ಅತೀ ಹೆಚ್ಚು ಅಂಕ ಪಡೆಯುವ ದಿಸೆಯಲ್ಲಿ ಪರಿಣಾಮಕಾರಿ ಓದು ಬಹಳ ಮುಖ್ಯವಾದುದು. ಓದು ಶಿಕ್ಷಣದ ಹಾಗೂ ವ್ಯಕ್ತಿತ್ವ ರೂಪಿಸುವ ಅವಿಭಾಜ್ಯ ಅಂಗ. ವಿದ್ಯಾರ್ಥಿಯಾದವನು/ಆದವಳು ಸದಾ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಂಡಿರಬೇಕು. ಬಲವಂತ, ಕಷ್ಟಪಟ್ಟು ಹಾಗೂ ಒತ್ತಾಯಕ್ಕೆ ಓದುವುದು ಸಮಂಜಸವಲ್ಲ. ಇಷ್ಟಪಟ್ಟು ಓದಿದಾಗ ವಿಷಯವನ್ನು ಬೇಗ ಅರ್ಥ ಮಾಡಿಕೊಳ್ಳಬಹುದು.
ಓದಿನಲ್ಲೂ ಸಂಪೂರ್ಣ ಮನಸ್ಸಿಟ್ಟು ಹೆಚ್ಚಿನ ಏಕಾಗ್ರತೆಯಿಂದ ಓದುವ ಅಭ್ಯಾಸವನ್ನು ಚಿಕ್ಕ ವಯೋಮಾನದಿಂದಲೇ ಬೆಳೆಸಿಕೊಳ್ಳಬೇಕು.
ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು :
* ನೀವು ಓದುವ ಕೊಠಡಿ ಸಾಕಷ್ಟು ಗಾಳಿ, ಬೆಳಕಿನಿಂದ ಕೂಡಿರಲಿ. ಬಿಳಿಯ ಬೆಳಕು ಅವಶ್ಯಕ.
* ಮನಸ್ಸನ್ನು ಉದ್ರೇಕಿಸುವ ಭಾವಚಿತ್ರಗಳು ಬೇಡ.
* ವಿವಿಧ ವಿಷಯಕ್ಕೆ ಸಂಬಂಧಿಸಿದ ಚಾರ್ಟ್‍ಗಳಿರಲಿ, ಮನೆಯಲ್ಲಿ ಹಾಗೂ ಶಾಲೆಯಲ್ಲಿ ಅನುಸರಿಸಬೇಕಾದ ಕಾಲ ನಿರ್ವಹಣೆ ಪಟ್ಟಿ ಮತ್ತು ವೇಳಾ ಪಟ್ಟಿ ಇರಲಿ.
* ಪುಸ್ತಕಗಳನ್ನು ಕ್ರಮಬದ್ಧವಾಗಿ ಜೋಡಿಸಿಡಬೇಕು. ಎಲ್ಲಾ ಪುಸ್ತಕಗಳನ್ನು ಹರಡಿಕೊಂಡು ಓದುವುದು ಸೂಕ್ತವಲ್ಲ.
* ಓದಲು ಕುಳಿತುಕೊಳ್ಳುವ ಜಾಗ ಸ್ಥಿರವಾಗಿರಲಿ, ಪದೇ ಪದೇ ಬದಲಾಯಿಸುವುದು ಬೇಡ.
* ಓದುವ ಕೊಠಡಿಯಲ್ಲಿ ಟಿ.ವಿ., ರೇಡಿಯೋ, ಮೊಬೈಲ್, ಟೇಪ್‍ರೆಕಾರ್ಡರ್, ಫೋನ್ ಇವುಗಳಿಂದ ದೂರವಿರಿ.
* ನೀವು ಓದುವಾಗ ಬೇರೆ ಕೊಠಡಿಯಲ್ಲಿರುವ ಟಿ.ವಿ. ಅಥವಾ ರೇಡಿಯೋ, ಮೊಬೈಲ್ ಶಬ್ದ ಕೇಳದಂತೆ ಎಚ್ಚರವಹಿಸಿರಿ.
* ಕುಳಿತುಕೊಂಡು ಓದುವುದು ಸೂಕ್ತ. ಮಲಗಿ ಓದುವುದರಿಂದ ಬಹುಬೇಗ ನಿದ್ರೆಗೆ ಜಾರುತ್ತೀರಿ.
