ಬದುಕು ಕಲಿಯಲು ಈ ಬಿಡುವು ಸಾಕೇ..?

ನನಗೆ ಈಗಲೂ ನೆನಪಿದೆ… ನನ್ನ ತಾತನ ಕಾಲದಲ್ಲಿ ಯಾರಾದರೂ ಮಾಡುವ ಕೆಲಸ ಬಿಟ್ಟು ಕಾಲಹರಣ ಮಾಡುತ್ತಿದ್ದರೆ “ಬದುಕು ಮಾಡೋದ್ ಬಿಟ್ಟು ಇಲ್ಲಿ ಕಾಲ ಒಡೀತಿದ್ಯಾ “ಎಂದು ಹಿರಿಯರು ಹೇಳುತ್ತಿದ್ದರು. ಬದುಕು ಮಾಡೋದು ಕಲಿ ಆಮೇಲೆ ಉಳಿದಿದ್ದು, ಮಾಡೋಕೇನು ಬದುಕಿಲ್ವ..?  ಅನ್ನೋರು.  ಅಂದರೆ ಬದುಕು ಎನ್ನುವುದರ ಅರ್ಥ ಕೆಲಸ ಆಗಿತ್ತು..  ಕೆಲಸವೇ ಬದುಕಾಗಿತ್ತು. ಉಳುಮೆ ಮಾಡುವುದು, ಬೆಳೆ ಬೆಳೆಯುವುದು, ಕಟಾವು ಮಾಡುವುದು, ತೂರುವುದು, ದನ- ಕರುಗಳನ್ನು ಸಾಕುವುದು, ನೀರು ತರುವುದು, ಅಡುಗೆ ಮಾಡುವುದು.. ಇದೆಲ್ಲವೂ ಬದುಕೇ ಆಗಿತ್ತು. ಆದರೆ ಈಗ ಬದುಕೆಂದರೆ ಸಂಪಾದನೆ ಆಗಿದೆ.. ಬದುಕೆಂದರೆ ತಂತ್ರಜ್ಞಾನದ ಹಿಂದೆ ಓಡುವುದು, ಬದುಕೆಂದರೆ ಉದ್ಯೋಗ, ಹೆಚ್ಚು ಸೊನ್ನೆಗಳ ಸಂಖ್ಯೆಯ ಸಂಬಳ, ಕಾರು, ಬಂಗಲೆ, ಹೋಟೆಲ್ಲು, ಪ್ರವಾಸ.. 

