ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ…

ಹನ್ನೆರಡನೆಯ ಶತಮಾನದ ಶ್ರೇಷ್ಠ ದಾರ್ಶನಿಕ ಕ್ರಾಂತಿಕಾರಿ ಬಸವಣ್ಣನವರು ಶಿವ, ಪರ ಶಿವ, ಯೋಗಿ, ಬ್ರಹ್ಮ, ವಿಷ್ಣು, ರುದ್ರ ಮುಂತಾದ ಕಾಲ್ಪನಿಕ ದೈವ ದೇವತೆಗಳನ್ನು ಸಂಪೂರ್ಣ ಧಿಕ್ಕರಿಸಿ.  ಜೀವ ಜಾಲ ಹೊತ್ತ ಚೈತನ್ಯದಾಯಕ ಜಂಗಮ ಚೇತನವಾದ ಭಕ್ತನನ್ನೇ ಶಿವನೆಂದು ಅರುಹಿ, ನಾ ದೇವನಾಗಬಲ್ಲದೇ ನೀ ದೇವನಾಗಬಹುದೇ? ಎಂಬ ಪ್ರಶ್ನೆಯನ್ನು ಹಾಕುವ ದಿಟ್ಟತನವನ್ನು ತೋರಿದವರು ಬಸವಣ್ಣ ಮತ್ತು ಶರಣರು. ಆದರೆ ಇಂದಿನ ಅವರ ವಾರಸುದಾರರು ಎಂದು ಹೇಳಿಕೊಳ್ಳುತ್ತಾ, ಮಠಗಳ ಆಶ್ರಮಗಳ ಲಾಂಛನಧಾರಿಗಳ ಗುಲಾಮರಾಗಿ ಶರಣ ತತ್ವವವನ್ನು ಅಧ್ಯಯನ ಮಾಡದೆ ವಚನಗಳನ್ನು ಓದದೆ, ಪಚನ ಮಾಡಿಕೊಳ್ಳದೆ ಅಲ್ಲೊಂದು ಇಲ್ಲೊಂದು  ಪ್ರಕ್ಷಿಪ್ತ ವಚನಗಳನ್ನು ಎತ್ತಿ ಶಿವನನ್ನು ಮತ್ತೆ ನಮ್ಮ ಸಂಸ್ಕೃತಿಯಲ್ಲಿ ಅನುಷ್ಠಾನಗೊಳಿಸಲು ಯತ್ನಿಸುತ್ತಿರುವುದು ದುರಂತವೇ ಸರಿ.

ಶರಣರು ಕಂಡ ಶಿವ-ಶಿವ ಅಂದರೆ ಮಂಗಳ ಕಲ್ಯಾಣ ಪರಿಪೂರ್ಣ ಪರ ಬ್ರಹ್ಮ ಚೈತನ್ಯ ಎಂದು ಮಾತ್ರ. ಅಷ್ಟೇ ಅಲ್ಲ ಕೈಲಾಸವನ್ನು ದೇಹವನ್ನಾಗಿ ಮಾಡಿ ಅಲ್ಲಿರುವ ಭಕ್ತನ ಆತ್ಮವೇ ದೇವರು ಎಂದು ಸಾಧಿಸಿ ತೋರಿದವರು ನಮ್ಮ ಶರಣರು. 

ಶಿವ ಜ್ಞಾನ, ಶಿವ ಮಂಗಳ, ಶಿವ ಪ್ರಜ್ಞೆ ಇದನ್ನು ಹೊರತು ಪಡಿಸಿ ಗಡ್ಡ, ಮೀಸೆ, ಜಟಾಯು, ಚಂದ್ರ, ಹಾವು, ಶಂಖ, ನಂದಿಯನ್ನು ಹೊಂದಿದ ಶಿವ ನಮ್ಮ ಶಿವನಲ್ಲ.

ಶಿವರಾತ್ರಿ ನೆಪದಲ್ಲಿ ಖರ್ಜೂರ, ಸಾಬೂದಾನಿ, ಬಾಳೆಹಣ್ಣು, ಹಾಲು, ಬೆಣ್ಣೆ ತಿನ್ನುವ ಭಕ್ತರು ಹೇಗೆ ಶಿವನಾಗಬಲ್ಲರು? ಉಣ್ಣುವ, ತಿನ್ನುವ ಚಪಲಕ್ಕೆ ಶಿವನೆಂಬ ಕಾರಣ. ನಿದ್ದೆಗೆಟ್ಟು ರಾತ್ರಿಯಿಡೀ ಭಜನೆ ಮಾಡುವ ಬಾವಿಗಳು ನಾವು. 

