ಈಕೆ ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿನಿ. ಕೇವಲ ಇಪ್ಪತ್ತೈದನೇ ವರ್ಷದಲ್ಲಿಯೇ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದ ಸ್ವಾಮ್ಯಕ್ಕೆ ಒಳಪಟ್ಟ ಆಸ್ಪತ್ರೆಯಲ್ಲಿ, ರೆಸಿಡೆಂಟ್ ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಜೊತೆಗೆ ಇಂಟರ್ನಲ್ ಮೆಡಿಸಿನ್ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಈ ಆಸ್ಪತ್ರೆ ನ್ಯೂಯಾರ್ಕ್ ಮಹಾನಗರದಲ್ಲಿದೆ. ಈ ಆಸ್ಪತ್ರೆಯಲ್ಲಿ ಸುಮಾರು ಇನ್ನೂರ ಐವತ್ತಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪೇಷೆಂಟ್ಸ್ ದಾಖಲಾಗಿದ್ದಾರೆ. ವಾರ್ಡ್ ಒಂದರಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ರೋಗಿಗಳು. ಇವಳು ಈ ಕೋವಿಡ್ ಸೋಂಕಿತ ರೋಗಿಗಳ ಆರೋಗ್ಯ ವಿಚಾರಿಸುವ, ಆರೈಕೆ ಮಾಡುವ ವೈದ್ಯರ ತಂಡದಲ್ಲಿದ್ದಾಳೆ.
ದಿನಕ್ಕೆ ಹನ್ನೆರಡು ತಾಸು ಕೆಲಸ. ಒಮ್ಮೊಮ್ಮೆ ಒಂದೆರಡು ತಾಸು ಹೆಚ್ಚಾದರೂ ಆಗಬಹುದು. ಈಕೆಯ ಬಗ್ಗೆ ಅಮೇರಿಕಾದ ಇನ್ನೊಂದು ಮೂಲೆಯಲ್ಲಿರುವ ಸಿವಿಲ್ ಇಂಜಿನಿಯರ್ ಗೆಳೆಯ ರವೀಂದ್ರ ವಾಣಿ ಹೆಮ್ಮೆಯಿಂದ ಮಾತನಾಡುತ್ತಿದ್ದರು. ಈ ತಿಂಗಳ ಕೊನೆಗೆ ಈಕೆ ಅಲ್ಲಿಗೆ ಹೋಗಿ ಒಂದು ವರ್ಷವಾಗುತ್ತದೆ. ಆ ದೈತ್ಯ ಮಹಾನಗರದಲ್ಲಿ ಇವಳಿಗೆ ನಮ್ಮ ಕನ್ನಡದವರ ಯಾರ ಪರಿಚಯವೂ ಹೆಚ್ಚು ಆಗಿಲ್ಲ. ಆದ್ದರಿಂದ ಆಗಾಗ್ಗೆ ಈಕೆಯ ಜೊತೆ ಮಾತನಾಡುತ್ತಿದ್ದೇನೆ. ವಿಷಯಗಳನ್ನು ಹಂಚಿಕೊಳ್ಳುತ್ತೇನೆ. ಧೈರ್ಯ ತುಂಬುತ್ತೇನೆ ಎಂದರು.
ಮೊದಲೇ ಈಕೆಯ ಬಗ್ಗೆ ಕುತೂಹಲಗೊಂಡಿದ್ದ ನನಗೆ ಇವಳು ಕನ್ನಡತಿ ಎಂದಾಕ್ಷಣ ಕಿವಿ ಚುರುಕಾದವು. ಈಕೆ ಯಾರು? ಯಾವ ಊರು? ಎಂದು ತಕ್ಷಣ ಕೇಳಿದೆ. ವಿಷಯ ತಿಳಿದು ಹೆಮ್ಮೆಯೆನಿಸಿತು. ಅದರಲ್ಲೂ ದಾವಣಗೆರೆಯ ನಂಟಿರುವ ಹುಡುಗಿ ಎಂಬ ಮಾಹಿತಿ ಸಿಕ್ಕಿತು. ಈ ಯುವತಿಯ ಬಗ್ಗೆ ಬರೆಯಬೇಕೆನಿಸಿತು. ವಿಚಾರಿಸಿದಾಗ ಇವಳಿಗೆ ಅದು ಇಷ್ಟವಿರಲಿಲ್ಲ. ತನ್ನ ಪ್ರತಿಭೆಯ ಬಗ್ಗೆ, ಕರ್ತವ್ಯ ಪ್ರಜ್ಞೆಯ ಬಗ್ಗೆ ಪ್ರಚಾರದ ಆಸಕ್ತಿ ಇರಲಿಲ್ಲ. ಈ ವಿಷಯಗಳಿಗೆ ಸಮಯ ವ್ಯರ್ಥ ಮಾಡುವುದು ಈ ಗಂಭೀರ ಪರಿಸ್ಥಿತಿಯಲ್ಲಿ ಸರಿಯಲ್ಲ. ಇದೇ ಸಮಯವನ್ನು ನನ್ನ ಕರ್ತವ್ಯಕ್ಕೆ ಬಳಸಿದರೆ ಸೂಕ್ತ. ಸಿಗುವ ಅಲ್ಪ ಸಮಯನ್ನು ವಿಶ್ರಾಂತಿಗೆ ಬಳಸಿದರೆ ದೇಹದ ದಣಿವು ಕೊಂಚವಾದರೂ ಕಡಿಮೆಯಾಗುತ್ತದೆ. ಲೋಪವಿಲ್ಲದೆ ಕರ್ತವ್ಯ ಮಾಡಲು ಅನುಕೂಲವಾಗುತ್ತದೆ. ಇದು ಇವಳ ಮನಸ್ಸಿನಾಳದ ಇಂಗಿತ. ನಾವೆಲ್ಲಾ ಯೋಚಿಸಬೇಕಿದೆ. ಪ್ರಚಾರದ ಹಿಂದೆ ಹೋಗಿ ಸಮಯ ವ್ಯರ್ಥ ಮಾಡುತ್ತಿದ್ದೇವೆ! ಈ ಚಿಕ್ಕ ಹುಡುಗಿಯಿಂದ ನಮಗಿದು ದೊಡ್ಡ ಪಾಠ.
