ಡಾ.ಬಿ.ಎಸ್. ನಾಗಪ್ರಕಾಶ್, ಡಾ. ಎಸ್.ಹೆಚ್. ಪೂಜಾರ್, ಡಾ. ನಾಗರಾಜ ಶೆಟ್ಟಿ, ಡಾ. ಶಾಮ ಸುಂದರ ಶೆಟ್ಟಿ, ಡಾ. ಶಾರದಾ ಶೆಟ್ಟಿ, ಡಾ. ಶಫೀ ಅಹ್ಮದ್, ಡಾ. ಸದಾಶಿವಪ್ಪ ಅವರುಗಳನ್ನೊಳ ಗೊಂಡ ವೈದ್ಯ ತಂಡವು ಸ್ಥಾಪಿಸಿದ ಯುನಿಟಿ ಹೆಲ್ತ್ ಸೆಂಟರ್ ಈಗ ದಾವಣಗೆರೆಯ ಹೆಸರಾಂತ ಖಾಸಗಿ ಆಸ್ಪತ್ರೆಗಳಲ್ಲೊಂದು.
ಡಾ. ಬಿ.ಎಸ್.ನಾಗಪ್ರಕಾಶ್ ಮಿತ್ರ ವೈದ್ಯ ತಂಡದೊಂದಿಗೆ ಆರಂಭಿಸಿದ ಆಸ್ಪತ್ರೆಗಿಟ್ಟ ಹೆಸರೇ `ಯುನಿಟಿ’ ಹೆಲ್ತ್ ಸೆಂಟರ್
ಆಕಸ್ಮಿಕವಾಗಿ ಸಂಭವಿಸಬಹುದಾದ ಅವಘಡಗಳಿಗೆ ತತ್ ಕ್ಷಣವೇ ಸಮೀಪದಲ್ಲೇ ಚಿಕಿತ್ಸೆ ಕೊಡುವಲ್ಲಿ ಪಾಲಿಕ್ಲಿನಿಕ್ ಗಳ ಪಾತ್ರ ತುಂಬಾ ಮಹತ್ವದ್ದಾಗಿದ್ದು, ಇಂತಹ ಆಸ್ಪತ್ರೆಗಳಲ್ಲೊಂದಾಗಿರುವ ಯುನಿಟಿ ಹೆಲ್ತ್ ಸೆಂಟರ್ ಗೆ ಈಗ 40ರ ವರ್ಷಾಚರಣೆಯ ಸಂಭ್ರಮ.
ಅಂದಿನ ದಿನಗಳಲ್ಲಿ ಊರು ದೊಡ್ಡದಾಗಿದ್ದರೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಾಗಲೀ, ದೊಡ್ಡ – ದೊಡ್ಡ ಆಸ್ಪತ್ರೆಗಳಾಗಲೀ ಸಾರ್ವಜನಿಕರಿಗೆ ಬಹು ದೂರವಾಗುತ್ತಿದ್ದವು. ಎಲ್ಲೋ ಒಂದೊಂದು ಇದ್ದ ಪಾಲಿಕ್ಲಿನಿಕ್ ಗಳು ತಕ್ಷಣವೇ ಸಿಗುತ್ತಿರಲಿಲ್ಲ. ಈ ವಿಚಾರವನ್ನು ಮನಗಂಡು ಊರಿನ ಮಧ್ಯ ಭಾಗದಲ್ಲೊಂದು ಕ್ಲಿನಿಕ್ ಇರಬೇಕು ಎನ್ನುವ ದೃಷ್ಟಿಯಿಂದ ಆರಂಭವಾಗಿದ್ದೇ ಯುನಿಟಿ ಹೆಲ್ತ್ ಸೆಂಟರ್.
ಅಲ್ಲದೇ, ಈ ಆಸ್ಪತ್ರೆಗೆ ಬರುವ ರೋಗಿಗಳಿಗೆ ಎಲ್ಲಾ ತರಹದ ಕಾಯಿಲೆಗಳಿಗೆ ಚಿಕಿತ್ಸೆ ಸಿಗಬೇಕು ಎಂಬ ಸದುದ್ದೇಶದಿಂದ ವಿವಿಧ ವಿಷಯಗಳಲ್ಲಿ ಪರಿಣಿತ ವೈದ್ಯರುಗಳನ್ನೊಳಗೊಂಡ ತಂಡವು ಸುದೀರ್ಘವಾಗಿ ಚರ್ಚಿಸಿ 1980ರಲ್ಲಿ ಶ್ರೀ ಅಕ್ಕಮಹಾದೇವಿ ರಸ್ತೆಯಲ್ಲಿ ಆರಂಭಿಸಿದ ಆಸ್ಪತ್ರೆಯೇ ಯುನಿಟಿ ಹೆಲ್ತ್ ಸೆಂಟರ್.
