ಕಾನೂನಿಗೆ ಸವಾಲಾಗಿರುವ ಸಿರಿವಂತ ಪುಂಡ ಬೈಕ್ ಸವಾರರು

ಈ ದಿನ ಬೆಳ್ಳಂಬೆಳಿಗ್ಗೆ ವಿದ್ಯಾನಗರ ಪಾರ್ಕ್‌ ಬಳಿ ಕಾರು-ಸ್ಕೂಟರ್ ಅಪಘಾತವಾದ ಸುದ್ದಿ… ವಿದ್ಯಾರ್ಥಿನಿಯನ್ನು ಹೈಟೆಕ್ ಆಸ್ಪತ್ರೆಗೆ ಕರೆದೊಯ್ದ ಬಗ್ಗೆ ಮಾಹಿತಿ ಬಂತು. ಈ ರೀತಿ ಅಪಘಾತಗಳು ಗುಂಡಿ ವೃತ್ತದಿಂದ ವಿದ್ಯಾನಗರದ ಕೊನೆ ಭಾಗದ ಬೈಪಾಸ್ ರಸ್ತೆಯವರೆಗೂ ಆಗುತ್ತಲೇ ಇರುತ್ತವೆ. ಒಂದೊಂದು ಪೊಲೀಸ್ ಗಮನಕ್ಕೆ ಬರುತ್ತಿರುತ್ತವೆ. ಬಹುಶಃ ಇದು ಕಾರ್‌ ಅಪಘಾತವಾದ್ದರಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಗುಂಡಿ ವೃತ್ತದಿಂದ ಡೆಂಟಲ್‌ ಕಾಲೇಜ್ ರಸ್ತೆ, ವಿದ್ಯಾನಗರ ಮುಖ್ಯರಸ್ತೆ, ನೂತನ ಕಾಲೇಜ್ ರಸ್ತೆ, ಹಾಸ್ಟೆಲ್ ರಸ್ತೆ, ಸಿದ್ದವೀರಪ್ಪ ಬಡಾವಣೆ ಮುಖ್ಯರಸ್ತೆ ಮುಂತಾದ ಕಡೆ `ವೇಗದ ಮಿತಿ’ಯಾಗಲೀ, ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದಾಗಲೀ, ತ್ರಿಬಲ್ ರೈಡಿಂಗ್ ಮಾಡುವುದಕ್ಕಾಗಲೀ, ಒಂದು ಕೈಲಿ ಮೊಬೈಲ್ ಹಿಡಿದು ಮಾತನಾಡುತ್ತಾ ಒಂದೇ ಕೈಲಿ ಬೈಕ್‌ ಡ್ರೈವ್ ಮಾಡುವುದಕ್ಕಾಗಲೀ ಕಾನೂನು ನಿರ್ಬಂಧ ಇದ್ದಂತೆ ಕಾಣುತ್ತಿಲ್ಲ! 

ಈ ಭಾಗದಲ್ಲಿ ಶೇಕಡ 10 ರಷ್ಟು ಬೈಕುಗಳ ನಂಬರ್ ಪ್ಲೇಟ್ ತೆಗೆದು, ನಂಬರ್ ಪ್ಲೇಟ್‌ ಇಲ್ಲದೆ ಅರವತ್ತು-ಎಪ್ಪತ್ತು ಕಿ.ಮೀ. ಸ್ಪೀಡಿನಲ್ಲಿ ಓಡಿಸುವ ಶ್ರೀಮಂತ, ವಿದ್ಯಾವಂತ ಪುಂಡ ಹುಡುಗ ರಿದ್ದಾರೆ. ಅರ್ಧ ಚಣ್ಣ ಹಾಕಿಕೊಂಡು ಬಣ್ಣ ಬಣ್ಣದ ಪಲ್ಸರ್ ಬೈಕ್ ಓಡಿಸುತ್ತಾರೆ. ಇನ್ನು ಕೆಲವು ಬೈಕುಗಳಿಗೆ ನಂಬರ್ ಪ್ಲೇಟ್ ಇದ್ದರೂ, ನಂಬರ್ ಕಾಣದಂತೆ ಫಿಕ್ಸ್ ಮಾಡಿಸಿಕೊಂಡಿದ್ದಾರೆ. ಸ್ಕೂಟರ್‌ಗಳಿಗೆ ಕಾರಿನ ಹಾರನ್ ಹಾಕಿಸಿ, ಪೊಲೀಸರ ಸಿಸಿ ಕ್ಯಾಮರಾ ಹಾಗೂ ಮೊಬೈಲ್‌ಗಳಿಗೆ ಸಿಗದಂತೆ ವೇಗವಾಗಿ ಬೈಕ್ ಓಡಿಸಿಕೊಂಡು ಹೋಗಲು ಈ ಪುಂಡ ಹುಡುಗರು ಬಳಸುವ ತಂತ್ರಗಳು.  

