ಕರ್ನಾಟಕದ ಕೇಂದ್ರ ಬಿಂದು ವಾಗಿರುವ ದಾವಣಗೆರೆ ನಗರವು ಒಂದಾನೊಂದು ಕಾಲದಲ್ಲಿ ಕೈಗಾರಿಕೆಗೆ ಪ್ರಸಿದ್ದಿಯಾಗಿತ್ತು. ನಂತರದಲ್ಲಿ ವ್ಯಾಪಾರ-ವಹಿವಾಟು ಜೋರಾಗಿ ಇಡೀ ರಾಜ್ಯದಲ್ಲಿ ತನ್ನ ಹೆಸರನ್ನು ಹೆಚ್ಚಿಸಿಕೊಂಡಿತು. ಇಂದು ವಿದ್ಯಾನಗರಿಯಾಗಿ ಶೋಭಿಸುತ್ತಿದೆ. ಇಷ್ಟೆಲ್ಲಾ ಕೀರ್ತಿ ಪಡೆಯಲು ವರ್ತಕರು ಪ್ರಮುಖ ಪಾತ್ರ ವಹಿಸಿದ್ದಾರೆ. ವ್ಯಾಪಾರದ ಜೊತೆಗೆ ದಾನಿಗಳಾಗಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಪ್ರತಿಷ್ಠಿತ ಮನೆತನಗಳಲ್ಲಿ ಮಾಗಾನಹಳ್ಳಿ ಮನೆತನವೂ ಸಹ ನಗರದ ಸರ್ವತೋಮುಖ ಬೆಳವಣಿಗೆಗೆ ತನ್ನ ಕೊಡುಗೆ ನೀಡಿದೆ. ಇಂತಹ ಮಾಗಾನಹಳ್ಳಿ ಮನೆತನಕ್ಕೆ ಸೇರಿದ ಮಾಗಾನ ಹಳ್ಳಿ ನಿಜಾನಂದ ಅವರು ಸುಮಾರು 60 ವರ್ಷಗಳ ಕೆಳಗೆ ನಗರದ ಹೃದಯ ಭಾಗವಾದ ಮಂಡಿಪೇಟೆಯಲ್ಲಿ ಆನಂದ ಹೆಸರಿನಲ್ಲಿ ಸಣ್ಣ ಅಂಗಡಿಯನ್ನು ತೆರೆದರು. ಈ ಪುಟ್ಟ ಅಂಗಡಿ ವರ್ಷವರ್ಷವೂ ಅಭಿವೃದ್ಧಿ ಹೊಂದಿ, ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. 1977ರಲ್ಲಿ ಮಾಗಾನಹಳ್ಳಿ ವಸ್ತು ಭಂಡಾರ ಎಂಬ ಹೆಸರಿನಲ್ಲಿ ವಿನೂತನ ಮಾದರಿಯ ಅಂಗಡಿ ಆರಂಭಿಸಿ ಒಂದೇ ಸೂರಿನಲ್ಲಿ ಎಲ್ಲಾ ವಸ್ತುಗಳು ಸಿಗುವ ವ್ಯವಸ್ಥೆ ಮಾಡಿದರು.
ಇಂದು ರಿಲೆಯನ್ಸ್, ಬಿಗ್ ಬಜಾರ್, ಮೋರ್, ವಿಶಾಲ್ ಮಾರ್ಟ್ ನಂತಹ ದೊಡ್ಡ ಮಾಲ್ಗಳ ಮಾದರಿಯನ್ನು 40 ವರ್ಷಗಳ ಕೆಳಗೆ ಮಾಡಿದ್ದು, ಮಾಗಾನಹಳ್ಳಿ ನಿಜಾನಂದರವರ ಸಾಹಸವೇ ಸರಿ. ನಾನು `ಜನತಾವಾಣಿ’ಯಲ್ಲಿ 1977 ರಲ್ಲಿ ಮಾಗಾನಹಳ್ಳಿ ವಸ್ತು ಭಂಡಾರದ ಬಗ್ಗೆ ಲೇಖನ ಬರೆದಿದ್ದು ಇನ್ನೂ ನೆನಪಿದೆ. ಈ ಲೇಖನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿ, ವಸ್ತು ಭಂಡಾರ ನೋಡಲು ಮಂಡಿಪೇಟೆಗೆ ಧಾವಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಮಾಗಾನಹಳ್ಳಿ ನಿಜಾನಂದ ಅವರು ಜೂನ್ 18ಕ್ಕೆ 83ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಇಳಿಯ ವಯಸ್ಸಿನಲ್ಲಿಯೂ 38ರ ಯುವಕನಂತೆ ತಮ್ಮ ವ್ಯವಹಾರ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಶ್ರೀ ಅಭಿನವ ರೇಣುಕ ಮಂದಿರದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿ, ರೇಣುಕ ಮಂದಿರದ ಟ್ರಸ್ಟಿಯಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಈಗ ರೇಣುಕ ಮಂದಿರದ ನೂತನ ಕಟ್ಟಡ ನಿರ್ಮಾಣದಲ್ಲಿಯೂ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಎಂಸಿಸಿ ಬಿ ಬ್ಲಾಕ್ನಲ್ಲಿರುವ ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿಯಾಗಿ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠ ಟ್ರಸ್ಟ್ನ ಟ್ರಸ್ಟಿಯಾಗಿ, ದಾವಣಗೆರೆ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ ಉಪಾಧ್ಯಕ್ಷರಾಗಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದು, ಇವುಗಳ ಜೊತೆಗೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಮಾಜ ಸೇವೆಯಲ್ಲಿ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಗಾನಹಳ್ಳಿ ಕಂಜ್ಯೂಮರ್ ಕಾಂಪ್ಲೆಕ್ಸ್ ಸ್ಥಾಪಕರಾಗಿ, ಮುಂದೆ ಆನಂದ ಹಾರ್ಡ್ವೇರ್ ಮತ್ತು ಪೇಂಟ್ಸ್ ಅಂಗಡಿಯನ್ನು ತೆರೆದು, ನಗರದಲ್ಲಿಯೇ ಪ್ರತಿಷ್ಠಿತ ವರ್ತಕರಲ್ಲಿ ಮುಂಚೂಣಿಯಲ್ಲಿದ್ದಾರೆ.
ಮಾಗಾನಹಳ್ಳಿ ನಿಜಾನಂದ ಅವರಿಗೆ ಶ್ರೀಮತಿ ಲೀಲಾ ಅವರು ಜೀವನ ಸಂಗಾತಿಯಾಗಿದ್ದು, ಅವರ ಯಶಸ್ಸಿಗೆ ಕಾರಣರಾಗಿದ್ದಾರೆ. ಈ ದಂಪತಿ ಮೂರು ಜನ ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಜೊತೆ ಸುಖೀ ಜೀವನ ನಡೆಸುತ್ತಿದ್ದಾರೆ. ಅವರ ವ್ಯಾಪಾರ-ವಹಿವಾಟು ಅಭಿವೃದ್ಧಿಗೆ ಬಿ. ಸಾವಿತ್ರಿ ದೇವಿ ಅವರು ಪಾಲುದಾರರಾಗಿ ಅವರ ಕೈ ಬಲಪಡಿಸುತ್ತಿದ್ದು, ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ಮಾಗಾನಹಳ್ಳಿ ನಿಜಾನಂದ ಅವರು ನೂರಾರು ವರ್ಷ ಬಾಳಲಿ ಎಂದು ಹಾರೈಸೋಣ.
ಬಕ್ಕೇಶ್ ನಾಗನೂರು