ಸಾವಿನ ಸುತ್ತ ಒಂದು ನೋಟ…

ಮನುಷ್ಯ ಒಂದಿಲ್ಲಾ ಒಂದು ದಿನ ಸಾಯಲೇಬೇಕು. ಸಾವು ಹೇಗಿರಬೇಕು? ಸಾವುಗಳಲ್ಲಿ ಎಷ್ಟು ವಿಧ? ಎಂಬುದನ್ನು ಚರ್ಚಿಸಲು ಈ ಲೇಖನ. ನಾವು ಸಹಜವಾಗಿ ಸಾಯಬೇಕು. ಶಿವ ಕೊಟ್ಟ ಈ ಶರೀರವನ್ನು ಶಿವನೇ ತಗೋಬೇಕು. ಆತ್ಮ ಹತ್ಯೆ, ಕೊಲೆ, ಅಪಘಾತದಲ್ಲಿ ಸಾವು ಇವು ನಿಷಿದ್ಧ ಸಾವುಗಳು. ಈ ರೀತಿ ಸತ್ತರೆ ಸದ್ಗತಿ ದೊರೆಯಲಾರದು. ಆತ್ಮಕ್ಕೆ ಚಿರಶಾಂತಿ ದೊರೆಯಲಾರದು. ಕೆಲವರು ಸತ್ತಿದ್ದೇ ಪಕ್ಕದ ಬಡಾವಣೆಗೆ ತಿಳಿದಿರುವುದಿಲ್ಲ. ಇನ್ನು ಕೆಲವರು ಸತ್ತರೆ ದೊಡ್ಡ ಸುದ್ದಿಯಾಗುತ್ತದೆ. ಪತ್ರಿಕೆಗಳಲ್ಲಿ, ದೂರದರ್ಶನ ವಾಹಿನಿಗಳಲ್ಲಿ ಅವರ ಬಗ್ಗೆ ಗುಣಗಾನ ನಡೆದಿರುತ್ತದೆ. ಈಗಂತು ಈ ಕೊರೊನಾ ಕಾಲದಲ್ಲಿ ಸಾವಿಗೆ ಬೆಲೆ ಇಲ್ಲದಂತಾಗಿದೆ. ಶವ ಸಂಸ್ಕಾರಕ್ಕೆ ಕೇವಲ 20 ರಿಂದ 25 ಜನ ಇರಬೇಕೆಂದು ಸರ್ಕಾರ ಆಜ್ಞೆ ಹೊರಡಿಸಿದೆ. ಇಟಲಿಯಲ್ಲಿ ಸಾವಿರಾರು ಕೋಟಿ ಒಡೆಯ ತನ್ನದೇ ಕಟ್ಟಡದ 24ನೇ ಅಂತಸ್ತಿನಿಂದ ಬಿದ್ದು ಸತ್ತ. ಕೇರಳದಲ್ಲಿ ಒಬ್ಬ ಶ್ರೀಮಂತ 50 ಕೋಟಿ ಒಡೆಯ ಆತ್ಮಹತ್ಯೆ ಮಾಡಿಕೊಂಡಾಗ ಅವನ ಪಾರ್ಥಿವ ಶರೀರ ಅವನ ಮನೆಗೆ ಬಂತು. ಇಂತಹ ಘಟನೆಗಳನ್ನು ಕೇಳಿದಾಗ ಅಥವಾ ನೋಡಿದಾಗ ಎದೆ ಝಲ್‌ ಎನ್ನುತ್ತದೆ. 

ಅಮೇರಿಕಾದಲ್ಲಿ ಬಹಳ ಜನ ಮರಣ ಹೊಂದಿದರು. ಜನಗಳನ್ನು ಹೂಳಲು ಜಾಗ ಇಲ್ಲದೇ ಹೋದಾಗ ಬೇವಾರ್ಸಿ ಜನರನ್ನು ಹೂಳುವ ಸ್ಥಳದಲ್ಲಿ ಹೂಳಬೇಕಾಯಿತು. ಯಾರಾದರೂ ಸತ್ತರೆ ಹೆಣದ ಹತ್ತಿರ ಹೋಗಿ ಗೋಳಾಡಿ, ಮುತ್ತಿಟ್ಟು ಕಂಬನಿಯ ಕಡಲು ಹರಿಸಿ ಆಳುತ್ತಿದ್ದರು. ಈಗ ಕೊರೊನಾ ಕಾಲ. ಮುಂದಿನ ಪೀಳಿಗೆ ಕೊರೊನಾ ಪೀಳಿಗೆ, ಈಗ ಸತ್ತರೆ ಮುದ್ದು ಮಾಡುವಂತಿಲ್ಲ. ಸತ್ತವನಿಗೆ ಪಾಸಿಟಿವ್ ಇದ್ದರಂತೂ 10 ಅಡಿ ನಿಂತು ಅಂತಿಮ ದರ್ಶನ ಪಡೆದು ಪರಲೋಕಕ್ಕೆ ಕಳುಹಿಸಬೇಕಾಗಿದೆ.

