ಪುಸ್ತಕ ಹೆಚ್ಚು ಓದಿದಂತೆ ಆಯಸ್ಸು ವೃದ್ಧಿ ಪುಸ್ತಕಗಳು ಮಾನವನ ಬೌದ್ಧಿಕ ಪ್ರಬುದ್ಧತೆಯನ್ನು ಹೆಚ್ಚಿಸುತ್ತವೆ

ಒಂದು ಪ್ರದೇಶದ ಸಂಸ್ಕೃತಿ, ಜನ ಜೀವನವನ್ನು, ಆ ಭಾಷೆಯ ಮೂಲಕ ಬೆಳೆಸಲು ಪುಸ್ತಕಗಳು ಸಹಾಯ ಮಾಡುತ್ತವೆ. ಭೂಮಿಯ ಮೇಲೆ ಮಾನವನ ಅಸ್ತಿತ್ವಕ್ಕೆ ಪುಸ್ತಕಗಳು ನೆರವಾಗುತ್ತವೆ. ಪ್ರತಿಯೊಂದು ಪುಸ್ತಕವು ಹಲವು ತಲೆಮಾರುಗಳನ್ನು ದಾಟಿ ಹೋಗುತ್ತದೆ. ನಮ್ಮ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಪುಸ್ತಕಗಳು ಮಾಡುತ್ತವೆ.

`ನಮ್ಮ ಕೆಲಸದ ಹೊರೆಯೇ ಸಾಕಷ್ಟಿರುವಾಗ ಓದಲು ಪುರುಸೊತ್ತಾದರೂ ಎಲ್ಲಿರುತ್ತದೆ?’ ಓದಿನ ರುಚಿಯನ್ನು ಸವಿಯದ, ಅದರ ಮೌಲ್ಯವನ್ನು ಅರಿಯದ ಮೂಢನ ಮಾತಿದು. ಸೋಮಾರಿಯೊಬ್ಬನ ಸಮರ್ಥನೆಯ ನುಡಿಗಳಿವು. ಆದರೆ ಓದುವ ಚಟ ಅಂಟಿಸಿಕೊಂಡ ಮನುಷ್ಯನು ಪ್ರತಿದಿನ ಓದದೇ ಸಮಾಧಾನಪಡಲಾರ. 

ಒಬ್ಬ ವ್ಯಕ್ತಿಯ ಬೌದ್ಧಿಕ ಪ್ರಬುದ್ಧತೆ ಬರುವುದೇ ಪುಸ್ತಕ ಓದುವುದರಿಂದ, ಓದು ನಮ್ಮ ಮನೋವೈಶಾಲ್ಯವನ್ನು ಹೆಚ್ಚಿಸುವ ಬಹುದೊಡ್ಡ ಸಾಧನವಾಗಿದೆ. ನಮ್ಮ ಜ್ಞಾನ ಸಂಪಾದನೆಗೆ ಪುಸ್ತಕ ಓದುವುದೇ ಒಂದು ಪರಿಣಾಮಕಾರಿ ಮಾರ್ಗವಾಗಿದೆ. ನಮಗಿಂತ ಶತಮಾನಗಳ ಮುಂಚೆ ಇದ್ದ ಜನರ ಜ್ಞಾನ ಸಂಪತ್ತಿನ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಪುಸ್ತಕ ನಮಗೆ ಒದಗಿಸುತ್ತದೆ.

