ದಾವಣಗೆರೆ ಜಿಲ್ಲೆಯಾದ್ಯಂತ ಬೇಸಿಗೆ ಹಂಗಾಮಿನಲ್ಲಿ 60,000 ಹೆ. ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದ್ದು, ಈ ವರ್ಷ ಉತ್ತಮ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ಜಲಾಶಯಗಳೆರಡು ತುಂಬಿದ್ದು, ಭದ್ರಾ ಎಡ ಮತ್ತು ಬಲದಂಡೆ ನಾಲೆಗಳಿಗೆ ಗರಿಷ್ಠ 120 ದಿನಗಳವರೆಗೆ ನೀರು ಹರಿಸುವುದು ಖಚಿತವಾಗಿರುವುದರಿಂದ ಜಿಲ್ಲೆಯ ರೈತರು ಹರ್ಷ ಚಿತ್ತರಾಗಿ ಭತ್ತದ ಬೆಳೆ ಬೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಉತ್ತಮ ಇಳುವರಿ ಪಡೆಯಲು ಭೂಮಿ ಹಾಗೂ ಸಸಿಮಡಿ ತಯಾರಿಕೆ, ಸುಧಾರಿತ ತಳಿಗಳ ಬಳಕೆ, ಸಮಗ್ರ ಪೋಷಕಾಂಶ ಹಾಗೂ ಸಸ್ಯ ಸಂರಕ್ಷಣೆಗಳ ನಿರ್ವಹಣೆ, ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವುದು ಅತ್ಯಗತ್ಯವಾಗಿರುತ್ತದೆ.
ಮಿಶ್ರಣ ಬೀಜಗಳ ಹತೋಟಿ: ಜಿಲ್ಲೆಯ ರೈತರು ಮುಂಗಾರು ಹಂಗಾಮಿನಲ್ಲಿ ಜೆ.ಜೆ.ಎಲ್, ಬಿಪಿಟಿ, ಶ್ರೀ ರಾಮ್ ಸೋನಾ, ಆರ್.ಎನ್.ಆರ್ ತಳಿಗಳನ್ನು ರೈತರು ನಾಟಿ ಮಾಡಿದ್ದು ಈಗ ಬೇಸಿಗೆ ಹಂಗಾಮಿನಲ್ಲಿ ಬಿಪಿಟಿ 5204 ತಳಿಯ ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭತ್ತ ಕೊಯ್ಲು ಯಂತ್ರದ ಮೂಲಕ ಕಟಾವು ಮಾಡುವುದರಿಂದ ಸಾಕಷ್ಟು ಪ್ರಮಾಣದ ಭತ್ತದ ಬೀಜಗಳು ಉದುರಿ ಗದ್ದೆಯಲ್ಲಿರುತ್ತವೆ, ಬೇಸಿಗೆ ಹಂಗಾಮಿನಲ್ಲಿ ರೈತರು ನೇರಾವಗಿ ಭೂಮಿಯನ್ನು ತಯಾರಿಸಿ ನಾಟಿ ಮಾಡುವುದರಿಂದ, ಮುಂಗಾರು ಹಂಗಾಮಿನಲ್ಲಿ ಉದುರಿರುವ ಭತ್ತದ ಬೀಜಗಳು ಸುಪ್ತಾವಸ್ಥೆ ಮುಗಿಸಿ ಇದೇ ಸಮಯಕ್ಕೆ ಮೊಳಕೆಯೊಡೆದು ಬಹುಬೇಗ ತೆನೆಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ ಮುಂಗಾರು ಹಂಗಾಮಿನ ಭತ್ತ ಕಟಾವು ಮಾಡಿದ ತಕ್ಷಣ ಗದ್ದೆಯಲ್ಲಿರುವ ತೇವಾಂಶ ಬಳಸಿಕೊಂಡು ನೇಗಿಲು ಅಥವಾ ಟ್ರಾಕ್ಟರ್ನಿಂದ ಒಂದು ಸಾರಿ ಉಳುಮೆ ಮಾಡಿ ನಂತರ ನೀರು ನಿಲ್ಲಿಸಿ ಭೂಮಿ ಸುಮಾರು 8-10 ದಿನದವರೆಗಾದರೂ ಕೊಳೆಯಲು ಬಿಟ್ಟು ನಂತರ ರೊಳ್ಳೆಯೊಡೆಯುವುದುರಿಂದ ಬೇಸಿಗೆ ಭತ್ತದಲ್ಲಿ ಮುಂಗಾರು ಹಂಗಾಮಿನ ಇತರೆ ಭತ್ತದ ತಳಿಗಳ ಬೀಜಗಳ ಮಿಶ್ರಣವಾಗುವುದನ್ನು ತಡೆಯಬಹುದು.