ಈಗ್ಗೆ  ಒಂದು ತಿಂಗಳ ಹಿಂದೆ ದೂರದ ಗೆಳತಿಯೊಬ್ಬರು ದೂರವಾಣಿ ಕರೆ ಮಾಡಿದ್ದರು. ಕೊರೊನಾ ಪ್ರಯುಕ್ತ ಗೆಳೆಯ-ಗೆಳತಿಯರಿಗೆ ಕಾಲ್‌ ಮಾಡಿ  ಮಾತನಾಡಲು ದೂರ, ಹತ್ತಿರ ಎಂಬ ಭೇದವಿಲ್ಲ! ಎಲ್ಲರೂ ಹತ್ತಿರವಾಗುತ್ತಿದ್ದಾರೆ. ಏಕೆಂದರೆ ಸಮಯ ಎಲ್ಲದಕ್ಕೂ ಆಗಿ ಮಿಕ್ಕುವಷ್ಟಿದೆ. ಮಿಕ್ಕಿದ ಸಮಯವೆಲ್ಲ ಮೊಬೈಲ್‌ಗೆ  ಮುಡಿಪಾಗಿದೆ. ಗೆಳತಿಯ ಮಾತು ಕೇಳುವಾಗ ಆಕೆ ಬಹಳ  ಚಿಂತಾಕ್ರಾಂತರಾಗಿದ್ದಳು ಅನಿಸಿತು. “ಪರಿಸ್ಥಿತಿ ನೋಡಿ.. ಹೀಗೆ ಆದರೆ ಮಕ್ಕಳ ವಿದ್ಯಾಭ್ಯಾಸದ  ಗತಿ ಏನು?  ಆರು ತಿಂಗಳು ವೇಸ್ಟ್ ಆದ್ರೆ ಲೈಫಲ್ಲಿ ಎಷ್ಟು ದೊಡ್ಡ ಲಾಸ್ ಆಗುತ್ತೆ… ಲೈಫ್‌ನಲ್ಲಿ  ಎಂತೆಂಥ ಅಪಾರ್ಚುನಿಟಿ ಗಳು ಮಿಸ್ ಆಗ್ತವೆ..ಮಕ್ಕಳಿಗೆ ಇಂಟಲೆಕ್ಚುಯಲ್ ಡೆವಲಪ್ಮೆಂಟ್ low ಆಗುತ್ತೆ.  ಇದನ್ನೇ  ಯೋಚಿಸಿ, ಯೋಚಿಸಿ ನನಗೆ B.P. vary ಆಗಿದೆ ಮಮತಾ ” ಅಂದ್ರು.  ನಾನು ಅವರು ಹೇಳುವುದನ್ನೆಲ್ಲಾ ಮಧ್ಯ ಬಾಯಿ ಹಾಕದೆ ಹ್ಮ್..  ಹೌದು… ಅಂತಷ್ಟೇ ಹೇಳುತ್ತಾ ಕೇಳಿಸಿಕೊಳ್ಳುತ್ತಿದ್ದೆ. ಕೊನೆಯಲ್ಲಿ ಏನು ಓದುತಿದ್ದಾರೆ ಮಕ್ಕಳು? ಎಂದೆ.   ದೊಡ್ಡವನು ಈ ಸಾರಿ ಫಸ್ಟ್ ಸ್ಟ್ಯಾಂಡರ್ಡ್. ಚಿಕ್ಕವಳನ್ನು   ಈಗ ಬೇಬಿ ಸಿಟ್ಟಿಂಗ್‌ಗೆ   ಸೇರಿಸಬೇಕು ಎಂದರು.. ಅವರ ಮಾತು ಕೇಳಿ ಹೇಗೇಗೋ ನಗಬೇಕು ಎನಿಸಿತು. ಆದರೂ ಸಮಾಧಾನ ಮಾಡಿಕೊಂಡು, “ಚಿಂತೆ ಮಾಡಿದರೆ ಏನು ಪ್ರಯೋಜನ? ನೀವು ಅಷ್ಟೊಂದು ಯೋಚನೆ ಮಾಡಿ ಬಿಪಿ ಜಾಸ್ತಿ ಮಾಡಿಕೊಳ್ಳಬೇಡಿ.  ಆಗೋದನ್ನ ಯಾರು ತಡಿಯೋಕಾಗುತ್ತೆ, ಸಮಾಧಾನ ಮಾಡ್ಕೊಳ್ಳಿ ಅಂತ ಹೇಳಿದೆ.. ನಾನು ಬೇರೇನಾದರೂ ಹೇಳಿದರೆ ಅದಕೊಂದು ಅವರದ್ದೇ ಆದ  ಮತ್ತು ಎಲ್ಲರ ಸಹಜ ವಾದದ ಮೊನಚಿಗೆ ತುತ್ತಾಗುತ್ತೇನೆಂದು ಮತ್ತೇನೂ ಹೇಳಲಿಲ್ಲ. ಫೋನು ಇಟ್ಟ  ಮೇಲೆ ಮನಸೋ ಇಚ್ಛೆ ಒಬ್ಬಳೇ ಜೋರಾಗಿ ನಕ್ಕೆ… 

ಹೊಟ್ಟೆ ತುಂಬಿದ,  ಹೊಟ್ಟೆಬಟ್ಟೆಯ ಚಿಂತೆ ಇಲ್ಲದ, ಜನ್ಮವೆಲ್ಲಾ ಲಾಕ್‌ಡೌನ್ ಆದರೂ ಕೂತು ತಿನ್ನುವಷ್ಟು ಸಂಪತ್ತು  ಇರುವಂತಹ ಪೋಷಕರದ್ದು ಒಂದು ರೀತಿಯ ಚಿಂತೆಯಾಗಿ ಬಿಟ್ಟಿದೆ. ಅದರಲ್ಲಿಯೂ pre-primary ಹಾಗೂ primary ಶಿಕ್ಷಣವನ್ನು ಪ್ರತಿಷ್ಠಿತ ಶಾಲೆಗಳಲ್ಲಿ ಕೊಡಿಸುತ್ತಿರುವ ಪೋಷಕರಿಗಂತೂ ಆಕಾಶ ತಲೆ ಮೇಲೆ ಬಿದ್ದಂತೆ ಆಗಿದೆ. ಅಯ್ಯೋ ನನ್ನ ಮಗನ/ ಮಗಳ ಫ್ಯೂಚರ್ ಏನ್ ಗತಿ!! ಎಂತಹ ಲಾಸ್!! ಅವರೇ ಶಾಲೆ ಮೇಲೆ ದುಂಬಾಲು ಬಿದ್ದಿದ್ದಾರೆ ಆನ್‌ಲೈನ್‌ ಎಜುಕೇಷನ್ ಕೊಡಿ ಎಂದು. ಇವರೆಲ್ಲ ಏನು ಸಾಧಾರಣ ಪೋಷಕರಲ್ಲ, ಎಲ್ಲರೂ ಪದವಿಗಳನ್ನು ಪಡೆದವರು.