* ಬೆಳಗಿನ ಜಾವದಲ್ಲಿ ಹೆಚ್ಚು ಓದುವುದು ಒಳ್ಳೆಯ ಅಭ್ಯಾಸ ಹಾಗೂ ವಿಷಯವನ್ನು ಬಹುಬೇಗ ಗ್ರಹಿಸಬಹುದು
* ಒಮ್ಮೆ ಓದುವುದಕ್ಕೆ ಕುಳಿತರೆ ಕನಿಷ್ಠ ಅರ್ಧ ಗಂಟೆ/ಒಂದು ಗಂಟೆ ಏಳದಂತೆ ಓದುವ ಅಭ್ಯಾಸ ಬೆಳೆಸಿಕೊಳ್ಳುವುದು ಸೂಕ್ತ.
* ತರಗತಿಯಲ್ಲಿ ಆದ ಪಾಠಗಳನ್ನು ಅಂದಿನ ದಿನದಂದೇ ಓದಿ ಬರೆಯಿರಿ.
* ಅರ್ಥವಾಗದೇ ಇರುವ ವಿಷಯಗಳನ್ನು ನಿಮ್ಮ ಗೆಳೆಯರ ಅಥವಾ ಶಿಕ್ಷಕರ ಜೊತೆ ಚರ್ಚಿಸಿ, ತಿಳಿದುಕೊಳ್ಳಿ.
* ಯಾವ ವಿಷಯವೂ ಕಠಿಣವಲ್ಲ ಎಂಬುದಕ್ಕೆ ಮನವರಿಕೆ ಮಾಡಿಕೊಳ್ಳಿ.
* ಕಡಿಮೆ ಅಂಕ ಬಂದಿರುವ ವಿಷಯಗಳ ಮೇಲೆ ಹೆಚ್ಚು ಹೆಚ್ಚು ಏಕಾಗ್ರತೆಯಿಂದ ಓದಿ ಬರೆದು ಅಭ್ಯಾಸ ಮಾಡಿ.
* ಓದುವಾಗ ಆ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಸಣ್ಣ ಟಿಪ್ಪಣಿ ಮಾಡಿಕೊಳ್ಳಿ.
* ಓದಬೇಕಾದ ದಿನಚರಿ, ಕಾಲ ನಿರ್ವಹಣಾ ಪಟ್ಟಿ ಹಬ್ಬ, ರಜಾ ದಿನವೂ ಅನುಸರಿಸಲ್ಪಡುವಂತೆ ಎಚ್ಚರಿಕೆ ವಹಿಸಿ.
* ದಿನ ಹಿಂದಿನ ವಾರದಲ್ಲಿ ಕಲಿಯುವಿಕೆಯಲ್ಲಿ ಆಗಿರಬಹುದಾದ ಕೊರತೆಯನ್ನು ಭರಿಸುವ ದಿನ ಎಂಬುದಾಗಿ ಭಾವಿಸುತ್ತಾ ಓದಿ ಬರೆಯುವ ಪರಿಪಾಠ ಬೆಳೆಸಿಕೊಳ್ಳಿ.
* ಕೀಳು ಅಭಿರುಚಿ, ಕಾಡು ಹರಟೆಯಲ್ಲಿ ತೊಡಗಬೇಡಿ
* ಪದ್ಯ, ಸೂತ್ರ, ಸಮೀಕರಣ ಇತ್ಯಾದಿಗಳನ್ನು ಬಾಯಿಪಾಠ ಅಥವಾ ಕಂಠಪಾಠ ಮಾಡಿ.
