ಗ್ಯಾಸ್ಟ್ರೈಟಿಸ್ : ಸ್ವಯಂ ರೋಗ ನಿರ್ಣಯ – ನಿರ್ಲಕ್ಷೆ ಬೇಡ

ಗ್ಯಾಸ್, ಪಿತ್ತ, ಹುಳಿ ತೇಗು, ಅಸಿಡಿಟಿ, ಎದೆಯುರಿ, ಹೊಟ್ಟೆ ನೋವು ಎಂದು ವರ್ಣಿತವಾಗುವ ಲಕ್ಷಣಗಳು ನಿರ್ದಿಷ್ಟವಾಗಿ ಅಲ್ಲದಿದ್ದರೂ ಬಹುತೇಕವಾಗಿ ಸೂಚಿಸುವ ಕಾಯಿಲೆಯೇ ಗ್ಯಾಸ್ಟ್ರೈಟಿಸ್.

ನಮ್ಮೆಲ್ಲರ ಜಠರವು ನಾಲ್ಕು ಪದರುಗಳಿಂದ ಕೂಡಿರುವುದು. ಗ್ಯಾಸ್ಟ್ರೈಟಿಸ್ ಎಂದರೆ ಜಠರದ ಪದರಿನ ಉರಿಯೂತ (Inflammation). ಇದನ್ನು ಬಹು ಮುಖ್ಯವಾಗಿ ಎರಡು ವಿಧಗಳಾಗಿ ವಿಭಜಿಸಲಾಗಿದೆ. ಅಂತೆಯೇ ಇದಕ್ಕೆ ಹಲವಾರು ನಿರ್ದಿಷ್ಟ ಕಾರಣಗಳನ್ನು ಮತ್ತು ತಕ್ಕ ಚಿಕಿತ್ಸಾ ವಿಧಿಗಳನ್ನು ಗುರುತಿಸಲಾಗಿದೆ.

ಗ್ಯಾಸ್ಟ್ರೈಟಿಸ್ ವಿಧಗಳು ಮತ್ತು ಲಕ್ಷಣಗಳು :

ಅಕ್ಯೂಟ್ (ತೀವ್ರ) ಗ್ಯಾಸ್ಟ್ರೈಟಿಸ್

1-2 ತಿಂಗಳುಗಳ ಕಾಲ ಮಿತಿಯ ಲಕ್ಷಣಗಳು.

ಪ್ರಮುಖ ಲಕ್ಷಣಗಳು : ಹಠಾತ್ ತೀವ್ರ ಮೇಲ್ಭಾಗದ ಹೊಟ್ಟೆಯ ನೋವು, ವಾಂತಿ, ರಕ್ತವಾಂತಿ, ಕಪ್ಪು ಬಣ್ಣದ ಭೇದಿ, ಈ ರೀತಿಯ ಲಕ್ಷಣಗಳು ನಮ್ಮ ಜೀವನ ಶೈಲಿಯಾನುಸಾರವಾಗಿ ಹಲವು ಬಾರಿ ಬಂದು ಹೋಗುತ್ತವೆ.

ಪ್ರಮುಖ ಕಾರಣಗಳು: ತಂಬಾಕು ಸೇವನೆ, ಧೂಮಪಾನ, ಅತಿಯಾದ ಮದ್ಯಪಾನ, ಅತಿಯಾದ ಖಾರ, ಮಸಾಲೆ ಸೇವನೆ, ನೋವಿನ ಮಾತ್ರೆಗಳು (NSAIDs), ಅಂಟಿಬಿಯೋಟಿಕ್ಸ್, ಬ್ಯಾಕ್ಟೀರಿಯಾ (Helocobacter Pylori), ಮಾನಸಿಕ ಒತ್ತಡ (Mental stress).

ರೋಗನಿರ್ಣಯ (Diagnosis)

* ರೋಗ ಲಕ್ಷಣಗಳ ವಿಮರ್ಶೆ (Symptomatic assessment)

* ಎಂಡೋಸ್ಕೊಪಿ (Upper GI Endoscopy) – ತೀವ್ರವಾದ ಅಥವಾ ಮರುಕಳಿಸುತ್ತಿರುವ ಲಕ್ಷಣಗಳು ಇದ್ದಲ್ಲಿ)

ಚಿಕಿತ್ಸೆ (Treatment):

ಇದು ಸಾಮಾನ್ಯವಾಗಿ ಅಕ್ಯೂಟ್ ಸೂಪರ್ಫಿಸಿಯಲ್‌/ಅಕ್ಯೂಟ್ ಏರೋಸಿವೆ ಸ್ವರೂಪದ್ದಾಗಿರುತ್ತದೆ.