ಶಾಲೆ ಮುಚ್ಚಿದೆ ಎಂದರೆ ಕಲಿಯಬೇಕಾದ್ದು ಮುಚ್ಚಿದೆ ಎಂದಾಗಿಬಿಟ್ಟಿದೆ.. ಕಲಿಯುದೇನಿದ್ದರೂ  ತರಗತಿ ಕೋಣೆ ಒಳಗೆ ಅನ್ನುವ ಪರಿಕಲ್ಪನೆಯಲ್ಲಿ ಬಂಧಿಯಾಗಿದ್ದೇವೆ ನಾವು. ನಾವು ಕೋಣೆ – ಖಾನೆ ಒಳಗೆ  ಏನನ್ನು ಕಲಿಯದಿದ್ದಕ್ಕಾಗಿ  ಇಂದಿನ ದುಸ್ಥಿತಿಗೆ ಕಾರಣ ಆಗಿದ್ದೇವೆಯೋ  ಅದನ್ನು ಮಾತ್ರ ಕಲಿಸಲು ತುದಿಗಾಲಲ್ಲಿ ನಿಂತಿದ್ದೇವೆ.  ಶಾಲೆಯಲ್ಲಿ ಯಾವ ಪಾಠವನ್ನು ನಾವು ಕಲಿತ ನಂತರವೂ  ಪ್ರಕೃತಿಯನ್ನು ಇಂತಹ  ಹೀನಾಯ ಸ್ಥಿತಿಗೆ ತಂದೆವೋ ಆ ಪಾಠವನ್ನು  ನಮ್ಮ ಮಕ್ಕಳು ಕಲಿಯಲಾಗುತ್ತಿಲ್ಲವೆಂದು ಹಪಹಪಿಸುತ್ತಿದ್ದೇವೆ.  ಆದರೆ  ಬದುಕಿನ ನಿಜ ಪಾಠವನ್ನು ನಾವು ಮತ್ತು ಮಕ್ಕಳು ಕಲಿತುಕೊಳ್ಳಲು ಇದೊಂದು ಸುವರ್ಣಾವಕಾಶ ಎಂಬುದನ್ನು ಮರೆಯುತಿದ್ದೇವೆ. 

ಮರಗಳನ್ನು ಹೆಸರಿಸಿ ಅಂದರೆ ತೆಂಗು, ಮಾವು, ಹಲಸು ಇಷ್ಟನ್ನು ಹೇಳಿ ತಲೆ ಕೆರೆಯುವ ನಾವು ಹೊಂಗೆ, ಬೀಟೆ, ಬಸವನ ಪಾದ,  ಅವರಿಕೆ,   ಅರಳಿ,  ಅತ್ತಿ, ಗೋಣಿ,  ಆಲ, ಮತ್ತಿ,  ಮುತ್ತುಗಗಳನ್ನು ನೋಡುವ ಬೆರಗನ್ನು ನಮ್ಮ ಪಾಠ ನಮಗೆ  ಕಲಿಸಲಿಲ್ಲ..  