ಪರೀಕ್ಷೆ : ಪರೀಕ್ಷೆಗಳು ವಿದ್ಯಾಭ್ಯಾಸದ ಒಂದು ಭಾಗವೇ ಆಗಿವೆ. ಟಸ್ಟ್‌ಗಳು, ಚಿಕ್ಕ ಪರೀಕ್ಷೆಗಳು, ಅರ್ಧವಾರ್ಷಿಕ ಪರೀಕ್ಷೆಗಳು ಅಣಕು ಪರೀಕ್ಷೆಗಳು, ಫೈನಲ್ ಪರೀಕ್ಷೆಗಳು ಹೀಗೆ.. ವಿದ್ಯಾರ್ಥಿ ಅನೇಕ ಪರೀಕ್ಷೆಗಳನ್ನು ಎದುರಿಸಬೇಕು. ಪಬ್ಲಿಕ್ ಪರೀಕ್ಷೆಯಿರುವ 10ನೇ ತರಗತಿ, ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಅತೀ ಹೆಚ್ಚು ಕಾಳಜಿ ವಹಿಸುವ ಪ್ರಯತ್ನದಲ್ಲಿರುತ್ತಾರೆ. ಏಕೆಂದರೆ ಇದು ವಿದ್ಯಾರ್ಥಿಯ ದೆಸೆಯಲ್ಲಿ ತಿರುವು ಪಡೆಯುವ ಹಂತವಾಗಿದೆ.
ಆಸಕ್ತಿಯಿಂದ ಪಾಠ ಕೇಳುವುದು : ವಿದ್ಯಾರ್ಥಿಗಳು ಒತ್ತಾಯಕ್ಕೆ ತರಗತಿಗಳಿಗೆ ಹೋಗಬಾರದು. ಶಿಕ್ಷಕರು ಹೇಳುವಂತಹ ಪಾಠವನ್ನು ಶ್ರದ್ಧೆಯಿಂದ ಆಲಿಸಿಕೊಳ್ಳಬೇಕು. ಅಲ್ಲದೆ ಅನುಮಾನದ, ಅರ್ಥವಾಗ ದಂತಹ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿ, ಪರಿಹಾರವನ್ನು ಕಂಡುಕೊಳ್ಳಬೇಕು. ನುರಿತ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಭಿನ್ನ ಆಯಾಮಗಳಿಂದ ಸರಳವಾಗಿ, ಆಕರ್ಷಕವಾಗಿ ಬೋಧನೆ ಮಾಡಿ ಆಸಕ್ತಿಯನ್ನು ಕೆರಳಿಸುವಂತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗುವುದರಿಂದ ಧನಾತ್ಮಕ ಅಂಶಗಳು ಹೆಚ್ಚುತ್ತವೆ.
ತರಗತಿಯಲ್ಲಿರುವಾಗ ನಮ್ಮ ಮನಸ್ಸನ್ನು ಹಿಡಿದು ಏಕಾಗ್ರತೆಯಿಂದ ಪಾಠ, ಪ್ರವಚನದ ಕಡೆ ಸಾಗಬೇಕು. ಹಸಿವಿನಿಂದ ಪಾಠ ಕೇಳುವುದು ಕಲಿಕೆಗೆ ಭಂಗ ತರುತ್ತದೆ. ಅಲ್ಲದೆ ಅತೀ ಹೆಚ್ಚು ಊಟ ಮಾಡಿದರೆ ನಿದ್ರೆಗೆ ಜಾರುತ್ತಾರೆ. ಊಟ, ತಿಂಡಿ ಸಮ ಪ್ರಮಾಣದಲ್ಲಿ ಸೇವಿಸಿದಾಗ ಮನಸ್ಸು ಹತೋಟಿಯಲ್ಲಿದ್ದು, ಕಲಿಕೆಗೆ ಪೂರಕವಾದ ಅಂಶಗಳನ್ನು ಒದಗಿಸುತ್ತದೆ. ಶಾಲೆ ಅಥವಾ ಕಾಲೇಜಿನಿಂದ ಮನೆಗೆ ಬಂದ ಮೇಲೆ ಮುಖ ತೊಳೆದು ದೈಹಿಕ ಶ್ರಮವಾಗುವಂತಹ ಆಟಗಳನ್ನು ಆಡಿದಾಗ ಮನಸ್ಸು ಹಗುರವಾಗುತ್ತದೆ.
ಮನೆಯ ಅಭ್ಯಾಸ : ಗೇಮ್ಸ್, ರೇಡಿಯೋ, ಟಿ.ವಿ.,ಮೊಬೈಲ್, ವೀಡಿಯೋ ಇವುಗಳಲ್ಲಿ ಹೆಚ್ಚು ಸಮಯವನ್ನು ವ್ಯರ್ಥ ಮಾಡದೆ, ಇವುಗಳಿಂದ ದೂರವಿರುವುದು ಸೂಕ್ತ.