ಕಡಿಮೆ ತೀವ್ರತೆಯ ಲಕ್ಷಣಗಳು ಇದ್ದಲ್ಲಿ ಕೇವಲ ಜೀವನ ಶೈಲಿಯ ಬದಲಾವಣೆಗಳು ಮತ್ತು ತಾತ್ಕಾಲಿಕವಾಗಿ ಜಠರದ ಆಸಿಡಿಟಿಯನ್ನು ಕಡಿಮೆ ಮಾಡುವ ಮಾತ್ರೆಗಳನ್ನು (Proton pump inhobitors) ಕೊಡಲಾಗುವುದು.

ಕೆಲವೊಮ್ಮೆ ಮತ್ತೆ ಮತ್ತೆ ಮರುಕಳಿಸುತ್ತಿರುವ ಲಕ್ಷಣಗಳ ಪರಿಣಾಮವಾಗಿ ಅಥವಾ ಅತಿ ತೀವ್ರ ಪ್ರಮಾಣದ ಗ್ಯಾಸ್ಟ್ರೆಟಿಸನ್ ಕಾರಣದಿಂದ ಜಠರದ ಪರದೆಯ ಗಾಯಗಳು (ಅಲ್ಸರ್‌) ಆಗುವ ಸಾಧ್ಯತೆಗಳು ಕೂಡ ಕಾಣಬಹುದು. ಇನ್ನು ಕೆಲವರಿಗೆ ತೀವ್ರ ಸ್ವರೂಪದ ಗ್ಯಾಸ್ಟ್ರೈಟಿಸ್‌/ಅಲ್ಸರ್‌ ಪರಿಣಾಮವಾಗಿ ಜಠರದಿಂದ ಹಠಾತ್ ರಕ್ತಸ್ರಾವ (Upper GI bleed) ಅಥವಾ ಜಠರದ ರಂಧ್ರ (Perforation) ಕೂಡ ಆಗುವ ಸಾಧ್ಯತೆಗಳಿವೆ. ಈ ಎರಡೂ ಸನ್ನಿವೇಶಗಳಲ್ಲಿ ಜೀವಕ್ಕೆ ಕುತ್ತು ತರುವ ಸಂದರ್ಭಗಳು ಉಂಟಾಗಬಹುದು.

ಕ್ರಾನಿಕ್ (ದೀರ್ಘಕಾಲದ) ಗ್ಯಾಸ್ಟ್ರೈಟಿಸ್ :

ರೋಗ ಲಕ್ಷಣಗಳು : ಸಾಮಾನ್ಯವಾಗಿ 2 ತಿಂಗಳಿಗಿಂತ ಹೆಚ್ಚು ಕಾಲಾವಧಿಯದ್ದಾಗಿರುತ್ತವೆ.

ಪ್ರಮುಖ ಲಕ್ಷಣಗಳು : ಅಸಮರ್ಪಕ ಜೀರ್ಣ ಕ್ರಿಯೆ, ರಕ್ತಹೀನತೆ (Iron Deficiency anemia, Vit B12 deficiency anemia), ದೀರ್ಘಕಾಲದ ಹೊಟ್ಟೆ ನೋವು, ವಾಂತಿ.

ಪ್ರಮುಖ ಕಾರಣಗಳು : ಬ್ಯಾಕ್ಟೀರಿಯಾ (Helicobacter Pylori), ಸ್ವಯಂ ನಿರೋಧಕ ಅಸ್ವಸ್ಥತೆ (Auto-immune gastritis)

ರೋಗ ನಿರ್ಣಯ (Diagnosis):

* ಕ್ರಾನಿಕ್‌ ಗ್ಯಾಸ್ಟ್ರೈಟಿಸ್ ನ ಲಕ್ಷಣಗಳು ಸಂಪೂರ್ಣವಾಗಿ ಅಲ್ಲದಿದ್ದರೂ ಬಹುತೇಕವಾಗಿ ಬೇರೆಯದ್ದೇ ಆಗಿರುತ್ತದೆ.

