂತೆ ಬದಲಾಗಿದ್ದರೂ ಈ ಮೊದಲು ಬಳಸುತ್ತಿದ್ದ ಪ್ಲೇಗ್ ಪೋಷಾಕಿನ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಶತಮಾನಗಳ ಹಿಂದೆ ಇದ್ದ ಪ್ರಾಜ್ಞರ ಬುದ್ದಿವಂತಿಕೆಯನ್ನು ಇದು ಸಾರುತ್ತದೆ.  ವಿಜ್ಞಾನ ಇಷ್ಟೆಲ್ಲ ಮುಂದುವರೆದಿದ್ದರೂ ಮನುಷ್ಯನ ಬುದ್ದಿವಂತಿಕೆ ಹೆಚ್ಚಾಗಿಲ್ಲ  ಎಂಬುದಕ್ಕೆ ಇದೊಂದು ನಿದರ್ಶನ. ನಾವು ಬಳಸುತ್ತಿರುವ ಪರಿಕರಗಳು ಬದಲಾಗಿದ್ದು, ಪರಿಸರಕ್ಕೆ ಮಾರಕವಾದವೇ ವಿನಃ ಪೂರಕವಾಗಲಿಲ್ಲ.  ಮನುಷ್ಯನ ಹಪಾಹಪಿತನ ಕಡಿಮೆ ಮಾಡಲಾಗಲಿ ಅಥವಾ ಮಾನಸಿಕ ನೆಮ್ಮದಿ ಉಂಟು ಮಾಡಲಾಗಲೀ ಇಂದಿನ ಬೆಳವಣಿಗೆಗಳು ಸಹಕಾರಿಯಾಗಿಲ್ಲ ಎಂಬುದೇ ಖೇದಕರ ಅಂಶ.

ಇವುಗಳನ್ನು ಒಂದು ಬಾರಿ ಉಪಯೋಗಿಸಿದ ನಂತರ ಅದನ್ನು ಇನ್‍ಸಿನರೇಟರ್ ಬಳಸಿ ಸುಟ್ಟು ಭಸ್ಮ ಮಾಡಬೇಕು. ಹಲವಾರು ರೋಗಿ/ವೈದ್ಯರು ಬಳಸುವ ಪೋಷಾಕು/ಪರಿಕರಗಳನ್ನು ಇದೇ ರೀತಿ ಸುರಕ್ಷಿತವಾಗಿ ವಿಲೇವಾರಿ ಮಾಡಲು ಮಾರ್ಗಸೂಚಿಗಳಿದ್ದರೂ ಅದನ್ನು ಸರಿಯಾಗಿ ಪಾಲಿಸದಿರುವುದು ಸೋಂಕು ಹೆಚ್ಚಾಗಿ ಹರಡಲು ಒಂದು ಕಾರಣ. ಅದೇ ರೀತಿ ಸೋಂಕಿತರ ಮೃತ ಶರೀರವನ್ನು ಇನ್‍ಸಿನರೇಟರ್ ಬಳಸಿ ಸುಡುವುದು ಸಹ ಬಹಳ ಮುಖ್ಯ. ಹೂತು ಹಾಕಿದ ದೇಹ ಮಣ್ಣಿನಲ್ಲಿರುವ ಸಹಸ್ರಾರು ಕೀಟಾಣುಗಳು ಕಿತ್ತಾಡಿ/ಕೊಳಸಿ ಅದರ ಅಂಶಗಳನ್ನು ಮಣ್ಣಿನಿಂದ ಮೇಲೆ ತರುವ ಸಾಧ್ಯತೆ ಹೆಚ್ಚು. ಕೊರೊನಾ ವೈರಸ್‍ನ ಬಗ್ಗೆ ಈಗ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವ ಅಂಶಗಳೇ ಹೆಚ್ಚಾಗಿರುವುದರಿಂದ ಅದನ್ನು ಸುಟ್ಟು ಬಿಡುವುದೇ ಸದ್ಯದ ಅಗತ್ಯ. ಇನ್ನು ಪಿಪಿಇಗಳನ್ನು ಮಾಡಲು ಬಳಸಿರುವ ವಸ್ತು ದ್ರವ-ನಿರೋಧಕವಾಗಿರುವುದರಿಂದ ಹತ್ತಾರು ವರ್ಷ ಮಣ್ಣಿನಲ್ಲಿ ಲೀನವಾಗದೇ ಉಳಿದು ಕಾಲಕ್ರಮೇಣ ಪರಿಸರ 

ಮಾಲಿನ್ಯವಾಗುತ್ತದೆ.  ಇಂದಿನ ಅಂದಾಜಿನ ಪ್ರಕಾರ ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ಅಧಿಕೃತ ಕೊರೊನಾ ಸೋಂಕಿತರಿದ್ದಾರೆ. ಇವರನ್ನು ನೋಡಿಕೊಳ್ಳುವ ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಬಳಸಿರುವುದರಿಂದ 10 ಲಕ್ಷದಷ್ಟು ಪಿಪಿಇ ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕಾಗಿದೆ. ಇಲ್ಲದಿದ್ದರೆ ಭೂಮಿಯಲ್ಲಿ ಹೂತ ಪಿಪಿಇಯಿಂದ ಮುಂದಿನ ದಿನಗಳಲ್ಲಾಗುವ ಪರಿಸರ ಮಾಲಿನ್ಯಕ್ಕೆ ಯಾರು ಹೊಣೆ?. ತಜ್ಞರು ರಚಿಸಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುವುದು ಮತ್ತು ಸರಿಯಾದ ಯೋಗ್ಯ ಪಿಪಿಇ ಯನ್ನು ಆರೋಗ್ಯ ಕಾರ್ಯಕರ್ತರಿಗೆ ಒದಗಿಸಿ ಅದನ್ನು ಸೂಕ್ತ ಸುರಕ್ಷಿತ ಮಾರ್ಗದಲ್ಲಿ ವಿಲೇವಾರಿ ಮಾಡುವಂತೆ ಮಾಡುವುದು ಸಂಬಂಧಪಟ್ಟವರ ಆದ್ಯ ಕರ್ತವ್ಯ. ಕೋಟ್ಯಾಂತರ ಜನರ ಆರೋಗ್ಯ ಮತ್ತು ಭೂಮಿಯಲ್ಲಿ ಮಾನವನ ಉಳಿವಿಗಾಗಿ ಕರ್ತವ್ಯ ಪಾಲನೆ ಇಂದಿನ ಅಗತ್ಯವಲ್ಲವೇ ?


ಡಾ. ಎಸ್. ಶಿಶುಪಾಲ
ಸೂಕ್ಷ್ಮಜೀವಿಶಾಸ್ತ್ರ ವಿಭಾಗ,
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ, ದಾವಣಗೆರೆ.
[email protected]

error: Content is protected !!