ಯಮ ಬಂದರೆ ಸುಮ್ಮನೆ ಬರುವುದಿಲ್ಲ. ತನ್ನ ಜೊತೆ ಒಂದು ಕೊಡಲಿಯನ್ನು ತರುತ್ತಾನೆ. ಒಳ್ಳೊಳ್ಳೆ ಮರಗಳನ್ನು ಕಡಿಯುತ್ತಾನೆ. ಇತ್ತೀಚಿಗಂತೂ ಇಡೀ ವ್ಯವಸ್ಥೆಯಲ್ಲಿ ರಸ್ತೆ ಅಪಘಾತಗಳಲ್ಲಿ ವಿಪರೀತ ಕುಡಿದು 30 ಅಥವಾ 40 ವರ್ಷಗಳ ಯುವಕರೇ ಸಾಯುತ್ತಿದ್ದಾರೆ. ಮುದುಕರು ಸಾಯುತ್ತಿಲ್ಲ. ಎಲ್ಲಾ ದೇಶಗಳಲ್ಲಿ ಮುದುಕರ ಸಂಖ್ಯೆ ಜಾಸ್ತಿಯಾಗಿದೆ.

ಕೆಲವರಂತೂ ಸಾಯಲು ಆತ್ಮಹತ್ಯೆಯಂತಹ ಪ್ರಯತ್ನಗಳನ್ನು ಮಾಡುತ್ತಾರೆ. ಆತ್ಮಹತ್ಯೆ ಹೇಡಿಯ ಕೆಲಸ ಎಂದು ಕೆಲವರು ಹೇಳುತ್ತಾರೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಬೇಕು. ಕೆಲವರು ವಿಷ ಕುಡಿದುಬಿಡುತ್ತಾರೆ. ವಿಪರೀತ ಸಂಕಟ, ಆಗ ಬದುಕುವ ಆಸೆ ಮತ್ತೆ ಉಂಟಾಗುತ್ತದೆ. ನನಗೆ ಗೊತ್ತಿದ್ದಂತೆ ಒಬ್ಬ ವ್ಯಕ್ತಿ ವಿಷ ಕುಡಿದು ನೋವು ಜಾಸ್ತಿಯಾಗಿ ಅಲ್ಲಿದ್ದ ಮೇಜನ್ನು ಪುಡಿ ಪುಡಿ ಮಾಡಿದ್ದ. ರಕ್ತದ ಸಣ್ಣ ಕಾಲುವೆ ಹರಿದಿತ್ತು.

ಸಾವಿಗೆ ನಾವು ಹೆದರಬಾರದು. ಅದನ್ನು ಸ್ವಾಗತಿಸಬೇಕು. `ಮರಣವೇ ಮಹಾ ನವಮಿ’ ಅಂತ ತಿಳಿಯಬೇಕು. ಶರಣರನ್ನು ಮರಣದಲ್ಲಿ ನೋಡು ಎಂಬ ಉಕ್ತಿ ಇದೆ. ನಾಳೆ ಬಪ್ಪದು ಇಂದೇ ಬರಲಿ ಎಂದು ಬಸವಣ್ಣನವರು ಸಾವನ್ನು ಸ್ವಾಗತಿಸಿದವರು. ಮಹಾಭಾರತದ ಭೀಷ್ಮಾಚಾರ್ಯರು ಇಚ್ಛಾಮರಣಿಯಾಗಿದ್ದರು. ತಮಗೆ ತಿಳಿದ ಸಮಯದಲ್ಲಿ ಮರಣಿಸಿದರು. ಅಲ್ಲಿಯವರೆಗೆ ಶರಶಯ್ಯಯಲ್ಲಿದ್ದರು. ತಮಗೆ ತಿಳಿದ ಸಮಯದಲ್ಲಿ ಮರಣಿಸಿದರು. ಅಲ್ಲಿಯವರೆಗೆ ಶರಶಯ್ಯಾಯಲ್ಲಿದ್ದರು. ಶ್ರೀ ಕೃಷ್ಣನ ಅಂತ್ಯ ಅವನ ಕಾಲ ಬೆರಳಿಗೆ ತಗುಲಿದ ಒಂದು ಬಾಣ ಕಾರಣವಾಯಿತು. ಯಾದವ ಸಂತತಿಯವರು ನೀರಿನಲ್ಲಿ ಬೆಳೆದ ಆಪಿನಿಂದ, ಒಣಕೆಯಿಂದ ಹೊಡೆದಾಡಿ ಸತ್ತರು. ಸಾವನ್ನು ಬಯಸಿ ಹಾತೊರೆದು. ಅರಸಿ ಹೋದವರ ಒಂದು ದೀರ್ಘ ಕಥನವೇ ಇದೆ. ಸಾವನ್ನು ಕುರಿತ ಚಿಂತನೆ ಅದನ್ನು ಅರಸುವಿಕೆಯನ್ನು ಕೂಡಿಕೊಂಡಿದೆ. ಸಾವು-ಬದುಕು ಇವೆರಡು ವಿರುದ್ಧ ಪದಗಳೆಂದು ನೀವು ಭಾವಿಸಬಹುದು. ಆದರೆ ಅವು ಬೇರೆ ಬೇರೆ ಅಲ್ಲ.

