ಕೊರೊನಾ ಕಾಯಿಲೆ (ಕೋವಿಡ್-19) ಈ ಪದ ಕೆಲವು ತಿಂಗಳಿಂದ ಮನೆ ಮಾತಾಗಿದೆ. ಇದು ಈ ಪೀಳಿಗೆಯ ಜನರಿಗೆ ಒಂದು ಅದ್ಭುತವಾದ ಅನುಭವವನ್ನು ತಂದೊದಗಿಸಿದೆ. ಈ ಕಾಯಿಲೆ ನಮ್ಮ ಆರೋಗ್ಯ ರಕ್ಷಣಾ ಸಂಸ್ಥೆಗೂ ಒಂದು ಸವಾಲಾಗಿ ಪರಿಣಮಿಸಿದೆ.
ಅತಿ ಹೆಚ್ಚು ಸಾಂಕ್ರಾಮಿಕತೆ ಇರುವ ಕಾರಣ ಇದು ಎಲ್ಲರನ್ನು ಭಯಭೀತಗೊಳಿಸಿದೆ. 10 ನಿಮಿಷಗಳ ಕಾಲ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಇದ್ದರೆ ಬರುವ ಈ ರೋಗಕ್ಕೆ ಚಿಕಿತ್ಸೆ ಕೊಡುವ ವೈದ್ಯರು, ಆರೋಗ್ಯ ಸಿಬ್ಬಂದಿ ಗಳು ಹಾಗೂ ನರ್ಸ್ಗಳಲ್ಲಿ ಆತಂಕ ಸೃಷ್ಟಿ ಮಾಡಿದೆ.
85 ರೋಗಿಗಳಲ್ಲಿ ರೋಗವು ಸಂಪೂರ್ಣವಾಗಿ ಗುಣಮುಖವಾಗುವು ದಾದರೂ ವಯೋವೃದ್ಧರಲ್ಲಿ (60 ವರ್ಷ ಮೇಲ್ಪಟ್ಟು) ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಉಸಿರಾಟದ ಸಮಸ್ಯೆಗಳು ಅಥವಾ ರೋಗ-ನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ (ಏಡ್ಸ್ ರೋಗಿ, ಕ್ಯಾನ್ಸರ್ ಬಂದಂತಹ ರೋಗಿಗಳು, ಮೂತ್ರಪಿಂಡ ಸಮಸ್ಯೆ ಇರುವ) ಇದು ಉಲ್ಬಣವಾಗಿ ಉಸಿರಾಟದ ತೊಂದರೆ ಬರುತ್ತದೆ. ಅಂತಹವರನ್ನು ಆಸ್ಪತ್ರೆಗೆ ಸೇರಿಸಿ, ಅದರಲ್ಲೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡುವುದು ಅತ್ಯಗತ್ಯ. ಉಸಿರಾಟದ ಸಮಸ್ಯೆಯಿಂದ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗತೊಡಗುತ್ತದೆ. ಇದು ರೋಗಿಯ ಪ್ರಾಣಕ್ಕೆ ಸಂಚಕಾರ ತರುತ್ತದೆ. ಇದರ ಜೊತೆ ಬೇರೆ ಅಂಗಾಂಗಗಳೂ ಕ್ರಿಯಾಶೀಲತೆ ಕಳೆದುಕೊಳ್ಳುವ ಹಾಗೆ ಮಾಡುತ್ತದೆ. ಇವೆಲ್ಲವನ್ನೂ ತಿಳಿದು ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿ ಮರುಜೀವ ತುಂಬುವ ಪಾತ್ರ ಅರಿವಳಿಕೆ ತಜ್ಞರದ್ದು.
ತೆರೆಯ ಮರೆಯಲ್ಲಿ ತಮ್ಮ ನಿಸ್ವಾರ್ಥ ಸೇವೆಗೈದು ತಮ್ಮ ಅಸ್ತಿತ್ವದ ಕಾಣದ ಅರಿವಳಿಕೆ ತಜ್ಞರು ಈಗ ಕೊರೊನಾ ಕಾಯಿಲೆಯಿಂದಾಗಿ ಮುಂಚೂಣಿಯ ಯೋಧರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಈ ಆಧುನಿಕ ಔಷಧೀಕರಣದ ಯುಗದಲ್ಲಿ ಹೆಸರು ಮಾಡುತ್ತಿರುವವರು ಅರಿವಳಿಕೆ ತಜ್ಞರು. ಮುಂಚೆ ಕೇವಲ ನೋವು ನಿವಾರಣೆ, ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಅರಿವನ್ನು ಅಳಿಸಿ ನೋವನ್ನು ನಿಯಂತ್ರಣಗೊಳಿಸುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಪುನರುಜ್ಜೀವಗೊಳಿಸುವ ಕಲೆ, ನೋವು ರಹಿತ ಹೆರಿಗೆ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅರಿವಳಿಕೆ ತಜ್ಞರಿಗೆ ಈಗ ಕೊರೊನಾ ಒಂದು ದೊಡ್ಡ ಜವಾಬ್ದಾರಿಯ ಕೆಲಸ ಕಲ್ಪಿಸಿದೆ.