ಸಮಗ್ರ ಪೋಷಕಾಂಶಗಳ ನಿರ್ವಹಣೆ:
ಹಸಿರೆಲೆ ಗೊಬ್ಬರ : ಭತ್ತದ ನಾಟಿಗೆ ಮುಂಚಿತವಾಗಿ ಡಯಾಂಚ (10-15 ಕಿ.ಗ್ರಾಂ ಬೀಜ ಪ್ರತಿ ಎಕರೆಗೆ), ಸೆಣಬು (10-15 ಕಿ.ಗ್ರಾಂ ಬೀಜ ಪ್ರತಿ ಎಕರೆಗೆ), ಅಲಸಂದೆ (10-12 ಕಿ.ಗ್ರಾಂ ಬೀಜ ಪ್ರತಿ ಎಕರೆಗೆ), ಹೆಸರು ಮತ್ತು ಉದ್ದು (6-8 ಕಿ.ಗ್ರಾಂ ಬೀಜ ಪ್ರತಿ ಎಕರೆಗೆ) ಹಸಿರೆಲೆ ಗೊಬ್ಬರದ ಗಿಡಗಳನ್ನು ಬೆಳೆದು ಹೂ ಬಿಡುವ ಮೊದಲು ಉಳುಮೆ ಮಾಡಿ ಭೂಮಿಗೆ ಸೇರಿಸುವುದರಿಂದ ಎಕರೆಗೆ 4 ರಿಂದ 8 ಟನ್ ಹಸಿರು ಗೊಬ್ಬರವನ್ನು ಭೂಮಿಗೆ ಸೇರಿಸಬಹುದು.
ಸಸಿಮಡಿಯಲ್ಲಿ ಪ್ರತಿ 100 ಚದರ ಮೀಟರ್ ಪ್ರದೇಶಕ್ಕೆ 200 ರಿಂದ 250 ಕಿ. ಗ್ರಾಂ ಕೊಟ್ಟಿಗೆ ಗೊಬ್ಬರ ಹಾಗೂ 1.0 ಕಿ. ಗ್ರಾಂ. ಸಾರಜನಕ, 0.4 ಕಿ. ಗ್ರಾಂ. ರಂಜಕ ಹಾಗೂ 0.5 ಕಿ. ಗ್ರಾಂ. ಪೊಟ್ಯಾಷ್ ಪೋಷಕಾಂಶಗಳನ್ನು ಭೂಮಿಗೆ ಸೇರಿಸುವುದು ಹಾಗೂ 400 ಗ್ರಾಂ ಅಜೋಸ್ಪೈರಿಲಂ ಗೊಬ್ಬರವನ್ನು ಅಂಟು ದ್ರಾವಣದಲ್ಲಿ ಬೆರೆಸಿ ಬೀಜೋಪಚಾರ ಮಾಡುವುದು.
ಎಕರೆಗೆ 4-5 ಟನ್ ಕೊಳೆತ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟನ್ನು ನಾಟಿ ಮಾಡಲು ಮೂರು ವಾರಗಳ ಮೊದಲೇ ಮಣ್ಣಿನಲ್ಲಿ ಬೆರೆಸುವುದು ಹಾಗೂ 50:25:25 ಕಿ.ಗ್ರಾಂ ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಂ ಪ್ರತಿ ಎಕರೆಗೆ ಶಿಫಾರಸಿದ್ದು, ಶೇ. 50 ರಷ್ಟು ಸಾರಜನಕ, ಪೂರ್ತಿ ರಂಜಕ ಮತ್ತು ಶೇ. 50 ರಷ್ಟು ಪೊಟ್ಯಾಶ್ನ್ನು ನಾಟಿ ಸಮಯದಲ್ಲಿ, ನಂತರ ನಾಟಿ ಮಾಡಿದ 30 ದಿನಗಳಲ್ಲಿ ಶೇ. 25 ರಷ್ಟು ಸಾರಜನಕವನ್ನು ಹಾಗೂ 60 ದಿನಗಳ ನಂತರ ಉಳಿದ ಶೇ. 25 ರಷ್ಟು ಸಾರಜನಕ ಮತ್ತು ಶೇ. 50 ರಷ್ಟು ಪೊಟ್ಯಾಶ್ನ್ನು ನೀಡುವುದು. ಪ್ರತಿ ಮೂರು ಬೆಳೆಗಳ ನಂತರ ಎಕರೆಗೆ 8 ಕಿ. ಗ್ರಾಂ. ಸತುವಿನ ಸಲ್ಫೇಟ್ನ್ನು ಮಣ್ಣಿಗೆ ಸೇರಿಸುವುದು.