ಸಾವು ನಮ್ಮ ಬದುಕನ್ನು ನಿಯಂತ್ರಿಸುತ್ತದೆ. ಸಾವಿಗಾಗಿ ನಾವು ದೀರ್ಘ ಪ್ರಯಾಣ ಮಾಡಬೇಕು. ಇದು ಅನಿವಾರ್ಯ. ಸಾವಿನ ಬಗ್ಗೆ, ಅದರ ಅನುಭವದ ಬಗ್ಗೆ ಬದುಕಿರುವ ನಾವು ಅನೇಕ ಕಲ್ಪನೆಗಳನ್ನು ಮಾಡಿಕೊಂಡಿದ್ದೇವೆ. ವ್ಯಾಸ ಮಹಾಋಷಿಗಳು, ಟಾಲ್‌ಸ್ಟಾಯ್, ಷ. ಶೆಟ್ಟರ್‌ರಂತಹ ಮೇಧಾವಿಗಳು ಸಾವಿನ ಬಗ್ಗೆ, ಅದರ ಅನುಭವದ ಬಗ್ಗೆ  ಬರೆದಿದ್ದಾರೆ. ಯಾವುದೇ  ಆಚರಣೆಗಳಿರಲಿ, ಧರ್ಮ ಶಾಸ್ತ್ರವಿರಲಿ, ಸಾವಿನ ಕುರಿತು ಚಿಂತನೆ, ಕಲ್ಪನೆ, ಭಯ ಇತ್ಯಾದಿಗಳಿವೆ. ಸಾವಿರದ ಮನೆಯಿಲ್ಲ. ಸಾವು ಇರದ ಮನೆಯ ಸಾಸಿವೆ ತೆಗೆದುಕೊಂಡು ಬಾ ನಿನ್ನ ಮಗನನ್ನು ಬದುಕಿಸುತ್ತೇನೆ ಎಂದು ಭಗವಾನ್ ಬುದ್ಧ ಮಹಿಳೆಯೊಬ್ಬಳಿಗೆ ಹೇಳಿದ. ಅಂತಹ ಸಾಸಿವೆ ಸಿಗಲೇ ಇಲ್ಲ. ಕೆಲವು ಅರಸರು, ಸೈನಿಕರು, ಸನ್ಯಾಸಿಗಳು, ಗೃಹಸ್ಥರು ತಮ್ಮ ಲೌಕಿಕ ಜವಾಬ್ದಾರಿಗಳನ್ನು ಮುಗಿಸಿ ಎಂದೋ ಬರಲಿರುವ ಸಾವಿಗೆ ಹಂಬಲಿಸಿ, ಹಾತೊರೆದು ಅಪ್ಪಿಕೊಂಡ ಉದಾಹರಣೆಗಳಿವೆ. ಸಾವನ್ನು ಒಂದು ಉತ್ಸವ, ಆರಾಧನೆ ಎಂದು ತಿಳಿದು ನಗು ನಗುತ್ತಾ ಅದನ್ನು ಅಪ್ಪಿಕೊಂಡವರಿದ್ದಾರೆ. ಗಂಡನೊಡನೆ ಚಿತೆ ಏರಿ ಭಸ್ಮವಾದ ಮಹಿಳಾ ಮಣಿಗಳಿದ್ದಾರೆ. ಸೈನಿಕ ತಾನು ಯುದ್ಧದಲ್ಲಿ ಸತ್ತರೆ ನನಗೆ ವೀರಮರಣ. ಸ್ವರ್ಗ ಸಿಗಲಿದೆ ಎಂಬ ಉತ್ಸಾಹ ಅವನನ್ನು ಬಿಸಿಲು, ಚಳಿ ಎನ್ನದೇ ಗಡಿ ಕಾಯಿಸುತ್ತದೆ. ಇದನ್ನು ಅವನು ನಿರ್ವಿಕಾರದಿಂದ ಮಾಡುತ್ತಾನೆ. ಮೌರ್ಯ ವಂಶದ ಸ್ಥಾಪಕ ಚಂದ್ರಗುಪ್ತ ತನ್ನ ಕೊನೆಯ ದಿನಗಳಲ್ಲಿ ಉತ್ತರ ಭಾರತದಲ್ಲಿ ಆವರಿಸಿದ ಬರಗಾಲದಿಂದ ಮನನೊಂದು ಕರ್ನಾಟಕದ ಶ್ರವಣ ಬೆಳಗೊಳಕ್ಕೆ ತನ್ನ ಗುರು ಭದ್ರ ಬಾಹುವಿನೊಡನೆ ಬಂದು ಸಲ್ಲೇಖನ ಅಂದರೆ ಉಪವಾಸವಿದ್ದು, ಮರಣಿಸಿದ.