ಪುಸ್ತಕಗಳು ಯಾವತ್ತೂ ನಮ್ಮ ಆತ್ಮೀಯ ಗೆಳೆಯನಂತೆ ಜತೆ ಇರುತ್ತವೆ. ಎಂಬುದು ಸತ್ಯ. ಬಂಧುಗಳು, ಸಹಪಾಠಿಗಳು, ಸಹೋದ್ಯೋಗಿಗಳು ಬರಬಹುದು, ಹೋಗಬಹುದು. ಆದರೆ ಪುಸ್ತಕಗಳು ಎಂದೆಂದಿಗೂ ನಮ್ಮೊಂದಿಗಿರುವ ಒಡನಾಡಿಗಳು. ಮೊದಮೊದಲು ಶಾಸನಗಳು, ತಾಳೆ ಓಲೆಗಳು ನಂತರ ಪುಸ್ತಕ, ಇ-ಪುಸ್ತಕ ಹೀಗೆ ಕಾಲದಿಂದ ಕಾಲಕ್ಕೆ ಆಧುನೀಕರಣ, ತಂತ್ರಜ್ಞಾನ ಬೆಳೆದಂತೆ ಅದರ ಬಾಹ್ಯ ಸ್ವರೂಪ ಬದಲಾಗಿರಬಹುದು. ಆದರೆ ಅದರ ಆಂತರಿಕ ಉದ್ದೇಶ ಒಂದೇ. ನಮಗೆ ಸಿಗುವ ಶಿಕ್ಷಣ ನಮ್ಮನ್ನು ಅಕ್ಷರಸ್ಥರನ್ನಾಗಿ ಮಾಡಬಹುದು. ಆದರೆ ಪುಸ್ತಕಗಳು ನಮ್ಮನ್ನು ಸಂಸ್ಕೃತಿಯ ವಕ್ತಾರರನ್ನಾಗಿ, ವಾರಸುದಾರನನ್ನಾಗಿ ಮಾಡುತ್ತವೆ. 

ಆನ್ ಟು ದಿ ಲಾಸ್ಟ್ ಗಾಂಧೀಜಿಯವರ ಮೇಲೆ ಗಾಢ ಪರಿಣಾಮ ಬೀರಿದ ಕೃತಿಯಂತೆ. ವಿಜ್ಞಾನದ ಮೂಲಕ ಗೆಲಿಲಿಯೋ, ದಕ್ಷ ಆಡಳಿತದ ಮೂಲಕ ಕೌಟಿಲ್ಯ, ಬೋಧನೆಗಳ ಮೂಲಕ ಶಂಕರಚಾರ್ಯ, ಸೂಫಿ ಪದ್ಯಗಳ ಮೂಲಕ ರೂಮಿ, ಸಂವಿಧಾನದ ಮೂಲಕ ಅಂಬೇಡ್ಕರ್, ವಚನ ಸಾಹಿತ್ಯದಿಂದ ಬಸವಣ್ಣ ಹಾಗೂ ಅಲೆಕ್ಸಾಂಡರ್ ದೊರೆಯ ಸಾಮ್ರಾಜ್ಯ ವಿಸ್ತರಣೆ, ಪುರಾತನ ಭಾರತದ ಗತವೈಭವ, ಮಹಾಭಾರತದಂತಹ ಯುದ್ಧಗಳನ್ನು ನಾವು ಓದಿದ್ದರಿಂದಲೇ ತಿಳಿದುಕೊಳ್ಳಲು ಸಾಧ್ಯವಾಯಿತು. ಪುಸ್ತಕಗಳೇ ಇಲ್ಲದಿದ್ದರೆ ಅಥವಾ ನಾವು ಪುಸ್ತಕವನ್ನೇ ಓದದಿದ್ದರೆ, ಈ ಅದ್ಭುತ ವ್ಯಕ್ತಿತ್ವಗಳು ಜಗತ್ತನ್ನು ಹೇಗೆಲ್ಲಾ ರೂಪಿಸಿದರು ಎಂಬುದು ನಮಗೆ ತಿಳಿಯುತ್ತಲೇ ಇರುತ್ತಿರಲಿಲ್ಲ. 