ಚಿತ್ರದುರ್ಗ ಬೃಹನ್ಮಠದ ಹಿರಿಯ ಜಗದ್ಗುರುಗಳಾದ ಲಿಂ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಅಂದಿನ ರಾಜ್ಯ ಆರೋಗ್ಯ ಖಾತೆ ಸಚಿವರಾಗಿದ್ದ ಅಬ್ದುಲ್ ಸಮದ್ ಅವರು ಈ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು. ಅಂದು ಶಾಸಕರುಗಳಾಗಿದ್ದ ಮಾಯಕೊಂಡ ಕ್ಷೇತ್ರದ ಶ್ರೀಮತಿ ನಾಗಮ್ಮ ಕೇಶವಮೂರ್ತಿ, ದಾವಣಗೆರೆ ಕ್ಷೇತ್ರದ ಕಾಂ. ಪಂಪಾಪತಿ, ಹರಿಹರ ಕ್ಷೇತ್ರದ ಹೆಚ್. ಶಿವಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದನ್ನು ಇಲ್ಲಿ ಮೆಲುಕು ಹಾಕಬಹುದು. ಊರು ಬೆಳೆದಂತೆಲ್ಲಾ ಮತ್ತು ತಂಡದಲ್ಲಿದ್ದ ವೈದ್ಯರು ತಾವಿರುವ ಭಾಗದಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಆಶಯದೊಂದಿಗೆ ತಂಡದಲ್ಲಿದ್ದ ವೈದ್ಯರು ತಮ್ಮದೇ ಆದ ಪ್ರತ್ಯೇಕ ಆಸ್ಪತ್ರೆಗಳನ್ನು ಸ್ಥಾಪಿಸುತ್ತಾ ಹೊರಟಂತೆ ತಂಡದಲ್ಲುಳಿದ ಡಾ.ಬಿ.ಎಸ್. ನಾಗಪ್ರಕಾಶ್ ಅವರ ಪಾಲಿಗೆ ಯೂನಿಟಿ ಹೆಲ್ತ್ ಸೆಂಟರ್ ಉಳಿಯುವಂತಾಯಿತು.
ಡಾ. ಬಿ.ಎಸ್. ನಾಗಪ್ರಕಾಶ್ ಅವರ ನೇತೃತ್ವದಲ್ಲಿ ಮುನ್ನಡೆದಿರುವ ಈ ಆಸ್ಪತ್ರೆಯಲ್ಲೀಗ ಅವರ ಪುತ್ರ ಡಾ. ಬಿ.ಎನ್. ಅಭಿಷೇಕ್ ತಂದೆಗೆ ಸಾಥ್ ನೀಡುತ್ತಿದ್ದಾರೆ.
65 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ಎನಿಸಿಕೊಂಡಿ ರುವ ಇಲ್ಲಿ ಒಳ ಮತ್ತು ಹೊರ ರೋಗಿಗಳ ಆಸ್ಪತ್ರೆಯಾಗಿ ರುವ ಇಲ್ಲಿ ಸ್ಕ್ಯಾನಿಂಗ್, ಲ್ಯಾಬೋರೇಟರಿ, ಎಂಡೋ ಸ್ಕೋಪಿ, ಶಸ್ತ್ರಚಿಕಿತ್ಸಾ ಕೊಠಡಿ, ಹೆರಿಗೆ ಕೊಠಡಿ, ಫಿಜಿ ಯೋತೆರಪಿ ಸೌಲಭ್ಯಗಳು ಮತ್ತು ಆಧುನಿಕ ಚಿಕಿತ್ಸಾ ಸಲ ಕರಣೆಗಳೊಂದಿಗೆ ಯುನಿಟಿ ಹೆಲ್ತ್ ಸೆಂಟರ್ ಹೆಸರಾಂತ ಆಸ್ಪತ್ರೆಗಳಲ್ಲೊಂದಾಗಿದ್ದು, ಈವರೆಗೂ ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಆಸ್ಪತ್ರೆಯ 40ನೇ ವರ್ಷಾಚರಣೆ ಕಾರ್ಯಕ್ರಮವನ್ನು ದಿನಾಂಕ 31.1.2021ರ ಭಾನುವಾರ ಏರ್ಪಡಿಸಲಾಗಿದ್ದು, ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿರುವ ಅತ್ಯಾಧುನಿಕ ಲ್ಯಾಮಿನಾರ್ ಫ್ಲೋರ್ ಜೊತೆಗೆ, ಹೊಸ ಮಾಡ್ಯುಲರ್ ಉನ್ನತೀಕರಿಸಿದ ಆಪರೇಷನ್ ಥಿಯೇಟರ್ ಅನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಉದ್ಘಾಟಿಸಲಿದ್ದಾರೆ.