ಇನ್ನು ಕೆಲವು ವಿಕೃತ ಮನಸ್ಸಿನ ಹುಡುಗರು ಬೈಕ್‌ಗಳ ಸೈಲೆನ್ಸರ್‌ ತೆಗೆದು ಓಡಿಸುತ್ತಾರೆ. ಗುಂಡಿ ಸರ್ಕಲ್‌ನಿಂದ ಈಚಿನ ರಸ್ತೆಗಳಲ್ಲಿ ದಿನ ನಿತ್ಯ  ಇಂತಹ ಸಂಚಾರಿ ವ್ಯವಸ್ಥೆ ಕಾಣಬಹುದು. ಈ ಭಾಗದಲ್ಲಿ ಹಿರಿಯ ನಾಗರಿಕರು, ಮಹಿಳೆಯರು ತಮ್ಮ ವಾಹನ ಓಡಿಸುವಾಗ ಜೀವ ಹಿಡಿದುಕೊಂಡು ಡ್ರೈವ್ ಮಾಡುತ್ತಾರೆ. ರಸ್ತೆ ದಾಟುವು ದಂತೂ ತುಂಬಾ ಕಷ್ಟದ ಕೆಲಸ. ಅಚ್ಚರಿ ಎಂದರೆ ಈ ಬೈಕುದಾರಿ ಪುಂಡರ ಸಾಮ್ರಾಜ್ಯ ಇರುವುದೇ ಡಿಐಜಿ ಹಾಗೂ ಎಸ್ಪಿ ಮನೆಗಳ ಸುತ್ತಮುತ್ತ…!

ಪ್ರಾಮಾಣಿಕ ಪೊಲೀಸರಿಗೆ  ಈ ಪುಂಡರು ಧಮಿಕಿ ಹಾಕಿದ ಉದಾಹರಣೆ ಗಳೂ ಇವೆ. ಹಿಂದೆ ಎಎಸ್ಐ ಅಂಜನಪ್ಪ ಅವರು ಪೆಟ್ಟುತಿಂದ ಉದಾಹರಣೆ ನಮ್ಮ ಮುಂದಿದೆ.

ಹಾಗಾದರೆ, ಈ ಪುಂಡರನ್ನು ಹೀಗೆ ಬಿಡಬೇಕೆ? ಆರೇಳು ವರ್ಷಗಳ ಹಿಂದೆ ರೇವಣ್ಣ ಅನ್ನೋ ಸರ್ಕಲ್‌ ಇನ್ಸ್‌ಪೆಕ್ಟರ್ ಹಾಗೂ ಮಂಜುನಾಥ್ ಪಂಡಿತ್ ಅನ್ನೋ ಟ್ರಾಫಿಕ್ ಎಸ್ಐ ಇದ್ದಾಗಲೂ ಈ ಭಾಗದ ಬೈಕ್‌ ಸವಾರರು ಇದೇ ರೀತಿ ಸವಾಲಾದರು. ಆಗ ಇಬ್ಬರು ಪೊಲೀಸ್ ಅಧಿಕಾರಿಗಳು ಈ ಭಾಗದ ಶಾಲಾ-ಕಾಲೇಜುಗಳಿಗೆ ಹೋಗಿ ಯುವಕರಿಗೆ, ವಿದ್ಯಾರ್ಥಿಗಳಿಗೆ ತಿಳಿಹೇಳಿ ಕಾನೂನಿನ ಪಾಠ ಮಾಡಿದರೂ ಈ ಪುಂಡರಿಗೆ ಬುದ್ದಿ ಬರಲಿಲ್ಲ. ನಂತರ ಅವರು ಸಿವಿಲ್‌ ಡ್ರೆಸ್‌ನಲ್ಲಿ ರಿಜರ್ವ್‌ ಪೊಲೀಸ್ ಬಳಸಿಕೊಂಡು, ಈ ಭಾಗದ ಅಡ್ಡರಸ್ತೆ ಗಳಿಗೆ ನಿಯೋಜಿಸಿ,  ನಾಲ್ಕೈದು ದಿನಗಳ ಕಾಲ ಬಗ್ಗು ಬಡಿದರು, ಸ್ವಲ್ಪ ದಿನಗಳ ವರೆಗೆ ಈ ಪುಂಡರು  ಸೈಲೆಂಟಾದಂತಿದ್ದು, ಮತ್ತೆ ಇವರ ಆಟ ಶುರುವಾಗಿದೆ.