ಮನೆಯಲ್ಲಿ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಓದಿಗೆ ಭಂಗತರದಂತಹ ಸ್ಥಳದಲ್ಲಿ ಕುಳಿತುಕೊಳ್ಳುವುದು ಸಹಾಯವಾಗುತ್ತದೆ. ಪದೇ ಪದೇ ಓದುವ ಸ್ಥಳವನ್ನು ಬದಲಾವಣೆ ಮಾಡಬಾರದು.
ಪರಿಣಾಮಕಾರಿ ಕಲಿಕೆಗೆ ಈ ವಿಧಾನ ಅನುಸರಿಸಿ, ಅನುಷ್ಠಾನಗೊಳಿಸಿ :
* ಓದಲು ಸೂಕ್ತ ಸಮಯ ಮತ್ತು ಸ್ಥಳ ಆಯ್ಕೆ ಮಾಡಿ
* ಏಕಾಗ್ರತೆಯಿಂದ 30 ನಿಮಿಷ ಓದಿ, ಓದಿದ್ದನ್ನು ಅರ್ಥ ಮಾಡಿಕೊಳ್ಳಿ.
* ಏನನ್ನು ಓದಿದ್ದೇನೆ ಎಂಬುದರ ಸಾರಾಂಶವನ್ನು ಬರೆದುಕೊಳ್ಳಿ.
* ಓದಿದ್ದನ್ನು ಮನಸ್ಸಿನಲ್ಲಿ ಮನನ ಮಾಡಿಕೊಳ್ಳಿ.
ಓದಿದ ವಿಷಯವನ್ನು ಪ್ರತಿದಿನ, ಒಂದು ವಾರದ ನಂತರ, ತಿಂಗಳ ನಂತರ ಯಾವುದು ಮನಸ್ಸಿಗೆ ಬರುತ್ತಿದೆ ಹಾಗೂ ಯಾವುದೂ ಮನಸ್ಸಿನಲ್ಲಿ ಬರುವುದಿಲ್ಲವೆಂದು ಪಟ್ಟಿ ಮಾಡಿಕೊಂಡು ಪುನಃ ಅಧ್ಯಯನ ಮಾಡುವುದು.
* ಪ್ರಶ್ನೆಗೆ ಸಂಬಂಧಿಸಿದಂತೆ ಮನೆಯಲ್ಲಿ ಕಾಲಮಿತಿಯಲ್ಲಿ ಉತ್ತರಿಸುವ ಅಭ್ಯಾಸ ಮಾಡಿ. ಇದರಲ್ಲಿ ಕಂಡು ಬರುವ ದೋಷಗಳನ್ನು ಸರಿಪಡಿಸಿಕೊಂಡರೆ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.
* ಶ್ರದ್ಧೆ, ಶ್ರಮ, ಕ್ರಮಬದ್ಧ ಅಧ್ಯಯನ ನಿರಂತರವಾಗಿರಲಿ.
* ಆರೋಗ್ಯದ ಸುಧಾರಣೆ : ಸಮಯಕ್ಕೆ ಸರಿಯಾಗಿ ಆಹಾರ, ನಿದ್ರೆ, ಯೋಗ, ಧ್ಯಾನದ ಅಭ್ಯಾಸವಿಟ್ಟುಕೊಳ್ಳುವುದು.
ವಿದ್ಯೆಯು ಮನುಷ್ಯನಿಗೆ ದೊಡ್ಡ ಸಂಪತ್ತು, ವಿದ್ಯೆ ಯಶಸ್ವಿಗೆ ಮೂಲ ಕಾರಣವು.
ಗುರುಗಳಲ್ಲಿ ಅದು ಶ್ರೇಷ್ಠ ಗುರು ಎನಿಸಿರುವುದು. ಪರ ನಾಡಿನಲ್ಲಿ ವಿದ್ಯೆಯೇ ಶ್ರೇಷ್ಠ ಗೆಳೆಯ,
ವಿದ್ಯೆಯು ಶ್ರೇಷ್ಠ ದೇವತೆ, ರಾಜ ಮಹಾರಾಜರ ಸನ್ನಿಧಾನದಲ್ಲಿ ಸಂಪತ್ತಿಗೆ ಬೆಲೆಯಿಲ್ಲ.