ಆಲವೊಂದು ತನ್ನ ಬಿಳಲು ಬೇರು ಬಿಡುತ್ತಾ ಬಿಡುತ್ತಾ ತನ್ನ ಕುಟುಂಬವನ್ನು ಉದ್ದುದ್ದ-ಅಡ್ಡಡ್ಡ ಕಟ್ಟಿಕೊಳ್ಳುವ ಬಗೆಯನ್ನು   ಬೆರಗುಗಣ್ಣು ಮಾಡಿ ನೋಡುವುದನ್ನು,    ಅರಳಿಯ ಅಗಾಧತೆಯನ್ನು ಹತ್ತಿರದಿಂದ ಕಂಡು ಅಚ್ಚರಿಯ ಅನುಭೂತಿ ಹೊಂದುವುದನ್ನು,  ಕೆರೆಕಟ್ಟೆ  ನದಿಗಳನ್ನು  ಸ್ವಲ್ಪವೂ ಕಲುಷಿತಗೊಳಿಸದೆ ನಮ್ಮ ಕೈ, ಮೈ, ತಲೆ, ಕಾಲು , ಚರ್ಮ,  ಬಟ್ಟೆ ಎಲ್ಲವನ್ನೂ ತೊಳೆದು ಶುದ್ಧ ಮಾಡಿ  ಕೊಡುವ ನಿರುಪದ್ರವಿ- ಪರೋಪಕಾರಿ ಅಂಟುವಾಳಕ್ಕೆ ಧನ್ಯವಾದ ಹೇಳುವ ವಿವೇಚನೆಯನ್ನು ನಮ್ಮ ಪಾಠ ಕಲಿಸಲಿಲ್ಲ..! ಹಣ್ಣು ತಿಂದು ಉಗಿದ ಬೀಜವು ಅಲ್ಲೇ ಮೊಳೆತು ಹೆಮ್ಮರವಾಗಿ ಜೊಂಪೆ ಜೊಂಪೆ ಹಣ್ಣುಗಳನ್ನು ನಮ್ಮ ಬಾಯಿಗಿಡುವ ಮರಗಳ  ಸರಳ,  ಸುಂದರ ಹೃದಯದ ಅನಾವರಣವನ್ನು ನಮ್ಮ ಪಾಠಗಳು ಮಾಡಿಕೊಡಲಿಲ್ಲ.  

ಗಿಡಗಳನ್ನು ಹೆಸರಿಸಿ ಎಂದರೆ ಗುಲಾಬಿ, ಮಲ್ಲಿಗೆ  ಹೇಳಿ ಕಣ್ಣುಗಳನ್ನು ಮೇಲೆತ್ತಿ ನೆನಪಿಸಿಕೊಳ್ಳುತ್ತಾ  ನಿಲ್ಲುವ ನಾವು  ಉತ್ತರಾಣೆ, ಉಮ್ಮತ್ತಿ, ಕುಪ್ಪಿ,  ಹಿಪ್ಪಲಿ,  ದೊಡ್ಡಾಲೆ ಕುಡಿ,  ಬೆಕ್ಕಿನ  ಬುಡ್ಡೆ,  ದತ್ತೂರಿ, ಕಳ್ಳಿ, ಸೀಮೇಸೀಗೆ ಇರುವುದನ್ನು ನಮ್ಮ ಪಾಠ  ಹೇಳಿಕೊಡಲಿಲ್ಲ .. ಇವುಗಳ ಪರೋಪಕಾರದ ಬಗ್ಗೆ ನಮ್ಮದು ಶೂನ್ಯ ಜ್ಞಾನ. 

ಪಕ್ಷಿಗಳನ್ನು ಹೆಸರಿಸಿ ಎಂದರೆ ರಾಷ್ಟ್ರ ಪಕ್ಷಿ ನವಿಲು ಬಿಟ್ಟರೆ ಗಿಳಿ,  ಪಾರಿವಾಳ ಎರಡನ್ನು ಹೇಳಿ ಹಲ್ಲು ಗಿಂಜಿ  ನಿಲ್ಲುವ  ನಾವೂ..! ಎಂದಾದರೂ ಗುಬ್ಬಿ,  ಗೊರವಂಕ,  ಗೀಜಗ,  ಗಿಡುಗ, ಮರಕುಟಿಕ, ಪುರ್ಲೆ ಹಕ್ಕಿ,  ಪೊದೆ ಹಕ್ಕಿ, ಪೊಟರೆ ಹಕ್ಕಿ, ಕಾಜಾಣ, ಗದ್ದೆ ಗೊರವ, ಕೆಂಬೂತಗಳನ್ನು ಹೆಸರಿಸುವ ಮಟ್ಟಕ್ಕೆ, ಗುರುತಿಸುವ ಮಟ್ಟಕ್ಕೆ ತಲೆ ಒಳಗೆ ಏನೂ ಬೆಳೆಸಿಕೊಳ್ಳಲಿಲ್ಲ ಆ ಪಾಠಗಳಲ್ಲಿ !! ಮತ್ತೇನು… ಈ ಮರಗಳೆಲ್ಲ, ಗಿಡಗಳೆಲ್ಲ, ಹಕ್ಕಿಗಳೆಲ್ಲಾ ನಮ್ಮ ಒಡಹುಟ್ಟಿದವರೇ…ಆದರೂ ಅವರೆಲ್ಲ ಅಪರಿಚಿತರು ನಮಗೆ. 