* ಎಂಡೊಸ್ಕೋಪಿ ಮತ್ತು ಗ್ಯಾಸ್ಟ್ರಿಕ್ ಬಯಾಪ್ಸಿ ಪರೀಕ್ಷೆಯು ಈ ರೋಗವನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಚಿಕಿತ್ಸೆ (Treatment):

1) H. Pylori ಬ್ಯಾಕ್ಟೀರಿಯಲ್ ಗ್ಯಾಸ್ಟ್ರೈಟಿಸ್ (Type B gastritis) ಆಂಟಿಬ್ಯಾಕ್ಟೀರಿಯಾ ಚಿಕಿತ್ಸೆಯಿಂದ (Anti-H Pylori therapy) ಸಂಪೂರ್ಣವಾಗಿ ಗುಣಮುಖರಾಗಬಹುದು.

ಆಟೋ – ಇಮ್ಯೂನ್ ಗ್ಯಾಸ್ಟ್ರೈಟಿಸ್ Auto-Immune or Type a gastritis) ಈ ರೋಗಕ್ಕೆ ನಿರ್ದಿಷ್ಟ ಪರಿಹಾರಿಕ ಚಿಕಿತ್ಸೆ ಇಲ್ಲ.  Iron, Vitamin B12 ಪೂರೈಕೆಯಿಂದ ರೋಗ ಪರಿಣಾಮಗಳನ್ನು ಬಗೆಹರಿಸಬಹುದು. ಬಹು ದೀರ್ಘಕಾಲದ ರೋಗದ ಪರಿಣಾಮವಾಗಿ ಜಠರದ ಪರದೆಗಳ ಹನಿಯು ಕೂಡ ತೀವ್ರ ಸ್ವರೂಪದ್ದಾಗಿರಬಹುದು. ಇದರ ಪರಿಣಾಮವಾಗಿ ಗ್ಯಾಸ್ಟ್ರಿಕ್ ಅಲ್ಸರ್‌ (Gastric ulcer) ಸಂಭವಿಸುವ ಅವಕಾಶಗಳು ಹೆಚ್ಚು. ಈ ರೋಗವು ಮುಂದುವರೆದು ಗ್ಯಾಸ್ಟ್ರಿಕ್ ಕ್ಯಾನ್ಸರ್ (Gastric adenocarcinoma), ಗ್ಯಾಸ್ಟ್ರಿಕ್, ಲಿಂಫೋಮಾ (Gastric lymphoma) ದಂತಹ ಮಾರಕ ರೋಗವಾಗಿ ಬದಲಾಗಬಹುದು ಮತ್ತು ಹಲವು ಬಾರಿ ವೈದ್ಯಕೀಯ ಚಿಕಿತ್ಸೆಯ ಪರಿಮಿತಿಯನ್ನು ಮೀರಬಹುದು.

ಓದುಗರೇ ಗ್ಯಾಸ್ಟ್ರೈಟಿಸ್ ಎಂದು ನಾವು ಹಲವು ಬಾರಿ ತಪ್ಪಾಗಿ ಗುರುತಿಸುವ -ಹುಳಿ ತೇಗು (Liquid brasch) ಎದೆಯುರಿ (Heart burn) ಲಕ್ಷಣಗಳಿಗೆ ನೇರ ಕಾರಣ ಅನ್ನನಾಳದ ಕೆಳಗಿನ ಕವಾಟದ (Lower Exophageal Sphincter) ಅಸಮರ್ಥ ಕ್ರಿಯೆ. ಇದಕ್ಕೆ ನಾವು ಗ್ಯಾಸ್ಟ್ರೋ, ಈಸೋಫ್ಗಿಅಲ್ ರಿಫ್ಲಕ್ಸ್ ಡಿಸೀಸ್ (GERD) ಎಂದು ಕರೆಯುತ್ತೇವೆ. ಈ ಸನ್ನಿವೇಶದಲ್ಲಿ ಸ್ವಾಭಾವಿಕವಾಗಿ ಜಠರದಲ್ಲೇ ಇರಬೇಕಾದ ಗ್ಯಾಸ್ಟ್ರಿಕ್ ಆಸಿಡ್ ನಮ್ಮ  ಅನ್ನನಾಳಕ್ಕೆ ಚಿಮ್ಮುತ್ತದೆ. ಈ ಸನ್ನಿವೇಶವು ಗ್ಯಾಸ್ಟ್ರೆಟಿಸ್ ಹೊರತುಪಡಿಸಿ ಕೂಡ ಸಂಭವಿಸಬಹುದು.

