ಕಳೆದ ಒಂದೂವರೆ ತಿಂಗಳಿಂದ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ನಾವು ಲಾಕ್ಡೌನ್ನಲ್ಲಿದ್ದೆವು. ದಾವಣಗೆರೆಯಂತೂ ಇದ್ದ 2 ಪ್ರಕರಣಗಳು ಗುಣ ಹೊಂದಿ ಹೊಸ ಪ್ರಕರಣಗಳು ದಾಖಲಾಗದೆ, ಹಸಿರು ವಲಯಕ್ಕೆ ಬಂದೇ ಬಿಟ್ಟಿತ್ತು. ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎನ್ನುವ ಹೊತ್ತಿಗೆ ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿಯೇ ದಾಖಲಾದವು.
ಮತ್ತೆ ಲಾಕ್ಡೌನ್ ಬಿಗಿಯಾಗಿದೆ. ಇಂತಹ ಸಮಯದಲ್ಲಿ ಜನ ಆತಂಕಗೊಳ್ಳುವುದು ಸಹಜ. ಆದರೆ ಇಂತಹ ಆತಂಕಕ್ಕೆ ಒಳಗಾಗಿಯೇ ಅಥವಾ ಕೊರೊನಾ ಹೇಗೆ ಹರಡುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ತಿಳಿಯದೆಯೇ ನಗರದ ತುಂಬೆಲ್ಲಾ ಸಣ್ಣ ಸಣ್ಣ ರಸ್ತೆಯಲ್ಲೂ ಜನ ಮತ್ತು ವಾಹನ ಓಡಾಡದಂತೆ ಸ್ವತಃ ಅಲ್ಲಿನ ನಿವಾಸಿಗಳು ತಡೆಯನ್ನು ನಿರ್ಮಿಸಿದ್ದಾರೆ.
ಬನ್ನಿ, ಕೊರೊನಾ ಹರಡುವಿಕೆ ಬಗ್ಗೆ ತಿಳಿಯೋಣ?
– ಸೋಂಕಿತ (ಪಾಸಿಟಿವ್) ವ್ಯಕ್ತಿ ನಿಮ್ಮ ಮುಂದೆ 3 ಅಡಿಗಳಿಗಿಂತ ಕಡಿಮೆ ಅಂತರದಲ್ಲಿ ಕೆಮ್ಮಿದರೆ (ಕೇವಲ 20% ಪಾಸಿಟಿವ್ ರೋಗಿಗಳಿಗೆ ಕೆಮ್ಮು ಇರುತ್ತದೆ).
– ಇಬ್ಬರೂ ಮಾಸ್ಕ್ ಧರಿಸಿದ್ದಲ್ಲಿ ಸೋಂಕು ಹರಡುವ ಪ್ರಮಾಣ ಬಹಳ ಕಡಿಮೆ.
– ಸೋಂಕಿತ ವ್ಯಕ್ತಿ ಮುಟ್ಟಿದ ವಸ್ತುಗಳನ್ನು ನೀವು ಮುಟ್ಟಿದರೆ ಅಥವಾ ಉಪಯೋಗಿಸಿ ನಂತರ ಕೈತೊಳೆಯದೇ ನಿಮ್ಮ ಮೂಗು, ಬಾಯಿಯನ್ನು ಮುಟ್ಟಿಕೊಂಡರೆ ಸೋಂಕು ಹರಡುತ್ತದೆ.
– ಗಾಳಿಯಲ್ಲಿ ಈ ಸೋಂಕು ಹರಡುವುದಿಲ್ಲ. ಹರಡಿದ್ದರೆ ಇಷ್ಟೊತ್ತಿಗೆ ನಾವೆಲ್ಲರೂ ಸೋಂಕಿತರಾಗುತ್ತಿದ್ದೆವು.- ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಸೋಂಕಿತ ವ್ಯಕ್ತಿ ಓಡಾಡಿದರೂ ಅದು ನಿಮಗೆ ಹರಡುವುದಿಲ್ಲ.
ಸೋಂಕು ನಿಮಗೆ ಹರಡದಂತೆ ಮಾಡಲು :
– ಕಡ್ಡಾಯವಾಗಿ ಹೊರಗೆ ಹೋಗುವಾಗ ಮಾಸ್ಕ್ ಧರಿಸಿ.
– ಮಾಸ್ಕ್ ಮೂಗು ಮತ್ತು ಬಾಯಿಯನ್ನು ಮುಚ್ಚುವಂತೆ ಧರಿಸಿ.