ಶಿವ ಗುರುವೆಂದು ಬಲ್ಲಾತನೇ ಗುರು
ಶಿವ ಲಿಂಗವೆಂದು ಬಲ್ಲಾತನೇ ಗುರು
ಶಿವ ಜಂಗಮವೆಂದು ಬಲ್ಲಾತನೇ ಗುರು
ಶಿವ ಪ್ರಸಾದವೆಂದು ಬಲ್ಲಾತನೇ ಗುರು
ಶಿವ ಆಚಾರವೆಂದು ಬಲ್ಲಾತನೇ ಗುರು

ಇಂತಿ ಪಂಚವಿಧ ಪಂಚ ಬ್ರಹ್ಮವೆಂದು ಂತಿಳಿದ ಮಹಾ ಮಣಿಹ ಸಂಗನ ಬಸವಣ್ಣ 

ಎನಗೆಯೂ ಗುರು ನಿನಗೂ ಗುರು

ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ. 

ಅಲ್ಲಮರು ಬಸವಣ್ಣನವರ ವ್ಯಕ್ತಿತ್ವವನ್ನು ಮತ್ತು ಅವರೊಳಗಿನ ಅಸಾಧಾರಣ ದಾರ್ಶನಿಕತ್ವವನ್ನು ಜಗತ್ತಿಗೇ ಪರಿಚಯಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. 

ಬಸವಣ್ಣ ಮತ್ತು ಅವರ ಸಮಕಾಲೀನ ಶರಣರು   ವೈಚಾರಿಕತೆ, ವೈಜ್ಞಾನಿಕತೆ, ನೈಜ ಬದುಕಿನ ಪ್ರತಿಪಾದನೆ ಮಾಡಿ,  ಸೃಷ್ಟಿ-ಸಮಷ್ಟಿ ವ್ಯಕ್ತಿಯ ಜವಾಬ್ದಾರಿಗಳನ್ನು  ಗೊತ್ತು ಮಾಡಿಕೊಟ್ಟಿದ್ದಾರೆ. ಶಿವನೆಂಬುದು ಶರಣ ದೃಷ್ಟಿಯಲ್ಲಿ ಮಂಗಲ ಕಲ್ಯಾಣ ಜ್ಞಾನ ಎಂಬ ಪಾರಿಭಾಷಿಕ ಅರ್ಥಗಳು. ಶಿವ ಶಂಕರನಲ್ಲ, ಶರಣರ ಶಿವ ಭಕ್ತನ ಹೃದಯದಲ್ಲಿ ಇರುವ ಅಗಾಧ ಜಂಗಮ ಚೈತನ್ಯ ವಾಗಿದೆ. ಅಂತಹ ಪ್ರಜ್ಞೆಯೆ ಗುರು ಎಂದು ನಂಬಿರುವವನೇ ನಿಜವಾದ ಗುರು ಎಂದಿದ್ದಾರೆ.   ಅರಿವಿನ ಆರಂಭವೇ ಗುರು.

ಶಿವಜ್ಞಾನ ಶಿವಚಿಂತನೆಯ ಕಾರಣ ಪುರುಷ ಬಸವಣ್ಣ.ಅಂತೆಯೇ ಸಿದ್ಧರಾಮರು ಬಸವಣ್ಣನವರನ್ನು ಶಿವಪಥಿಕ ಎಂದಿದ್ದಾರೆ.

ಬಸವಾ ಬಸವಾ ನಿಮ್ಮಿಂದ ಕಂಡೆನಯ್ಯಾ ಭಕ್ತಿಯ
ಬಸವಾ ಬಸವಾ ನಿಮ್ಮಿಂದ ಕಂಡೆನಯ್ಯಾ ಜ್ಞಾನವ ಬಸವಾ
ಬಸವಾ ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ
ಕರುಣಿ ಕಪಿಲ ಸಿದ್ಧಮಲ್ಲಿನಾಥಯ್ಯಾ
ನಿಮಗೂ ನಮಗೂ ಬಸವಣ್ಣನೆ ಶಿವಪಥಿಕನಯ್ಯ 

                                                – ಸಿದ್ಧರಾಮೇಶ್ವರರು 

ಸುಮ್ಮನೇಕೆ ದಿನಕಳೆವಿರಿ
ಸುಮ್ಮನೇಕೆ ಹೊತ್ತುಗಳೆವಿರಿ ?
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ?
ಮಾಡ ಬನ್ನಿ ದಿನ ಶಿವರಾತ್ರಿಯ
ಕೇಳ ಬನ್ನಿ ಶಿವಾನುಭವವ
ನೋಡ ಬನ್ನಿ ಅಜಗಣ್ಣನಿರುವ ಬಸವಣ್ಣ ತಂದೆ. 

