ಇತಿಹಾಸದ ಪುಟದಲ್ಲಿ ಸೀತೆ, ಸಾವಿತ್ರಿ, ದಮಯಂತಿ, ಅಹಲ್ಯೆ, ದ್ರೌಪದಿ ಇವರದು ದಂತಕಥೆಯಾದರೆ ಪೂಲನ್‌ದೇವಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಜೀವಂತ ಸತ್ಯಕಥೆ ಕಣ್ಣ ಮುಂದಿದೆ. ದೆಹಲಿ ಅತ್ಯಾಚಾರ ಘಟನೆ ಸಾಂಕೇತಿಕ ಮಾತ್ರ. ಸಮಾಜದಲ್ಲಿ ಅತ್ಯಾಚಾರಕ್ಕೆ ಒಳಗಾದ ಎಲ್ಲಾ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲನ್ನು ಏರುವುದಿಲ್ಲ. ನ್ಯಾಯಾಲಯದ ಮೆಟ್ಟಿಲನ್ನು ಏರಿದ ಕೆಲವು ಪ್ರಕರಣಗಳು ಬೇಗನೆ ಇತ್ಯರ್ಥಗೊಳ್ಳುವುದಿಲ್ಲ. ಇದಕ್ಕಾಗಿ ಒಂದು ಹೊಸ ಕಾನೂನನ್ನು ಜಾರಿಗೊಳಿಸಬೇಕಾಗಿದೆ. ಇದರಿಂದ ಅಪರಾಧಗಳು ಕಡಿಮೆಯಾಗುತ್ತವೆ ಎಂಬುದು ಮಹಿಳೆಯರ ಬೇಡಿಕೆಯಾಗಿದೆ.
ಸ್ವಾವಲಂಬಿ ಬದುಕು ನಡೆಸುತ್ತಿರುವ ಮಹಿಳೆ ಇನ್ನೂ ಮೀಸಲಾತಿ ಅಡಿಯಲ್ಲಿ ದುಡಿಯಬೇಕಾದ ಅನಿವಾರ್ಯತೆ ಮಹಿಳೆಯರಿಗಿದೆ. ಜಾಗತಿಕ ಮಟ್ಟದಲ್ಲಿ ಶಿಕ್ಷಣ, ತರಬೇತಿ, ತಂತ್ರಜ್ಞಾನಕ್ಕೆ ನೆರವು ನೀಡಿ ಸಮಾಜದಲ್ಲಿ ಸಮಾನತೆಯ ವೈಶಿಷ್ಟ್ಯ ಪೂರ್ಣ ಬದಲಾವಣೆಗೆ ಅವಕಾಶ ಕಲ್ಪಿಸಬೇಕಾಗಿದೆ.
ಉದ್ಯೋಗ ಕ್ಷೇತ್ರಗಳಲ್ಲಿ ಸ್ತ್ರೀ, ಪುರುಷರಿಗೆ ಸರಿಸಮಾನ ಎಂದು ತೋರಿಸಿದರೂ ಹಲವೆಡೆಗಳಲ್ಲಿ ಇನ್ನೂ ಲಿಂಗತಾರತಮ್ಮ ಕಡಿಮೆಯಾಗಿಲ್ಲ. ಹೆಣ್ಣು ಭ್ರೂಣಹತ್ಯೆ, ಹಸುಗೂಸುಗಳ ಮೇಲೂ ಅತ್ಯಾಚಾರ ನಡೆಯುವುದನ್ನು ತಡೆಯಬೇಕಿದೆ. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. “ಹೆಣ್ಣು ಸಮಾಜದ ಕಣ್ಣು” ಸಮಾಜ ಮತ್ತು ಮಹಿಳೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹೆಣ್ಣನ್ನು ಹೊರತುಪಡಿಸಿದ ಸಮಾಜವಿರಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು.
ಮಹಿಳೆಗಿರುವ ವರದಾನ ತಾಯಿತನ. ತಾಯಿತನ ದಿಂದಲೇ ಮಹಿಳೆ ಎಷ್ಟು ಗಟ್ಟಿಗಿತ್ತಿ ಎಂದು ತಿಳಿಯುತ್ತದೆ. ಮಗುವನ್ನು ಸಾಕಿ ಸಲಹಿ ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಪುರುಷರಿಗಿಂತ ಸ್ತ್ರೀಯ ಕೈಂಕರ್ಯವೇ ಹಿರಿದು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀಯರ ಶ್ರಮವಿದ್ದೇ ಇದೆ. ಮಹಿಳೆ ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಗೆಳತಿಯಾಗಿ, ಹೆಂಡತಿಯಾಗಿ, ಅತ್ತೇ, ಸೊಸೆಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿದ್ದಾಳೆ.