ಜೈನ ಗ್ರಂಥಗಳನ್ನು, ಕನ್ನಡದ ಹಳೆ ಗ್ರಂಥಗಳನ್ನು ನಾವು ಓದಿದಾಗ ಸಾವನ್ನು ಅರಸಿ ಹೋದವರ ಕಥನಗಳು ಸಿಗುತ್ತವೆ. ಜೈನ ಗ್ರಂಥಗಳಲ್ಲಿ ಮರಣದ ಪ್ರಭೇದಗಳನ್ನು, ಅವುಗಳ ಪರಿಣಾಮವನ್ನು ನಾವು ಕಂಡುಕೊಳ್ಳಬಹುದು. ಬದುಕಿನ ಬಗ್ಗೆ ಜೈನರು ತಾತ್ಸಾರ ಧೋರಣೆ ಹೊಂದಿದ್ದಾರೆ. ಅವರು ಅಹಿಂಸೆ ಬಗ್ಗೆ ತೀವ್ರತರ ಭಾವನೆ ಹೊಂದಿದ್ದಾರೆ. ವ್ಯವಸಾಯ ಮಾಡಿದರೆ ಉಳುವಾಗ ಸಣ್ಣ ಹುಳು ಸತ್ತರೆ ನಮಗೆ ಪಾಪ ಅಂತ ಭಾವಿಸುತ್ತಾರೆ. ಈ ರೀತಿ ಎಲ್ಲರೂ ವ್ಯವಸಾಯ ಬಿಟ್ಟರೆ, ಅದನ್ನು ಮಾಡುವವರು ಯಾರು? ಉಣ್ಣಲಿಕ್ಕೆ ಧ್ಯಾನ ಎಲ್ಲಿಂದ ಬರಬೇಕು ಎಂಬ ಜಟಿಲ ಪ್ರಶ್ನೆಗಳು ಉಂಟಾಗುತ್ತವೆ. ಈಗ ಅದರ ಚರ್ಚೆ ಬೇಡ. ಜೈನರು, ಜೈನ ಗ್ರಂಥಗಳು ಸಾವಿನ ಬಗ್ಗೆ ಏನು ಹೇಳುತ್ತವೆ ಎಂಬುದನ್ನು ತಿಳಿಯೋಣ.