                                                 – ಮುಕ್ತಾಯಕ್ಕ 

ನಿರಾಕಾರ ಶಿವನನ್ನು ಪೂಜಿಸಲು ಯಾವುದೇ ಶುಭ ಘಳಿಗೆ ಬೇಕಿಲ್ಲ ಎನ್ನುತ್ತಾರೆ ಬಸವಾದಿ ಪ್ರಮಥರು. ಆ ನಿರಂಜನನು (ನಿರಾಕಾರ) ನಮಗೆ ಕೊಟ್ಟ ಪ್ರತಿ ದಿನ, ಪ್ರತಿ ಕ್ಷಣವೂ  ಅಮೃತ ಘಳಿಗೆಯೇ… ಶುಭ ಅಶುಭ ಎನ್ನುವ ದಿನ, ಘಳಿಗೆಗಳು ಇಲ್ಲ ಅನ್ನೋದು ಮುಕ್ತಾಯಕ್ಕನವರ ಈ ವಚನದಲ್ಲಿ ಹೇಳುತ್ತಾರೆ. 

ಶರಣ ನಿದ್ರೆಗೈದಡೆ ಜಪ ಕಾಣಿರೊ
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ
ಶರಣ ನಡೆದುದೆ ಪಾವನ ಕಾಣಿರೊ
ಶರಣ ನುಡಿದುದೆ ಶಿವತತ್ವ ಕಾಣಿರೊ
ಕೂಡಲಸಂಗನ ಶರಣನ ಕಾಯವೇ ಕೈಲಾಸ ಕಾಣಿರೊ.

ಬಸವಣ್ಣನವರು  ನಾನು ನಿತ್ಯ ಶಿವರಾತ್ರಿ ಮಾಡ್ತೇನೆ ಎಂದು ಹೇಳುವರು, ಆ ನಿರಾಕಾರ ದೇವನನ್ನು ಪೂಜಿಸಲು  ಯಾವುದೇ ಅರ್ಥವಾಗದ ಸಂಸ್ಕೃತ ಮಂತ್ರ ಬೇಕಾಗಿಲ್ಲ, ಆನು ಎನ್ನಂತೆ, ಮನ ಮನದಂತೆ, ಕೂಡಲಸಂಗಮದೇವ ತಾನು ತನ್ನಂತೆ, ಆ ದೇವನೇ ಈ ದೇಹದಲ್ಲಿ, ಈ ಕಾಯದಲ್ಲಿ ಇದ್ದಾನೆ ಎನ್ನುತ್ತಾರೆ. 

ನಿಜ ಶರಣನು ನಿದ್ರೆ ಮಾಡಿದರೆ ಅದೇ ಜಪ, ಎದ್ದು ಕುಳಿತರೆ ಅದೇ ಶಿವರಾತ್ರಿ, ನಿಜ ಶರಣ ನಡೆದರೆ ಪಾವನ, ನುಡಿದದ್ದೆ ಶಿವತತ್ವ, ಶರಣನ ದೇಹವೇ ದೇಗುಲ ಎನ್ನುತ್ತಾರೆ ಬಸವಣ್ಣನವರು. ಶಿವನ ಹೆಸರಲ್ಲಿ ಭರ್ಜರಿ ತಿನಿಸು ತಿನ್ನುವ ಖೂಳ ಭಟರು ನಾವು. ಶಿವರಾತ್ರಿ ಉಪವಾಸ ಸಾಬೂದಾನಿ ಕಿಚಡಿ ಅಷ್ಟೇ.

ಬಸವಣ್ಣ ಜಗತ್ತಿನ ಶ್ರೇಷ್ಠ ದಾರ್ಶನಿಕ ಎನ್ನಿಸಿಕೊಳ್ಳಲು ಅವರು ಶೋಧಿಸಿದ, ಅನ್ವೇಷಿಸಿದ ಭಕ್ತನೊಳಗಿನ ಶಿವ ಮಾತ್ರ. ಕಾಯದೊಳು ಗುರು ಲಿಂಗ ಜಂಗಮ. ಸತ್ಯ, ಶುದ್ಧ ಕಾಯಕ ಮಾಡಿ, ದಾಸೋಹ ಮಾಡುವ, ಹಂಚಿ ತಿನ್ನುವ ಸರ್ವ ಶ್ರೇಷ್ಠ ತತ್ವವೇ ಶರಣ ಸಿದ್ಧಾಂತವಾಗಿದೆ.


ಡಾ ಶಶಿಕಾಂತ ಪಟ್ಟಣ
ರಾಮದುರ್ಗ
[email protected]

error: Content is protected !!