ಬೇಲಿಯರಸ ಓತಿಕ್ಯಾತ,  ಗೋಡೆ ರಾಣಿ ಹಲ್ಲಿ, ಬಣ್ಣದ ಬಟ್ಟೆಯ ಚಿಟ್ಟೆ,  ಮತ್ತೆ ಮತ್ತೆ ಗರ್ಭ ಕಟ್ಟಿ ಹಾಲನೀವ ಹಸು,  ತಣ್ಣಗೆ ತೆವಳುವ ಬಸವನಹುಳು, ಮುಗ್ಧ ಮುಖದ ಗಾರ್ದಭ, ಸೂರ್ಯನತ್ತ ತಿರುಗುವ ಸೂರ್ಯಕಾಂತಿ,  ಘಮ್ಮೆನ್ನುವ ಮಲ್ಲಿಗೆ, ಗುರ್ರ್  ಎನ್ನುವ ಮೃಗ ರಾಜ,  ಗಂಭೀರ ಗಜರಾಜ  ಎಲ್ಲರೂ, ಇವರೆಲ್ಲರೂ ಮರದ ಒಡಲಿಗೆ  ಕೊಡಲಿ  ಹಾಕದೆ, ಭೂ ಗರ್ಭಕ್ಕೆ ಕೊಳವೆ ಹಾಕದೆ, ಜೀವ ದಾಯಿನಿಯರ ಬಾಯಿಗೆ ವಿಷಪ್ರಾಶನ ಮಾಡದೇ,   ಕೇವಲ ಕ್ಷಣಿಕ ಸುಖದ ಲಾಲಸೆಗೆ ಪ್ರಕೃತಿಯನ್ನು ದುಡಿಸಿಕೊಳ್ಳದೆಯೇ  ತಮ್ಮಷ್ಟಕ್ಕೆ ತಾವೇ ಬದುಕುತ್ತಿವೆ ಎಂದು ನಮ್ಮ ಕೈ, ಮೈ, ತಲೆ, ಕಾಲು , ಚರ್ಮ,  ಬಟ್ಟೆ ಎಲ್ಲವನ್ನೂ ತೊಳೆದು ಶುದ್ಧ ಮಾಡಿ  ಕೊಡುವ ನಿರುಪದ್ರವಿ- ಪರೋಪಕಾರಿ ಅಂಟುವಾಳಕ್ಕೆ ಧನ್ಯವಾದ ಹೇಳುವ ವಿವೇಚನೆಯನ್ನು ನಮ್ಮ ಪಾಠ ಕಲಿಸಲಿಲ್ಲ..! ಹಣ್ಣು ತಿಂದು ಉಗಿದ ಬೀಜವು ಅಲ್ಲೇ ಮೊಳೆತು ಹೆಮ್ಮರವಾಗಿ ಜೊಂಪೆ ಜೊಂಪೆ ಹಣ್ಣುಗಳನ್ನು ನಮ್ಮ ಬಾಯಿಗಿಡುವ ಮರಗಳ  ಸರಳ,  ಸುಂದರ ಹೃದಯದ ಅನಾವರಣವನ್ನು ನಮ್ಮ ಪಾಠಗಳು ಮಾಡಿಕೊಡಲಿಲ್ಲ.  

ಗಿಡಗಳನ್ನು ಹೆಸರಿಸಿ ಎಂದರೆ ಗುಲಾಬಿ, ಮಲ್ಲಿಗೆ  ಹೇಳಿ ಕಣ್ಣುಗಳನ್ನು ಮೇಲೆತ್ತಿ ನೆನಪಿಸಿಕೊಳ್ಳುತ್ತಾ  ನಿಲ್ಲುವ ನಾವು  ಉತ್ತರಾಣೆ, ಉಮ್ಮತ್ತಿ, ಕುಪ್ಪಿ,  ಹಿಪ್ಪಲಿ,  ದೊಡ್ಡಾಲೆ ಕುಡಿ,  ಬೆಕ್ಕಿನ  ಬುಡ್ಡೆ,  ದತ್ತೂರಿ, ಕಳ್ಳಿ, ಸೀಮೇಸೀಗೆ ಇರುವುದನ್ನು ನಮ್ಮ ಪಾಠ  ಹೇಳಿಕೊಡಲಿಲ್ಲ .. ಇವುಗಳ ಪರೋಪಕಾರದ ಬಗ್ಗೆ ನಮ್ಮದು ಶೂನ್ಯ ಜ್ಞಾನ. 

