`ಕೊರೊನಾ ಯುಗಾದಿ’ ತಂದಿಟ್ಟ ಡಬ್ಬಲ್ ಧಮಾಕಾ..

ಎರಡು ದಿನದಿಂದ ನೋಡ್ತಾ ಇದ್ದೀನಿ ನಮ್ಮ ಯಜಮಾನರು ತುಂಬಾ ಖುಷ್‌ ಖುಷಿಯಾಗಿದ್ದರು…

ನನಗ್ಯಾಕೋ ಸ್ವಲ್ಪ ಅನುಮಾನ ಬಂದು ಹಾಗೇ ಹುಬ್ಬೇರಿಸಿ..ಏನಾಯ್ತು ಇವರಿಗೆ…. ಇದ್ದಕ್ಕಿದ್ದಂತೆ ಇಷ್ಟು ಖುಷಿಯಾಗಿದ್ದಾರೆ ಅಂದ್ರೆ ಏನೋ ವಿಷಯ ಇದ್ದೇ ಇರಬೇಕು. ಹೇಗಾದರೂ ತಿಳ್ಕೋಬೇಕಲ್ಲ ಅನಿಸಿತು. ಅವರನ್ನೇ ಕೇಳೋಣ ಅಂದ್ರೆ… ಹೆಂಡತಿ ಏನೇ ಕೇಳಿದ್ರೂ ಹಾರಿಕೆ ಉತ್ತರವೇ ನೀಡಬೇಕು ಎಂದು ಫಿಕ್ಸ್‌ ಆಗಿರೋ ಯಜಮಾನರ ಬಳಿ ಕೇಳೋಕೆ ನನ್ನ ಸ್ವಾಭಿಮಾನ ಅಡ್ಡ ಬಂತು.

ಶುರುವಾಯ್ತು ನೋಡು ಜಾಸೂಸ್…ಏನಿರಬಹುದು… ಅವರ ತಂಗಿ, ಭಾವ ಬರುತ್ತಾರಾ…ಇಲ್ಲ ಬಿಡು ಕೊರೊನಾ ಭೀತಿಯಿಂದ ಕರ್ನಾಟಕವೇ ಲಾಕ್‌ಡೌನ್ ಆದಾಗ ಯಾಕ್‌ ಬರ್ತಾರೆ ಅನ್ನಿಸ್ತು. ಮತ್ತೇನಿರಬಹುದು. ತಲೆಗೆ ಹುಳ ಹೊಕ್ಕಿ ಕುಳಿತು ಕೊರೆಯಲು ಪ್ರಾರಂಭಿಸಿತು.

ಹೀಗೇ ಯೋಚಿಸ್ತಾ ಕುಳಿತಿದ್ದವಳಿಗೆ ನಮ್ಮವರ  ಫೋನ್ ರಿಂಗಾಗಿದ್ದೇ ಗೊತ್ತಾಗಲಿಲ್ಲ…ಹೇ ಫೋನ್ ರಿಂಗಾಗ್ತಿದೆ ಎತ್ತೇ… ಎಂದು ರೂಮಿನಿಂದಲೇ ಕಿರುಚಿದರು ಪತಿ ಮಹಾಶಯ. ತಟ್ಟನೆ ಎದ್ದು ಫೋನ್ ರಿಸೀವ್ ಮಾಡಿದೆ. ಅವರ ಗೆಳೆಯ ಪ್ರಕಾಶ್ ಫೋನ್ ಮಾಡಿದ್ದರು. ಏನ್ರೀ ಮೇಡಂ ಹಬ್ಬ ಜೋರಾ ಎಂದು ನಗುನಗುತ್ತಾ ಕೇಳಿದರು. ಏನ್ ಜೋರು ಬಿಡ್ರಿ… ಹೆಂಗಸರಿಗೆ ಬರೇ ಕೆಲಸವೇ ಎನ್ನುತ್ತಾ… ಮನೆಯವರಿಗೆ ಫೋನ್ ವರ್ಗಾಯಿಸಿದೆ.

ಹೇಳೋ ಪ್ರಕಾಶ ಹೇಗಿದ್ದೀಯೋ.. ಯುಗಾದಿ ಶುಭಾಶಯಗಳಪ್ಪಾ ಎಂದು ಇಷ್ಟಗಲ ಹಲ್ಲು ಕಿರಿದು ಮಾತನಾಡಿದರು. ನಾನು ಹಾಗೇ ಟಿವಿ ಹೊರೆಸುತ್ತಾ… ಅವರ ಮಾತಿನತ್ತಲೇ ಕಿವಿಯಾನಿಸಿ ನಿಂತೆ. ಹಬ್ಬಾ ಜೋರೇನೋ ಪ್ರಕಾಶ ಎಂದರು. ಮಾಮೂಲಿ ಕಣೋ… ನಮ್ಮದು ದೀಪಾವಳಿ ಜೋರಪ್ಪಾ ಎಂದು ಆ ಕಡೆಯಿಂದ ಕೇಳಿಸಿತು.