ಪುಸ್ತಕ ಓದುವವನ ಆಯಸ್ಸು ವೃದ್ಧಿಯಾಗುತ್ತದೆ: ಹೌದು, ಯಾರು ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುತ್ತಾರೋ ಅವರ ಆಯಸ್ಸು ಇತರರಿಗಿಂತ ದುಪ್ಪಟ್ಟಾಗಿರುತ್ತದೆ ಹಾಗೂ ಅವರ ಆಯಸ್ಸು ಕೂಡ ವೃದ್ಧಿಯಾಗುತ್ತದೆ ಎಂದು ಇಂಗ್ಲೆಂಡಿನ ಸಂಶೋಧಕರು ತಿಳಿಸಿದ್ದಾರೆ. ಅಲ್ಲದೇ ಯೇಲ್ ವಿಶ್ವವಿದ್ಯಾಲಯವು 3,635 ಜನರ ಮೇಲೆ ಈ ಕುರಿತು ಪ್ರಯೋಗ ಮಾಡಿದ್ದು, ವಾರಕ್ಕೆ ಕನಿಷ್ಟ 3.5 ಗಂಟೆ ಓದಿದರೆ ಅಂತಹವರ ಮಿದುಳಿಗೆ ವ್ಯಾಯಾಮವಾಗುತ್ತದೆ. ಇದರಿಂದ ಮೆದುಳು ಉಲ್ಲಸಿತಗೊಂಡು ಹೆಚ್ಚು ಉಲ್ಲಾಸಭರಿತರಾಗಿರು ತ್ತಾರೆ. ಓದುವ ಹವ್ಯಾಸ ಡಿಮೆನ್ಸಿಯಾ ಅಂತಹ ರೋಗಗಳಿಂದ ದೂರವಿರಿಸುತ್ತದೆ. 

ಯಾರು ವಾರವೊಂದಕ್ಕೆ ಮೂರುವರೆ ತಾಸುಗಳಿಗಿಂತ ಅಧಿಕ ಸಮಯ ಓದುತ್ತಾರೋ ಅವರ ಆಯಸ್ಸು ಇತರರಿಗಿಂತ 23 ತಿಂಗಳು ಹೆಚ್ಚು ಕಾಲ ಬದುಕುತ್ತಾರೆ ಎಂದು ಹಾರ್ವರ್ಡ್ ಮತ್ತು ಯೇಲ್ ವಿಶ್ವವಿದ್ಯಾನಿಲಯಗಳು ನಡೆಸಿದ ಸಂಶೋಧನೆಗಳ ಮೂಲಕ ತಿಳಿದುಬಂದಿದೆ. 

ಏನಿದು ಪುಸ್ತಕ ದಿನಾಚರಣೆ : 1923ರ ಏಪ್ರಿಲ್ 23 ರಂದು ಸ್ಪೇನ್‍ನಲ್ಲಿ ಮಿಗೆಲ್‍ದ ಸೆರ್ವಾಂಟಿಸ್ ನಿಧನರಾದರು. ವಿಶ್ವ ಸಾಹಿತ್ಯಕ್ಕೆ ಡಾನ್ ಕ್ವಿಕ್ಸೋಟ್ ಕೊಟ್ಟ ಅಮರ ಲೇಖಕನಾದ. ಅವರ ಗೌರವಾರ್ಥವಾಗಿ ಆ ದಿನ ಪುಸ್ತಕ ವ್ಯಾಪಾರಿಗಳು, ಪ್ರಕಾಶಕರು 1923 ರಿಂದಲೇ ವಿಶ್ವ ಪುಸ್ತಕ ದಿನವನ್ನು ಆಚರಿಸಲಾರಂಭಿಸಿದರು. ಕಾಕತಾಳೀಯವೆಂಬಂತೆ ಅದೇ ದಿನ ಷೇಕ್ಸ್‍ಪಿಯರ್‍ನ ಜನ್ಮದಿನ, ಮರಣ ದಿನವೂ ಹೌದು. ಹಾಗಾಗಿ ಪ್ರತಿ ಏಪ್ರಿಲ್ 23 ರಂದು ಯುವ ಜನತೆಯಲ್ಲಿ ಹಾಗೂ ಸಾರ್ವಜನಿಕರಲ್ಲಿ ಅಭಿರುಚಿಯನ್ನು ಹೆಚ್ಚಿಸುವುದು, ಪುಸ್ತಕೋದ್ಯಮವನ್ನು ಬೆಂಬಲಿಸುವುದು ಮತ್ತು ಕಾಪಿರೈಟ್ ಕಾಯ್ದೆ (ಗ್ರಂಥ ಸ್ವಾಮ್ಯ)ಯನ್ನು ಬಲಪಡಿಸುವುದರ ಉದ್ದೇಶದಿಂದ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಚರಿಸಲು 1995 ರ ಏಪ್ರಿಲ್ 23 ರಂದು ವಿಶ್ವ ಸಂಸ್ಥೆ ಕರೆ ನೀಡಿದೆ.  