ನಾಟಿ ಮಾಡುವಾಗ ದೀರ್ಘಾವಧಿ ಹಾಗೂ ಮಧ್ಯಮಾವಧಿ ತಳಿಗಳಲ್ಲಿ ಪ್ರತಿ ಚ.ಮೀ. ಪ್ರದೇಶಕ್ಕೆ 45 ರಿಂದ 50 ಗುಣಿಗಳು ಬರುವಂತೆ, ಕಡಿಮೆ ಅವಧಿ ತಳಿಗಳಲ್ಲಿ ಪ್ರತಿ ಚ.ಮೀ. ಪ್ರದೇಶಕ್ಕೆ 65 ರಿಂದ 68 ಗುಣಿಗಳು ಬರುವಂತೆ ನಾಟಿ ಮಾಡಬೇಕು.
ಉತ್ತಮ ಇಳುವರಿ ಪಡೆಯಲು ಭೂಮಿ ಹಾಗೂ ಸಸಿಮಡಿ ತಯಾರಿಕೆ, ಸುಧಾರಿತ ತಳಿಗಳ ಬಳಕೆ, ಸಮಗ್ರ ಪೋಷಕಾಂಶ ಹಾಗೂ ಸಸ್ಯ ಸಂರಕ್ಷಣೆಗಳ ನಿರ್ವಹಣೆ, ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವುದು ಅತ್ಯಗತ್ಯವಾಗಿರುತ್ತದೆ.
ಕಳೆ ನಿಯಂತ್ರಣ: ಪೆಂಡಿಮಿಥಾಲಿನ್ 30 ಇ. ಸಿ ಅನ್ನು 2.5 ಲೀ. ಪ್ರತಿ ಎಕರೆಗೆ 200 ಲೀಟರ್ ನೀರಿನೊಡನೆ ಬೆರೆಸಿ ಅಥವಾ ಬ್ಯೂಟಾಕ್ಲೋರ್ ಶೇ.50 ಇ.ಸಿ 0.8 ಲೀ ನ್ನು ಪ್ರತಿ ಎಕರೆಗೆ 30 ಕಿ.ಗ್ರಾಂ ಮರಳಿನೊಂದಿಗೆ ಮಿಶ್ರಣ ಮಾಡಿ ನಾಟಿ ಮಾಡಿದ 3 – 5 ದಿನಗಳಲ್ಲಿ ಬಳಸುವುದು. ನಂತರ ಬಿಸ್ಪೈರಿಬ್ಯಾಕ್ ಸೋಡಿಯಂ 10 ಎಸ್. ಸಿ ಅನ್ನು ಪ್ರತಿ ಎಕರೆಗೆ 0.08 ಲೀಟರ್ ನಂತೆ 200 ಲೀಟರ್ ನೀರಿನೊಡನೆ ಬೆರೆಸಿ ನಾಟಿಮಾಡಿದ 15 ರಿಂದ 20 ದಿನಗಳಲ್ಲಿ ಬಳಸುವುದು.
ಸಸ್ಯ ಸಂರಕ್ಷಣೆ: ಕಾಂಡಕೊರಕ ಹುಳುವಿನ ಹತೋಟಿಗೆ 1. 5 ಮಿ. ಲೀ. ಮೊನೋಕ್ರೋಟೋಫಾಸ್ ಅಥವಾ 2 ಮಿ. ಲೀ. ಕ್ಲೋರಿಪೈರಿಫಾಸನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಬೆಂಕಿ ರೋಗದ ಹತೋಟಿಗೆ ನಾಟಿ ಮಾಡಿದ 20 ರಿಂದ 25 ದಿನಗಳ ನಂತರ ರೋಗ ಶೇ. 5 ಕ್ಕಿಂತ ಜಾಸ್ತಿಯಿದ್ದಲ್ಲಿ 1 ಮಿ. ಲೀ. ಎಡಿಫಿನ್ಫಾಸ್ ಅಥವಾ 1 ಮಿ. ಲೀ. ಕಿಟಾಜಿನ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.
ಶರಣಪ್ಪ. ಬಿ. ಮುದಗಲ್
ಜಂಟಿ ಕೃಷಿ ನಿರ್ದೇಶಕರು, ದಾವಣಗೆರೆ.