ನಿನ್ನದಪ್ಪಾ… ಎಂದು ಗೆಳೆಯ ಕೇಳಿರಬಹುದು. ನಮ್ಮದು ಮಾಮೂಲಿಯಪ್ಪಾ ಎಂದವರೇ.. ಹಲೋ ಕೇಳಿಸುತ್ತಿಲ್ಲಾ… ನೆಟ್‌ವರ್ಕ್ ಪ್ರಾಬ್ಲಂ ತಾಳು ಹೊರಬಂದೆ ಎಂದವರೇ.. ಹೊರ ನಡೆದರು. ಇವರ ಖುಷಿಗೆ ಕಾರಣವೇನು ಎಂದು ತಲೆ ಕೆರೆದುಕೊಳ್ಳುತ್ತಿದ್ದ ನನಗೆ ಅವರು ಹೊರನಡೆದದ್ದೇ ಭ್ರಮನಿರಸನವಾದಂತಾಯಿತು.

ಮೆಲ್ಲಗೆ ಹಾಗೆ ಬಾಗಿಲು..ಕಿಟಕಿ ಒರೆಸುವ ನೆಪದಲ್ಲಿ ಪತ್ತೇದಾರಿ ಕೆಲಸ ಪ್ರಾರಂಭಿಸಿದೆ… ಶಿಕ್ಷಕರಾಗಿರೋದ್ರಿಂದ ಮಾಮೂಲಿಯಂತೆ ಶಾಲೆ, ಪರೀಕ್ಷೆ, ರಜೆ, ಕೆಜೆಐಡಿ, ವೇತನ, ವರ್ಗಾವಣೆ ಹೀಗೆ ಎಲ್ಲಾ ವಿಷಯ ಬಂದು ಹೋಯಿತು. ಆದರೆ ನನ್ನ ಸಂದೇಹಕ್ಕೆ ಉತ್ತರ ಸಿಗದೆ ಜೀವ ವಿಲವಿಲನೆ ಒದ್ದಾಡಿತು. ಒಲ್ಲದ ಮನಸ್ಸಿನಲ್ಲೇ ನನ್ನ ಕೆಲಸದಲ್ಲಿ ನಾನು ನಿರತಳಾದೆ. 

ಅಷ್ಟರಲ್ಲೇ ನನ್ನ ಮಗ ಬಂದವನೇ ಅಮ್ಮಾ… ಹಬ್ಬಕ್ಕೆ ಬಟ್ಟೆ ತರೋಲ್ವಾ  ಎಂದು ಕೇಳಿದ. ಕೊರೊನಾ ಸೋಂಕು ಹೆಚ್ಚುವ  ಭೀತಿಗೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆಯಲ್ಲಪ್ಪ ಎಂದೇ… ಹಬ್ಬಕ್ಕೆ ಬಟ್ಟೆ ಎಂಬ ಪದ ಕೇಳಿದ್ದೇ ತಡ ಎಗರಿ ಬೀಳುತ್ತಿದ್ದ ನಮ್ಮೆಜಮಾನ್ರು… ಹೌದೋ… ಎಲ್ಲಿದೆ ಅಂಗಡಿ.. ತೆಗೆದಿದ್ದರೆ ಹೇಳು ಕೊಡಿಸೋಣ ಎಂದು ಉದಾರತೆಯಿಂದ ಹೇಳಿದಾಗ ನನಗೆ ಆಶ್ಚರ್ಯವಾಯಿತು.

ಅಲ್ರೀ… ಹಬ್ಬಕ್ಕೆ ಬಟ್ಟೆ ಕೊಡಿಸಿ ಎಂದರೆ ಸಿಡಿದೇಳುತ್ತಿದ್ರಿ…ಎಂದೆ.  ಅಲ್ಲೇ… ಅಂಗಡಿಗಳು ತೆಗೆದಿದ್ದರೆ ತಾನೇ ತರೋದು. ಅದಕ್ಕೆ ಅಷ್ಟು ಆತ್ಮವಿಶ್ವಾಸದಿಂದ ಹೇಳಿದ್ದು ಎಂದು ತುಂಟ ನಗು ಚೆಲ್ಲಿ ಸ್ನಾನಕ್ಕೆ ಹೊರಟು ನಿಂತರು. ಓಹೋ… ಇಲ್ಲಿದೆ ವಿಷಯ ಈ ಬಾರಿ ಹಬ್ಬಕ್ಕೆ ಬಟ್ಟೆಗೆಂದೇ ಕನಿಷ್ಟ 10-15 ಸಾವಿರದವರೆಗೂ ಕೈಬಿಡುತ್ತಿತ್ತು. ಅದು ಉಳಿಯಿತೆಂಬ ಸಂತೋಷದಲ್ಲಿ ಬೀಗುತ್ತಿದ್ದಾರೆ ಪತಿ ಮಹಾಶಯರು ಎಂದು ಗೊತ್ತಾದ್ದೇ ತಡ… ಕೊರೊನಾ ಎಫೆಕ್ಟ್ ನನ್ನ ಮುಖದಲ್ಲಿ ಕಾಣಿಸಿತು.