ಮನುಷ್ಯ ಹುಟ್ಟು-ಸಾವಿನ ಚಕ್ರದಲ್ಲಿ ಸಿಕ್ಕು ನರಳುತ್ತಿದ್ದಾನೆ. ದೇಹಕ್ಕೆ ಸಾವು, ಆತ್ಮಕ್ಕೆ ಇಲ್ಲ. ಆತ್ಮ ದೇಹದಿಂದ ಬೇರ್ಪಟ್ಟು ಇನ್ನೊಂದು ದೇಹಕ್ಕೆ ಹೋಗುತ್ತದೆ. ಇದು ಒಂದು ರೀತಿ ಬಂಧನ. ಕರ್ಮದ ಕಾರಣದಿಂದ ಆತ್ಮವು ದೇಹದಲ್ಲಿ ನೆಲೆಸಿದೆ ಎಂದರೆ ಕರ್ಮಗಳ ಪಾತ್ರ ತಿಳಿಯಬೇಕಾಗುತ್ತದೆ. ಕೆಲವರು ಮರಣವನ್ನು ಅಕಾಲ ಮರಣ, ಸಹಜ ಮರಣ, ಸ್ವಕಾಲ ಮರಣ ಎಂದು ವಿಭಜಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದು, ಕೊಲೆಯಾಗುವುದು, ಅಪಘಾತದಲ್ಲಿ ಮರಣ ಹೊಂದುವುದು ಇವೆಲ್ಲಾ ಅಕಾಲ ಮರಣ ಹೊಂದುವುದು. ಸಹಜ ಮರಣ ಎಂದರೆ ಸಹಜವಾಗಿ ಸತ್ತು ಶಿವನ ಪಾದ ಸೇರಿಕೊಳ್ಳುವುದು. ಸ್ವಕಾಲ ಮರಣ ಎಂದರೆ ಮರಣವನ್ನು ಆಹ್ವಾನಿಸಿ ಮರಣಿಸುವುದು. ಜೈನ ಧರ್ಮವು ಸುಮಾರು 48 ಬಗೆಯ ಮರಣಗಳನ್ನು ಪಟ್ಟಿ ಮಾಡಿದೆ. ಭಗವತಿ ಸೂತ್ರ ಮತ್ತು ಭಗವತಿ ಆರಾಧನಾ ಗ್ರಂಥಗಳಲ್ಲಿ ಇಂತಹ ಪಟ್ಟಿಯನ್ನು ನೋಡಬಹುದು, ಮರಣಗಳಲ್ಲಿ ಕೆಲವು ಈ ರೀತಿ ಇವೆ.

ಅವೀಚಿ ಮರಣ, ತದ್ಭವ ಮರಣ, ಅವಧಿ ಮರಣ, ಆದಿ-ಅಂತ್ಯ ಮರಣ, ಬಾಲ ಮರಣ, ಪಂಡಿತ ಮರಣ, ಪಂಡಿತ ಪಂಡಿತ ಮರಣ, ಓ ಸನ್ನ ಮರಣ, ಬಲ ಪಂಡಿತ ಮರಣ, ಸಶಲ್ಯ ಮರಣ, ಬಲಾಕ ಮರಣ, ವಶಾರ್ಥ ಮರಣ, ವಿಪ್ರಾಣಸ ಮರಣ, ಗೃಧೃ ಪೃಷ್ಠ ಮರಣ, ಭಕ್ತ ಪತ್ಯಾಖ್ಯಾನ ಮರಣ, ಪ್ರಾಯೋಪಗಮಣ ಮರಣ, ಇಂಗಿಣಿ ಮರಣ, ಕೇವಲಿ ಮರಣ ಈ ರೀತಿಯಾಗಿ 18 ಬಗೆ. ಇತರೆ ಪಠ್ಯ ಹೇಳುವ 48 ಬಗೆಯ ಮರಣಗಳು ಬದುಕನ್ನು ಕೊನೆಗೊಳಿಸುವ ತಂತ್ರಗಳನ್ನು ಮರಣಗಳು ಆಧರಿಸಿರುವವು. ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯುವ.

ಅವೀಚಿ ಮರಣ : ಇದಕ್ಕೆ ಇನ್ನೊಂದು ಹೆಸರು ನಿತ್ಯ ಮರಣ. ಆಯುಷ್ಯ ಒಂದೊಂದು ಕ್ಷಣ ಕಳೆದಂತೆ ಅವನು ಸಾವಿಗೆ ಹತ್ತಿರವಾಗುತ್ತಾನೆ. ಇಲ್ಲಿ ಬದುಕು ಎನ್ನುವುದು ಮರಣದ ಕ್ರಿಯೆಯಾಗಿರುತ್ತದೆ.

ತದ್ಭವ ಮರಣ : ಇದು ಸಾಮಾನ್ಯ ಮರಣ. ಕೊನೆಯ ಉಸಿರು ಎಳೆದುಕೊಂಡಾಗ ಶರೀರ ನಾಶವಾಗಿ ಮರಣ ಪ್ರಾಪ್ತವಾಗುತ್ತದೆ.