ಪಕ್ಷಿಗಳನ್ನು ಹೆಸರಿಸಿ ಎಂದರೆ ರಾಷ್ಟ್ರ ಪಕ್ಷಿ ನವಿಲು ಬಿಟ್ಟರೆ ಗಿಳಿ,  ಪಾರಿವಾಳ ಎರಡನ್ನು ಹೇಳಿ ಹಲ್ಲು ಗಿಂಜಿ  ನಿಲ್ಲುವ  ನಾವೂ..! ಎಂದಾದರೂ ಗುಬ್ಬಿ,  ಗೊರವಂಕ,  ಗೀಜಗ,  ಗಿಡುಗ, ಮರಕುಟಿಕ, ಪುರ್ಲೆ ಹಕ್ಕಿ,  ಪೊದೆ ಹಕ್ಕಿ, ಪೊಟರೆ ಹಕ್ಕಿ, ಕಾಜಾಣ, ಗದ್ದೆ ಗೊರವ, ಕೆಂಬೂತಗಳನ್ನು ಹೆಸರಿಸುವ ಮಟ್ಟಕ್ಕೆ, ಗುರುತಿಸುವ ಮಟ್ಟಕ್ಕೆ ತಲೆ ಒಳಗೆ ಏನೂ ಬೆಳೆಸಿಕೊಳ್ಳಲಿಲ್ಲ ಆ ಪಾಠಗಳಲ್ಲಿ !! ಮತ್ತೇನು… ಈ ಮರಗಳೆಲ್ಲ, ಗಿಡಗಳೆಲ್ಲ, ಹಕ್ಕಿಗಳೆಲ್ಲಾ ನಮ್ಮ ಒಡಹುಟ್ಟಿದವರೇ…ಆದರೂ ಅವರೆಲ್ಲ ಅಪರಿಚಿತರು ನಮಗೆ. 

ಬೇಲಿಯರಸ ಓತಿಕ್ಯಾತ,  ಗೋಡೆ ರಾಣಿ ಹಲ್ಲಿ, ಬಣ್ಣದ ಬಟ್ಟೆಯ ಚಿಟ್ಟೆ,  ಮತ್ತೆ ಮತ್ತೆ ಗರ್ಭ ಕಟ್ಟಿ ಹಾಲನೀವ ಹಸು,  ತಣ್ಣಗೆ ತೆವಳುವ ಬಸವನಹುಳು, ಮುಗ್ಧ ಮುಖದ ಗಾರ್ದಭ, ಸೂರ್ಯನತ್ತ ತಿರುಗುವ ಸೂರ್ಯಕಾಂತಿ,  ಘಮ್ಮೆನ್ನುವ ಮಲ್ಲಿಗೆ, ಗುರ್  ಎನ್ನುವ ಮೃಗ ರಾಜ,  ಗಂಭೀರ ಗಜರಾಜ  ಎಲ್ಲರೂ, ಇವರೆಲ್ಲರೂ ಮರದ ಒಡಲಿಗೆ  ಕೊಡಲಿ  ಹಾಕದೆ, ಭೂ ಗರ್ಭಕ್ಕೆ ಕೊಳವೆ ಹಾಕದೆ, ಜೀವ ದಾಯಿನಿಯರ ಬಾಯಿಗೆ ವಿಷಪ್ರಾಶನ ಮಾಡದೇ,   ಕೇವಲ ಕ್ಷಣಿಕ ಸುಖದ ಲಾಲಸೆಗೆ ಪ್ರಕೃತಿಯನ್ನು ದುಡಿಸಿಕೊಳ್ಳದೆಯೇ  ತಮ್ಮಷ್ಟಕ್ಕೆ ತಾವೇ ಬದುಕುತ್ತಿವೆ ಎಂದು ನಮ್ಮ ಪಾಠಗಳು ಎಂದಾದರೂ ಹೇಳಿಕೊಟ್ಟಿವೆಯೇ..? 