ಕೊರೊನಾ ಸೋಂಕಿತ ವ್ಯಕ್ತಿಗಳಲ್ಲಿ ಉಸಿರಾಟದ ತೊಂದರೆ ಬಂದಾಗ ರಕ್ತದಲ್ಲಿ ಆಮ್ಲಜನಕ ಕಡಿಮೆಯಾಗತೊಡಗುತ್ತದೆ. ಆಗ ಅವರಿಗೆ ಸಂಜೀವಿನಿ ರೂಪದಲ್ಲಿ ಆಮ್ಲಜನಕದ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ರೋಗಿಗೆ ಉಸಿರಾಟದ ಸಮಸ್ಯೆ (Oxygen Saturation) ಎಷ್ಟಿದೆ, ಅವರು ಎಷ್ಟು ಶ್ರಮಪಟ್ಟು ಉಸಿರಾಟ ಮಾಡುತ್ತಿದ್ದಾರೆ, ಅವರು ಪ್ರಜ್ಞಾಹೀನ ಸ್ಥಿತಿಗೆ ಹೋಗಿರುವರೇ? ಇವೆಲ್ಲವನ್ನು ಗಮನಿಸಿ, ಅವರ ಪರಿಸ್ಥಿತಿಗೆ ತಕ್ಕಂತೆ Non Rebreathing face mask ನಲ್ಲೂ, High Flow Nasal Oxygen ಮುಖಾಂತರವು ಅಥವಾ NIV ಮೂಲಕ ಸರಿ ಪ್ರಮಾಣದಲ್ಲಿ ಸರಿಯಾದ ತೇವಾಂಶ ಹಾಗೂ ಉಷ್ಣಾಂಶವನ್ನು ಗಮನದಲ್ಲಿಟ್ಟುಕೊಂಡು ಆಮ್ಲಜನಕವನ್ನು ಕೊಡುತ್ತಾರೆ. ರೋಗಿಯ ಆಮ್ಲಜನಕ ತುಂಬಾ ಕಡಿಮೆಯಾದಲ್ಲಿ ಅಥವಾ ಪ್ರಜ್ಞಾಹೀನ ಸ್ಥಿತಿ ತಲುಪಿದಾಗ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆ (Ventilator) ಗೆ ಹಾಕಲಾಗುತ್ತದೆ. ಕಾಯಿಲೆ ತುಂಬಾ ಉಲ್ಬಣವಾದ ಸ್ಥಿತಿಯಲ್ಲಿ ರೋಗಿಯನ್ನು ಗುಣಪಡಿಸುವುದು, ರೋಗಿಗೆ ಪುನರ್ಜನ್ಮ ನೀಡಲು ವೈದ್ಯರು, ಆರೋಗ್ಯ ಸಿಬ್ಬಂದಿ, ನರ್ಸ್ಗಳು ಅವಿರತವಾಗಿ ಹೋರಾಡುತ್ತಾ ರೋಗಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ಅರಿವಳಿಕೆ ತಜ್ಞರು ತೀವ್ರ ನಿಗಾ ಘಟಕದಲ್ಲಿ Ventilator ನಲ್ಲಿರುವ ರೋಗಿಗಳಿಗೆ ಉಸಿರಾಟದ ನಳಿಕೆ ಯನ್ನು ಹಾಕಿ (Intubation) ಉಸಿರಾಟವನ್ನು ನಿಯಂ ತ್ರಿಸುತ್ತಾರೆ. ಈ ಉಸಿರಾಟದ ನಳಿಕೆಯನ್ನು ಹಾಕುವುದು ತುಂಬಾ ಕೌಶಲ್ಯದ ಕೆಲಸ. ನಳಿಕೆಯನ್ನು ಹಾಕುವ ಸಮಯದಲ್ಲಿ ರೋಗಿಯ ಪ್ರಾಣ ಹೋಗುವ ಸಾಧ್ಯತೆಗಳು ತುಂಬಾ ಹೆಚ್ಚು. ಹಾಗಾಗಿ ತುಂಬಾ ಸೂಕ್ಷ್ಮವಾಗಿ, ಚಾತುರ್ಯದಿಂದ ನೆರವೇರಿಸಬೇಕು. ಐ.