ಅವಧಿ ಮರಣ : ಇಲ್ಲಿ ಅವಧಿ ಕಾಲ ಮತ್ತು ಪ್ರದೇಶದ ವ್ಯಾಪ್ತಿಯನ್ನು ಸೂಚಿಸುತ್ತದೆ. ಇದರಲ್ಲಿ ಸರ್ವಾವಧಿ ಮತ್ತು ದೇಶಾವಧಿ ಎಂಬ ಎರಡು ಭಾಗಗಳಿವೆ. ಸರ್ವಾವಧಿಯಲ್ಲಿ ನೈಸರ್ಗಿಕ ಪರಿಸ್ಥಿತಿ ಮತ್ತು ದೇಶಾವಧಿಯಲ್ಲಿ ಗ್ರಾಮ. ಪ್ರಾಂತ್ಯ, ದೇಶ ಇತ್ಯಾದಿ ಕಾಣಬಹುದು. 

ಆದಿ ಅಂತ್ಯ ಮರಣ : ಸದಸ್ಯ ಮತ್ತು ಭವಿಷ್ಯದ ಮರಣ ಸ್ಥಿತಿಗಳನ್ನು ಇಲ್ಲಿ ಕಾಣಬಹುದು. ಆದಿ ಪದವು ಬದುಕಿನ ಸಾವನ್ನು, ಆನಂತರದ ಬದುಕುಗಳಲ್ಲಿ ಸಂಭವಿಸುವ ಮರಣವನ್ನು ಸೂಚಿಸುತ್ತದೆ.

ಬಾಲ ಮರಣ : ಬಾಲ್ಯದಲ್ಲಿ ಸಾಯುವುದು, ಪೂರ್ಣ ಬೆಳವಣಿಗೆ ಇಲ್ಲದೆ ಅಜ್ಞಾನದಿಂದ ಸಾಯುವ ಕ್ರಿಯೆ.

ಪಂಡಿತ ಮರಣ : ಒಳ್ಳೆಯ ಜ್ಞಾನ ಪಡೆದಿರುವ ವ್ಯಕ್ತಿಯ ಮರಣವನ್ನು ಪಂಡಿತ ಮರಣ ಎಂದು ಕರೆಯುತ್ತಾರೆ. ಪಂಡಿತ ಎಂಬುವನು ಕೋಪ, ಅಹಂಕಾರ, ಮೋಸ, ದುರಾಸೆಗಳಂತಹ ನಾಲ್ಕು ಬಗೆಯ ನಿಯಂತ್ರಣಗಳನ್ನು ಹೊಂದಿರುತ್ತಾನೆ. ಇಂತಹ ಅರಿವಿನಿಂದ ಉಪವಾಸವನ್ನು ತೀವ್ರಗೊಳಿಸಿ ಪಂಡಿತ ಮರಣ ಪಡೆಯುತ್ತಾರೆ. ಸಾವಿನ ಮೇಲೆ ವೀರರಂತೆ ದಾಳಿ ಮಾಡಿ ಬಿಡುಗಡೆ ಹೊಂದಿ ಮರಣ ಪಡೆಯುತ್ತಾರೆ.

ಪಂಡಿತ ಪಂಡಿತ ಮರಣ : ಈ ಮರಣ ಸರ್ವವವನ್ನೂ ತಿಳಿದವನ ಉದಾತ್ತ ಮರಣ. ಈ ಮರಣದಲ್ಲಿ ಶುಷ್ಕ ಅನುಭವಗಳ ಪುನರುಕ್ತಿ ಇರುವುದಿಲ್ಲ. ಮರುಹುಟ್ಟು ಸರಪಳಿಯಿಂದ ಪಾರಾಗಿ ಶಾಶ್ವತವಾದ ನೆಲೆ ಕಂಡುಕೊಳ್ಳುತ್ತಾನೆ.

ಓ ಸನ್ನ ಮರಣ : ಇದು ಅವಸಾನ ಮರಣ. ಕೆಟ್ಟ ಮಾರ್ಗ ಹಿಡಿದ, ಬಹಿಷ್ಕಾರಕ್ಕೆ ಒಳಗಾದ ಮುನಿಯ ಮರಣ ಇದು. ಧರ್ಮದ ಹೆಸರಿನಲ್ಲಿ ಭಿಕ್ಷೆ ಬೇಡಿದ, ಸ್ವಯಂ ಪ್ರತಿಷ್ಠಾ ಲೋಲುಪ, ಕಾಮನೆ, ಆಹಾರ, ಪಾನೀಯಗಳ ದಾಸನಾದವ, ವಿಕೃತಿ ಹೊಂದಿರುವ, ವಿಕೃತಿ ಬೆಳೆಸುವವನ ಮರಣ.