ನಮ್ಮ ನಿಜವಾದ ಉದ್ದೇಶ ನಿನ್ನ ಬಗ್ಗೆ ಪ್ರಚಾರ ಮಾಡುವುದಲ್ಲ. ನಿನ್ನ ಬಗ್ಗೆ ಪತ್ರಿಕೆಯಲ್ಲಿ ಕೆಲವರು ಓದುತ್ತಾರೆ. ಅದರಲ್ಲಿ ಕೆಲವರಿಗಾದರೂ ಸ್ಪೂರ್ತಿ ಸಿಗುತ್ತದೆ. ಅದರಲ್ಲೂ ವೈದ್ಯ ಕೀಯ ವೃತ್ತಿಯಲ್ಲಿ ಇರುವವರಿಗೆ ನಿಷ್ಠೆಯಿಂದ ಕೆಲಸ ಮಾಡಲು ಹುಮ್ಮಸ್ಸು ಮೂಡುತ್ತದೆ. ಓದಿದ ಪೋಷಕರು ತಮ್ಮ ಮಕ್ಕಳಿಗೆ ನಿನ್ನ ಕಥೆಯನ್ನು ಹೇಳಿ ಸ್ಫೂರ್ತಿ ತುಂಬುತ್ತಾರೆ. ವಿಚಾರ ಮಾಡು. ನಿನಗೆ ಒತ್ತಾಯ ಮಾಡುವುದಿಲ್ಲ. ಗೆಳೆಯ ರವೀಂದ್ರ ವಾಣಿ ಅವಳಿಗೆ ಮನವರಿಕೆ ಮಾಡಿದಾಗ ಈಕೆ ನನ್ನ ಸಂಪರ್ಕಕ್ಕೆ ಬಂದಳು. ಆಗ ನಾನು ಹೇಳಿದೆ. ನಿನ್ನ ಸಮಯ ವ್ಯರ್ಥವಾಗದ ಹಾಗೆ ಒಂದು ಉಪಾಯ ಮಾಡಿದ್ದೇನೆ. ಈ ಲೇಖನಕ್ಕೆ ಸಂಬಂಧಿಸಿದಂತೆ ಬೇಕಾಗಿರುವ ಮಾಹಿತಿಗಳು ಮತ್ತು ಪ್ರಶ್ನೆಗಳನ್ನು ಪಟ್ಟಿ ಮಾಡಿ ನಿನಗೆ ವಾಟ್ಸ್ಯಾಪ್ ಮಾಡುತ್ತೇನೆ. ನಿನಗೆ ಅನುಕೂಲವಾದ ಸಮಯದಲ್ಲಿ ಅವುಗಳಿಗೆ ಉತ್ತರ ಕಳುಹಿಸು. ಈ ಕೊರೊನಾ ಕರಾಳ ವಾತಾವರಣದಲ್ಲಿ ನಿನ್ನ ಕುರಿತು ಲೇಖನ ಪ್ರಕಟವಾಗುವುದು ಸೂಕ್ತ. ಅದು ಹಲವರ ಮನದಲ್ಲಿ ಬೆಳಕು ಮೂಡಿಸುತ್ತದೆ. ಉತ್ಸಾಹ ತುಂಬುತ್ತದೆ. ತಾಳ್ಮೆಯಿಂದ ಕಾಯುತ್ತೇನೆ.
ಸ್ವಲ್ಪ ಹೊತ್ತಿನ ನಂತರ ಉತ್ತರಿಸಿದಳು. ಆಯ್ತು ಅಂಕಲ್, ಸ್ವಲ್ಪ ಸಮಯ ಕೊಡಿ ನನ್ನ ರಜೆಯ ದಿನದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಆದರೆ, ಎಲ್ಲಾ ಪ್ರಶ್ನೆಗಳಿಗೆ ನೇರ ಉತ್ತರ ಕೊಡುವುದು ಸ್ವಲ್ಪ ಕಷ್ಟವಾಗಬಹುದು. ಕೆಲಸ ಮಾಡುತ್ತಿರುವ ಆಸ್ಪತ್ರೆಯ ನೀತಿ ನಿಯಮ ಮತ್ತು ವೈದ್ಯಕೀಯ ತತ್ವಗಳ ಅನುಗುಣವಾಗಿ ಸ್ಪಂದಿಸುತ್ತೇನೆ. ನಮ್ಮ ಹಿರಿಯರ ಸಲಹೆ ಪಡೆದು ಮಾಹಿತಿಗಳನ್ನು ಒದಗಿಸುತ್ತೇನೆ. ಇವಳ ಈ ಉತ್ತರದಿಂದ ಸಮಾಧಾನಗೊಂಡೆ. ನನಗೆ ಬೇಕಾದ ಮಾಹಿತಿಗಳ ಪಟ್ಟಿಯನ್ನು ಕೆಲವು ಪ್ರಶ್ನೆಗಳೊಂದಿಗೆ ಕಳುಹಿಸಿದೆ. ಉತ್ತರಕ್ಕಾಗಿ ತಾಳ್ಮೆಯಿಂದ ಕಾದೆ.
ಆ ದಿನ, ಇವಳಿಗೆ ರಜೆಯದಿನ. ಸಂಜೆ ನನ್ನ ವಾಟ್ಸ್ಯಾಪ್ ನಲ್ಲಿರುವ ಇವಳ ಖಾತೆಯಿಂದ ಧ್ವನಿ ಮುದ್ರಿತ ಸಂದೇಶ ಬಂದಿತ್ತು. ವೈದ್ಯಳಾದ ಈಕೆ ಉತ್ತರಿಸುವಲ್ಲಿ ಇಂಜಿನಿಯರಿಂಗ್ ಸ್ಕಿಲ್ ಉಪಯೋಗಿಸಿದ್ದಳು. ಆಲಿಸಿದೆ. ಆಯ್ದ ಪ್ರಶ್ನೆಗಳಿಗೆ ಸ್ಪಷ್ಟ-ಸಮಂಜಸ ಉತ್ತರ ನೀಡಿದ್ದಳು. ಅವುಗಳ ಸಾರಾಂಶ ಹೀಗಿದೆ.