ಸಿ.ಯು.ನಲ್ಲಿ ಕೆಲಸದ ಒತ್ತಡ ಬೇರೆ, ಎಲ್ಲಾ ಕ್ಷೇತ್ರಗಳಿಗಿಂತ ಅತೀ ಹೆಚ್ಚು ಒತ್ತಡ ಇರುತ್ತದೆ. ವೈದ್ಯರು, ಆರೋಗ್ಯ ಸಿಬ್ಬಂದಿಗಳು 6 ರಿಂದ 8 ತಾಸುಗಳ ಕಾಲ ಅಲ್ಲಿಯೇ ಇದ್ದು, ಪಾಳಿಯ ಪ್ರಕಾರ ಪಿ.ಪಿ.ಇ. ಕಿಟ್ ಧರಿಸಿ ಕೆಲಸ ನಿರ್ವಹಿಸುತ್ತಾರೆ. ರೋಗಿಯ ಸ್ಥಿತಿ ತುಂಬಾ ಏರಿಳಿತ ಕಾಣುತ್ತಿರುತ್ತದೆ ಹಾಗಾಗಿ ತುಂಬಾ ಎಚ್ಚರದಿಂದ ಆಮ್ಲಜನಕದ ಪ್ರಮಾಣ, ಅರಿವಿನ ಏರಿಳಿತಗಳು, ಸೋಂಕು ನಿವಾರಣೆ ಮತ್ತು ನಿಯಂತ್ರಣ, ಹೃದಯದ ಕಾರ್ಯಸ್ಥಿರತೆ ಎಲ್ಲವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾಗುತ್ತದೆ. ವೆಂಟಿಲೇಟ ರ್ನಿಂದ ರೋಗಿಯನ್ನು ಸಾಮಾನ್ಯ ಉಸಿರಾಟಕ್ಕೆ ಹೊಂದುವಂತೆ ಮಾಡುವುದು ಹರಸಾಹಸವಾಗಿರುತ್ತದೆ.
ಉಸಿರಾಟದ ನಳಿಕೆ (Intubation) ಹಾಕುವುದು, ಅನ್ನನಾಳಕ್ಕೆ ನಳಿಕೆಯನ್ನು ಏರಿಸುವುದು (Ryle’s tube insertion), ರಕ್ತನಾಳಕ್ಕೆ ಸೂಜಿಯನ್ನು ಸ್ಥಿರಗೊಳಿಸುವುದು (Central line placement) ಅರಿವಳಿಕೆ ತಜ್ಞರುಗಳೇ ಮಾಡಬೇಕಾದ ಕೆಲಸಗಳು. ಇದು ತುಂಬಾ ಅಪಾಯಕಾರಿ ಕೆಲಸ. ಇದರಲ್ಲಿ ತಜ್ಞರಿಗೆ ಸೋಂಕು ಉಂಟಾಗುವ ಸಾಧ್ಯತೆಗಳು ತುಂಬಾ ಹೆಚ್ಚು. ರೋಗಿಗೆ ತುಂಬಾ ಸಮೀಪದಲ್ಲಿ ಬಂದು ಅವರನ್ನು ಮುಟ್ಟಿ ಮಾಡುವ ಈ ಎಲ್ಲಾ ಕಾರ್ಯಗಳು ಅರಿವಳಿಕೆ ತಜ್ಞರನ್ನು ಬೇರೆ ವೈದ್ಯರಿಗಿಂತ ಭಿನ್ನ ಹಾಗೂ ವಿಶೇಷ ತಜ್ಞರನ್ನಾಗಿ ಮಾಡಿದೆ.