ಯಾವ ದೇಶ ಅಥವಾ ಜನಾಂಗ ಸ್ತ್ರೀಯನ್ನು ಗೌರವದಿಂದ ಕಾಣುತ್ತದೋ ಆದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಹಿಂದಿನ ಕಾಲದಿಂದಲೂ ದೈವ ವಾಕ್ಯವೊಂದಿದೆ, “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಲ್ಲಿ ಸ್ತ್ರೀಯರಿಗೆ ಗೌರವ, ಮನ್ನಣೆ ಸಿಗುವುದೋ ಅಲ್ಲಿ ದೇವತೆಗಳು ನಲಿದಾಡುತ್ತಾರೆ ಎಂಬ ಮಾತಿದೆ. ಈ ಮಾತು ಮಾತಾಗಿಯೇ ಇರಬಾರದು. ಆಚರಣೆಗೆ ತರಬೇಕು. ಆಗ ಮಾತ್ರ ಈ ಆಧುನಿಕ ಜಗತ್ತಿನಲ್ಲಿ ಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ, ಹೀಗಾದಾಗ ಮಾತ್ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣವಾಗುತ್ತದೆ.
ಮಹಿಳಾ ದಿನಾಚರಣೆ ಎಂಬುದು ಮಹಿಳೆಯರು ಸಂತೋಷದಿಂದ ಕುಣಿದು ಕುಪ್ಪಳಿಸುವ ಹಬ್ಬವಲ್ಲ. ನ್ಯೂಯಾರ್ಕ್‌ನಲ್ಲಿ ಕ್ಲಾರಾ ಜೆಟ್‌ಕಿವೆ ಎಂಬ ಕಾರ್ಮಿಕ ಮಹಿಳೆ ಸಮಾನ ವೇತನಕ್ಕಾಗಿ ಹೆರಿಗೆ ಸೌಲಭ್ಯಕ್ಕಾಗಿ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ. ಮಹಿಳೆಯರಿಗೆ ಹುಟ್ಟಿನಿಂದ ಸಾಯುವವರೆಗೂ ದಿನ ನಿತ್ಯ ಒಂದಿಲ್ಲೊಂದು ಸಂಘರ್ಷ ನಡೆಯುತ್ತಲೇ ಇರುತ್ತದೆ. ಕೆಲವು ಕ್ಷೇತ್ರಗಳಲ್ಲಿ ಸಂಘರ್ಷದಿಂದಲೇ ಸಾಧನೆಗೈದ ಸಂಕೇತದ ಸ್ಮರಣೆಯ ದಿನ ಮಾತ್ರ.
ವಿಶ್ವಸಂಸ್ಥೆ 1975 ಮಾರ್ಚ್ 8ನ್ನು “ವಿಶ್ವಮಹಿಳಾ ದಿನ” ಎಂದು ಘೋಷಿಸಿತು. ದುಡಿಯುವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ” ಆಚರಿಸಲಾಗುತ್ತಿರುವ ಈ ಸಂದರ್ಭ ದಲ್ಲಿ ಪ್ರಕೃತಿಯ ವಿಶೇಷ ಸೃಷ್ಟಿಯ, ಸಹನೆಯ ಸಾಕಾರ ಮೂರ್ತಿಗೆ ನನ್ನದೊಂದು ಸಲಾಮು.
ಡಾ|| ಜಿ.ಎಸ್. ಶಿವರುದ್ರಪ್ಪನವರು ಸ್ತ್ರೀಯನ್ನು ಕುರಿತು ಹೀಗೆ ಹೇಳಿದ್ದಾರೆ.