ಮಾರ್ಚ್ ಮೊದಲನೆಯ ವಾರದಲ್ಲಿ ಈ ಕೊರೊನಾ ವೈರಸ್ ಬಗ್ಗೆ ಅದು ವ್ಯಾಪಕವಾಗಿ ಹರಡುತ್ತಿರುವ ಕುರಿತು ನಾವೆಲ್ಲಾ ಗಂಭೀರವಾಗಿ ಚರ್ಚೆ ಮಾಡುತ್ತಿದ್ದೆವು. ಏನಿದು ಕೋವಿಡ್? ಒಂದು ಅತಿ ಸೂಕ್ಷ್ಮ ರೋಗಾಣು ಮನುಷ್ಯನ ಜನ್ಮವನ್ನೇ ಜಾಲಾಡುತ್ತಿದೆ. ನಮಗೆಲ್ಲಾ ಅಚ್ಚರಿ, ಆತಂಕ ಮತ್ತು ಕೂತಹಲ. ಅದು ಪ್ರಪಂಚಕ್ಕೆ ನಮ್ಮ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಾಲನ್ನೇ ಎಸೆದಿತ್ತು. ನಾವು ಅದರ ಸ್ವರೂಪ, ಗುಣಲಕ್ಷಣಗಳು, ತಡೆಗಟ್ಟಲು ಅನುಸರಿಸಬೇಕಾದ ಕ್ರಮ, ಚಿಕಿತ್ಸೆ ಕುರಿತು ಅಧ್ಯಯನ ಮಾಡತೊಡಗಿದೆವು.
ಮಾರ್ಚ್ ಹದಿಮೂರರಂದೇ ನ್ಯೂಯಾರ್ಕ್ ನಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾಯಿತು. ನಮ್ಮ ಆಸ್ಪತ್ರೆಯಲ್ಲಿ ಪೂರ್ವಭಾವಿ ತಯಾರಿಯನ್ನು ಆರಂಭಿಸಿದೆವು. ಸೋಂಕು ನಿಯಂತ್ರಣ ತಂಡದ ರಚನೆಯಾಯಿತು. (ಇನ್ಫೆಕ್ಷನ್ ಕಂಟ್ರೋಲ್ ಟೀಮ್) ನಮಗೆಲ್ಲಾ ಪಿ.ಪಿ.ಇ ಕಿಟ್ ಸ್ವಯಂರಕ್ಷಕ ಕವಚ, ತಲೆಗೆ ನೆಟ್, ಕನ್ನಡಕ, ಕೈ ಮತ್ತು ಕಾಲುಗಳಿಗೆ ಸುರಕ್ಷಿತ ಗ್ಲೌಸುಗಳನ್ನು ಧರಿಸುವ, ಬಳಸುವ ನಂತರ ವಿಸರ್ಜಿಸುವ ಕುರಿತು ತರಬೇತಿ ನೀಡಲಾಯಿತು.
ಸೋಂಕಿನ ಶಂಕಿತರ ಹಾಗೂ ಸೋಂಕು ಖಚಿತವಾದವರ ರೋಗಿಗಳಿಗೆ ಪ್ರತ್ಯೇಕ ವಿಭಾಗಗಳ ವಿಂಗಡನೆಯಾಯಿತು. ವಾರ್ಡ್‌ಗಳಲ್ಲಿ ಗಾಳಿಯ ಒತ್ತಡ ನಿರ್ವಹಿಸಲು ಫಿಲ್ಟರ್ಸ್ ಗಳನ್ನು ಅಳವಡಿಸಲಾಯಿತು. ಐ.ಸಿ.ಯು ಒಳಗಡೆ ರೋಗಿಯ ಬಳಿಗೆ ಹೋಗುವ ನರ್ಸಗಳು ಹೊರಗಡೆ ಇರುವ ವೈದ್ಯರ ಜೊತೆ ಚಿಕಿತ್ಸಾ ಚರ್ಚೆ ಮಾಡಲು ಧ್ವನಿವರ್ಧಕವುಳ್ಳ ಟೆಲಿ ಸಂಪರ್ಕವನ್ನು ಅಳವಡಿಸಲಾಯಿತು.
ಸಾಮಾನ್ಯವಾಗಿ ವೈದ್ಯರಾಗಲೀ, ನರ್ಸ್‌ಗಳಾಗಲೀ ದಿನಕ್ಕೆ ಒಂದೇ ಸಲ ಮಾತ್ರ ಒಳಗೆ ಹೋಗಿ ಎಲ್ಲಾ ವಿಚಾರಿಸಿಕೊಂಡು ಬರುತ್ತೇವೆ. ಸೂಕ್ತ ಚಿಕಿತ್ಸಾ ಕ್ರಮವನ್ನು ಅಳವಡಿಸಿ ಅಗತ್ಯ ಮಾತ್ರೆ, ಔಷಧೋಪಚಾರವನ್ನು ಮಾಡುತ್ತೇವೆ. ಪದೇ ಪದೇ ರೋಗಿಯ ಹಾಗೂ ಪರಸ್ಪರರ ಸಂಪರ್ಕವನ್ನು ಕಡಿತಗೊಳಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತೇವೆ. ತೀರಾ ತುರ್ತಿನ ಪರಿಸ್ಥಿತಿಯಲ್ಲಿ ಮಾತ್ರ ರೋಗಿಯನ್ನು ಕಾಣಲು ಒಳಗೆ ಹೋಗುತ್ತೇವೆ. ಮುಖ್ಯವಾಗಿ ಐ.ಸಿ.ಯು ತುರ್ತು ಘಟಕದಲ್ಲಿರುವ ರೋಗಿಗಳಿಗೆ ಆಮ್ಲಜನಕ ಪೂರೈಸುವ ವೆಂಟಿಲೇಟರ್ ಮೇಲೆ ನಿಗಾ ಇಟ್ಟಿರಬೇಕಾಗುತ್ತದೆ. ಆಮ್ಲಜನಕದ ಪ್ರಮಾಣ ವ್ಯತ್ಯಾಸವಾದ ಕೂಡಲೇ ಅದನ್ನು ನಿರ್ವಹಿಸಲು ಶ್ವಾಸ ಕೋಶ ತಜ್ಞ ವೈದ್ಯರ ಸಲಹೆ ಪಡೆದು ಕಾರ್ಯೋನ್ಮುಖರಾಗುತ್ತೇವೆ.