ಆದರೆ ಅದೇ ವಿದ್ಯೆ ದೊಡ್ಡ ಗುಣವಾಗಿ ಪರಿಣಮಿಸುವುದು. ಹೀಗೆ ಪರಿಣಾಮಕಾರಿಯಾಗಿ ರೂಪಿಸಿಕೊಳ್ಳಬೇಕು.
ಪರೀಕ್ಷಾ ಭಯ :
* ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಅನೇಕ ವಿದ್ಯಾರ್ಥಿಗಳಲ್ಲಿ ಆತಂಕ, ಭಯ ಪ್ರಾರಂಭವಾಗುತ್ತದೆ.
* ನನ್ನ ಪರೀಕ್ಷಾ ಸಿದ್ಧತೆಗಳು ಕಡಿಮೆಯಾದವು ಎಂಬುದರ ಚಿಂತೆ.
* ನನ್ನಿಂದ ಬೇಗ ಕಲಿಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಪರೀಕ್ಷಾ ಸಂದರ್ಭದಲ್ಲೂ ಎಲ್ಲಾ ವಿಷಯಗಳನ್ನು ಅಥವಾ ಪಾಠಗಳನ್ನು ಮುಗಿಸಲಿಕ್ಕೆ ಆಗುತ್ತೋ ಇಲ್ಲವೋ ಎಂಬುದರ ಭಯ.
* ನನಗೆ ಪರೀಕ್ಷೆಗೆ ಪ್ರಶ್ನೆಗಳಿಗೆ ಪೂರ್ಣ ಉತ್ತರವನ್ನು ಬರೆಯಲಿಕ್ಕೆ ಆಗುತ್ತೋ ಅಥವಾ ಇಲ್ಲವೋ ಎನ್ನುವ ಆತಂಕ, ಅಲ್ಲದೇ ಮೌಲ್ಯಮಾಪಕರು ಪೂರ್ತಿ ಅಂಕ ಕೊಡುತ್ತಾರೋ ಇಲ್ಲವೋ ಎಂಬುದು.
* ನಾನು ಫೇಲಾದರೆ ಎಷ್ಟು ಅವಮಾನ. ಅಲ್ಲದೆ ನನಗೆ ಯಾರೂ ಗೌರವ ಕೊಡುವುದಿಲ್ಲವೆಂಬುದು.
* ನನ್ನ ಸ್ನೇಹಿತರು ಒಳ್ಳೆಯ ಕೋರ್ಸಿಗೆ ಸೀಟು ಪಡೆಯುತ್ತಾರೆ. ನನ್ನಿಂದ ಇದು ಸಾಧ್ಯನಾ, ನಾನು ಹಿಂದೆ ಬೀಳುತ್ತೇನಾ
* ನನಗೆ ಭವಿಷ್ಯವಿಲ್ಲ ನನ್ನ ಪಾಲಕರಿಗೆ ನೋವು/ ನಿರಾಶೆ ಇಂತಹ ನಕಾರಾತ್ಮಕ ಚಿಂತನೆಗಳು ಸದಾ ಕಿವಿಯಲ್ಲಿ ಗುನುಗುಡುತ್ತಿರುತ್ತವೆ. ಆಗ ಭಯ ಶುರುವಾಗುತ್ತದೆ.
* ಮನಸ್ಸು ಸ್ಥಿರವಾಗಿರುವುದಿಲ್ಲ. ಹೃದಯದ ಬಡಿತ ಶುರುವಾಗುತ್ತದೆ.
* ಹಸಿವು ಹೆಚ್ಚಾಗುವುದಿಲ್ಲ. ಆಹಾರವು ರುಚಿಕರ ಅನ್ನಿಸುವುದಿಲ್ಲ.
*ನಿದ್ರೆಯಲ್ಲೂ ವ್ಯತ್ಯಾಸ ಕಂಡು ಬರುವುದು ಅಲ್ಲದೇ ಮಂಕು ಆವರಿಸುವುದು.
* ಆತ್ಮವಿಶ್ವಾಸ ಕಡಿಮೆಯಾಗುತ್ತದೆ.
* ಜ್ವರ ಆವರಿಸಬಹುದು
* ಕೋಪ, ಸಿಟ್ಟು, ಜಗಳ ಪ್ರಾರಂಭವಾಗಬಹುದು.
* ಹತಾಶೆ ಮನಸ್ಥಿತಿ ತಲುಪಬಹುದು
* ಒಂಟಿತನ ಇರಲು ಇಷ್ಟಪಡುವುದು.