 

Gerdಗೆ ಪ್ರಮುಖ ಕಾರಣಗಳು :

ಬೊಜ್ಜುತನ (Obesituy), Hiatus hernia

ಇದರ ಪರಿಣಾವಾಗಿ ಅನ್ನನಾಳದ ಉರಿಯೂತ (Esophagitis), ಧ್ವನಿಪೆಟ್ಟಿಗೆ ಉರಿಯೂತ (acid reflux laryngitis), ಅಸ್ತಮಾ, ಅನ್ನನಾಳದ ಅಲ್ಸರ್‌ಗಳು (Esophageal Ulcers), ಅನ್ನನಾಳದಿಂದ ರಕ್ತಸ್ರಾವ, ಅನ್ನನಾಳದ ಕ್ಯಾನ್ಸರ್ (Esophageal adenocarcinoma) ಸಂಭವಿಸಬಹುದು.

Gerd ರೋಗನಿರ್ಣಯ (Diagnosis)

* ರೋಗ ಲಕ್ಷಣಗಳ ವಿಮರ್ಶೆ (Symptomatic assesment)

* ಎಂಡೊಸ್ಕೊಪಿ (Upper GI Endoscopy)

* Esophageal pH manometry.

GERD ಚಿಕಿತ್ಸೆ (Treatment) :

ಆರಂಭಿಕ ಹಂತದಲ್ಲಿ ಗುರುತಿಸಲ್ಪಟ್ಟರೆ, ಕೆಲವು ಜೀವನ ಶೈಲಿಯ ಬದಲಾವಣೆಗಳನ್ನು ಅನುಸರಿಸಿ ಈ ರೋಗವು ಮುನ್ನಡೆಯದ ಹಾಗೆ ತಡೆಯಬಹುದು.

ಇವುಗಳಲ್ಲಿ ಪ್ರಮುಖವಾಗಿ :

* ತೂಕ ಕಡಿತ (Obesity control)

* ಅತಿ ಬಿಸಿಯಾದ (ಟೀ, ಕಾಫಿ) ತಂಪಾದ ಪಾನೀಯಗಳ (Carbonated drinks) ಸೇವನೆಯನ್ನು ನಿಲ್ಲಿಸುವುದು.

* ತಂಬಾಕು ಸೇವನೆ, ಧೂಮಪಾನ, ಮದ್ಯಪಾನ, ಪಾನ್ ಮಸಾಲಾ ಮುಂತಾದ ದುಶ್ಚಟಗಳನ್ನು ನಿಲ್ಲಿಸುವುದು.

* ಊಟದ ತಕ್ಷಣ ಮಲಗುವುದನ್ನು ತಪ್ಪಿಸುವುದು.

* ಡಯಾಬಿಟಿಸ್ ರೋಗಿಗಳು ತಮ್ಮ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವುದು.

* ನಿಯಮಿತ ಆಹಾರ ಸೇವನೆ, ದೈಹಿಕ ಚಟುವಟಿಕೆ ಇತ್ಯಾದಿ.

ಇನ್ನು ಕೆಲವರಿಗೆ ಈ ಜೀವನ ಶೈಲಿಯ ಮಾರ್ಪಾಡುಗಳಿಂದ ಯಾವುದೇ ಚೇತರಿಕೆ ಕಾಣದಿದ್ದಲ್ಲಿ ಅನ್ನನಾಳದ ಕೆಳಗಿನ ಕವಾಟದ (Lower Esophageal Sphineter) ಶಸ್ತ್ರ ಚಿಕಿತ್ಸೆ ಬೇಕಾಗಬಹುದು.

 

– ಡಾ|| ಅರವಿಂದ ಕೆ.ಎನ್.
ಎಂ.ಎಸ್ , ಎಂ. ಸಿಎಚ್  (ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ)
ಉದರ, ಕರುಳು, ಲಿವರ್ ಮತ್ತು ಪ್ಯಾಂಕ್ರಿಯಾಸ್ ತಜ್ಞರು
ಎಂಡೋಸ್ಕೋಪಿ ತಜ್ಞರು   ಮತ್ತು  ಲ್ಯಾಪರೊಸ್ಕೋಪಿಕ್ ಸರ್ಜನ್
ಕನ್ಸಲ್ಟೆಂಟ್ ಜೆಜೆಎಂ ಮೆಡಿಕಲ್ ಕಾಲೇಜ್, ದಾವಣಗೆರೆ.

error: Content is protected !!