– ಮಾಸ್ಕ್ನ ಮೇಲ್ಭಾಗವನ್ನು ಮುಟ್ಟಬೇಡಿ, ಆಗಾಗ ತೆಗೆಯಬೇಡಿ.
– ಮಾಸ್ಕನ್ನು ಪ್ರತಿದಿನವೂ ಬದಲಿಸಿ.
– ಪುನಃ ಉಪಯೋಗಿಸಬಹುದಾದ ಮಾಸ್ಕ ನ್ನು ಬಿಸಿ ನೀರಲ್ಲಿ ತೊಳೆದು, ಚೆನ್ನಾಗಿ ಒಣಗಿದ ನಂತರ ಉಪಯೋಗಿಸಿ (ಬಟ್ಟೆ ಮಾಸ್ಕ್ಗಳು).
– ಆಗಾಗ ಸೋಪು ಮತ್ತು ನೀರಿನಿಂದ 20-30 ಸೆಕೆಂಡುಗಳ ಕಾಲ ಚೆನ್ನಾಗಿ ಕೈತೊಳೆಯಿರಿ.
– ಹೊರಗಿನದನ್ನು ಮುಟ್ಟಿದಾಗ ತಕ್ಷಣ ಸ್ಯಾನಿಟೈಸರ್ ಉಪಯೋಗಿಸಿ.
– ಎಲ್ಲಿ ಹೋದರೂ ಸಾಮಾಜಿಕ ಅಂತರ ಕಾಪಾಡಿ.
– ವಯಸ್ಸಾದವರು ಯಾವುದೇ ಕಾರಣಕ್ಕೂ ಹೊರಗೆ ಹೋಗಲೇ ಬೇಡಿ.
ಇವಿಷ್ಟನ್ನು ಪಾಲಿಸಿದರೆ ನಿಮಗೆ ಸೋಂಕು ತಗಲುವ ಸಾಧ್ಯತೆ ತೀರಾ ಕಡಿಮೆ.
ಇದನ್ನು ಬಿಟ್ಟು ಮನೆಯ ಮುಂದಿನ ರಸ್ತೆಗೆ ಬೇಲಿ ಹಾಕಿದರೆ ಕೊರೊನಾ ನಿಮ್ಮ ಬೇಲಿಗೆ ಹೆದರಿ ಓಡುತ್ತದೆಯೇ? ಇದರಿಂದ ತುರ್ತು ಕೆಲಸ ಇರುವವರಿಗೆ, ಸ್ವಚ್ಛತಾ ಸಿಬ್ಬಂದಿಗೆ, ದಿನನಿತ್ಯವೂ ಅಗತ್ಯವಾದ ತರಕಾರಿ, ಹಣ್ಣು ಮಾರುವ ತಳ್ಳುಗಾಡಿಗಳ ಸಂಚಾರಕ್ಕೆ ತೊಂದರೆಯಾಗುವು ದಿಲ್ಲವೇ. ಅವರ ತುತ್ತು ಅನ್ನಕ್ಕೆ ನೀವೇಕೆ ತೊಂದರೆ ಕೊಡುತ್ತೀರಿ. ಯಾರಾದರೂ ನಿಮ್ಮ ಬೇಲಿಗೆ ಹೆದರಿ ವಾಪಾಸ್ ಹೋಗಿದ್ದಾರಾ? ಇನ್ನೊಂದು ದಾರಿ ಹುಡುಕುತ್ತಾರೆ. ಆ ದಾರಿಗಳಲ್ಲಿ ಜನ ಜಂಗುಳಿ ಯಾಗುವುದಿಲ್ಲವೇ? ನಿಮ್ಮ ಬೇಲಿಗೂ ಕೊರೊನಾ ಸೋಂಕು ತಡೆಗಟ್ಟುವಿಕೆಗೂ ಯಾವುದೇ ಸಂಬಂಧವಿಲ್ಲ. ಸಂದೇಹ ವಿದ್ದಲ್ಲಿ, ತಜ್ಞರ ಸಲಹೆ ಪಡೆಯಿರಿ.
ಡಾ. ಹೆಚ್.ಎಂ. ರವೀಂದ್ರನಾಥ
ನೇತ್ರ ತಜ್ಞರು, ದೃಷ್ಟಿ ಕಣ್ಣಿನ ಆಸ್ಪತ್ರೆ, ದಾವಣಗೆರೆ.
99028 15565