ಕೋವಿಡ್ ಸೋಂಕಿತ ಮಧುಮೇಹಿಗಳಿಗೆ ದೇಹದಲ್ಲಿನ ಸಕ್ಕರೆ ಅಂಶ ಬಿಗಡಾಯಿಸುತ್ತಿರುತ್ತದೆ. ಮೂತ್ರದಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಇದರಿಂದ ಮೂತ್ರಪಿಂಡದಲ್ಲಿ ತೊಂದರೆಯಾಗುತ್ತದೆ.
ಕೆಲವರಿಗೆ ಮೂತ್ರಪಿಂಡದ ವೈಫಲ್ಯವೂ ಆಗುತ್ತದೆ. ಅಂತಹ ರೋಗಿಗಳ ಮೇಲೆ ಹೆಚ್ಚು ನಿಗಾ ವಹಿಸುತ್ತೇವೆ. ಅಗತ್ಯವಾದ ತುರ್ತು ಚಿಕಿತ್ಸೆ ಕೊಡುತ್ತೇವೆ.
ಕೋವಿಡ್ ರೋಗಿಗಳ ಜ್ವರದಲ್ಲಿ ಹೆಚ್ಚು ಏರುಪೇರುಗಳಾಗುತ್ತವೆ. ಇದ್ದಕ್ಕಿದ್ದಂತೆ ದೇಹದ ಉಷ್ಣಾಂಶ ಹೆಚ್ಚುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಹಲವು ವಿಧಾನಗಳ ಚಿಕಿತ್ಸೆಯನ್ನು ಕೋವಿಡ್ ನಿಯಂತ್ರಣಕ್ಕೆ ಹಿರಿಯ ವೈದ್ಯರ ಸಲಹೆಯ ಮೇರೆಗೆ ಕೊಡುತ್ತಿದ್ದೇವೆ. ಯಾವ ಚಿಕಿತ್ಸೆಯಿಂದ ಸೂಕ್ತವಾದ ಫಲಿತಾಂಶ ದೊರೆಯುತ್ತದೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಆದರೆ, ನಮ್ಮ ವೈದ್ಯಕೀಯ ಕ್ಷೇತ್ರದಲ್ಲಿ ಲಭ್ಯವಿರುವ ಪರಿಹಾರಗಳನ್ನು ಪ್ರಯತ್ನಿಸ ಬೇಕಿದೆ. ಅದು ಅನಿವಾರ್ಯ ಕೂಡ.
ಕೋವಿಡ್ ಲಕ್ಷಣವಿರುವ ರೋಗಿ ಎದುರಿಸುವ ಇನ್ನೊಂದು ಮುಖ್ಯ ಪರಿಸ್ಥಿತಿ ಎಂದರೆ ಪ್ರತ್ಯೇಕತೆ. ಅವರು ತಮ್ಮ ಪರಿಚಯದವರ, ಸಂಬಂಧಿಗಳ ಸಂಪರ್ಕಕ್ಕೆ ಬರುವ ಸಾಧ್ಯತೆಯೇ ಇಲ್ಲ! ತೊಂದರೆಗಳನ್ನು ಯಾರ ಹತ್ತಿರವೂ ಹೇಳಿಕೊಳ್ಳಲಾಗುವುದಿಲ್ಲ. ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಇದನ್ನು ನಿಭಾಯಿಸುವುದು ನಮ್ಮ ವೈದ್ಯಕೀಯ ಸಿಬ್ಬಂದಿಗಳ ಮುಖ್ಯ ಕರ್ತವ್ಯಗಳಲ್ಲೊಂದು. ನಾವೇ ಅವರಿಗೆ ಸಮಾಧಾನ ಮಾಡುತ್ತೇವೆ. ಹೆದರಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುತ್ತೇವೆ. ನಿಮ್ಮನ್ನು ಗುಣಮುಖರಾಗಿ ಮಾಡಲು ಕಂಕಣ ಬದ್ಧರಾಗಿದ್ದೇವೆ ಎಂದು ಮನೋಸ್ಥೈರ್ಯ ತುಂಬುತ್ತೇವೆ. ಹೊರಗಡೆ ಆತಂಕದಲ್ಲಿರುವ ರೋಗಿಗಳ ಸಂಬಂಧಿಗಳೊಡನೆ ದೂರವಾಣಿಯಲ್ಲಿ ಮಾತನಾಡುತ್ತೇವೆ. ಪರಸ್ಪರರ ಸಂದೇಶಗಳನ್ನು ರವಾನಿಸುತ್ತೇವೆ. ಅವರಲ್ಲಿ ಆಶಾದಾಯಕ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತೇವೆ.
ಆರಂಭದ ದಿನಗಳಲ್ಲಿ ರೋಗಿಗಳ ಸಂಬಂಧಿಗಳು ಉದ್ವೇಗಕ್ಕೆ ಒಳಗಾಗುತ್ತಿದ್ದರು. ಹತಾಶರಾಗಿ ನಾವು ಅವರನ್ನು ನೋಡಬೇಕು. ಅವರೊಂದಿಗೆ ಮಾತನಾಡಬೇಕು ಎಂದು ಉದ್ರಿಕ್ತರಾಗುತ್ತಿದ್ದರು. ಕೊರೊನಾ ರೋಗಾಣುವಿನ ಹರಡುವಿಕೆಯ ಬಗ್ಗೆ ಸಮಾಧಾನದಿಂದ ಅವರಿಗೆ ತಿಳಿಹೇಳುತ್ತಿ ದ್ದೆವು. ಅಂತರದಲ್ಲಿರುವುದು ಎಷ್ಟು ಮುಖ್ಯ ಎಂಬುದನ್ನು ಮನದಟ್ಟು ಮಾಡುತ್ತಿದ್ದೆವು. ದಿನಗಳೆದಂತೆ ಕೋವಿಡ್ ಕುರಿತು ಎಲ್ಲರಿಗೂ ಅರ್ಥವಾಗಿದೆ. ಈಗ ರೋಗಿಗಳು ನಮ್ಮೊಡನೆ ಸಮಾಧಾನದಿಂದ ಮಾತನಾಡುತ್ತಿದ್ದಾರೆ.
ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಗಳಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಈ ನಡೆಯಿಂದ ಉತ್ಸುಕರಾಗುವ ನಾವು ಹೆಚ್ಚು ಜವಾಬ್ದಾರಿಯುತರಾಗುತ್ತಿದ್ದೇವೆ.
ನಿರಂತರ ತಪಾಸಣೆಯಲ್ಲಿ ರೋಗಿಗಳಲ್ಲಿ ಕೋವಿಡ್ ನೆಗೆಟಿವ್ ಫಲಿತಾಂಶ ಬಂದರೆ, ತಕ್ಷಣ ಅವರನ್ನು ಬೇರೆಯ ಪ್ರತ್ಯೇಕ ವಾರ್ಡಿಗೆ ಸ್ಥಳಾಂತರ ಮಾಡುತ್ತೇವೆ. ಕ್ವಾರಂಟೈನ್ ಅವಧಿ ಮುಗಿದ ನಂತರ ಅವರಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇವೆ. ಆ ಸಮಯದಲ್ಲಿ ಎಲ್ಲಾ ರೋಗಿಗಳು ಕೇಳಿಸಿಕೊಳ್ಳವ ಧ್ವನಿ ವ್ಯವಸ್ಥೆಯ ಮೂಲಕ ಇವರ ಬಿಡುಗಡೆಯ ಸುದ್ದಿಯನ್ನು ಬಿತ್ತರಿಸುತ್ತೇವೆ.
ಒಂದು ನಿಮಿಷ ಸ್ಫೂರ್ತಿ ನೀಡುವ ಹಾಡು ಅಥವಾ ಸಂಗೀತವನ್ನು ಕೇಳಿಸುತ್ತೇವೆ. ನಾಳೆ ನಾವೂ ಗುಣಮುಖರಾಗುತ್ತೇವೆ ಎಂಬ ವಿಶ್ವಾಸ ಅವರಲ್ಲಿ ಮೂಡುತ್ತದೆ. ಅವರ ಮುಖದಲ್ಲಿ ವ್ಯಕ್ತವಾಗುವ ಆಶಾದಾಯಕ ಕಳೆಯನ್ನು ನೋಡಿ ನಾವೆಲ್ಲಾ ವೈದ್ಯಕೀಯ ಸಿಬ್ಬಂದಿಗಳು ಸಮಾಧಾನಗೊಳ್ಳುತ್ತೇವೆ. ಮತ್ತೆ ಹುಮ್ಮಸ್ಸಿನಿಂದ ಕರ್ತವ್ಯಕ್ಕೆ ಹಾಜಾರಾಗುತ್ತೇವೆ.
ಇನ್ನು ತೀರಾ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ರೋಗಿಗಳಿಗೆ ಅವರ ಸಂಬಂಧಿಗಳಿಗೆ ಪರಸ್ಪರ ನೋಡಲು, ಮಾತನಾಡಲು ನಮ್ಮ ಆಸ್ಪತ್ರೆಯ ಕಮ್ಯಾಂಡೋ ಘಟಕದವರು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಒಂದು ಚಿಕ್ಕ ಸ್ಟ್ಯಾಂಡ್ ಗೆ ಜೋಡಿಸಿದ ಐಪ್ಯಾಡ್ ಮೂಲಕ ಹಾಸಿಗೆಯಲ್ಲಿರುವ ರೋಗಿಯು ತಾನು ಮಲಗಿರುವ ಸ್ಥಿತಿಯಲ್ಲಿಯೇ ವಿಡಿಯೋ ಕಾನ್ಫೆರನ್ಸ್ ನಲ್ಲಿ ಮಾತನಾಡಬಹದು. ಇವರೂ ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು.
ಬಂಧುಗಳಿಗೂ ಸಮಾಧಾನವಾಗುತ್ತದೆ. ಇಂತಹ ಹಲವು ಘಟನೆಗಳನ್ನು ನೋಡಿದ್ದೇನೆ. ಅವರೊಡನೆ ನಾನೂ ಭಾಗಿಯಾಗಿದ್ದೇನೆ. ಮರೆಯಲಾರದ ಘಟನೆ ಹೇಳಿಕೊಳ್ಳಬೇಕೆಂದರೆ ಅದು ನಾನು ತುಂಬಾ ಭಾವುಕಳಾದ ಅನುಭವ. ಆಸ್ಪತ್ರೆಯ ಐ.ಸಿ.ಯು ಘಟಕದಲ್ಲಿ ತುಂಬಾ ವಯೋವೃದ್ಧೆ ಕೋವಿಡ್ ಸೋಂಕಿತರಾಗಿ ಗಂಭಿರ ಸ್ಥಿತಿಯಲ್ಲಿದ್ದರು. ಅವರಿಗೆ ಕೊನೆಯ ಬಾರಿ ಮಗಳನ್ನು ನೋಡುವ ಆಸೆ. ಅವರ ಮಗಳಿಗೆ ಕರೆ ಮಾಡಿದೆವು. ತಾಯಿಯ ಗಂಭೀರ ಸ್ಥಿತಿಯನ್ನು ವಿವರಿಸಿದೆವು. ಆದಷ್ಟು ನಗುತ್ತಾ ಮಾತನಾಡಲು ಸೂಚಿಸಿದೆವು. ನಂತರ ವೃದ್ಧೆಯ ಬಳಿ ಐಪ್ಯಾಡ್ ಸ್ಟ್ಯಾಂಡ್ ಇಟ್ಟು ವಿಡಿಯೋ ಕಾಲ್ ಮಾಡಿದೆವು.