ಕೆಲವು ನಾಗರಿಕರು ಹೀಗೂ ದೂರುತ್ತಾರೆ. ನಮ್ಮ ಪೊಲೀಸರು `ಮೂವತ್ತು ಕಿಲೋಮೀಟರ್ ಸ್ಪೀಡಿನ ಮಿತಿಯಲ್ಲಿಯೇ ಹೋಗುತ್ತಿದ್ದರು, ಹೆಲ್ಮೆಟ್ ಧರಿಸಿದ್ದರೂ, ನಿಲ್ಲಿಸಿ ಒಂದಲ್ಲಾ ಒಂದು ದಾಖಲೆಗಳನ್ನು ಕೆದಕಿ ಕಿರಿಕಿರಿ ಮಾಡುತ್ತಾರೆ. ಆದರೆ ಹೆಲ್ಮೆಟ್ ಧರಿಸದೇ ಮಿತಿಮೀರಿದ ವೇಗದಲ್ಲಿ ಚಲಿಸುವ ಸವಾರರನ್ನು ಗಮನಿಸುವುದೇ ಇಲ್ಲ’. 

ಪೊಲೀಸ್ ಅಧಿಕಾರಿಗಳ ಹಾಗೂ ಪೊಲೀಸ್‌ರವರಿಗೆ ಇನ್ನೊಂದು ವಿಷಾದದ ಮನವಿ… ನಮ್ಮ ಪೊಲೀಸರು ಲೋಕಿಕೆರೆ ರಸ್ತೆ, ಅಶೋಕ ಟಾಕೀಸ್‌ ಹಿಂಭಾಗ, ಬಾಡ ಕ್ರಾಸ್‌, ಈ ರೀತಿ ಪಾಯಿಂಟ್‌ಗಳಲ್ಲಿ ಹಳ್ಳಿಗರ-ಕಾರ್ಮಿಕರ ವಾಹನ ನಿಲ್ಲಿಸಿ ತಪಾಸಣೆ ಮಾಡಿ ದಂಡ ವಿಧಿಸಿ, ರಶೀದಿ ಹರಿಯುತ್ತಿರುತ್ತಾರೆ. ಕಾನೂನು ಪ್ರಕಾರ ನೀವು ಮಾಡುತ್ತಿರು ವುದು ಸರಿ ಬಿಡಿ…. ಅದೇ ಪೊಲೀಸರು ದಾವಣಗೆರೆ ಎಂಸಿಸಿ. ಬಿ ಬ್ಲಾಕ್, ಗುಂಡಿ ವೃತ್ತ ಸುತ್ತಮುತ್ತ, ವಿದ್ಯಾನಗರ, ನೂತನ ಕಾಲೇಜ್ ರಸ್ತೆ, ಶಾಮನೂರು ರಸ್ತೆ ಈ ಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಿದರೆ ಪ್ರತಿದಿನ ಲಕ್ಷ ರೂಪಾಯಿಗಳಿಗಿಂತ ಹೆಚ್ಚು ದಂಡ ವಸೂಲಿ ಮಾಡಬಹುದಲ್ಲವೇ…? ಈ ಬಗ್ಗೆ ನಮ್ಮ ಎಸ್ಪಿ, ಡಿಎಸ್ಪಿ, ಇನ್ಸ್‌ಪೆಕ್ಟರ್‌ ಯೋಚನೆ ಮಾಡಿದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದಲ್ಲವೇ.


ಕಾನೂನಿಗೆ ಸವಾಲಾಗಿರುವ ಸಿರಿವಂತ ಪುಂಡ ಬೈಕ್ ಸವಾರರು - Janathavaniಬಾ.ಮ. ಬಸವರಾಜಯ್ಯ

error: Content is protected !!