ಇಂತಹ ಸಂಗತಿಗಳನ್ನು ಪರೀಕ್ಷೆಯ ಹಿಂದಿನ ದಿನದಲ್ಲೂ ಅತಿ ಹೆಚ್ಚು ಕಾಣಬಹುದು.ಆದ್ದರಿಂದ ಪೋಷಕರು, ಶಿಕ್ಷಕರು ಮಾರ್ಗದರ್ಶನ ಹಾಗೂ ಧೈರ್ಯ ತುಂಬಬೇಕಾಗುತ್ತದೆ.
ಪ್ರೇರೇಪಣೆ ನೀಡುವುದು :
ನೀನೊಬ್ಬ ಉತ್ತಮ ವಿದ್ಯಾರ್ಥಿ ಹಾಗೂ ನಿರಂತರ ಓದಿ ಅಭ್ಯಾಸ ಮಾಡಿದ್ದೀಯಾ ಅಲ್ಲದೆ, ವರ್ಷವೆಲ್ಲಾ ಓದಿದ್ದೀಯಾ. ಆದ್ದರಿಂದ ಓದಿದಂತಹ ಪ್ರಶ್ನೆಗಳೇ ಪರೀಕ್ಷೆಯಲ್ಲಿ ಬರುತ್ತವೆಂಬುದನ್ನು ತಿಳಿಸುವುದು.
* ಪರೀಕ್ಷೆ ಬರೆಯುವ ಮುನ್ನ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಸಮಾಧಾನ ಚಿತ್ತದಿಂದ ಪರೀಕ್ಷೆ ಎದುರಿಸು. ನಿನಗೆ ಯಶಸ್ಸು ಸಿಗುತ್ತದೆ.
* ಕನಿಷ್ಠ ಆರು ತಾಸು ನಿದ್ರೆ.
* ಕರಿದ ಪದಾರ್ಥಗಳಿಂದ ದೂರವಿರುವುದು, ಮಾಂಸಹಾರ ಬೇಡ
* ಹಸಿ ತರಕಾರಿಗಳನ್ನು ಸೇವಿಸುವುದು.
* ಪಾಯಸ, ಗಂಜಿ, ಖೀರು ಉತ್ತಮ
* ಓದುವಾಗ ಆಗಾಗ್ಗೆ ತಣ್ಣೀರು / ಬಿಸಿನೀರಿನಿಂದ ಮುಖ ತೊಳೆದುಕೊಳ್ಳಿ. ಇತ್ಯಾದಿ.
ಸಮಯ ಪಾಲನೆ ಮಾಡುವುದು :
* ಯಾವುದೇ ಪ್ರಶ್ನೆಗೆ ಉತ್ತರ ಬರೆಯಲು ಅವಶ್ಯಕತೆಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳಬಾರದು.
* ಕಡೆಯ ಹತ್ತು ನಿಮಿಷದಲ್ಲಿ ಪುನರಾವಲೋಕನ ಮಾಡುವುದು.
* ಪ್ರಶ್ನೆಗಳ ಸಂಖ್ಯೆಯನ್ನು ಸರಿಯಾಗಿ ನಮೂದಿಸುವುದು.
* ರಿಜಿಸ್ಟರ್ ನಂಬರ್ ಉತ್ತರ ಪತ್ರಿಕೆಗಳ ಕ್ರಮ ಸಂಖ್ಯೆಯನ್ನು ಹಾಕುವುದು.
* ಇತರರು ಏನು ಮಾಡುತ್ತಿದ್ದಾರೆಂಬುದರ ಕಡೆ ಗಮನವಿರಬಾರದು.
* ಪೂರ್ಣ ಬರೆಯುವುದು ಮುಗಿಯುವವರೆಗೂ ಏಕಾಗ್ರತೆಯಿಂದ ಉತ್ತರಿಸಬೇಕು.
* ಹೊರ ಬಂದ ನಂತರ ಚರ್ಚೆ ಬೇಡ.
* ಮನೆಗೆ ಹೋಗಿ ವಿರಾಮ ತೆಗೆದುಕೊಳ್ಳುವುದು.
ಹಾಲೇಶ್ ಹೆಚ್.ಎಸ್.
ದಾವಣಗೆರೆ.