ಮನೆಯಲ್ಲೇ ಗ್ರಂಥಾಲಯ ನಿರ್ಮಿಸಿಕೊಳ್ಳಿ : ಲೋಕದ ಜ್ಞಾನ ನೀಡಲು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಇವೆ ಎಂದು ಭಾವಿಸಿಕೊಳ್ಳಬೇಡಿ. ಇವುಗಳು ಇಲ್ಲದೆಯೂ ನಮ್ಮಷ್ಟಕ್ಕೆ ನಾವು ಓದಲು ತೊಡಗಿಕೊಳ್ಳಬೇಕು. ಮನೆಯಲ್ಲೊಂದು ಗ್ರಂಥಾಲಯವಿಟ್ಟುಕೊಂಡರೆ ಸಮೃದ್ಧ ಜ್ಞಾನವೇ ಅಲ್ಲಿರುತ್ತದೆ. 

ವಿಶ್ವ ಪುಸ್ತಕ ದಿನ ಪ್ರೇಮಿಗಳ ದಿನದಷ್ಟೇ ಪವಿತ್ರ : ಪುಸ್ತಕ ಪ್ರೀತಿಸುವ ಪ್ರೇಮಿಗಳು ಸಂಭ್ರಮಿಸುವ ದಿನ. ಈ ದಿನದಂದು ಹಲವು ಕಡೆಗಳಲ್ಲಿ ಪುಸ್ತಕ ಮಾರಾಟ, ಗೋಷ್ಠಿಗಳು, ಉಚಿತ ಪುಸ್ತಕ ವಿತರಣೆ, ಕಥೆ, ಕವನ ಸ್ಪರ್ಧೆಗಳನ್ನು ನಡೆಸುತ್ತಾರೆ. ಲೇಖಕರೊಂದಿಗೆ ಸಂವಾದ ನಡೆಸುತ್ತಾರೆ. ಸಭೆಯಲ್ಲಿ ಅನೇಕ ಪುಸ್ತಕಗಳನ್ನು ಮಾರಾಟಕ್ಕಿಟ್ಟಿರುತ್ತಾರೆ. ಪುಸ್ತಕಗಳನ್ನು ಆದಷ್ಟು ಕೊಂಡು ಓದಿ.  

ನೀವು ಓದಲೇ ಬೇಕಾದ ಕೆಲವು ಪುಸ್ತಕಗಳು : ಪ್ರತಿಯೊಬ್ಬರು ಓದಲೇಬೇಕಾದ ಕೆಲವು ಪುಸ್ತಕಗಳೆಂದರೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆತ್ಮಕಥೆ ಅಗ್ನಿಯ ರೆಕ್ಕೆಗಳು, ಅಂಬೇಡ್ಕರ್ ಅವರ ಸಮಗ್ರ ಸಂಗ್ರಹಗಳು, ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ, ಡಾ.ಎಸ್.ಎಲ್. ಭೈರಪ್ಪ ಅವರ ಗೃಹಭಂಗ, ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಷಡಕ್ಷರಿ ಅವರ ಕ್ಷಣ ಹೊತ್ತು ಅಣಿ ಮುತ್ತು, ಪೂರ್ಣಚಂದ್ರ ತೇಜಸ್ವಿ ಅವರ ಪರಿಸರದ ಕಥೆಗಳು, ಅಪ್ಪ ಅಂದ್ರೆ ಆಕಾಶ, ಅಮ್ಮ ಹೇಳಿದ ಹತ್ತು ಸುಳ್ಳುಗಳು ಹೀಗೆ ಓದುತ್ತಾ ಓದುತ್ತ ಒಬ್ಬೊಬ್ಬ ಲೇಖಕರನ್ನು ಆಯ್ದುಕೊಂಡು ಅವರ ಸಮಗ್ರ ಬರಹಗಳನ್ನು ಓದುತ್ತ ಬಲಿಷ್ಠ ಸಮಾಜವನ್ನು ನಾವು ಕಟ್ಟೋಣ..


ಪ್ರೀತಿ. ಟಿ. ಎಸ್.
ದಾವಣಗೆರೆ.
[email protected]

 

error: Content is protected !!