ಅರಿವಳಿಕೆ ವಿಭಾಗದ ಕಿರಿಯ ನಿವಾಸಿ ವೈದ್ಯರಿಂದ ಹಿಡಿದು, ಹಿರಿಯ ವೈದ್ಯರು ಮುಖ್ಯಸ್ಥರುಗಳ ತನಕ ಅವಿರತವಾಗಿ ತಮ್ಮ ಕೈಮೀರಿ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆ ಇಡೀ ಜಗತ್ತೇ ಸಾಮಾಜಿಕ ಅಂತರದ ಬಗ್ಗೆ ಹೇಳಿದರೆ, ಇದು ಅರಿವಳಿಕೆ ತಜ್ಞರಿಗೆ ವಿರುದ್ಧವಾಗಿ ರೋಗಿಯ ಸಮೀಪದಲ್ಲೇ ಚಿಕಿತ್ಸೆ ಕೊಡುವ ಸನ್ನಿವೇಶ ಇದರಿಂದ ಉಂಟಾಗಿದೆ.
ರೋಗಿಗಳ ಸಂಖ್ಯೆ ಹೆಚ್ಚಾದಂತೆ ಅವರಿಗೆ ಸೋಂಕಿನ ಸಾಧ್ಯತೆಯೂ ಹೆಚ್ಚು. ಅತಿಯಾದ ಕಾರ್ಯದ ಹೊರೆ, ಮಾನಸಿಕ ಒತ್ತಡ ಹೆಚ್ಚಾಗಿದೆ. ಕೆಲವೊಮ್ಮೆ ನಿದ್ರಾಹೀನ ಸ್ಥಿತಿ, ರೋಗಿಗಳ ನರಳಾಟದ ಸನ್ನಿವೇಶಗಳು, ರೋಗಿಯ ಕೊನೆಯ ಮಾತುಗಳು ಹಾಗೂ ಹೆಚ್ಚುತ್ತಿರುವ ಸಾವುಗಳ ಸಂಖ್ಯೆ ಅವರನ್ನು ಮಾನಸಿಕ ಖಿನ್ನತೆಗೆ ದೂಡುತ್ತವೆ. ಇದು ತಜ್ಞರ ಪಾಲಿಗೆ ನಿಲ್ಲದೇ ಅವರ ಪರಿವಾರದವರಿಗೂ ಕೂಡಾ ಸೋಂಕು ಹರಡುವ ಭಯವನ್ನು ಅವರಲ್ಲಿ ಹುಟ್ಟಿಸಿದೆ. ಇಲ್ಲಿಯ ತನಕ ಶೇ.50-60 ಅರಿವಳಿಕೆ ತಜ್ಞರುಗಳು ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಗುಣಮುಖರಾಗಿ ಪುನಃ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಐ.ಸಿ.ಯು.ನಲ್ಲಿ ಕೆಲಸ ಮಾಡಿದ ಎಲ್ಲರಿಗೂ ವಾರಕ್ಕೊಮ್ಮೆ ಕೊರೊನಾ ಸೋಂಕಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿದೆ.
`With great power comes great responsibility’ ಅನ್ನುವ ಹಾಗೆ ವಿಶೇಷವಾಗಿ ಮಾಡುವ ಕೆಲಸದಿಂದ ಅತಿ ದೊಡ್ಡ ಜವಾಬ್ದಾರಿಯನ್ನು ಈ ಕೊರೊನಾ ಕಾಯಿಲೆ ಅರಿವಳಿಕೆ ತಜ್ಞರಿಗೆ ಕರುಣಿಸಿದೆ.
ಈ 2020 ವಿಶ್ವ ಅರಿವಳಿಕೆ ದಿನದಂದು ಅವಿರತ ಸೇವೆ ಹಾಗೂ ತಮ್ಮ ಕೈಮೀರಿ ಪ್ರಯತ್ನದಿಂದ ಕೊರೊನಾ ರೋಗಿಗಳಿಗೆ ಸೇವೆ ಸಲ್ಲಿಸಿ, ಎಷ್ಟೋ ವೈದ್ಯರುಗಳು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅವರಿಗೆ ನಾವು ಗೌರವಪೂರ್ವಕವಾದ ನಮನವನ್ನು ತಿಳಿಸುತ್ತಾ, ಎಲ್ಲರಿಗೂ ‘ವಿಶ್ವ ಅರಿವಳಿಕೆ ದಿನ’ದ ಅಭಿನಂದನೆಯನ್ನು ತಿಳಿಸುತ್ತೇನೆ.
ಡಾ|| ಶಿಲ್ಪಶ್ರೀ ಎ.ಎಂ.
ಪ್ರಾಧ್ಯಾಪಕರು, ಜೆ.ಜೆ.ಎಂ. ವೈದ್ಯಕೀಯ
ಕಾಲೇಜು, ದಾವಣಗೆರೆ.