ಬೇಗ ಬೇಗ ಸೂತ್ರ,  ಸಮೀಕರಣ,  ಸಂಯುಕ್ತ, ಸಂಚಲನ ವನ್ನೆಲ್ಲಾ ಕಲಿತು ಸಂಪಾದನೆಗಾಗಿ ಯೋಗ್ಯನನ್ನಾಗಿಸುವುದಕ್ಕೆ ಅದೆಷ್ಟು ಕಾತರ ನಮಗೆ. ಸಮಾಧಾನ,  ಸಂಸ್ಕಾರ, ಸಂಸ್ಕೃತಿ, ಸಂಬಂಧ,  ಸಹಕಾರ, ಸಹವಾಸದ ಪಾಠ ಹೇಳಲು ಈಗ ಸಿಕ್ಕಷ್ಟು ಸಮಯ ಮತ್ತೆಂದು..? ಶಾಲೆಗೆ ಹೋಗದ ದಿನಗಳು  ವ್ಯರ್ಥ,   ಶಾಲೆಗೆ ಹೋಗದ ಬಾಳು ಹೀನಾಯ,   ಶಾಲೆ ಇರದಿದ್ದರೆ ಆಯಸ್ಸೇ  ಕಡಿಮೆಯಾಯಿತೆಂದು ತಲೆ ಮೇಲೆ ಕೈಯಿಟ್ಟು ಕೊರಗುವ ಅಮ್ಮ-ಅಪ್ಪ ನಿಮಗಿದೋ  ನನ್ನದೊಂದು ನಮನ..

ಕೊಪ್ಪರಿಗೆಯಲ್ಲಿ ಹದವಾಗಿ ಕುದಿಯುತ್ತಿದ್ದ ದ್ರವ ಬೆಲ್ಲದ ಘಮ,  ಕೆಕ್ಕರಿಕೆ ಹಣ್ಣಿನ ಕರಗುವಿಕೆ,  ಎಳೆ ಜೋಳದ ತೆನೆಯ ಜಗಿದಾಗ ಹೊರಡುವ ಹಾಲು,  ಲೈಟ್ ಕಂಬಕ್ಕೆ ಮುಖಮಾಡಿ ಹತ್ತಿಪತ್ ಮೂವತ್ ನಲವತ್  ಎಣಿಸಿಕೊಂಡು ಓಡಿಹೋಗಿ ಹುಲ್ಲು ಮೆದೆಯಲ್ಲೋ,  ತಿಪ್ಪೆ ಹಿಂದೆಯೋ,  ಬೇಲಿ ಮರೆಯಲ್ಲೋ  ಅವಿತು ಕುಳಿತಿದ್ದವನ ಕಾಲಿನ ಬೆವರು… ಇದೆಲ್ಲ ಸುಖ ಎಂದು   ನಮ್ಮ ಪಾಠಗಳು ಹೇಳಿಕೊಟ್ಟಿವೆಯೇ.. 