ಬಾಲ ಪಂಡಿತ ಮರಣ : ಒಳ್ಳೆಯ ಜ್ಞಾನ ಹೊಂದಿರುವ ವ್ಯಕ್ತಿಯ ಮರಣವನ್ನು ಪಂಡಿತ ಮರಣ ಎಂದರೆ ಒಂದು ವೇಳೆ ಅವನು ಬಾಲಕನಾಗಿದ್ದರೆ ಅದು ಬಾಲ ಪಂಡಿತ ಮರಣ. ಅಂದರೆ ಬಾಲಕ ಪಾಂಡಿತ್ಯ ಹೊಂದಿರಬೇಕು.

ಸಶಲ್ಯ ಮರಣ : ಮೋಹಗಳಿಗೆ ಒಳಗಾಗಿ ಅವುಗಳನ್ನು ತೀರಿಸಿಕೊಳ್ಳುವುದರಲ್ಲಿ ಸತ್ತರೆ ಸಶಲ್ಯ ಮರಣ. 

ಬಲಾಕ ಮರಣ : ಇದು ಪಲಾಯನ ಮರಣ. ಯಾರಿಗೂ ಗೌರವ ಕೊಡದೆ ಧ್ಯಾನವನ್ನು ನಟಿಸುತ್ತಾ ಮಾತನಾಡುವವನ ಜೀವನದ ಗೊತ್ತು ಗುರಿಗಳನ್ನು ಅರಿಯದೇ, ನಾಟಕವಾಡುತ್ತಾ ಬದುಕಿದವರ ಮರಣ.

ವಶಾರ್ಥ ಮರಣ : ತೀವ್ರ ದುಃಖ, ತೀವ್ರ ಹಿಂಸೆ, ತೀವ್ರ ನರಳಾಟದಿಂದ ನರಳುತ್ತಾ ಸಾಯುವ ಸ್ಥಿತಿ. 

ವಿ ಪ್ರಾಣ ಮರಣ : ಉಸಿರನ್ನು ಬಿಗಿಯಾಗಿ ಹಿಡಿದು ನಿಯಂತ್ರಿಸುತ್ತಾ, ಕೊನೆಗೆ ಸಾಯುವುದು. ವಿ ಪ್ರಾಣ ಎಂದರೆ ಉಸಿರಿಲ್ಲದಾಗುವ ಮರಣ.

ಗೃಧೃ ಸೃಷ್ಠ ಮರಣ : ಹದ್ದಿನ ಕೊಕ್ಕಿನಿಂದ ಚುಚ್ಚಿಸಿಕೊಂಡು ಸಾಯುವ ಮರಣ. ಇಲ್ಲವೇ ಯಾವುದೇ ಆಯುಧದಿಂದ ದೇಹದ ಯಾವುದೇ ಭಾಗವನ್ನು ಘಾಸಿಗೊಳಿಸಿ ಸಾಯುವುದು.

ಭಕ್ತ ಪ್ರತ್ಯಖ್ಯಾನ ಮರಣ : ತಮ್ಮ ಆಯುಷ್ಯ ಮುಗಿಯುತ್ತಾ ಬಂದಿದೆ ಎಂಬ ಅರಿವಿನಿಂದ ಸಮಾಧಿ ಮರಣ ಪಡೆಯುವ ಮರಣ. ಇಚ್ಛಾ ಮರಣ ಬಯಸುವವರ ಮರಣ. ಸಿದ್ಧತೆ ಮಾಡಿಕೊಂಡು ಮರಣ ಹೊಂದುವುದು. ನಾನಿನ್ನು ಬದುಕನ್ನು ಮುಂದುವರೆಸುವುದಿಲ್ಲ ಎಂಬ ಛಲದಿಂದ ಸಾವನ್ನು ಮುದ್ದಿಸಿ ಆಹ್ವಾನಿಸುವುದು. ರಾಣಿ ಶಾಂತಲೆ ತೀರಿಕೊಂಡಾಗ ಅವಳ ತಾಯಿ ಮಾಚಿಕಬ್ಬೆ ಸನ್ಯಾಸ ಸ್ವೀಕರಿಸಿ ಮರಣ ಪಡೆದರು. ಸಲ್ಲೇಖನ ವ್ರತ ಎಂದರೆ ಉಪವಾಸವಿದ್ದು 21 ದಿನದಿಂದ 36 ದಿನಗಳೊಳಗಾಗಿ ಸಾಯುವ ಮರಣ.