“ಮನೆಮನೆಯ ದೀಪ ಉರಿಸಿ
ಹೊತ್ತಿಗೊತ್ತಿಗನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ…”
ಆಧುನಿಕ ಯುಗದಲ್ಲಿ ಮಹಿಳೆಯ ಪಾತ್ರ ಬದಲಾಗಿದೆ. ವೃತ್ತಿ ಮತ್ತು ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸದಿಂದ ನಿಂತಿದ್ದಾಳೆ. ಕಷ್ಟದಲ್ಲಿ ಗೋಳಾಡುತ್ತಾ ಕೂರುವ ಅಳುಮುಂಜಿಯಾಗಿಲ್ಲ. ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯ ಇದೆ ಎಂದು ತೋರಿಸಿಕೊಟ್ಟಿದ್ದಾರೆ. ಈ ಸಮಾಜದಲ್ಲಿ ಬದುಕು ಅಂದರೆ ಕೇವಲ ಬರೀ ನೋವುಗಳ ಸಂಕಲನವಲ್ಲ. ಬುದ್ಧಿವಂತಿಕೆ, ಪರಿಶ್ರಮ, ಕ್ರಿಯಾಶೀಲತೆ ನೋವನ್ನು ನುಂಗಿಕೊಳ್ಳುವ ಶಕ್ತಿ ಹಾಗೂ ಸಂಘಟನೆಯಲ್ಲಿ ತಾನೇ ಮುಂದು ಎಂದು ಸ್ತ್ರೀ ಜಗತ್ತಿಗೆ ಇಂದು ಸಾರಿ ಹೇಳುತ್ತಿದ್ದಾಳೆ.
ಬಹುತೇಕ ಪ್ರಮುಖ ಹುದ್ದೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ರಾರಾಜಿಸುತ್ತಿದ್ದಾಳೆ. ಒಳ ಮನೆಯಲ್ಲದೆ, ಹೊರ ಜಗತ್ತಿನ ಅರಿವೂ ಆಕೆಗಿದೆ. ಯಾರನ್ನು ಹೇಗೆ ನಿಭಾಯಿಸಬೇಕೆಂಬ ಕಲೆ ಕರಗತವಾಗಿದೆ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಜಾಣ್ಮೆ, ತಾಳ್ಮೆ, ಚಾಕಚಕ್ಯತೆ ಆಕೆಗೆ ರಕ್ತಗತವಾಗಿದೆ. ಇದಕ್ಕೀಗ ವೇದಿಕೆ ದೊರಕುತ್ತಿದೆಯಷ್ಟೇ. ಆದರೆ ಇಡೀ ದಿನ ಮನೆಯಲ್ಲಿ ಬಿಡುವಿಲ್ಲದೆ ದುಡಿಯುವ ತಾಯಿ, ಹೆಂಡತಿ ಅಕ್ಕ-ತಂಗಿ ಯರ ಪರಿಶ್ರಮಕ್ಕೆ ಪ್ರೋತ್ಸಾಹವನ್ನು ಕೊಡುವವರಾರು?
ಮಹಿಳಾ ಸಬಲೀಕರಣ ಎಂಬುದು ಒಂದು ಪ್ರಮುಖ ಅಂಶವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುನ್ನಡೆ ಸಾಧಿಸಿದ್ದರೂ ಅವಳ ಸ್ಥಿತಿಗತಿ, ಸ್ಥಾನಮಾನ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಮೇಲಕ್ಕೇರಿಸುವುದು ಇನ್ನೂ ಹೆಚ್ಚು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣಗಳು ಹಲವಾರಿದ್ದರೂ ಉತ್ತರ ಅತ್ಯಂತ ಸರಳವಾಗಿದೆ. ಮಹಿಳಾ ಅಭಿವೃದ್ಧಿ ಎಂದಾಕ್ಷಣ ಕೇವಲ ಬೆರಳೆಣಿಕೆಯ ಮಹಿಳೆಯರಿಗೆ ಅವಕಾಶ ಕಲ್ಪಿಸುವುದು. ಸಬಲೀಕರಣ ಎಂದಾಕ್ಷಣ ಪುರುಷರನ್ನು ಹದ್ದು ಬಸ್ತಿನಲ್ಲಿ ಇಟ್ಟು ಕೊಳ್ಳುವುದು ಎಂದರ್ಥವಲ್ಲ. ಮಹಿಳೆಯರ ಪರ ಸಂಘರ್ಷ ಎನ್ನುವುದು ಒಂದು ದಿನದ ಕಾರ್ಯಕ್ರಮ ಮಾಡಿ ಮುಗಿಸುವಂತಹದ್ದಲ್ಲ.
ಶ್ರೀಮತಿ ಕೆ. ಸುಜಾತ, ಸಹಶಿಕ್ಷಕಿ
ಲಿಂಗಣ್ಣನಹಳ್ಳಿ, ಜಗಳೂರು ತಾಲ್ಲೂಕು.