ಓದು ಓದು, ಓಡು ಓಡು… ಎಲ್ಲಿಯೂ ನಿಧಾನವಿಲ್ಲ. ನಿಂತರೆ ನಿರ್ನಾಮ ಅಂತಲೇ ಹೇಳಿ ಕೊಡುತ್ತಿವೆ ನಮ್ಮ ಪಾಠಗಳು..  `ಅತಿ ವೇಗ ತಿಥಿ ಬೇಗ’ ನಾಣ್ಣುಡಿ ಗೆ  ಸಾಕ್ಷಿಯಾಗಿ ನಿಂತಿದೆ ನಮ್ಮ ಪೃಥ್ವಿ. ಕೇವಲ ಇಪ್ಪತ್ತು ವರ್ಷಗಳಲ್ಲಿ 2000 ವರ್ಷಗಳ ಬೆಳವಣಿಗೆಯನ್ನು ಮೀರಿ  ತಲುಪಿದ್ದೇವೆ. ಇನ್ನಾದರೂ ಈ  ನಾಗಾಲೋಟ ನಿಲ್ಲಿಸಿ ಓಡಿ ಬಂದ  ಹಾದಿಯಲ್ಲಿ ಖಾಲಿಯಾದ,  ಕೊಲೆಯಾದ, ಕಾಣೆಯಾದ, ಕಳ್ಳತನವಾದ ಭೂ  ಸಂಪತ್ತಿನ ಕಡೆಗೆ,  ಕಂಗಾಲಾದ ಜೀವ ವೈವಿಧ್ಯದ ಕಡೆಗೆ ಕಣ್ಣು ಹಾಯಿಸುವ ಪಾಠ ಹೇಳಿಕೊಡಲು ಈ ಬಿಡುವು ಸಾಕೇ..? ನಾವು ನಿಂತರಷ್ಟೇ ಮುಂದೆ ಬದುಕು,  ಓಡಿದರೆ ನಿರ್ನಾಮ  ಎಂಬ ಪಾಠವನ್ನು ಈಗಲಾದರೂ ನಾವು ಮಕ್ಕಳಿಗೆ ಹೇಳಬೇಕಿದೆ ಅಲ್ಲವೇ?  ಮುಂದಿನ ದಿನಗಳಲ್ಲಿ ಓಡುವಾಗ ವೇಗ ಎಷ್ಟಿರಬೇಕು  ಎತ್ತ ಕಣ್ಣು ಹಾಯಿಸಬೇಕು, ಎಲ್ಲಿ ನಿಲ್ಲಬೇಕು  ಎಂದು ತಿಳಿಸಲು ನಮಗೆ  ಇಷ್ಟು ಸಮಯ ಸಾಕಾಯಿತೆ? 

ಏನೂ ಮಾಡದೆ ಸುಮ್ಮನಿರುವುದೇ ಅಪರಾಧವಾಗಿದೆ. ಮಗು  ಪುಸ್ತಕ ಹಿಡಿಯದಿದ್ದರೆ,  ಹಿಡಿದಿದ್ದನ್ನು ಓದದಿದ್ದರೆ,  ಹೇಳಿದ್ದನ್ನು ಬರೆಯದಿದ್ದರೆ ಅವನೇ ಮೂರ್ಖ. ಏನಾದರೂ ಮಾಡುತ್ತಿರಬೇಕು. 

ಊಟ, ನಿದ್ದೆ, ವಿಸರ್ಜನಾ ಕ್ರಿಯೆ  ಇಷ್ಟಲ್ಲದೆ ಬೇರೇನಾದರೂ  ಮಾಡದಿದ್ದರೆ  ಜೀವನ ಅನುಪಯುಕ್ತ ಎಂದು ನಮಗೆ ನಾವೇ ಅಂದುಕೊಳ್ಳುತ್ತೇವೆ.

ಗಿಳಿ, ಗುಬ್ಬಿಗಳಂತೆ ಇದ್ದುದನ್ನು ತಿಂದು ಉಳಿದಿದ್ದನ್ನು ಪರರಿಗೆ ಬಿಟ್ಟು ಇನ್ನೆಲ್ಲೋ ಹಾರಿ, ಇದೆಲ್ಲಾ ಕೊಟ್ಟ ಪ್ರಕೃತಿಗೆ ಚಿಲಿಪಿಲಿಯ ಧನ್ಯವಾದ ಹೇಳಿ, ಮುಗ್ಧ ನೋಟ ಬೀರಿ, ಕತ್ತಲಾದರೆ  ಕಣ್ಮುಚ್ಚಿ… ಏನನ್ನೂ  ಕೆಡಿಸದೆ,  ಕಡಿಯದೆ, ಯಾರನ್ನೂ ಕುಕ್ಕದೆ ಬದುಕುತ್ತಿರುವ  ಅವುಗಳ  ನಿರ್ಮಲ ಬದುಕನ್ನು.. ಆ ಬದುಕಿನ ಸೊಬಗನ್ನು ಹೊಗಳಿದೆಯೇ ನಮ್ಮ ಪಾಠ..? 

ಹಾಗಾದರೆ ನಮ್ಮೆಲ್ಲರ ನಿಜ  ಗುರುಗಳು ಗಿಳಿ- ಗುಬ್ಬಿ, ಗೊರವಂಕ,  ಗೀಜಗಗಳೇ  ಅನಿಸುತ್ತಿದೆ.. ನಾವು ಕಲಿಯಬೇಕಾದ ಪಾಠ `ನಿರುಪದ್ರವಿ ಬದುಕು’ ಅನಿಸುತ್ತಿದೆ.


ಮಮತಾ ಪ್ರಭು, ಹಾಸನ.
[email protected] 

error: Content is protected !!