ಸಂಕ್ಷಿಪ್ತ ವ್ಯಕ್ತಿ ಪರಿಚಯ : ಡಾ. ನಾಗಪ್ರಕಾಶ್ ಅವರು ವೈದ್ಯಕೀಯ ಕ್ಷೇತ್ರದೊಂದಿಗೆ ಸಾಮಾಜಿಕ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಲಯನ್ಸ್ ಕ್ಲಬ್ ನ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಬೆಂಗಳೂರು ಹೊರತುಪಡಿಸಿ, ವೈಶ್ಯ ಜನಾಂಗದ ವ್ಯಕ್ತಿಯೊಬ್ಬರು ಕರ್ನಾಟಕದಲ್ಲಿ ಲಯನ್ಸ್ ಸಂಸ್ಥೆಯ ಪ್ರಥಮ ರಾಜ್ಯಪಾಲ ಎಂಬ ಹೆಸರನ್ನು ಅವರು ಪಡೆದಿದ್ದಾರೆ.
ಪದ್ಮಾಲಯ ಕಂಬೈನ್ಸ್ ಸ್ಥಾಪಿಸಿ ಅದರ ಮೂಲಕ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ನಿರ್ಮಾಣದ ಚಿತ್ರಗಳ ಪೈಕಿ ಸಾಂಗ್ಲಿಯಾನ, ವಿಜಯ ಕ್ರಾಂತಿ, ರಾಜಣ್ಣ, ದಡ ಸೇರಿದ ದೋಣಿ, ಕಲಿಯುಕ ಕೃಷ್ಣ ಚಿತ್ರಗಳು ಅಪಾರ ಜನಮನ್ನಣೆ ಗಳಿಸಿವೆ.
ಚಿತ್ರರಂಗದಲ್ಲಿ ಅನೇಕ ತಾರಾ ನಟರಿಗೆ ಭವಿಷ್ಯವನ್ನು ಕಲ್ಪಿಸಿದ ಶ್ರೇಯಸ್ಸು ಡಾ. ನಾಗಪ್ರಕಾಶ್ ಅವರದ್ದಾಗಿದೆ. ದೇವರಾಜ್, ಶಶಿಕುಮಾರ್, ಕೀರ್ತಿರಾಜ್, ಪ್ರಕಾಶ್ ರೈ ಮತ್ತಿತರರು ಹೆಸರಾಂತ ನಟರಾಗಲು ಡಾ. ನಾಗಪ್ರಕಾಶ್ ಅವರ ಚಿತ್ರಗಳು ಬುನಾದಿ ಹಾಕಿವೆ. ಬಹುಭಾಷಾ ತಾರೆ ಸೌಂದರ್ಯ ಅವರನ್ನು ಪ್ರಪ್ರಥಮವಾಗಿ ಚಿತ್ರರಂಗದಲ್ಲಿ ಅವಕಾಶ ಕಲ್ಪಿಸಿದವರು ಡಾ. ನಾಗಪ್ರಕಾಶ್. ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ 1990ರಲ್ಲಿ ಚಲನಚಿತ್ರ ತಾರೆಯರ ಸ್ಟಾರ್ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿದ ರೂವಾರಿಯೂ ಅವರಾಗಿದ್ದಾರೆ.
– ಇ.ಎಂ. ಮಂಜುನಾಥ,
[email protected]