ಈಕೆಯ ಹೆಸರು ನೀಮ ಜೆ.ಓ.
ತಂದೆ ಜೆ.ಪಿ. ಓಂಕಾರ ಮೂರ್ತಿ ತುಮಕೂರು ಜಿಲ್ಲೆಯವರು. ಈಗ ಬೆಂಗಳೂರಿನಲ್ಲಿದ್ದಾರೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಇವರ ತಂದೆ ದಿವಂಗತ
ಜೆ.ಎನ್. ಪುಟ್ಟಣ್ಣ ಸ್ವಾತಂತ್ರ್ಯ ಹೋರಾಟಗಾರರು. ಕೆಂಗಲ್ ಹನುಮಂತಯ್ಯನವರ ಸಮಕಾಲೀನರು. ಪ್ರಾಮಾಣಿಕತೆಗೆ ಹೆಸರಾಗಿದ್ದವರು. ತುಮಕೂರು ಜಿಲ್ಲೆ ಕಂಡ ದಕ್ಷ ನೇತಾರ. ತಾಯಿ ಡಾ. ಮಂಜುಳಾಮೂರ್ತಿ. ಚರ್ಮ ರೋಗ ತಜ್ಞೆ. ದಾವಣಗೆರೆಯವರು. ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು. ನಗರದ ಖ್ಯಾತ ಹಿರಿಯ ವಕೀಲರಾಗಿದ್ದ ದಿವಂಗತ
ಲಿಂಗಪ್ಪ ಬಸಪ್ಪ ನಾಡಿಗ ಇವರ ಪುತ್ರಿ. ಡಾ. ರಾಜಶೇಖರ್ ನಾಡಿಗ ಅವರ ಸಹೋದರಿ. ನೀಮ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ.
ಎಂ.ಬಿ.ಬಿ.ಎಸ್ ಮಾಡಿದ್ದು ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ. ಓದುತ್ತಿರುವಾಗಲೇ ಉನ್ನತ ವ್ಯಾಸಂಗದ ಗುರಿ ಇಟ್ಟುಕೊಂಡಿದ್ದ ಈಕೆ, ಎಂ.ಬಿ.ಬಿ.ಎಸ್ ಓದುವಾಗಲೇ ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಲು ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಳು. 2018ರಲ್ಲಿ ಎಂ.ಬಿ.ಬಿ.ಎಸ್ ಮುಗಿದಾಕ್ಷಣವೇ ಅಮೇರಿಕಾದಲ್ಲಿ ಉನ್ನತ ವ್ಯಾಸಂಗಕ್ಕೆ ಬೇಕಾದ ಪರೀಕ್ಷೆಗಳನ್ನು ಪಾಸ್ ಮಾಡಿಕೊಂಡು 2019ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದ ಸ್ವಾಮ್ಯದಲ್ಲಿರುವ ಆಸ್ಪತ್ರೆಯೊಂದರಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಜೊತೆಗೆ ಇಂಟರ್ನಲ್ ಮೆಡಿಸಿನ್ ಅಧ್ಯಯನ ಮಾಡುತ್ತಿದ್ದಾಳೆ. ಅಲ್ಲಿ ಈ ಅಧ್ಯಯನ ಮಾಡುತ್ತಿರುವವರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನವಳು! ಸಹಪಾಠಿಗಳೆಲ್ಲಾ ಈಕೆಯನ್ನು ಬೇಬಿ ಎಂದು ಕರೆಯುತ್ತಾರಂತೆ. ಇವಳ ಚುರುಕುತನ ಜಾಣ್ಮೆಯನ್ನು ನೋಡಿ ಅವರು ಅಸೂಯೆ ಪಡದೇ ಇವಳ ಓದಿಗೆ, ನಿಸ್ವಾರ್ಥ ಕೆಲಸಕ್ಕೆ ಉತ್ತೇಜಿಸುತ್ತಿದ್ದಾರೆ.
ಮಗಳು ತಾಯಿಯನ್ನು ನೋಡಿದಳು. ಮಂದಹಾಸ ಬೀರಿದರು. ವೃದ್ಧೆ ದೀರ್ಘ ಉಸಿರನ್ನು ತೆಗೆದುಕೊಂಡರು. ದೇಹದ ಚಲನೆಯನ್ನು ಗಮನಿಸಿದ ಮಗಳು ನಮ್ಮ ತಾಯಿ ಪ್ರತಿಕ್ರಿಯಿಸುತ್ತಿದ್ದಾಳೆ ನೋಡಿ. ಅವಳು ಬದುಕುತ್ತಾಳೆ ಎಂದು ಜೋರಾಗಿ ಉದ್ಗರಿಸಿದರು. ನಾನು ಸಮಾಧಾನ ಮಾಡಿಕೊಳ್ಳಿ. ಅದು ಕೊನೆಯ ಉಸಿರು ಎಂದು ಉತ್ತರಿಸಿದೆ. ಆಕೆ ಬಿಕ್ಕಳಿಸಿದಳು. ಸಮಾಧಾನ ಮಾಡಿಕೊಂಡು ಹೇಳಿದಳು. ನಮ್ಮ ಅಮ್ಮನ ಕೊನೆಯ ಆಸೆಯನ್ನು ಈಡೇರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
ಹೀಗೆ ಅನೇಕ ಸಾವುಗಳು ಆಸ್ಪತ್ರೆಯಲ್ಲಿ ಸಂಭವಿಸುತ್ತವೆ. ಆ ಅಂತಿಮ ಕ್ಷಣದಲ್ಲಿ ಅವರ ಬಂಧುಗಳು ಯಾರೂ ಇರುವುದಿಲ್ಲ. ಮೃತರ ಅಂತಿಮ ಆಸೆಯಂತೆ ಕೊನೆಯ ಧಾರ್ಮಿಕ ಕ್ರಿಯೆಯನ್ನು ಮಾಡಲು ನಮ್ಮ ಆಸ್ಪತ್ರೆಯಲ್ಲಿ ಒಂದು ತಂಡವನ್ನು ರಚಿಸಲಾಗಿದೆ. ಮೃತಪಟ್ಟವರ ಧರ್ಮಕ್ಕೆ ಅನುಗುಣವಾಗಿ ಕ್ರೈಸ್ತರಾಗಿದ್ದರೆ ಪಾದ್ರಿಗಳು ಬಂದು ಬೈಬಲ್ಲಿನ ಸಂದೇಶಗಳನ್ನು ಓದುತ್ತಾರೆ. ಇಸ್ಲಾಂ ಧರ್ಮಕ್ಕೆ ಸಂಬಂಧಿಸಿರುವವರಿಗೆ ಖುರಾನ್ ಪಠಿಸುತ್ತಾರೆ. ಹೀಗೆ ನಮ್ಮ ಆಸ್ಪತ್ರೆ ರಚಿಸಿರುವ ವಿಶೇಷ ತಂಡ ಆಯಾ ಧರ್ಮದವರ ವಿಧಿವಿಧಾನಗಳನ್ನು ನಡೆಸುವ ಪ್ರಯತ್ನ ಮಾಡುತ್ತಿದೆ.