ಪ್ರಾಯೋಪಗಮಣ ಮರಣ : ಯಾರ ನೆರವು ಪಡೆಯದೇ ಮರಣ ಹೊಂದುವುದು. ಉಪವಾಸವಿದ್ದಾಗ ಕೆಲವು ಸಲ ಬೇರೆಯವರ ಸಹಾಯ ಪಡೆಯುತ್ತಾರೆ. ಈ ಮರಣದಲ್ಲಿ ಯಾವ ನೆರವೂ ಇಲ್ಲ. ಒಂದೇ ಭಂಗಿ. ಅದನ್ನು ಬದಲಾಯಿಸುವುದಿಲ್ಲ. ತೀವ್ರ ಉಪವಾಸವಿದ್ದರಿಂದ ಮಲಮೂತ್ರ ಬಾಧೆ ಇರುವುದಿಲ್ಲ. ದೇಹದ ಸಾರವೆಲ್ಲ ಬತ್ತಿ ಅಸ್ಥಿಪಂಜರವಾಗಿ ಧರ್ಮಶ್ರದ್ಧೆ ಮಾತ್ರ ಉಳಿದಿರುತ್ತದೆ.

ಇಂಗಿಣಿ ಮರಣ : ವಿವೇಕಿಗಳು ಬಯಸುವ ಮರಣ. ಆತ್ಮದ ಸ್ವರೂಪ ತಿಳಿದು ಇಂಗಿಣಿ ಎಂದರೆ ಸ್ವಯಂ ಅರಿತು ಪಡೆಯುವ ಮರಣ ಪ್ರಾಯೋಪದಲ್ಲಿ ಹುಲ್ಲಿನ ಹಾಸಿಗೆ ಮೇಲೆ ಮಲಗಬಹುದು. ಇಂಗಿಣಿ ಮರಣದಲ್ಲಿ ಯಾವ ಬಗೆಯ ಸೇವೆಯನ್ನೂ ಪಡೆಯಬಾರದು. ಆದರೆ ಇಂಗಿಣಿ ಮರಣದಲ್ಲಿ ಇವೆರಡೂ ನಿಷಿದ್ಧ. 

ಕೇವಲಿ ಮರಣ : ಸರ್ವವನ್ನು ತಿಳಿದವನ ಮರಣ. ಇದು ಪಂಡಿತ ಮರಣಕ್ಕಿಂತಲೂ ಸ್ವಲ್ಪ ಹೆಚ್ಚು.

ಬದುಕನ್ನು ಕೊನೆಗೊಳಿಸುವ ತಂತ್ರಗಳು ಹಾಗೂ ಕೊನೆಗೊಳಿಸುವ ಮುನ್ನ ಅನುಸರಿಸಬೇಕಾದ ವಿಧಗಳು ಕಾಲ ಬದಲಾವಣೆಯಾದಂತೆ ಸಡಿಲಗೊಂಡವು. ಕೆಲವು ಮರಣಗಳು ಜನ ಮನ್ನಣೆ ಗಳಿಸಲಿಲ್ಲ. ಜೈನ ಗ್ರಂಥಗಳಲ್ಲಿ ಪಂಪ, ರನ್ನ, ಪೊನ್ನನ ಗ್ರಂಥಗಳಲ್ಲಿ ಇಂತಹ ಮರಣಗಳ ಬಗ್ಗೆ ವಿವರ ಸಿಗುತ್ತದೆ.

ಸಾವಿನ ಸುತ್ತ ಒಂದು ಸಣ್ಣ  ಸುತ್ತನ್ನು ನಾನು ಈಗ ಹೋಗಿ ಬಂದೆ.  ನೀವು ಓದಿ ಒಂದು ಸುತ್ತು ಹಾಕಿ ಬನ್ನಿ. ಆಗ ನಿಮಗೆ ಸಾವಿನ ಸಾಕ್ಷಾತ್ಕಾರವಾಗುತ್ತದೆ.


ಆಧಾರ ವಿವಿಧ ಮೂಲಗಳಿಂದ ಮತ್ತು ಸ್ವಂತಿಕೆ ವಿಚಾರಗಳು
ಕೆ. ಸಿದ್ಧನಗೌಡ ಉಜ್ಜಯಿನಿ, ನಿವೃತ್ತ ಪ್ರಾಂಶುಪಾಲರು
ಉಜ್ಜಿಯಿನಿ.
99457 94663

error: Content is protected !!