ವರ್ಷದ ಮೊದಲ ಹಬ್ಬ. ಯಾವುದೇ ಹಬ್ಬಕ್ಕೆ ತಪ್ಪಿಸಿದರೂ ಯುಗಾದಿಗೆ ಮಾತ್ರ ಹೊಸ ಬಟ್ಟೆ ಖರೀದಿಸುವುದು ತಪ್ಪುತ್ತಿರಲಿಲ್ಲ. ಮಕ್ಕಳನ್ನು ಕರೆದುಕೊಂಡು ಬ್ಯಾಗ್ ಹಿಡಿದು ಜುಮ್ಮ  ಅಂತ ಬೈಕೇರಿ ಬಟ್ಟೆ ಖರೀದಿಗೆ ಹೋಗುತ್ತಿದ್ದರೆ, ಮುಂದೆ ಬೈಕ್ ಓಡಿಸುತ್ತಲೇ ಹಬ್ಬಕ್ಕೆ ಬಟ್ಟೆ, ದಿನಸಿ, ಹಣ್ಣು-ಹೂ ಜೊತೆಗೆ  ಬೇಸಿಗೆ ರಜೆಯಲ್ಲಿ  ಪ್ರವಾಸ, ಶಾಪಿಂಗ್ ಹೀಗೆ ಹೆಚ್ಚುವರಿ ಖರ್ಚಿನ ಲೆಕ್ಕಾಚಾರ ಹಾಕುತ್ತಾ ಹ್ಯಾಪ್‌ಮೋರೆ ಹಾಕಿಕೊಂಡ ಪತಿರಾಯರ ಚಿತ್ರಣ ಕಣ್ಣ ಮುಂದೆ ಒಮ್ಮೆ ಬಂತು. 

ಈ ಬಾರಿ ಪೆಚ್ಚು ಮೋರೆ ಹಾಕುವ ಸರದಿ ನಮ್ಮದಾಗಿತ್ತು. ಇದಕ್ಕೆಲ್ಲಾ ಕಾರಣವಾದ ಕೊರೊನಾಗೆ ಹಿಡಿ ಶಾಪ ಹಾಕುತ್ತಾ ನನ್ನ ಕೆಲಸದಲ್ಲಿ ನಿರತಳಾದೆ.  ಇತ್ತ ನಮ್ಮೆಜಮಾನರು ಸ್ನಾನದ ಮನೆಯಲ್ಲಿ ಜೋರಾಗಿ ಜೋಶಿಂದ  `ಯುಗ ಯುಗಾದಿ ಕಳೆದರೂ ಈ ಯುಗಾದಿ ಬಾರದು….’ ಎಂದು ಹಾಡುತ್ತಿರೋದು ನನಗೆ ಕರ್ಣ ಕಠೋರವಾಗಿ ಕೇಳುತ್ತಿತ್ತು. 

ಅಷ್ಟರಲ್ಲೇ ಕಿಲಾಡಿ ಮಕ್ಕಳು ಅಡುಗೆ ಮನೆಗೆ ಬಂದವರೇ… ಅಮ್ಮ ಹಬ್ಬಕ್ಕೆ ಬಟ್ಟೆಗಳನ್ನು  ಮೊನ್ನೆಯೇ ಆನ್‌ಲೈನ್‌ನಲ್ಲಿ ಖರೀದಿಸಿದ್ದೇವೆ. ಮುಂದಿನ ತಿಂಗಳು ನಮ್ಮ ಹುಟ್ಟುಹಬ್ಬವೂ ಬರುತ್ತದೆ  ಅದಕ್ಕೂ ಸೇರಿಯೇ ಎರಡು ಜೊತೆ ಬುಕ್ ಮಾಡಿದ್ದೇವೆ. ಆನ್‌ದವೇ ಇದೆ ಪಾರ್ಸಲ್. ದುಡ್ಡು ಕೊಟ್ಟು ಬಿಡಿಸಿಕೊಳ್ಳಿ..ನಾವು ದೊಡ್ಡಮ್ಮನ ಮನೆಗೆ ಹೋಗುತ್ತೇವೆ ಎಂದು ಹೇಳುತ್ತಲೇ…ಹೊರಗೆ ಓಡಿ ಹೋದರು. ಸ್ನಾನದ ಮನೆಯಲ್ಲಿ ನೀರಿನ ಚೆೊಂಬು ದಡ್ಡನೆ ಬಿದ್ದಂಗಾಯ್ತು…ಪತಿರಾಯರ ಜೋಶ್ ಇಳಿದಂಗಿತ್ತು. ಕೊರೊನಾ ನಮ್ಮವರಿಗೆ ನೀಡಿತ್ತು ಒಮ್ಮೆಗೆ ಡಬ್ಬಲ್ ಧಮಾಕಾ…`ಕ್ಯಾ ಕರೋನಾ…’ ಎಂದು ಹೇಳುವ ಸರದಿ ನಮ್ಮವರದಾಗಿತ್ತು.


ದೇವಿಕ ಸುನೀಲ್
[email protected]

 

error: Content is protected !!