ಅಂಕಲ್, ಈ ದೇಶದಲ್ಲಿ ನುರಿತ ತಜ್ಞರಿದ್ದಾರೆ. ಸುಸಜ್ಜಿತ ಆಸ್ಪತ್ರೆಗಳಿವೆ. ಸುವ್ಯಸ್ಥಿತ ಸೌಲಭ್ಯಗಳಿವೆ. ಪ್ರಜ್ಞಾವಂತ ನಾಗರಿಕರಿದ್ದಾರೆ. ಆದರೆ, ನೂರ ಮೂವತ್ತು ಕೋಟಿ ಜನ ಸಂಖ್ಯೆ ಇರುವ ಭಾರತಕ್ಕಿಂತ ಅತಿ ಹೆಚ್ಚು ಸಾವು ನೋವುಗಳನ್ನು ನಾವು ನೋಡುತ್ತಿದ್ದೇವೆ. ಕೋವಿಡ್ ನಿಯಂತ್ರಣದಲ್ಲಿ ಭಾರತ ಅನುಸರಿಸುತ್ತಿರುವ ಕ್ರಮಗಳನ್ನು ಅಮೆರಿಕಾದಲ್ಲೆಲ್ಲಾ ಶ್ಲಾಘಿಸುತ್ತಿದ್ದಾರೆ. ಲಭ್ಯವಿರುವ ವ್ಯವಸ್ಥೆಯಲ್ಲಿ ಮಿತಿಯುಳ್ಳ ಸೌಲಭ್ಯಗಳನ್ನು ಬಳಸಿ ರೋಗಿಗಳ ಶುಶ್ರೂಷೆ ಮಾಡುತ್ತಿರುವ ಭಾರತೀಯ ವೈದ್ಯರು, ಸಿಬ್ಬಂದಿಗಳು ನಿಜಕ್ಕೂ ಗ್ರೇಟ್.
ಕೊನೆಯದಾಗಿ ನಮ್ಮ ವೈದ್ಯಕೀಯ ಸಿಬ್ಬಂದಿಗಳ ನಿತ್ಯದ ಕೆಲಸದ ಜೊತೆಗಿನ ಸ್ಥಿತಿಗಳ ಬಗ್ಗೆ ಹೇಳುವುದಾದರೆ…. ಮೊದಲಿಗೆ ವಾರದಲ್ಲಿ ಸತತವಾಗಿ ಐದು ದಿನ ಸುಮಾರು ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆವು. ಈಗ ಪ್ರತಿ ಮೂರು ದಿನಗಳ ನಂತರ ಎರಡು ದಿನ ಬಿಡುವು ಕೊಡುತ್ತಾರೆ. ಕರ್ತವ್ಯಕ್ಕೆ ಹಾಜರಾದಾಗ. ನಾವು ಧರಿಸಿರುವ ಬಟ್ಟೆಯ ಮೇಲೆ ಪಿ.ಪಿ.ಇ ಕಿಟ್ ನಲ್ಲಿ ಒದಗಿಸುವ ವಸ್ತುಗಳನ್ನು ಧರಿಸುತ್ತೇವೆ. ನಾವು ಧರಿಸುವ ಸ್ವಯಂರಕ್ಷಾ ಕವಚ ಹಗುರವಾಗಿರುತ್ತದೆ. ಇನ್ನುಳಿದಂತೆ ಕನ್ನಡಕ, ಹೇರ್ ನೆಟ್, ಗ್ಲೌಸುಗಳು ಮುಂತಾದ ಸುರಕ್ಷಿತ ಸಾಧನಗಳನ್ನು ಬಳಸುತ್ತೇವೆ. ಒಮ್ಮೆ ಧರಿಸಿದ ನಂತರ ನಮ್ಮ ದಿನದ ಕರ್ತವ್ಯ ಮುಗಿಯುವವರೆಗೂ ಅವುಗಳನ್ನು ಬಿಚ್ಚುವ ಹಾಗಿಲ್ಲ. ಕೋವಿಡ್ ಪಾಸಿಟಿವ್ ರೋಗಿಗಳ ವಾರ್ಡುಗಳಿಗೆ ಹೋಗುವ ಮುನ್ನ ನಮ್ಮ ಕವಚದ ಮೇಲೆ ಮತ್ತೊಂದು ಗೌನ್ ಧರಿಸುತ್ತೇವೆ. ಆ ವಾರ್ಡ್ ಭೇಟಿಯ ನಂತರ ತಕ್ಷಣವೇ ಆ ಗೌನ್ ವಿಸರ್ಜಿಸುತ್ತೇವೆ. ಅಕಸ್ಮಾತ್ ಅಲ್ಲಿಂದ ಬಂದ ಮೇಲೆ ಬೇರೆ ಶಂಕಿತ ರೋಗಿಗಳ ವಾರ್ಡುಗಳಿಗೆ ಭೇಟಿ ಕೊಟ್ಟಾಗ, ಇನ್ನಿತರೆ ಸಿಬ್ಬಂದಿಗಳ ಸಂಪರ್ಕಿಸಿದಾಗ ಅವರಿಗೆ ಕೊರೊನಾ ಹರಡುವ ಸಂಭವವಿರುತ್ತದೆ. ನಮಗೆ ಸಂಕಟದ ಸ್ಥಿತಿಯೆಂದರೆ ನಾವು ದಿನವಿಡೀ ಹಾಕಿಕೊಳ್ಳುವ ಎನ್-95 ಮಾಸ್ಕ್! ಒಮ್ಮೊಮ್ಮೆ ಉಸಿರುಗಟ್ಟುವಂತಾಗುತ್ತದೆ. ಉಸಿರಾಟದಲ್ಲಿ ನಮ್ಮ ಕಾರ್ಬನ್ ಡೈಆಕ್ಸೈಡ್ ವಿಸರ್ಜನೆ ಆಗದೇ ಮತ್ತೆ ನಮ್ಮ ಶ್ವಾಸಕೋಶವನ್ನು ಸೇರುತ್ತದೆ.
ಒಮ್ಮೊಮ್ಮೆ ತಲೆ ನೋವು ಬರುತ್ತದೆ. ಅನುಭವಿಸುವುದು ಅನಿವಾರ್ಯ. ನಮ್ಮನ್ನು ನಾವೇ ಸಾಂತ್ವನ ಮಾಡಿಕೊಳ್ಳಬೇಕು. ದಿನದ ಕರ್ತವ್ಯ ಮುಗಿಸಿ ನಮ್ಮ ಬಟ್ಟೆಯ ಮೇಲೆ ದೇಹದ ಮೇಲೆ ಧರಿಸಿರುವ ಎಲ್ಲಾ ಕವಚಗಳನ್ನು ವಿಸರ್ಜಿಸಿ ಬರುತ್ತೇವೆ. ಮನೆಗೆ ನೇರ ಬಂದವರೇ ಶುಚಿಯಾಗುತ್ತೇವೆ. ಲಭ್ಯವಿರುವ ಆಹಾರವನ್ನು ಸೇವಿಸಿ. ನಂತರ ಯಾರೊಂದಿಗೂ ಮಾತನಾಡುವ ಮನಸ್ಥಿತಿ ಇರುವುದಿಲ್ಲ. ಅದಾಗಿಯೇ ದೇಹ ಹಾಸಿಗೆಗೆ ಚಾಚುತ್ತದೆ. ದಿಂಬಿನ ಮೇಲೆ ತಲೆ ಒರಗುತ್ತದೆ. ಅದರಲ್ಲೂ ಪೋಷಕರನ್ನು ಬಿಟ್ಟು ದೇಶದಿಂದ ದೂರ ಬಂದು ಕರ್ತವ್ಯದಲ್ಲಿ ನಿರತರಾಗಿರುವ ನನ್ನಂತಹ ಯುವತಿಯರ ದಣಿವು, ಮಾನಸಿಕ ಒತ್ತಡ, ಮೇಲಾಗಿ ಒಬ್ಬಂಟಿತನ ಓಹ್! ನಿಜವಾಗಿಯೂ ಬದುಕಿಗೊಂದು ಚಾಲೆಂಜ್! ಈ ಸವಾಲನ್ನು ಎದುರಿಸಿ ಮನ್ನಡೆಯುವುದೇ ಒಂದು ರೋಚಕ ಅನುಭವ. ಮಾತು ಮುಗಿಸಿದ್ದಳು ನೀಮ. ಡಾಕ್ಟರ್ ಜೆ.ಓ. ನೀಮ.
ಈ ಪ್ರತಿಭಾವಂತ ಯುವ ವೈದ್ಯೆಯನ್ನು ನೋಡಬೇಕೆನ್ನಿಸಿತು. ಕೇವಲ ಒಂದೇ ನಿಮಿಷ ವಿಡಿಯೋ ಕಾಲ್ ಮಾಡುತ್ತೇನೆ. ನಿಮ್ಮನ್ನು ನೋಡಬೇಕು ಒಂದು ಕೊನೆಯ ಮಾತನ್ನು ಹೇಳಬೇಕಿದೆ. ಪ್ಲೀಸ್ ಪ್ರತಿಕ್ರಿಯಿಸಿ ಎಂದು ಮೆಸ್ಸೇಜ್ ಮಾಡಿದೆ. ಆಯ್ತು ಎಂದು ಅವಳೇ ವಿಡಿಯೋ ಕರೆ ಮಾಡಿದಳು. ಮೊಬೈಲ್ ಪರದೆಯ ಮೇಲೆ ಪ್ರತ್ಯಕ್ಷವಾದಳು. ಆಕೆಗೆ ತಡರಾತ್ರಿಯಾಗಿತ್ತು. ಮುಖದಲ್ಲಿ ದಣಿವು ಗೋಚರಿಸುತ್ತಿತ್ತು. ಅದನ್ನು ಮರೆ ಮಾಚಿ ಮುಗುಳ್ನಕ್ಕಳು. ನಮಸ್ಕರಿಸಿದಳು.
ಪ್ರತಿಕ್ರಿಯಿಸಿದ ನಾನು ಥ್ಯಾಂಕ್ಸ್ ಹೇಳಿದೆ. ವಿಶ್ರಾಂತಿ ತೆಗೆದುಕೊಳ್ಳಿ ಮತ್ತೆ ಭೇಟಿಯಾಗೋಣ ಗುಡ್ ನೈಟ್ ಎಂದು ಕೊನೆಯ ಮಾತು ಹೇಳಿದೆ. ಸಂಪರ್ಕ ಕಡಿತಗೊಂಡಿತು. ಭಾವುಕನಾಗಿದ್ದೆ. ಅವಳನ್ನು ಪರಿಚಯಿಸಿದ್ದ ಗೆಳೆಯ ರವೀಂದ್ರ ವಾಣಿಗೆ ಸಂದೇಶ ರವಾನಿಸಿದೆ.
I spoke to an Angel !!
ಅರುಣ್‌ಕುಮಾರ್ ಆರ್.ಟಿ.
9663793337
[email protected]